ಗುರುವಾರ , ಆಗಸ್ಟ್ 5, 2021
22 °C

ವಿಜಯಪುರ: ತಳವಾರ-ಪರಿವಾರರಿಗೆ ಎಸ್‍ಟಿ ಪ್ರಮಾಣ ಪತ್ರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ವಿಜಯಪುರ: ಕೇಂದ್ರ ಸರ್ಕಾರದ ಆದೇಶದ ಪ್ರಕಾರ ತಳವಾರ-ಪರಿವಾರ ಸಮುದಾಯಕ್ಕೆ ಎಸ್‍ಟಿ ಪ್ರಮಾಣ ಪತ್ರ ನೀಡಬೇಕು ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಅಲಗೂರ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಾಯಕ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕು ಎಂಬ ಹೋರಾಟ 1982ರಿಂದಲೂ ನಡೆಯುತ್ತಿದೆ. ಈ ಸಂಬಂಧ 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಮೈಸೂರು ವಿಶ್ವವಿದ್ಯಾಲಯದಿಂದ ಈ ಬಗ್ಗೆ ಸಮಗ್ರ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ವರದಿಯನ್ನು ಪಡೆದು ಕೇಂದ್ರಕ್ಕೆ ಶಿಫಾರಸು ಮಾಡಿತ್ತು ಎಂದು ಹೇಳಿದರು.

ಕೇಂದ್ರ ಸರ್ಕಾರವು ಕಳೆದ ಮಾರ್ಚ್‌ 30ರಂದು ತಳವಾರ ಮತ್ತು ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶವನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ದಾಖಲೆಗಳನ್ನು ಪರಿಶೀಲಿಸದೇ ವಾಲ್ಮೀಕಿ ತಳವಾರ, ಪರಿವಾರ ಸಮುದಾಯವನ್ನು ಗಂಗಾಮತ ಅಂಬಿಗ ತಳವಾರರೆಂದು ಹೇಳಿ ಪ್ರಮಾಣ ಪತ್ರವನ್ನು ಕೊಡದೇ ವಿಳಂಬನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಆದೇಶವನ್ನು ಪರಿಗಣನೆಗೆ ತೆಗೆದುಕೊಳ್ಳದೇ ವಾಲ್ಮೀಕಿ ತಳವಾರ, ಪರಿವಾರ ಸಮಾಜದವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ಷೇಪ‍ ವ್ಯಕ್ತಪಡಿಸಿದರು.

ತಳವಾರ, ಪರಿಹಾರ ಜಾತಿಯು ನಾಯಕ ಮತ್ತು ನಾಯ್ಕಡ ಜಾತಿಯ ಪರ್ಯಾಯ ಪದಗಳಾಗಿದ್ದು, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಪಟ್ಟಿಯಲ್ಲೂ, ಮೀನುಗಾರ ಜನಾಂಗದ ಪಟ್ಟಿಯಲ್ಲೂ ಮತ್ತು ಕೇಂದ್ರ ಸರ್ಕಾರದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಸಲ್ಲಿಸಿದ ಬೆಸ್ತ ಗಂಗಮತ ಮುಂತಾದ 37 ಪರ್ಯಾಯ ಪದಗಳ ಪಟ್ಟಿಯಲ್ಲಿಯೂ ತಳವಾರ ಜನಾಂಗದ ಹೆಸರು ಉಲ್ಲೇಖವಾಗಿಲ್ಲ ಎಂದು ಹೇಳಿದರು.

ಅಟಲ್‌ಜಿ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲಿ ಅಳವಡಿಸಿದ ಪ್ರವರ್ಗ–1ರ ಪಟ್ಟಿಯಿಂದ ತಳವಾರ, ಪರಿವಾರ ಸಮುದಾಯಗಳನ್ನು ತೆಗೆದು ಪರಿಶಿಷ್ಟ ಪಂಗಡದ ಪಟ್ಟಿಗೆ ಕೂಡಲೇ ಸೇರಿಸಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸ್ಪಷ್ಟ ನಿರ್ದೇಶನದ ಸುತ್ತೋಲೆಯನ್ನು ಹೊರಡಿಸಿ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಮುಖಂಡರಾದ ಮಮ್ಮದ್‌ ರಫೀಕ್‌ ಟಪಾಲ್‌, ಡಾ.ಗಂಗಾಧರ ಸಂಭಣ್ಣಿ, ಸುರೇಶ ಗೊಣಸಗಿ, ಜಮೀರ್‌ ಬಕ್ಷಿ, ಐ.ಎಂ.ಇಂಡಿಕರ, ಸಾಹೇಬಗೌಡ ಬಿರಾದಾರ, ವಂಸತ ಹೊನಮೋಡೆ, ಇಲಿಯಾಸ್ ಬಗಲಿ, ಚನ್ನಬಪ್ಪ ನಂದರಗಿ, ದಾವಲಸಾಬ್ ಬಾಗವಾನ, ಹಾಜಿಲಾಲ ದಳವಾಯಿ, ಅಂಬಣ್ಣ ವಾಲಿಕಾರ, ತಮ್ಮಣ್ನ ಮೇಲಿನಕೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು