ವಿಜಯಪುರ: ಸಾವರ್ಕರ್ ಫೋಟೊ ಅಂಟಿಸಿದ ಆರೋಪಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

ವಿಜಯಪುರ: ಸ್ವಾತಂತ್ರ್ಯ ಸೇನಾನಿ ಅಲ್ಲದ ಸಾವರ್ಕರ್ ಫೋಟೊವನ್ನು ಕಾಂಗ್ರೆಸ್ ಕಚೇರಿಯ ಗೋಡೆ, ಕಿಟಕಿ ಮೇಲೆ ಅಂಟಿಸಿರುವ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಆಲಗೂರ ಆಗ್ರಹಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹೂಗಾರ ಎಂಬಾತ ತಾನೇ ಸಾವರ್ಕರ್ ಫೋಟೊ ಅಂಟಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಪಕ್ಷದ ವತಿಯಿಂದ ದೂರು ದಾಖಲಿಸಲಾಗುವುದು.
ತಕ್ಷಣ ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಆರೋಪಿಯನ್ನು ಬಂಧಿಸದೇ ಹಾಗೆಯೇ ಬಿಟ್ಟರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಆರು ಬಾರಿ ಕ್ಷಮಾಪಣೆ ಕೇಳಿದ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರನಾಗಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ– ವಿಜಯಪುರ: ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಭಾವಚಿತ್ರ ಅಂಟಿಸಿದ ಕಿಡಿಗೇಡಿಗಳು
ಬಿಜೆಪಿಯವರು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ, ಇದಕ್ಕೆ ಬಗ್ಗಲ್ಲ. ಇಂತಹ ಘಟನೆ ಮರುಕಳಿಸಿದರೆ ನಾವು ಕೂಡ ಅವರಿಗೆ ಬೇಡವಾದ ನಾಯಕರ ಚಿತ್ರವನ್ನು ಬಿಜೆಪಿ ನಾಯಕರ ಮನೆ ಮೇಲೆ ಅಂಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಆದ ಮೇಲೆ ಬಿಜೆಪಿಯವರಿಗೆ ಆತಂಕ ಶುರುವಾಗಿದೆ ಎಂದರು.
ಕಾಂಗ್ರೆಸ್ ನಾಯಕರಿಗೆ ತೊಂದರೆ ಮಾಡಲು ಬಿಜೆಪಿ ಇಂತಹ ಕುಹುಕ ನಡೆಸಿದೆ. ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ.
ಅಧಿಕಾರದಿಂದ ದೂರ ಹೋಗುತ್ತಾರೆ. ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದರು. ಕಾಂಗ್ರೆಸ್ ಮುಖಂಡರಾದ ಹಮೀದ್ ಮುಶ್ರೀಫ್, ವೈಜನಾಥ ಕರ್ಪೂರಮಠ, ಸಿದ್ದು ಛಾಯಗೋಳ, ಆರತಿ ಶಹಾಪುರ, ಜಮೀರ್ ಭಕ್ಷಿ, ರಫೀಕ್ ಟಪಾಲ, ವಸಂತ ಹೊನಮೋಡೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.