ಏಪ್ರಿಲ್ 1ರಂದು ಪಿಂಚಣಿ ಅದಾಲತ್
ವಿಜಯಪುರ: ಸಾಮಾಜಿಕ ಭದ್ರತಾ ಯೋಜನಯೆಡಿ ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡಲು ಏಪ್ರಿಲ್ 1ರಂದು ಬೆಳಿಗ್ಗೆ 11 ಜಿಲ್ಲೆಯ 14 ಗ್ರಾಮಗಳಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ವಿಜಯಪುರ ನಗರದ ವಾರ್ಡ್ ನಂ.14, ಅಂಬಳನೂರ, ವಿಜಯಪುರ ನಗರದ ಎಲ್‍ಐಸಿ ಕಚೇರಿ ಹತ್ತಿರ, ಹಂಚಿನಾಳ ಪಿ.ಎಚ್., ರತ್ನಾಪೂರ, ನೇಗಿನಾಳ, ಆಲಮಟ್ಟಿ, ಕುಂಚಗನೂರ, ಬೋಳವಾಡ, ನಾಗರಹಳ್ಳಿ, ರೋಣಿಹಾಳ, ನಂದ್ರಾಳ, ಚಟ್ಟರಕಿ ಹಾಗೂ ಕುಳೆಕುಮಟಗಿ ಗ್ರಾಮದಲ್ಲಿ ನಡೆಯುವ ಪಿಂಚಣಿದಾರರು ಅದಾಲತ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಪಿಂಚಣಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ: ಡಿಸಿ
ವಿಜಯಪುರ: ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಸಭೆ, ಕಾರ್ಯಗಳು ಪ್ರಾರಂಭವಾಗಿದ್ದು, ಸಧ್ಯದಲ್ಲೇ ಚುನಾವಣಾ ದಿನಾಂಕ ನಿಗದಿಯಾಗಲಿರುವುದರಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಕರ್ತವ್ಯದ ದಿನಗಳಲ್ಲಿ ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ವಿಜಯಮಹಾಂತೇಶ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಎಲ್ಲ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು, ಯಾವುದೇ ತುರ್ತು ಕಾರ್ಯ ಬಂದಲ್ಲಿ ಈ ಕುರಿತು ಜಿಲ್ಲಾಧಿಕಾರಿಗಳಿಂದ ಲಿಖಿತವಾಗಿ ಅನುಮತಿ ಪಡೆದುಕೊಂಡು ಕೇಂದ್ರಸ್ಥಾನ ಬಿಡಲು ಸೂಚಿಸಲಾಗಿದೆ. ಇದಕ್ಕೆ ತಪ್ಪಿದಲ್ಲಿ ಅಂತಹ ಅಧಿಕಾರಿ-ಸಿಬ್ಬಂದಿಗಳ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಗರಾಭಿವೃದ್ದಿ ಪ್ರಾಧಿಕಾರದ ಬಜೆಟ್ ಸಭೆ
ವಿಜಯಪುರ: ವಿಜಯಪುರ ನಗರ ಅಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ 2023-24ನೇ ಸಾಲಿನ ಆಯವ್ಯಯ ಹಾಗೂ ಮಾಸಿಕ ಸಭೆ ಜರುಗಿತು.
ಪ್ರಾಧಿಕಾರದ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯುಕ್ತ ಶಂಕರಗೌಡ ಸೋಮನಾಳ ಬಜೆಟ್ ಮಂಡಿಸಿದರು
ಒಟ್ಟು ಅಂದಾಜು ₹122.60 ಕೋಟಿ ಆದಾಯ ಕ್ರೋಢೀಕರಿಸಲು ಹಾಗೂ ₹ 104.88 ಕೋಟಿ ವೆಚ್ಚ ಮಾಡಲು ಅನುಮೋದಿಸಲಾಯಿತು.
ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪ್ರಾಧಿಕಾರದ ಸದಸ್ಯರಾದ ಅನಿಲ ಸಬರದ, ಮಡಿವಾಳ ಯಾಳವಾರ, ವೆಂಕಟೇಶ್ ಕುಲಕರ್ಣಿ, ಲಕ್ಷ್ಮಿ ಕನ್ನೊಳ್ಳಿ, ರೇವಣಸಿದ್ದಪ್ಪ ಜಿರಲಿ ಮತ್ತು ಇತರೆ ಇಲಾಖೆ ಅಧಿಕಾರಿಗಳು ಇದ್ದರು.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾ.26ಕ್ಕೆ
ವಿಜಯಪುರ: ಕೆಪಿಟಿಸಿಎಲ್ ವತಿಯಿಂದ ನಾಲ್ಕನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ವಿದ್ಯುತ್ ಮಾರ್ಗವನ್ನು ಎಳೆಯುವ ಕಾಮಗಾರಿ ಕೈಗೊಳ್ಳುವುದರಿಂದ ಮಾ.26ರಂದು ಟಕ್ಕಳಕಿ, ತಿಕೋಟಾ, ಹೊನವಾಡ ಮತ್ತು ನಾಗಠಾಣ ಹಾಗೂ ಬಿಜ್ಜರಗಿ ಉಪ ಕೇಂದ್ರಗಳ ಎಲ್ಲ ಫೀಡರ್‌ಗಳಿಗೆ ಅಂದು ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ದೇವರ ದಾಸಿಮಯ್ಯ ಜಯಂತಿ ಮಾ.26ಕ್ಕೆ
ವಿಜಯಪುರ: ಜಿಲ್ಲಾಡಳಿತದ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಾ. 26 ರಂದು ಬೆಳಿಗ್ಗೆ 10.30ಕ್ಕೆ ಕಂದಗಲ್ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಾಸಕಬಸನಗೌಡ ಆರ್.ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರೇರೂಗಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸಂತೋಷಕುಮಾರ ಎಸ್.ಬಂಡೆ ಅವರು ದೇವರ ದಾಸಿಮಯ್ಯ ಕುರಿತಾಗಿ ಉಪನ್ಯಾಸ ನೀಡಲಿದ್ದು, ಅಶ್ವಿನಿ ಹಿರೇಮಠ ವಚನ ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ.
ಪಂಚಪ್ರಾಣ್ ಯೋಜನೆ: ಅರ್ಜಿ ಆಹ್ವಾನ
ವಿಜಯಪುರ: ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಮತ್ತು ನೆಹರು ಯುವ ಕೇಂದ್ರ ಸಂಘಟನೆ ವತಿಯಿಂದ ಸಮುದಾಯ ಅಭಿವೃದ್ದಿ ಆಧಾರಿತ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ ಮೇ 31ರ ವರೆಗೆ ಪಂಚಪ್ರಾಣ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿಗಳು ತಿಳಿಸಿದ್ದಾರೆ.
ಪಂಚಪ್ರಾಣ ಯೋಜನೆಯಡಿ ನುರಿತ, ಉತ್ತಮ ಜ್ಞಾನವುಳ್ಳ ಗಣ್ಯರನ್ನು ಸೇರಿಸಿ 500ಕ್ಕೂ ಹೆಚ್ಚು ಯುವಜನರೊಡನೆ ಪ್ರಶ್ನೋತ್ತರ ಮೂಲಕ ಸಂವಾದ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿರುವುದರಿಂದ ಈ ಕಾರ್ಯಕ್ರಮ ಆಯೋಜನೆಗೆ ರಾಜಕೀಯ ಪಕ್ಷವಲ್ಲದ ಸಮುದಾಯ ಅಭಿವೃದ್ದಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಆಸಕ್ತ ಸಮುದಾಯ ಅಭಿವೃದ್ದಿ ಸಂಸ್ಥೆಗಳು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ನೆಹರು ಯುವ ಕೇಂದ್ರದಲ್ಲಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 29 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವಜನ ಅಧಿಕಾರಿ, ಹಳೆ ಜಿಲ್ಲಾ ಪಂಚಾಯಿತಿ ಕಚೇರಿ ಆವರಣ, ಡಿಸಿ ಆಫೀಸ್ ರಸ್ತೆ, ಗಗನ್ ಮಹಲ್ ಎರಡುಗಡೆ, ವಿಜಯಪುರ ದೂ: 08352-244130 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಮುಕ್ತ ವಿವಿ ಪ್ರವೇಶ ಆರಂಭ
ವಿಜಯಪುರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2022-23ನೇ ಸಾಲಿನ ಜನವರಿ ಆವೃತ್ತಿಯ ಪ್ರಥಮ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಸಿಎ ಹಾಗೂ ಪ್ರಥಮ ಎಂಎ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಇತಿಹಾಸ, ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ಎಂಕಾಂ, ಎಂಬಿಎ, ಎಂಎಲ್‍ಐಎಸ್‍ಸಿ, ಎಂಎಸ್‍ಸಿ, ಡಿಪ್ಲೋಮಾ ವಿಷಯಗಳ ಪ್ರವೇಶ ಪ್ರಾರಂಭವಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನ ಶುಲ್ಕದಲ್ಲಿ ಶೇ 15ರಷ್ಟು ವಿನಾಯಿತಿ ನೀಡಲಾಗಿದೆ. ದಂಡಶುಲ್ಕವಿಲ್ಲದೇ ಪ್ರವೇಶ ಪಡೆಯಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯ ಪ್ರಾದೇಶಿಕ ನಿರ್ದೇಶಕರಾದ ಡಾ.ಸಂಗಮೇಶ ಹಿರೇಮಠ ಮೊ: 9916783555 ಸಂಖ್ಯೆಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.