ಗುರುವಾರ , ಫೆಬ್ರವರಿ 25, 2021
28 °C
ಪೊಲೀಸರಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

ರಸ್ತೆ ಅಪಘಾತ: 2020ರಲ್ಲಿ 403 ಜನ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: 2020ರಲ್ಲಿ ಜಿಲ್ಲೆಯಲ್ಲಿ ನಡೆದ ವಿವಿಧ ರಸ್ತೆ ಅಪಘಾತಗಳಲ್ಲಿ 403 ಜನ ಸಾವಿಗೀಡಾಗಿದ್ದು, 440 ಜನ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದರು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ವಿಜಯಪುರ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಸಿದ್ದೇಶ್ವರ ಗುಡಿಯಿಂದ ಗಾಂಧಿಚೌಕ್‌ ವರೆಗೆ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದೇಶದಾದ್ಯಂತ ಪ್ರತಿ ವರ್ಷ ನಡೆಯುವ ರಸ್ತೆ ಅಪಘಾತಗಳಲ್ಲಿ 1.5 ಲಕ್ಷ ಜನರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸ್‌ ಇಲಾಖೆಯು ಈ ವರ್ಷ ವಿಶೇಷ ಆದ್ಯತೆ ನೀಡಲಿದೆ. ಯುವ ಜನರನ್ನು ಕೇಂದ್ರೀಕರಿಸಿ ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಟಕ, ಆಡಿಯೋ, ವಿಡಿಯೋ ಪ್ರದರ್ಶನದ ಮೂಲಕ ರಸ್ತೆ ನಿಯಮಾವಳಿಗಳ ಬಗ್ಗೆ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಜನವರಿ 4ನೇ ವಾರದಿಂದ ಫೆಬ್ರುವರಿ 3ನೇ ವಾರದ ವರೆಗೆ ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತಾ ಸಪ್ತಾಹ ನಡೆಯಲಿದೆ ಎಂದು ಹೇಳಿದರು.

ಹೆಲ್ಮೆಟ್‌ ಧರಿಸದೇ ಬಹಳಷ್ಟು ದ್ವಿಚಕ್ರ ವಾಹನ ಸವಾರರು ಅಪಘಾತಗಳಲ್ಲಿ ಸಾವನಪ್ಪಿದ್ದಾರೆ. ಅದೇ ರೀತಿ ಕಾರು ಚಾಲಕರು ಕಡ್ಡಾಯವಾಗಿ ಸೀಟ್‌ ಬೆಲ್ಟ್‌ ಹಾಕಿಕೊಳ್ಳದೇ ಇರುವುದು ಕಂಡುಬರುತ್ತಿದೆ ಎಂದರು.

ರಸ್ತೆ ಅಪಘಾತ ತಡೆಗೆ ಕ್ರಮ:

ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹದಗೆಟ್ಟಿರುವ ರಸ್ತೆಗಳಿಂದಾಗಿ ಅಪಘಾತಗಳು ಸಂಭವಿಸುತ್ತಿರುವುದು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಿಗೆ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದು, ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ಕ್ರಿಮಿನಲ್‌ ಕೇಸ್‌ಗೆ ಅವಕಾಶ:

ಹದಗೆಟ್ಟ ರಸ್ತೆಗಳಲ್ಲಿ ಯಾರಾದರೂ ಬಿದ್ದು ಸಾವನಪ್ಪಿದರೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆ ಅಥವಾ ಲೋಕೋಪಯೋಗಿ ಇಲಾಖೆ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕ್ರಿಮಿನಲ್‌ ಕೇಸ್‌‌ ದಾಖಲಿಸಲು ಅವಕಾಶವಿದೆ. ಇತ್ತೀಚೆಗೆ ಅಥಣಿ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಇದೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.

20 ಅಪಘಾತ ವಲಯ:

ಜಿಲ್ಲೆಯಲ್ಲಿ ಹೆಚ್ಚು ರಸ್ತೆ ಅಪಘಾತ ಸಂಭವಿಸುವಂತ 20 ಅಪಘಾತ ವಲಯ (ಬ್ಲ್ಯಾಕ್‌ ಸ್ಪಾಟ್‌)ಗಳನ್ನು 2018ರಲ್ಲಿ ಗುರುತಿಸಲಾಗಿದೆ. ಇದೀಗ ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, ಸರ್ವೇ ಕಾರ್ಯ ನಡೆದಿದೆ. ಈ ಅಪಘಾತ ವಲಯಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಟ್ರ್ಯಾಕ್ಟರ್‌ ಟೇಲರ್‌ಗಳಿಗೆ ರೇಡಿಯಂ:

ಅಪಘಾತಗಳ ತಡೆಯುವ ಉದ್ದೇಶದಿಂದ ಜಿಲ್ಲೆಯಲ್ಲಿ ಟ್ರ್ಯಾಕ್ಟರ್‌ ಟೇಲರ್‌ಗಳಿಗೆ ರೇಡಿಯಂ ಅಳವಡಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಾಥಾಕ್ಕೂ ಮುನ್ನಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಅವರು ಸಿದ್ದೇಶ್ವರ ಗುಡಿ ಎದುರು ಬೈಕು, ಕಾರುಗಳಿಗೆ ಜಾಗೃತಿ ಸ್ಟಿಕರ್‌ಗಳನ್ನು ಅಂಟಿಸಿ, ಕರಪತ್ರಗಳನ್ನು ವಿತರಿಸಿದರು.

ಸಿದ್ದೇಶ್ವರ ಗುಡಿಯಿಂದ ಆರಂಭವಾದ ರಸ್ತೆ ಸುರಕ್ಷತಾ ಜಾಥಾವು ಗಾಂಧಿಚೌಕ್‌, ಬಸವೇಶ್ವರ ಚೌಕ್‌ ಮೂಲಕವಾಗಿ ಗಾಂಧಿಚೌಕ್‌ ಪೊಲೀಸ್‌ ಠಾಣೆಯಲ್ಲಿ ಮುಕ್ತಾಯವಾಯಿತು. ರಸ್ತೆ ನಿಯಮಾವಳಿಗಳ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ಸಾರ್ವಜನಿಕರಿಗೆ ಪೊಲೀಸರು ವಿತರಿಸಿದರು.

ರಸ್ತೆ ನಿಯಮಗಳ ಬಗ್ಗೆ ಜಿಲ್ಲೆಯ ಜನರಲ್ಲಿ ಜಾಗೃತಿ ಕಡಿಮೆ ಇದೆ. ರಸ್ತೆ ನಿಯಮಗಳ ಬಗ್ಗೆ ತಿಳಿದಿರುವವರು ಕೂಡ ಸರಿಯಾಗಿ ಪಾಲನೆ ಮಾಡುತ್ತಿಲ್ಲ.
ಅನುಪಮ್‌ ಅಗರವಾಲ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು