ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ 17 ನಿರ್ದೇಶಕ ಸ್ಥಾನಕ್ಕೆ ಸೆ. 1ರಂದು ಚುನಾವಣೆ ನಿಗದಿಯಾಗಿದ್ದು, ಕಣದಲ್ಲಿ ಬಿರುಸಿನ ಪೈಪೋಟಿ ಏರ್ಪಟ್ಟಿದೆ.
ಹಾಲಿ ಅಧ್ಯಕ್ಷ ಶಶಿಕಾಂತ ಗೌಡ ಪಾಟೀಲ, ಮಾಜಿ ಅಧ್ಯಕ್ಷ ಕುಮಾರ ದೇಸಾಯಿ ಬಣಗಳ ನಡುವೆ ಸಾಂಪ್ರದಾಯಿಕ ಸ್ಪರ್ಧೆ ನಡೆದಿದೆ. ಇದೇ ಪ್ರಥಮ ಬಾರಿಗೆ ರಮೇಶ ಬಿದನೂರ ನೇತೃತ್ವದಲ್ಲಿ ಮೂರನೇ ಪೆನಾಲ್ ಸೃಷ್ಟಿಯಾಗಿದ್ದು, ಕಣದಲ್ಲಿ ಸಂಚಲನ ಸೃಷ್ಟಿಸಿದೆ. ಮೂರು ಪೆನಲ್‌ಗಳ ಪೈಪೋಟಿಯಲ್ಲಿ ನಂದಿ ಸಕ್ಕರೆ ಸಿಹಿ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕೃಷ್ಣಾ ನದಿ ತೀರದ ವಿಜಯಪುರ ಜಿಲ್ಲೆಯ ಬಬಲೇಶ್ವರ, ಬಾಗಲಕೋಟೆ ಜಿಲ್ಲೆಯ ಬೀಳಗಿ ಮತ್ತು ಜಮಖಂಡಿ ತಾಲ್ಲೂಕು ವ್ಯಾಪ್ತಿಯಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಷೇರುದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಚುನಾವಣೆಯೂ ಈ ಮೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚು ಸಕ್ರಿಯವಾಗಿದೆ. ಮೂರು ಪೆನಲ್‌ಗಳು ಮತದಾರರನ್ನು ಸೆಳೆಯಲು ಬಗೆಬಗೆಯ ಪ್ರಚಾರ ತಂತ್ರಗಳನ್ನು ಅನುಸರಿಸತೊಡಗಿವೆ. ಷೇರುದಾರ ಸದಸ್ಯರ ಮನೆ ಬಾಗಿಲಿಗೆ ತೆರಳಿ ಮತಯಾಚಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಈ ಚುನಾವಣೆ ಕಾವು ಪಡೆದುಕೊಂಡಿದೆ.
ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಶಶಿಕಾಂತಗೌಡ ಪಾಟೀಲ ಅವರು ಮತ್ತೊಮ್ಮೆ ಕಾರ್ಖಾನೆ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿದ್ದಾರೆ. ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಮತಯಾಚಿಸುತ್ತಿದ್ದಾರೆ.
ಕುಮಾರ ದೇಸಾಯಿ ಪೆನಲ್‍ನವರು ಶಶಿಕಾಂತಗೌಡರ ಅವಧಿಯಲ್ಲಾದ ವೈಫಲ್ಯಗಳನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಎರಡೂ ಪೆನಲ್‍ಗಳು ಪ್ರಬಲವಾಗಿದ್ದು, ಸಾಂಪ್ರದಾಯಿಕವಾಗಿ ಒಬ್ಬರ ಬಳಿಕ ಇನ್ನೊಬ್ಬರಿಗೆ ರೈತರು ಅಧಿಕಾರ ನೀಡುತ್ತಾ ಬಂದಿದ್ದಾರೆ. ಈ ಎರಡು ಪೆನಲ್‌ಗಳ ನಡುವೆ ಅಧಿಕಾರ ಪುನರಾವರ್ತನೆಯಾಗುತ್ತಿದ್ದು, ಇದೇ ಮೊದಲ ಬಾರಿ ಹೊಸ ಬಣ ಸೃಷ್ಠಿಯಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಮೇಶ ಬಿದನೂರ ಅವರು ನಂದಿ ಸಮಾನ ಮನಸ್ಕರ ರೈತರ ವೇದಿಕೆ ಎಂಬ ಹೆಸರಿನಲ್ಲಿ ಮೂರನೇ ಪೆನಲ್ ರಚಿಸಿಕೊಂಡಿದ್ದು, ಎರಡು ಹಳೆಯ ಪೆನಾಲ್‌ಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಸೆ. 1ರಂದು ಚುನಾವಣೆಗೆ ಅಖಾಡ ಸಜ್ಜಾಗಿದ್ದು, ಅದೇ ದಿನ ಮತ ಎಣಿಕೆ ನಡೆಯಲಿದೆ. ಸಂಜೆ ವೇಳೆಗೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಪತ್ಯ ಯಾರ ಪಾಲಾಗಲಿದೆ ಎಂಬುದು ಸ್ಪಷ್ಟವಾಗಲಿದೆ.
ನಂದಿ ಕಾರ್ಖಾನೆ ಸ್ಥಾಪನೆ ಬೆಳವಣಿಗೆಯಲ್ಲಿ ನಮ್ಮ ಕುಟುಂಬದ ಪಾತ್ರ ಅನನ್ಯ ರೈತರ ಹಿತವೇ ನಮಗೆ ಮುಖ್ಯ ರೈತರ ಯಾವುದೇ ಬಿಲ್ ಬಾಕಿ ಇರಿಸಿಕೊಂಡಿಲ್ಲ. ಸಭಾಭವನ ಸಿಬಿಎಸ್‍ಇ ಶಾಲೆ ಕ್ರಷಿಂಗ್ ಯಂತ್ರ ಸಾಮರ್ಥ್ಯ ಹೆಚ್ಚಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದು ನನ್ನ ಕೊನೆಯ ಚುನಾವಣೆಯಾಗಿದೆಶಶಿಕಾಂತಗೌಡ ಪಾಟೀಲ ಹಾಲಿ ಅಧ್ಯಕ್ಷ
ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ಹಿತರಕ್ಷಣೆಯ ಆದ್ಯತೆಯನ್ನು ಗುರಿಯಾಗಿಸಿಕೊಂಡು ಚುನಾವಣೆಗೆ ನಮ್ಮ ಪೆನಾಲ್ ಸ್ಪರ್ಧಿಸಿದೆ. ಜನರ ಒಲವು ನಮಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನು ಮುಕ್ತಮಾಡುವುದೇ ನಮ್ಮ ಮುಖ್ಯ ಉದ್ದೇಶಕುಮಾರ ದೇಸಾಯಿ ಮಾಜಿ ಅಧ್ಯಕ್ಷ
ಎರಡು ಪೆನಾಲ್‌ಗಳು ಒಬ್ಬರ ವಿರುದ್ಧ ಇನ್ನೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಕಾರ್ಖಾನೆಯ ಇದುವರೆಗಿನ ಎಲ್ಲ ವೈಫಲ್ಯಗಳಿಗೆ ಎರಡೂ ಕಡೆಯವರು ಕಾರಣ. ಹೀಗಾಗಿ ಕಬ್ಬು ಬೆಳೆಗಾರರು ಹಿತರಕ್ಷಣೆಗಾಗಿಯೇ ಈ ಹೊಸ ಪ್ಯಾನಲ್ ಸೃಷ್ಟಿಸಲಾಗಿದೆರಮೇಶ ಬಿದನೂರ ನೂತನ ಪೆನಾಲ್ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.