ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಜಿಮ್‌ ನೃತ್ಯಕ್ಕೂ ಸೈ ‘ಗುಮ್ಮಟನಗರಿ’

ಜೋರಾಪುರಪೇಟೆಯ ಶ್ರೀಶಂಕರಲಿಂಗ ಗಜಾನನ ಮಂಡಳಿ ಕಲಾವಿದರು
Last Updated 10 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ವಿಜಯಪುರ: ಗಣೇಶ ಚತುರ್ಥಿ, ದಸರಾ ಮೆರವಣಿಗೆ ಸಂದರ್ಭದಲ್ಲಿ ಆಕರ್ಷಕ ಲೆಜಿಮ್‌ ಪ್ರದರ್ಶನ ನೀಡುವ ನೆರೆಯ ಮಹಾರಾಷ್ಟ್ರದ ತಂಡಗಳಿಗೆ ವಿಜಯಪುರ, ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿಯಲ್ಲಿ ಎಲ್ಲಿಲ್ಲದ ಬೇಡಿಕೆ.

ಮಹಾರಾಷ್ಟ್ರದ ಸೋಲಾಪುರ, ಪುಣೆ, ಮುಂಬೈ, ಕೊಲ್ಹಾಪುರದಿಂದ ಲಕ್ಷಾಂತರ ರೂಪಾಯಿ ನೀಡಿ ಲೆಜಿಮ್‌ ಕಲಾ ತಂಡಗಳನ್ನು ಕರೆಯಿಸಿ, ಮೆರವಣಿಗೆಯಲ್ಲಿ ಪ್ರದರ್ಶನ ಕೊಡಿಸುವುದು ಈ ಭಾಗದಲ್ಲಿ ಒಂದು ರೀತಿ ಪ್ರತಿಷ್ಠೆ.

ಹೌದು, ವಿಜಯಪುರದಲ್ಲಿ ಪ್ರತಿ ವರ್ಷ ಗಣೇಶ ವಿಸರ್ಜನೆ, ದಸರಾ ದೇವಿ ಮೆರವಣಿಗೆ ವೇಳೆ ನೆರೆಯ ಮಹಾರಾಷ್ಟ್ರದಿಂದ ಲೆಜಿಮ್‌ ತಂಡ ಕರೆತರುವುದು ಮೊದಲಿನಿಂದಲೂ ಸಂಪ್ರದಾಯ.

ಒಂದು ದಿನ ಬಂದು ಲೆಜಿಮ್‌ ಪ್ರದರ್ಶನ ನೀಡಲು ಮಹಾರಾಷ್ಟ್ರದ ಕಲಾವಿದರು ಕನಿಷ್ಠ ₹3 ಲಕ್ಷದಿಂದ ₹ 4 ಲಕ್ಷ ಬೇಡುತ್ತಾರೆ. ಇಷ್ಟೊಂದು ಹಣವನ್ನು ನೀಡಿ ಕಲಾತಂಡಗಳನ್ನು ಆಹ್ವಾನಿಸಿ ಲೆಜಿಮ್‌ ಪ್ರದರ್ಶನ ನೀಡುವುದು ವೆಚ್ಚದಾಯಕ ಎಂಬುದನ್ನು ಅರಿತ ವಿಜಯಪುರ ನಗರದ ಜೋರಾಪುರಪೇಟೆಯ ಶ್ರೀಶಂಕರಲಿಂಗ ಗಜಾನನ ಮಂಡಳಿಯು ತಾವೇ ಒಂದು ತಂಡ ಕಟ್ಟಿ, ಬೆಳಸತೊಡಗಿದ್ದಾರೆ. ವಿಜಯಪುರ ಮಾತ್ರವಲ್ಲ, ಇಡೀ ರಾಜ್ಯದಲ್ಲೇ ಈ ತಂಡ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಲೆಜಿಮ್‌ ಕಲಾತಂಡವನ್ನು ಕಟ್ಟಿ ಬೆಳೆಸುತ್ತಿರುವ ಕುರಿತು ಅನುಭವ ಹಂಚಿಕೊಂಡಜೋರಾಪುರಪೇಟೆಯ ಶ್ರೀಶಂಕರಲಿಂಗ ಗಜಾನನ ಮಂಡಳಿಯ ಪೋಷಕ ಶಿವರುದ್ರ ಬಾಗಲಕೋಟಿ, ಸ್ವಾತಂತ್ರ್ಯ ಪೂರ್ವದಿಂದಲೂ ನಮ್ಮ ಗಜಾನನ ಮಂಡಳಿ ಗಣೇಶನನ್ನು ಪ್ರತಿಷ್ಠಾಪಿಸುತ್ತಾ ಬರುತ್ತಿದೆ. ಆರಂಭದ ವರ್ಷಗಳಲ್ಲಿ ಮಂಡಳಿಯ ಪದಾಧಿಕಾರಿಗಳೇ ಸಾಮಾಜಿಕ ನಾಟಕಗಳನ್ನು ಕಲಿತು ಗಣೇಶ ಹಬ್ಬದಲ್ಲಿ ಪ್ರದರ್ಶನ ನೀಡುತ್ತಾ ಬರುತ್ತಿದ್ದರು. ಬಳಿಕ ಆಕರ್ಷಕವಾದ ಮಂಟಪಗಳನ್ನು ಸ್ವತಃ ತಯಾರಿಸಿ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದರು. ಇದನ್ನು ನೋಡಲು ಜಿಲ್ಲೆ ಮಾತ್ರವಲ್ಲ, ಹೊರ ಜಿಲ್ಲೆಗಳಿಂದಲೂ ಪ್ರೇಕ್ಷಕರು, ಭಕ್ತರು ಬರುತ್ತಿದ್ದರು.ಇದೀಗ ನಮ್ಮ ಮಂಡಳಿಯು 2019ರಿಂದ ಲೆಜಿಮ್‌ ಕಲಾ ತಂಡವನ್ನು ಕಟ್ಟಿ, ನಮ್ಮ ಕಲಾವಿದರೇ ಪ್ರದರ್ಶನ ನೀಡುತ್ತಿರುವುದು ವಿಶೇಷ ಎನ್ನುತ್ತಾರೆ ಅವರು.

ಸೋಲಾಪುರದಿಂದ ಲೆಜಿಮ್‌ ಕಲಿಸುವ ಐದು ಜನ ಮಾಸ್ತರರನ್ನು ಕರೆಯಿಸಿ ಸುಮಾರು 140 ಜನರಿಗೆ 15 ದಿನ ತರಬೇತಿ ನೀಡಲಾಗಿದೆ. ಮಹಾರಾಷ್ಟ್ರದ ಕಲಾ ತಂಡಗಳಿಗೆ ಸರಿಸಾಟಿಯಾಗಿ ನಮ್ಮವರು ಆಕರ್ಷಕ ಲೆಜಿಮ್‌ ಪ್ರದರ್ಶನ ನೀಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಲೆಜಿಮ್‌ ತಂಡದ ಸದಸ್ಯರು ಕೆಂಪು ಬಣ್ಣದ ನೆಹರೂ ಅಗಿ, ಬಿಳಿ ಪೈಜಾಮ ಧರಿಸಿ, ತಲೆಗೆ ರಿಬನ್‌ ಕಟ್ಟಿಕೊಂಡು ಡ್ರಮ್‌, ಬ್ಯಾಂಜೋ, ತಾಷಾ ಮತ್ತು ಶಹನಾಯ್‌ ವಾದಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ನೋಡಲು ಚಂದ.

ಯುವಕರು, ಮಕ್ಕಳು,ಮಹಿಳೆಯರು ಸೇರಿದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಲೆಜಿಮ್‌ ಕಲಿತಿರುವುದು ವಿಶೇಷ. ಸುಮಾರು 12 ಬಗೆಯ ಲೆಜಿಮ್‌ ಪ್ರಕಾರಗಳನ್ನು ಕಲಿರುವ ಕಲಾವಿದರು. ಸುಮಾರು ಏರೇಳು ತಾಜು ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಸಾಮಾರ್ಥ್ಯ ರೂಡಿಸಿಕೊಂಡಿದ್ದಾರೆ ಎನ್ನುತ್ತಾರೆ ಶಿವರುದ್ರ ಬಾಗಲಕೋಟಿ.

ನಮ್ಮ ಲೆಜಿಮ್‌ ತಂಡಕ್ಕೆ ಬೇರೆ ಜಿಲ್ಲೆಗಳಿಂದ ಪ‍್ರದರ್ಶನಕ್ಕೆ ಆಹ್ವಾನ ಬಂದಿದೆ. ಆದರೆ, ನಾವು ಎಲ್ಲಿಯೂ ಪ್ರದರ್ಶನ ನೀಡಿಲ್ಲ. ಕೇವಲ ನಮ್ಮ ಮಂಡಳಿ ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ಮಾತ್ರ ಪ್ರದರ್ಶನ ನೀಡುತ್ತಾ ಬರುತ್ತಿದ್ದೇವೆ ಎನ್ನುತ್ತಾರೆ ಮಂಡಳಿ ಅಧ್ಯಕ್ಷ ಶಂಕರ ಮಿರ್ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT