ಶನಿವಾರ, ಜೂನ್ 25, 2022
24 °C
ಶಿವಾನಂದ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ ಕಾದಾಟ; ರಾಜಕೀಯ ಧೃವೀಕರಣಕ್ಕೆ ವೇದಿಕೆ ಸಿದ್ಧ

ವಿಜಯಪುರ: ರಾಜಕೀಯ ಬಿರುಗಾಳಿ ಎಬ್ಬಿಸಿದ ಶಾಸಕರ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಬಸವನ ಬಾಗೇವಾಡಿ ಕಾಂಗ್ರೆಸ್‌ ಶಾಸಕ ಶಿವಾನಂದ ಪಾಟೀಲ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡುವೆ ಹಲವು ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಕೊನೆಗೂ ಬಯಲಾಗಿದೆ.

ಇಬ್ಬರು ನಾಯಕರ ನಡುವಿನ ರಾಜಕೀಯ ಜಟಾಪಟಿ ತಾರಕಕ್ಕೇರಿದೆ. ಪರಸ್ಪರರು ಬಹಿರಂಗ ರಾಜಕೀಯ ಸವಾಲುಗಳನ್ನು ಹಾಕಿದ್ದು, ತೀವ್ರ ಕುತೂಹಲ, ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಮದಗಜಗಳ ಈ ಕಾದಾಟ ಕೇವಲ ಇಬ್ಬರಿಗೆ ಸೀಮಿತವಾಗದೇ ಇಡೀ ಜಿಲ್ಲೆಯ ರಾಜಕೀಯ ಧೃವೀಕರಣಕ್ಕೆ ವೇದಿಕೆಯಾಗಿದೆ.

‘ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿಗೆ ಬರಲು ಯತ್ನಿಸುತ್ತಿದ್ದಾರೆ’ ಎಂದು ಬಸನಗೌಡ ಪಾಟೀಲ ಯತ್ನಾಳ ಅವರು ಶಾಸಕರಾದ ಶಿವಾನಂದ ಪಾಟೀಲ ಮತ್ತು ಯಶವಂತರಾಯಗೌಡ ಪಾಟೀಲ ಹೆಸರು ಪ್ರಸ್ತಾಪಿಸದೇ ಇತ್ತೀಚೆಗೆ ಬಾಂಬ್‌ ಸಿಡಿಸಿದ್ದರು. ಈ ಹೇಳಿಕೆಯೇ ಕಾಂಗ್ರೆಸ್‌ ಶಾಸಕರು ಯತ್ನಾಳ ವಿರುದ್ಧ ಮುಗಿಬೀಳಲು ಕಾರಣವಾಗಿದೆ.

ಯತ್ನಾಳ ಹೇಳಿಕೆಗೆ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕ ಶಿವಾನಂದ ಪಾಟೀಲ, ‘ನಾನು ಯಾವುದೇ ಕ್ಷೇತ್ರ, ಪಕ್ಷಕ್ಕೆ ಸೀಮಿತವಾಗಿಲ್ಲ. ಯಾವುದೇ ಪಕ್ಷಕ್ಕೆ ಅಂಟಿಕೊಂಡು ರಾಜಕಾರಣ ಮಾಡಿದವನಲ್ಲ. ಬಿಜೆಪಿಯಿಂದ ಗೆದ್ದು ಬಂದಿದ್ದೆ, ಕಾಂಗ್ರೆಸ್‌ನಿಂದ ಗೆದ್ದಿದ್ದೇನೆ, ಜೆಡಿಎಸ್‌ನಿಂದಲೂ ಗೆದ್ದಿದ್ದೇನೆ. ನಾನು ಬರೋದು, ಹೋಗೋದ್ರಿಂದ ಯತ್ನಾಳಗೆ ಏಕೆ ಬಾಧಕ ಆಗುತ್ತೆ. ಯತ್ನಾಳ್ ಕೇಳಿ ನಾನು ರಾಜಕಾರಣ ಮಾಡಬೇಕಿಲ್ಲ’ ಎಂದು ಕಿಡಿಕಾರಿದರು.

‘ನಾನು ಬಿಜೆಪಿ ಸೇರುವ ಬಗ್ಗೆ ಯಾರನ್ನೂ ಸಂಪರ್ಕಿಸಲಿಲ್ಲ, ಅವ್ರೇ ನನ್ನ ಸಂಪರ್ಕ ಮಾಡಬಹುದು. ಅಷ್ಟೇ ಏಕೆ ನನಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರಾದರೂ ಸಂಪರ್ಕ ಆಗಬಹುದು, ಅದ್ರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ಯತ್ನಾಳ ಸ್ವ ಪ್ರೇರಣೆಯಿಂದ ಮಾತನಾಡುತ್ತಿಲ್ಲ. ಯಾರೋ ಅವರಿಗೆ ಪ್ರೋಓಕ್ ಮಾಡ್ತಿದ್ದಾರೆ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಜನ ನನ್ನ ಯಾವ ಕ್ಷೇತ್ರದಲ್ಲಿ ಬಯಸುತ್ತಾರೋ ಅಲ್ಲಿ ಹೋಗೋಕೆ ರೆಡಿಯಿದ್ದೇನೆ. ಇದೇ ಕ್ಷೇತ್ರ ಅಂತ ಸೀಮಿತ ಇಲ್ಲ. ಕಾಂಗ್ರೆಸ್‌ನಿಂದ ಬಬಲೇಶ್ವರ, ವಿಜಯಪುರ ನಗರ ಕೊಟ್ರೆ ಹೋಗೇಕೆ ರೆಡಿ ಇದ್ದೇನೆ. ವಾಪಸ್ ಬಸವನಬಾಗೇವಾಡಿ ಕೊಟ್ರು ರೆಡಿಯಿದ್ದೀನಿ. ಇವೆಲ್ಲ ಬಿಟ್ಟು ಬೇರೆಡೆ ಕೊಟ್ಟರೂ ರೆಡಿ, ನನಗೆ ಕ್ಷೇತ್ರ ಸೀಮಿತ ಇಲ್ಲ’ ಎಂದಿದ್ದಾರೆ. 

‘ವಿಜಯಪುರ ನಗರ ಕ್ಷೇತ್ರದಲ್ಲಿ ನಾನು ಪಕ್ಷೇತರವಾಗಿ ಸ್ಪರ್ಧಿಸ್ತೀನಿ.‌ ಯತ್ನಾಳ್ ಪಕ್ಷೇತರರಾಗಿ ಸ್ಪರ್ಧಿಸಲಿ. ನಾನು ಗೆದ್ದರೆ ರಾಜಕೀಯವಾಗಿ ಅವರು ರಾಜಕೀಯ ಬಿಡಲಿ, ಅವರು ಗೆದ್ದರೆ ನಾನು ರಾಜಕೀಯ ಬಿಡ್ತೀನಿ’ ಎಂದು ಬಹಿರಂಗ ಸವಾಲು ಹಾಕಿದರು.

‘ಯತ್ನಾಳ್ ಕಾಂಗ್ರೆಸ್‌ನಿಂದ, ಜೆಡಿಎಸ್‌ನಿಂದ ಗೆದ್ದು ಬರಲಿ ನೋಡೋಣ. ಬರೀ ಬಿಜೆಪಿ, ಹಿಂದುತ್ವದ ಹೆಸರಿನಲ್ಲಿ ಗೆದ್ದು ಬರಬೇಕಾ? ನಾನು ಅವರ ಬಾಯಿಗೆ ಹತ್ತಿಲ್ಲ, ಹತ್ತೋಕೆ ಕೊಡಬೇಡಿ’ ಎಂದರು.

‘ಅಣ್ಣ ಒಂದು ಪಕ್ಷ, ತಮ್ಮ ಒಂದು ಪಕ್ಷದಲ್ಲಿದ್ದಾರೆ’ ಎಂದು ಪರೋಕ್ಷವಾಗಿ ಶಿವಾನಂದ ಪಾಟೀಲ ಮತ್ತು ವಿಜುಗೌಡ ಪಾಟೀಲ ಅವರ ವಿರುದ್ಧ ಯತ್ನಾಳ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಶಿವಾನಂದ ಪಾಟೀಲ, ‘ಗಂಡಸ್ತನ ಇದ್ದರೇ ಅಣ್ಣ-ತಮ್ಮ ಯಾರು ಅಂತ ನೇರವಾಗಿ ಹೇಳಲಿ‘ ಎಂದು ಸವಾಲು ಹಾಕಿದರು.

‘ಅವರ ಅಣ್ಣನೂ ಎಲೆಕ್ಷನ್ ಗೆ ಸ್ಪರ್ಧಿಸಿದ್ದರಲ್ಲ. ನಾನು ಅವರ ಹೆಸರು ತಗೊಂಡಿದ್ನಾ? ಅವರ ಅಣ್ಣ ಬಂದು ಇವರ ಸಲುವಾಗಿ ಏನು ಹೇಳಿದ್ರು ಅಂತ ನಾನು ಹೇಳಲಾ? ಇವೆಲ್ಲ ಬೇಡಾ, ನಾನು ಚಿಲ್ಲರೆ ರಾಜಕಾರಣ ಮಾಡಲ್ಲ, ದುರುದ್ದೇಶದಿಂದ ಮೇಲಿಂದ ಮೇಲೆ ಮಾತನಾಡೋದು ಸರಿಯಲ್ಲ‘ ಎಂದು ಯತ್ನಾಳಗೆ ಎಚ್ಚರಿಕೆ ನೀಡಿದರು.

****

ವಿಜಯಪುರ ನಗರ ಕ್ಷೇತ್ರದಿಂದ ಬೇಕಾದ್ರೇ ಸ್ಪರ್ಧಿಸಲು ಸಿದ್ಧ. ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಸ್ಪರ್ಧೆಗೂ ಸಿದ್ಧ. ನಾನು ಗೆಲ್ತಿನೋ ಅವ್ರು ಗೆಲ್ಲುತ್ತಾರೋ ಎಂಬುದನ್ನು ಜನ ತೀರ್ಮಾನ ಮಾಡಲಿ

–ಶಿವಾನಂದ ಪಾಟೀಲ, ಶಾಸಕ 

***

ಅವನಿಗೆ ಬ್ಲ್ಯಾಕ್‌ಮೇಲ್‌ ಮಾಡುವ ಚಟ ಇದೆ. ಎಂ.ಬಿ. ಪಾಟೀಲ್‌ಗೆ ಬ್ಲ್ಯಾಕ್‌ಮೇಲ್‌ ಮಾಡಿದಂಗೆ ನನಗೆ ಮಾಡೋಕೆ ಆಗಲ್ಲ. ಅವನೇನು ಕೇಳಬೇಕು ನಾನು, ಬಿಜೆಪಿಯಿಂದ ಸ್ಪರ್ಧೆ ಮಾಡ್ತೀನಿ 

–ಬಸನಗೌಡ ಪಾಟೀಲ ಯತ್ನಾಳ, ಶಾಸಕ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು