ನಾಲತವಾಡ: ಪಟ್ಟಣದಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಗೆ ಹಾಗೂ ದಿನವಹಿ ನಡೆಯುವ ಸಂತೆಯಿಂದ ಪಟ್ಟಣ ಪಂಚಾಯ್ತಿಗೆ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಬಂದರೂ ಸುಸಜ್ಜಿತ ಸಂತೆ ಮಾರುಕಟ್ಟೆ ಮಾತ್ರ ನಿರ್ಮಾಣವಾಗಿಲ್ಲ.
ನಾಲತವಾಡ ಪಟ್ಟಣದ ಬಜಾರದಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆ ಈ ಹಿಂದೆ ಅರಳಿಕಟ್ಟೆ ಸುತ್ತಲಿನ ಸೀಮಿತ ಪ್ರದೇಶದಲ್ಲಿ ನಡೆಯುತ್ತಿತ್ತು. ಕಳೆದ ಹಲವು ವರ್ಷಗಳಿಂದ ವ್ಯಾಪಾರ ಸ್ಥಳ ಹಳೆಯ ಸಿಂಡಿಕೇಟ್ ಬ್ಯಾಂಕಿನಿಂದ ಗಣಪತಿ ಚೌಕದ ವರೆಗೆ ರಸ್ತೆಗುಂಟ ನಡೆಯುತ್ತಿದೆ. ಸುತ್ತಮುತ್ತಲ 30-40 ಹಳ್ಳಿಗಳ ಜನರು ಈ ಸಂತೆಗೆ ಬರುತ್ತಾರೆ. ಎಲ್ಲಾ ತರಕಾರಿ ಮಾರಾಟಗಾರರ ಮುಂದೆ ಜನ ತುಂಬಿರುತ್ತಾರೆ. ಬಜಾರದಲ್ಲಿ ವಾರದ ಸಂತೆ ನಡೆಯುವುದರಿಂದ ಪಟ್ಟಣದ ಸುತ್ತಮುತ್ತಲ ಜನರು ಸಂತೆಗೆ ಬಂದು ವಾರಕ್ಕೆ ಆಗುವಷ್ಟು ಸೊಪ್ಪು, ತರಕಾರಿ, ದಿನಸಿಗಳನ್ನು ಖರೀದಿಸುತ್ತಾರೆ.
ರೈತರ ಉಳುಮೆಗೆ ಕೃಷಿ ಪರಿಕರಗಳು, ಮನೆಗೆ ಅಗತ್ಯವಿರುವ ದಿನಸಿ, ಒಣಮೀನು, ಬಟ್ಟೆಗಳು, ಹಣ್ಣುಗಳು ಸೇರಿ ಹಲವು ವಸ್ತುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಹೆಚ್ಚಿನ ವ್ಯಾಪಾರಿಗಳು ಬರುವುದರಿಂದ ಪ್ರಸ್ತುತ ಸುಸಜ್ಜಿತ ಕಟ್ಟಡ, ಕುಡಿಯುವ ನೀರು, ಶೌಚಾಲಯ ಸೇರಿ ಹಲವು ಸೌಲಭ್ಯಗಳ ಕೊರತೆ ಇದ್ದು, ಮೂಲಸೌಲಭ್ಯ ಸಹಿತ ಸುಸಜ್ಜಿತ ಮಾರುಕಟ್ಟೆಯ ಅಗತ್ಯವಿದೆ.
ರಸ್ತೆ ಬದಿಯಲ್ಲೇ ಮಾರಾಟ:
ಸಂತೆ ನಡೆಸಲು ನಿರ್ದಿಷ್ಟ ಮೈದಾನವಿಲ್ಲದೇ ಇರುವುದರಿಂದ ಬಜಾರದ ಅಂಗಡಿಗಳ ಮುಂದೆಯೇ ಸಿಕ್ಕಸಿಕ್ಕಲ್ಲಿ ಹಣ್ಣು ತರಕಾರಿ, ಸೊಪ್ಪುಗಳು, ಕಿರಾಣಿ ದಿನಸಿ, ಬೇಳೆಕಾಳುಗಳು, ಹಣ್ಣುಗಳು, ಧಾನ್ಯಗಳ ವ್ಯಾಪಾರ ಶುರು ಮಾಡುತ್ತಾರೆ. ಇದರಿಂದಾಗಿ ಅಂಗಡಿಗಳಿಗೆ ಹೋಗುವವರಿಗೆ ತೊಂದರೆಯಾಗುತ್ತಿದೆ.ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಹೆಚ್ಚಾಗುತ್ತದೆ.
ವ್ಯಾಪಾರಿಗಳಿಗೆ ಬಿಸಿಲು ಹಾಗೂ ಮಳೆ ಬಂದರೆ ಯಾವುದೇ ರಕ್ಷಣೆಯಿಲ್ಲ. ಬಸ್ ನಿಲ್ದಾಣದಲ್ಲಿನ ಶೌಚಾಲಯ ಬಳಸುತ್ತಿರುವವರಿಗೆ ಒಂದು ಪ್ರತ್ಯೇಕ ಶೌಚಾಲಯದ, ಶುದ್ಧ ಕುಡಿಯುವ ನೀರಿನ ಅಗತ್ಯವಿದೆ.
ಬೇಸಿಗೆ ಕಾಲದಲ್ಲಿ ತರಕಾರಿ ಮತ್ತು ಸೊಪ್ಪುಗಳ ರಕ್ಷಣೆಗೆ ಯಾವುದೇ ಹೊದಿಕೆ ಇಲ್ಲದ ಕಾರಣ ಸಂಜೆಯಾಗುವಷ್ಟರಲ್ಲಿ ತರಕಾರಿಗಳು, ಸೊಪ್ಪುಗಳು ಒಣಗಿ ಬಾಡುತ್ತವೆ. ಇನ್ನೂ ಕುಡಿಯುವ ನೀರಿಗೆ ಹಾಹಾಕಾರವಿರುತ್ತದೆ. ವ್ಯಾಪಾರಿಗಳು ತರುವ 1ರಿಂದ 2 ಲೀಟರ್ ನೀರು ಮಧ್ಯಾಹ್ನದೊಳಗೆ ಖಾಲಿಯಾಗುತ್ತದೆ. ನಂತರ ನೀರಿಗಾಗಿ ಅಲೆದಾಡಬೇಕು. ಇಲ್ಲವೇ ಜ್ಯೂಸ್ ಕುಡಿದು ದಾಹ ತಣಿಸಿಕೊಳ್ಳಬೇಕು.
ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದರೆ ಒಂದೆಡೆ ಇಕ್ಕಟ್ಟಾದ ರಸ್ತೆ. ಇನ್ನೊಂದೆಡೆ ಸುಸಜ್ಜಿತ ಕಟ್ಟಡವಿಲ್ಲದಿರುವುದು. ಜತೆಗೆ ಮಳೆಗಾಲದಲ್ಲಿ ಸಂತೆ ವ್ಯಾಪಾರ ನಡೆಯುವ ಸ್ಥಳದಲ್ಲಿ ಜನರ ಅತ್ತಿಂದಿತ್ತ ತಿರುಗಾಟದಿಂದ ಪ್ರದೇಶವಿಡೀ ಕೆಸರುಮಯವಾಗುತ್ತದೆ. ಕುಳಿತು ಮಾರಾಟ ಮಾಡಲಾಗದ ಪರಿಸ್ಥಿತಿ ಬರುತ್ತದೆ.
ಪ್ರತ್ಯೇಕ ತಳ್ಳುಗಾಡಿ ಇರುವವರು ವ್ಯಾಪಾರ ಮಾಡಬಹುದು. ಚರಂಡಿ ಪಕ್ಕದ ರಸ್ತೆ ಬದಿ ಕುಳಿತು ವ್ಯಾಪಾರ ಮಾಡುವವರ ಕಷ್ಟ ಹೇಳತೀರದು. ಏಕಾಏಕಿ ಮಳೆ ಸುರಿದರೆ ಚರಂಡಿಗಳು ಕಟ್ಟಿಕೊಂಡು ಚರಂಡಿಯ ಗಲೀಜು ನೀರಿನೊಂದಿಗೆ ತರಕಾರಿಗಳು ತೇಲಿ ಹೋಗುತ್ತವೆ. ಸ್ವಯಂ ರಕ್ಷಣೆ ಜೊತೆ ಮಾರಾಟ ಮಾಡುವ ವಸ್ತುಗಳ ರಕ್ಷಣೆಗೂ ಮುಂದಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.