ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲೆಯ ಆರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ: ಗೋವಿಂದ ಕಾರಜೋಳ

ಕೇಂದ್ರ ಬಜೆಟ್‌ನಲ್ಲಿ ಅನುದಾನ: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ
Last Updated 14 ಫೆಬ್ರುವರಿ 2021, 13:30 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ– ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜಿಲ್ಲೆಯ ಆರು ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗಿದೆ ಎಂದುಲೋಕೋಪಯೋಗಿ ಸಚಿವರೂ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಗಡಿಯಿಂದ ಸಾವಳಗಿ ಕ್ರಾಸ್‌ ವರೆಗಿನ 146 ಕಿ.ಮೀ., ತಿಕೋಟಾದಿಂದ ಮಹಾರಾಷ್ಟ್ರ ಗಡಿ ವರೆಗಿನ 24 ಕಿ.ಮೀ, ವಿಜಯಪುರ–ಸಿದ್ದಾಪುರ ರಸ್ತೆ ಮಹಾರಾಷ್ಟ್ರ ಗಡಿವರೆಗೆ 12 ಕಿ.ಮೀ.,ಲಿಂಗಸುಗೂರು–ಸಿರಾಡೋಣ ರಸ್ತೆ, ವಿಜಯಪುರ ಪ್ರವಾಸಿ ಮಂದಿರದಿಂದ ಅಥಣಿ ವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಲು ಬಜೆಟ್‌ನಲ್ಲಿ ಅನುದಾನ ಒದಗಿಸಲಾಗಿದೆ ಎಂದರು.

ಉತ್ತರ ಕರ್ನಾಟಕ ಭಾಗದ 13 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ರಾಜ್ಯದ ಒಟ್ಟು 33 ರಾಷ್ಟ್ರಿಯ ಹೆದ್ದಾರಿ ಮೇಲ್ದರ್ಜೆಗೆ ಏರಿಸಲುಕೇಂದ್ರ ಬಜೆಟ್‌ನಲ್ಲಿ₹10,904 ಕೋಟಿ ನೀಡಲಾಗಿದೆ ಎಂದರು.

ಹುಬ್ಬಳ್ಳಿಯಿಂದ ಸೋಲಾಪುರವರೆಗಿನ ರಾಷ್ಟ್ರೀಯ ಹೆದ್ದಾರಿ ಮುಕ್ತಾಯ ಹಂತದಲ್ಲಿದೆ ಎಂದು ತಿಳಿಸಿದರು.

ಆರೋಗ್ಯ ಕ್ಷೇತ್ರಕ್ಕೆ ಒತ್ತು:

ಆರೋಗ್ಯ ಮತ್ತು ಮೂಲಸೌಕರ್ಯಕ್ಕೆ ಸ್ವಾತಂತ್ರ್ಯ ನಂತರ ಯಾವ ಪ್ರಧಾನ ಮಂತ್ರಿಗಳೂ ನೀಡಿದ ಮಹತ್ವವನ್ನು ನರೇಂದ್ರ ಮೋದಿ ಅವರು ಈ ಭಾರಿಯ ಬಜೆಟ್‌ನಲ್ಲಿ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ಭಾರತವು ಪ್ರಪಂಚದ ಕೇಂದ್ರ (ಹಬ್‌) ಆಗಬೇಕು ಎಂಬ ಉದ್ದೇಶ ಹೊಂದಿರುವ ಪ್ರಧಾನಿ ಅವರು, ₹2.23 ಲಕ್ಷ ಕೋಟಿಯನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಾಗಿಟ್ಟಿದ್ದಾರೆ. ಕಡುಬಡವರಿಗೂ ಗುಣಮಟ್ಟದ ಆರೋಗ್ಯ ಸೇವೆ ಲಭಿಸುವಂತಾಗಬೇಕು ಎಂಬುದು ಅವರ ಕನಸಾಗಿದೆ ಎಂದರು.

ರಾಷ್ಟ್ರೀಯ ಯೋಜನೆ ಆಗಲಿ:

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸುವಂತೆ ಈಗಾಗಲೇ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ. ಯುಕೆಪಿ ನಮ್ಮ ಅವಧಿಯಲ್ಲೇ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಸೋಮನಗೌಡ ಸಾಸನೂರ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್‌.ಕೆ.ಬೆಳ್ಳುಬ್ಬಿ, ಕಾಳಪ್ಪ ಬೆಳ್ಳುಂಡಗಿ, ಚೇತನ್‌ ಬಗಲಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

‘ಮೀಸಲಾತಿಅರ್ಹರಿಗೆ ಸಿಗಲಿ’

ಯಾರೂ ಅವಮಾನ, ಶೋಷಣೆ, ತುಳಿತಕ್ಕೆ ಒಳಗಾಗಿದ್ದಾರೋ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರನ್ನು ಮೇಲೆತ್ತಲುದೇಶದ ಸಂವಿಧಾನದಲ್ಲಿ ಮೀಸಲಾತಿ ಸೌಲಭ್ಯವಿದೆ. ಇಂತಹ ಸಮುದಾಯಕ್ಕೆ ಸೇರಿದ ಯಾರೇ ಆಗಲಿ ಮೀಸಲಾತಿ ಪಡೆಯಲು ಅರ್ಹರು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ರಾಜ್ಯದಲ್ಲಿ ವಿವಿಧ ಜಾತಿ, ಸಮುದಾಯಗಳು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು

ಪಂಚಮಸಾಲಿ, ಕುರುಬ, ವಾಲ್ಮೀಕಿ ಸೇರಿದಂತೆ ವಿವಿಧ ಸಮುದಾಯಗಳ ಬೇಡಿಕೆ ಕುರಿತು ನನ್ನ ನಿಲುವೇನು ಎಂಬುದರ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದರು.

‘ಜಲಜೀವನ್’‌ಗೆ ಹಲಗಲಿ ಮಾದರಿ

ಕೇಂದ್ರ ಸರ್ಕಾರದ ‘ಜಲಜೀವನ್’‌ ಯೋಜನೆ ಅನುಷ್ಠಾನಕ್ಕೆ ಮುಧೋಳ ತಾಲ್ಲೂಕಿನ ಹಲಗಲಿ ಗ್ರಾಮಪ್ರೇರಣೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಹಲಗಲಿ ಗ್ರಾಮದಲ್ಲಿ ಸರ್ಕಾರದ ಹಣದಲ್ಲಿ ಪ್ರತಿ ಮನೆಗೆ ನಳ ಸಂಪರ್ಕ ಕಲ್ಪಿಸುವ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ತಾವು ಅನುಷ್ಠಾನಕ್ಕೆ ತಂದಿದ್ದು, ಇದು ದೇಶಕ್ಕೆ ಮಾದರಿಯಾಗಿದೆ ಎಂದರು.

ಕೇಂದ್ರ ತಂಡ ಹಲಗಲಿ ಗ್ರಾಮಕ್ಕೆ ಭೇಟಿ ನೀಡಿ ಯೋಜನೆ ಕುರಿತು ಅಧ್ಯಯನ ಮಾಡಿ ಇದರ ಸಫಲತೆಯನ್ನು ಮನಗಂಡು ದೇಶಕ್ಕೆ ಅನ್ವಯಿಸಲು ಜಲಜೀವನ ಯೋಜನೆಯನ್ನು ರೂಪಿಸಿದೆ ಎಂದು ಹೇಳಿದರು.

ದೇಶದ ಪ್ರತಿ ಮನೆ, ಮನೆಗೆ ನಳದ ಮೂಲಕ ಸುರಕ್ಷಿತ, ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ‘ಜಲಜೀವನ್’‌ ಯೋಜನೆಗಾಗಿ ಈ ವರ್ಷದ ಬಜೆಟ್‌ನಲ್ಲಿ ₹ 2.87 ಲಕ್ಷ ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದರು.

ಬಿ.ಎಸ್‌.ಯಡಿಯೂರಪ್ಪ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಈ ವಿಷಯದಲ್ಲಿ ಯಾವುದೇ, ಗೊಂದಲ, ಊಹಾಪೂಹ ಬೇಡ
–ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT