ಬುಧವಾರ, ಜುಲೈ 15, 2020
25 °C
ಸುಜಾತಾಗೆ ಜಿಲ್ಲಾ ಪಂಚಾಯ್ತಿ ಪಟ್ಟ; ಪಾಟೀಲತ್ರಯರ ಒಗ್ಗಟ್ಟಿಗೆ ಜಯ

ವಿಜಯಪುರ | ಕೈಗೆ ಮೇಲುಗೈ; ಮತ್ತೆ ಮುದುಡಿದ ಕಮಲ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಗಾದೆಗೆ ಏರಬೇಕು ಎಂಬ ಬಿಜೆಪಿ ಕೊನೆಯ ಯತ್ನವೂ ಮಂಗಳವಾರ ನಡೆದ ಚುನಾವಣೆಯಲ್ಲಿ ಫಲಪ್ರದವಾಗದೇ ತೀವ್ರ ಮುಖಭಂಗ ಅನುಭವಿಸಿತು. ಪಾಟೀಲತ್ರಯರ ಒಗ್ಗಟ್ಟಿನ ಯತ್ನಕ್ಕೆ ಅಧ್ಯಕ್ಷ ಸ್ಥಾನ ಮತ್ತೆ ಕಾಂಗ್ರೆಸ್‌ಗೆ ಒಲಿಯಿತು.‌ 

ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಅತಂತ್ರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಒಟ್ಟು 42 ಸದಸ್ಯ ಸ್ಥಾನ ಹೊಂದಿರುವ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ ಅತೀ ಹೆಚ್ಚು (20) ಸ್ಥಾನಗಳನ್ನು ಹೊಂದಿದ್ದರೂ ಗದ್ದುಗೆ ಏರುವ ಕನಸು ಕೊನೆಗೂ ಈಡೇರಲಿಲ್ಲ. ಬಿಜೆಪಿಗಿಂತ ಕಡಿಮೆ ಬಲ(18) ಹೊಂದಿರುವ ಕಾಂಗ್ರೆಸ್‌ ಮೂರನೇ ಬಾರಿಗೂ ಜಯ ಗಳಿಸುವ ಮೂಲಕ ಜಿಲ್ಲಾ ಪಂಚಾಯ್ತಿಯನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡಿತು.

ಬಿಜೆಪಿಯ ಬಿಂದುರಾಯಗೌಡ ಪಾಟೀಲ, ಮಹಾಂತಗೌಡ ಪಾಟೀಲ, ಕಲ್ಲಪ್ಪ ಮಟ್ಟಿ ಮತ್ತು ಜ್ಯೋತಿ ಅಸ್ಕಿ, ಜೆಡಿಎಸ್‌ನ ರಾಮು ರಾಠೋಡ, ಕವಿತಾ ವಿಲಾಸ ರಾಠೋಡ ಹಾಗೂ ಪಕ್ಷೇತರ ಸದಸ್ಯ ಗುರುರಾಜ ಪಾಟೀಲ ಅವರಿಗೆ ಬಲೆ ಬೀಸುವಲ್ಲಿ ಯಶಸ್ವಿಯಾದ ಕಾಂಗ್ರೆಸ್‌ನ ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಮತ್ತು ಯಶವಂತರಾಯಗೌಡ ಪಾಟೀಲ ಅವರು ಸಾರವಾಡ ಕ್ಷೇತ್ರದ ಸದಸ್ಯೆ ಸುಜಾತಾ ಕಳ್ಳಿಮನಿ ಅವರ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಕಾಂಗ್ರೆಸ್‌ ಸದಸ್ಯರಾದ ಉಮೇಶ ಕೋಳ್ಕೂರ ಸೋಮವಾರ ರಾತ್ರೋರಾತ್ರಿ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಚಲನ ಮೂಡಿಸಿದ್ದರು. ಅಲ್ಲದೇ, ಕಾಂಗ್ರೆಸ್‌ನ ಶಿವಶರಣ ಭೈರಗೊಂಡ ಮತ್ತು  ಶಿವಯೋಗಪ್ಪ ನೇದಲಗಿ ಹಾಗೂ ಜೆಡಿಎಸ್‌ನ ಬಸನಗೌಡ ವನಕ್ಯಾಳ ಅವರನ್ನು ಸೆಳೆಯುವಲ್ಲಿ ಬಿಜೆಪಿ ಸಫಲವಾದರೂ ಸಹ ಅಭ್ಯರ್ಥಿ ಭೀಮಾಶಂಕರ ಬಿರಾದಾರ ಪರಾಜಯವಾಗಬೇಕಾಯಿತು.‌

ಕೊನೆಯ ಅವಧಿಯ ಅಧ್ಯಕ್ಷ ಪಟ್ಟ ಏರಲು ಕಾಂಗ್ರೆಸ್‌ನ ಇಬ್ಬರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರನ್ನು ಬಿಜೆಪಿ ಸೆಳೆಯುವಲ್ಲಿ ಯಶಸ್ವಿಯಾದರೂ ತಮ್ಮ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಎಡವಿತು. ಬಿಜೆಪಿ ಮುಖಂಡರು ಮತ್ತು ಪಕ್ಷದ ಶಾಸಕರ ನಡುವಿನ ಒಳಜಗಳದ ಪರಿಣಾಮವೇ ಕಾಂಗ್ರೆಸ್‌ಗೆ ವರವಾಯಿತು.

ಸಂಕಷ್ಟ ನಿವಾರಣೆಗೆ ಆದ್ಯತೆ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮಾತನಾಡಿ, ಶಾಸಕರು, ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಮುಖಂಡರ ಸಹಕಾರದಿಂದ ಗೆಲುವು ಸಿಕ್ಕಿದೆ. ‌ಅವಧಿ ಕಡಿಮೆ ಇದೆ. ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಯ ಜನತೆಯ ನೆರವಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

ಸುದ್ದಿ ಮಾಧ್ಯಮ ಹೊರಗಿಟ್ಟು ಚುನಾವಣೆ‌
ವಿಜಯಪುರ:
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸುದ್ದಿ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಳ್ಳದಂತೆ ಬೆಳಗಾವಿ ಪ್ರಾದೇಶಕ ವಿಭಾಗದ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್‌ ಸಂಪೂರ್ಣ ನಿರ್ಬಂಧವಿಧಿಸಿದ್ದರು.

ಚುನಾವಣೆ ನಾಮಪತ್ರ ಸಲ್ಲಿಕೆ, ಚುನಾವಣಾ ಪ್ರಕ್ರಿಯೆ, ಅಧಿಕಾರ ಸ್ವೀಕಾರ ಸೇರಿದಂತೆ ಯಾವೊಂದು ಪ್ರಕ್ರಿಯೆಲ್ಲೂ ಭಾಗವಹಿಸಲು ಅವಕಾಶ ನೀಡಲಿಲ್ಲ.

ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಮಾಹಿತಿ ನೀಡಲಿರುವುದಾಗಿ ವಾರ್ತಾ ಇಲಾಖೆ ಮೂಲಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಲಾಯಿತು. ಕೊನೆಯಲ್ಲಿ ಚುನಾವಣಾ ಪ್ರಕ್ರಿಯೆಯ ಮಾಹಿತಿಯನ್ನೂ ಆಯುಕ್ತರು ನೀಡದೇ ಹೊರನಡೆದರು.

ಬಸ್ಸಿಗೆ ಕಲ್ಲು; ಲಘು ಲಾಠಿ ಪ್ರಹಾರ
ಚುನಾವಣೆಗೂ ಮುನ್ನಾ ರೆಸಾರ್ಟ್‌ನಲ್ಲಿ ತಂಗಿದ್ದ ಕಾಂಗ್ರೆಸ್‌ ಸದಸ್ಯರು ತಮ್ಮ ಜೊತೆ ಕೈಜೋಡಿಸಿದ್ದ ಬಿಜೆಪಿಯ ನಾಲ್ವರು ಸದಸ್ಯರೊಂದಿಗೆ ಖಾಸಗಿ ಬಸ್‌ನಲ್ಲಿ ಜಿಲ್ಲಾ ಪಂಚಾಯ್ತಿ ಆವರಣದೊಳಗೆ ಬರುವ ವೇಳೆ ಬಿಜೆಪಿ ಕಾರ್ಯಕರ್ತರು ತಡೆಯಲು ಯತ್ನಿಸಿದರು. ಅಲ್ಲದೇ, ಬಸ್ಸಿಗೆ ಕಲ್ಲು ತೂರಿ ಕಿಟಕಿ ಗಾಜನ್ನು ಪುಡಿಗೈದರು. ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ನಡುವಿನ ವಾಗ್ವಾದ ನಡೆಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ  ಪೊಲೀಸರು, ಉದ್ರಿಕ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಈ ಸಂದರ್ಭದಲ್ಲಿ ಉದ್ರಿಕ್ತರು ತೂರಿದ ಕಲ್ಲು ತಾಗಿ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರಿಗೆ ಸಣ್ಣಪುಟ್ಟ ಗಾಯವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು