ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗಿನಿಂದ ಬಂದವರ ಮೇಲೆ ನಿಗಾ: ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌

ರೆಮ್‌ಡಿಸಿವಿರ್‌ ಕೊರತೆ ಪರಿಹಾರಕ್ಕೆ ಕ್ರಮ: ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌
Last Updated 27 ಏಪ್ರಿಲ್ 2021, 16:51 IST
ಅಕ್ಷರ ಗಾತ್ರ

ವಿಜಯಪುರ: ನೆರೆಯ ಮಹಾರಾಷ್ಟ್ರ ಸೇರಿದಂತೆ ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸಿರುವವರ ಮೇಲೆ ತೀವ್ರ ನಿಗಾ ಇಡಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಕೋವಿಡ್‌ ಎರಡನೇ ಅಲೆ ತಡೆ ಸಂಬಂಧ ರಾಜ್ಯ ಸರ್ಕಾರ ಕರ್ಫ್ಯೂ ಜಾರಿಗೊಳಿಸಿದ್ದು, ರಾಜ್ಯದ ಬೇರೆ ಜಿಲ್ಲೆ, ಹೊರ ರಾಜ್ಯದಿಂದ ಬಂದವರಿಗಾಗಿ ಕ್ವಾರಂಟೈನ್‌ ಕೇಂದ್ರ ಸದ್ಯ ಆರಂಭಿಸಿಲ್ಲ. ಅಗತ್ಯ ಎನಿಸಿದರೆ ಕ್ವಾರಂಟೈನ್‌ ಕೇಂದ್ರ ತೆರೆಯಲಾಗುವುದು ಎಂದರು.

ಜಿಲ್ಲೆಯ ಎಲ್ಲ ಚೆಕ್‌ ಪೋಸ್ಟ್‌ಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಮಹಾರಾಷ್ಟ್ರ ಗಡಿಯಲ್ಲಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮಹಾರಾಷ್ಟ್ರ ಹಾಗೂ ವಿವಿಧ ಜಿಲ್ಲೆಗಳಿಂದ ವಿಜಯಪುರ ಜಿಲ್ಲೆಗೆ ಬಂದಿರುವವರ ವಿವರವನ್ನು ದಿನಾಂಕವಾರು ಪಟ್ಟಿ ಮಾಡಿ, ಅಂತವರ ವಿವರಗಳನ್ನು ಆರೋಗ್ಯ ಇಲಾಖೆಗೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಹೊರಗಿನಿಂದ ಬಂದವರ ಮನೆಗೆ ದಿನಂಪ್ರತಿ ಭೇಟಿ ನೀಡಿ, ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಹೋಗದಂತೆ ಸೂಕ್ತ ತಿಳಿವಳಿಕೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.

ಕೋವಿಡ್‌–19 ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಅವರ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಕೋವಿಡ್‌ 19 ಗಂಟಲು ದ್ರವ ತಪಾಸಣೆ ಮಾಡಿಸಿಕೊಳ್ಳಲು ಸೂಕ್ತ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.

ಈ ಎಲ್ಲ ಕಾರ್ಯಗಳನ್ನು ಗ್ರಾಮ ಪಂಚಾಯ್ತಿಯ ಟಾಸ್ಕ್‌ ಫೋರ್ಸ್‌ನ ಸದಸ್ಯರ ಸಮನ್ವಯತೆಯೊಂದಿಗೆ ನಿರ್ವಹಿಸಬೇಕು ಎಂದರು.

ವಿವಿಧ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಕೈಗಾರಿಕೆ, ಉದ್ದಿಮೆಗಳು, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ತಮ್ಮ ಸಂಸ್ಥೆಗಳು ನೀಡಿರುವ ಅಧಿಕೃತ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ಕೊರಳಲ್ಲಿ ಧರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ತುರ್ತು ಕೆಲಸಕ್ಕೆ ತೆರಳುವವರಿಗೆ ಜಿಲ್ಲಾಡಳಿತದಿಂದ ಪಾಸ್‌ ನೀಡಲಾಗುವುದು ಎಂದು ಹೇಳಿದರು.

ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಹಾಗೂ ಅವಶ್ಯಕವಾಗಿ ಮನೆಯಿಂದ ಹೊರಗಡೆಗೆ ಬರದೇ ಕೋವಿಡ್‌–19 ಸಾಂಕ್ರಾಮಿಕ ಸೋಂಕನ್ನು ತಡೆಗಟ್ಟುವಲ್ಲಿ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ರೆಮ್‌ಡಿಸಿವಿರ್‌ ಕೊರತೆ ನೀಗಲು ಕ್ರಮ:

ಜಿಲ್ಲೆಯಲ್ಲಿ ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಕೊರತೆ ಎದುರಾಗಿದ್ದು, ಸರ್ಕಾರದ ಗಮನಕ್ಕೆ ತರಲಾಗಿದೆ. ಬುಧವಾರ ಜಿಲ್ಲೆಗೆ ಪೂರೈಕೆಯಾಗುವ ಸಾಧ್ಯತೆ ಇದೆ ಎಂದರು.

536 ಪ್ರಕರಣ; ಇಬ್ಬರು ಸಾವು

ಜಿಲ್ಲೆಯಲ್ಲಿ ಮಂಗಳವಾರ 536 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೆ ಒಂದು ದಿನದಲ್ಲಿ ಕಂಡುಬಂದ ಹೆಚ್ಚು ಪ್ರಕರಣ ಇದಾಗಿದೆ.

ಬುಧವಾರ ಕೋವಿಡ್‌ನಿಂದ ಇಬ್ಬರು ಸಾವಿಗೀಡಾಗಿದ್ದಾರೆ. ವಿಜಯಪುರ ನಗರವೊಂದರಲ್ಲೇ 250 ಕೋವಿಡ್‌ ಪಾಸಿಟಿವ್‌ ಪ್ರಕರಣ ಪತ್ತೆಯಾಗಿವೆ. ಉಳಿದಂತೆ ಸಿಂದಗಿ 95, ಮುದ್ದೇಬಿಹಾಳ 43, ಇಂಡಿ 33, ಬಸವನ ಬಾಗೇವಾಡಿ 31, ವಿಜಯಪುರ ಗ್ರಾಮೀಣ 21, ಬಬಲೇಶ್ವರ 19, ದೇವರ ಹಿಪ್ಪರಗಿ 16, ನಿಡಗುಂದಿ 14, ಕೊಲ್ಹಾರ 7, ಚಡಚಣ 2, ತಾಳಿಕೋಟೆ 2, ತಿಕೋಟಾ 1, ಇತರೆ 2 ಪ್ರಕರಣಗಳು ವರದಿಯಾಗಿವೆ.

ದಿನಸಿ ಖರೀದಿಸಿದ ಜನರು

ವಿಜಯಪುರ: ಮುಂದಿನ 14 ದಿನ ಜಾರಿಯಾಗುವ ಕೋವಿಡ್‌ ಕರ್ಫ್ಯೂ ಸಂದರ್ಭದಲ್ಲಿ ಅಗತ್ಯ ದಿನಸಿ ಸಿಗುತ್ತವೆಯೋ, ಇಲ್ಲವೋ ಎನ್ನುವ ಆತಂಕದೊಂದಿಗೆ ಜನರು ಮಂಗಳವಾರ ಕಿರಾಣಿ ಅಂಗಡಿಗಳಲ್ಲಿಮುಗಿಬಿದ್ದು ದಿನಸಿ ಖರೀದಿಸುತ್ತಿರುವುದು ಕಂಡುಬಂತು.

ನಗರದ ಕೆ.ಸಿ. ಮಾರುಕಟ್ಟೆ, ಎಪಿಎಂಸಿ, ಗಾಂಧಿಚೌಕ, ಇಂಡಿ ರಸ್ತೆಗಳಲ್ಲಿರುವ ಮಳಿಗೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಚೀಲಗಳನ್ನು ಹಿಡಿದು ಸರದಿ ನಿಂತಿದ್ದರು. ಸಾಮಾನ್ಯ ದಿನಗಳಲ್ಲಿ ಒಂದು ಚೀಲದಲ್ಲಿ ಸರಕು ಖರೀದಿಸುತ್ತಿದ್ದವರು ಈಗ ಬೈಕ್‌, ಆಟೊ ಹಾಗೂ ಕಾರುಗಳಲ್ಲಿ ದಿನಸಿಗಳನ್ನು ತುಂಬಿಸಿಕೊಂಡು ಒಯ್ಯುದ್ದರು.

ಸಕ್ಕರೆ, ಚಹಾಪುಡಿ, ಬೇಳೆಕಾಳು, ಸಾಬೂನು, ಎಣ್ಣೆ, ತರಕಾರಿ ಸೇರಿದಂತೆ ತಿಂಗಳಿಗಾಗುವಷ್ಟು ದಿನಸಿಗಳನ್ನು ಖರೀದಿಸಿದರು.

ಕೊಲ್ಹಾರ: ವಾರದ ಸಂತೆ ನಿಷೇಧ

ಕೊಲ್ಹಾರ: ಪಟ್ಟಣದಲ್ಲಿ ಪ್ರತಿ ಬುಧವಾರ ಜರುಗುವ ವಾರದ ಸಂತೆ ಸೇರಿದಂತೆ ತಾಲ್ಲೂಕಿನ ಎಲ್ಲಾ ಸಂತೆಗಳನ್ನು ಮುಂದಿನ ಆದೇಶದವರೆಗೂ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್‌ ಎಸ್.ಡಿ.ಮುರಾಳ ಮಾಹಿತಿ ನೀಡಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ 10 ವರೆಗೂ ಸಾರ್ವಜನಿಕರಿಗೆ ಅಗತ್ಯವಸ್ತುಗಳ ಖರೀದಿಗೆ ಹಾಗೂ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT