ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಈ ರಸ್ತೆಗಳಲ್ಲಿ ಜೆಸಿಬಿ ಸದ್ದು ಯಾವಾಗ?

ವಿಜಯಪುರ ಮಹಾನಗರದಲ್ಲಿ ಅನುಷ್ಠಾನವಾಗದ ಮಾಸ್ಟರ್ ಪ್ಲ್ಯಾನ್‌
Published 19 ಆಗಸ್ಟ್ 2024, 5:23 IST
Last Updated 19 ಆಗಸ್ಟ್ 2024, 5:23 IST
ಅಕ್ಷರ ಗಾತ್ರ

ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿ ಈಚೆಗೆ ಆಗಾಗ ಜೆಸಿಬಿಗಳು ಸದ್ದು ಮಾಡುತ್ತಿವೆ. ಸಾರ್ವಜನಿಕ ರಸ್ತೆ, ಉದ್ಯಾನ, ಚರಂಡಿಯನ್ನು ಅತಿಕ್ರಮಣ ಮಾಡಿ ಕಟ್ಟಲಾಗುರಯವ ಮನೆ, ಮಳಿಗೆ, ಕಟ್ಟಡ, ಅಂಗಡಿಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಮುಂದಾಗಿರುವುದು ಸ್ವಾಗತಾರ್ಹ.

‘ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಇಷ್ಟಕ್ಕೆ ಇಲ್ಲದು, ನೀವಾಗಿ ತೆರವುಗೊಳಿಸಿ, ಇಲ್ಲವೇ ನಾವೇ ತೆರವುಗೊಳಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್‌, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್‌ ಮೆಕ್ಕಳಕಿ ಗುಡುಗುವ ಮೂಲಕ ಅತಿಕ್ರಮಣಕಾರರಲ್ಲಿ ಭಯ ಹುಟ್ಟುಹಾಕಿದ್ದಾರೆ.

ನಗರ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಹೊಟ್ಟೆ ಪಾಡಿಗಾಗಿ ಗೂಡಂಗಡಿ ಹಾಕಿಕೊಂಡು, ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ವಹಿವಾಟು ಮಾಡಿ ಜೀವನ ಸಾಗಿಸುವವರ ವಿರುದ್ಧ ಮಾತ್ರ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಗರ್ಜಿಸದರೆ ಸಾಲದು, ಬಲಾಡ್ಯರ ಅತಿಕ್ರಮಣ ತೆರವಿಗೂ ಜೆಸಿಬಿ ಬಳಕೆ ಮಾಡಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಿಜಯಪುರ ಮಹಾನಗರದ ಮಾಸ್ಟರ್‌ ಪ್ಲ್ಯಾನ್‌ ಕೇವಲ ಮಹಾತ್ಮ ಗಾಂಧಿ ರಸ್ತೆಗೆ ಸೀಮಿತವಾಗಿದೆ. ಇನ್ನುಳಿದ ಯಾವ ರಸ್ತೆಗಳಿಗೂ ಇನ್ನೂ ಮಾಸ್ಟರ್‌ ಪ್ಲ್ಯಾನ್‌ ರೂಪಿಸಿಲ್ಲ. ಹೀಗಾಗಿ ಇನ್ನುಳಿದ ಪ್ರಮುಖ ರಸ್ತೆಗಳ ಅತಿಕ್ರಮಣ ತೆರವು ನನೆಗುದಿಗೆ ಬಿದ್ದಿದೆ. ಅಲ್ಲದೇ, ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನುಳಿದ ರಸ್ತೆಗಳ ಅತಿಕ್ರಮಣ ತೆರವುಗೊಳಿಸಿ ರಸ್ತೆ ವಿಸ್ತರಣೆಗೆ ಮುಂದಾಗುತ್ತಿಲ್ಲ ಎಂಬ ಆರೋಪ ಇದೆ.

ಸೋಲಾಪುರ ರಸ್ತೆ, ಅಥಣಿ ರಸ್ತೆ, ಮನಗೂಳಿ ರಸ್ತೆ, ರಾಮನಗರ ರಸ್ತೆಗಳು ವಿಸ್ತರಣೆಯಾಗಿರುವುದರಿಂದ ವಿಜಯಪುರ ನಗರದ ಸೌಂದರ್ಯ ಹೆಚ್ಚಾಗಿದೆ. ಅಂತೆಯೇ ಅತಿಕ್ರಮಣವಾಗಿರುವ ನಗರದ ಇತರೆ ರಸ್ತೆಗಳಲ್ಲೂ ತೆರವು ಕಾರ್ಯಾಚರಣೆ ನಡೆದು, ರಸ್ತೆ ವಿಸ್ತರಣೆಯಾಗಬೇಕಿದೆ ಎಂಬುದು ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಎಸ್‌.ಬಾಗಲಕೋಟೆ ಅವರ ಆಗ್ರಹ.

ಐತಿಹಾಸಿಕ ವಿಜಯಪುರ ನಗರಕ್ಕೆ ಪ್ರತಿದಿನ ದೇಶ, ವಿದೇಶಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಲ್ಲಿ ಭೇಟಿ ನೀಡುತ್ತಾರೆ. ಇಂತಹ ನಗರ ಮತ್ತಷ್ಟು ಸ್ವಚ್ಛ, ಸುಂದರವಾಗಿ ಕಾಣುವಂತಾಗಬೇಕಾದರೆ ಮೊದಲು ಅತಿಕ್ರಮಗಳು ತೆರವುಗೊಂಡು, ಸುಸಜ್ಜಿತ ರಸ್ತೆಗಳು ನಿರ್ಮಾಣವಾಗಬೇಕಿದೆ.

ವಿಜಯಪುರ ನಗರದಲ್ಲಿ ಜನ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ  ಸುಗಮ ಸಂಚಾರಕ್ಕಾಗಿ ಇಕ್ಕಟ್ಟಾಗಿರುವ ರಸ್ತೆಗಳ ಅತಿಕ್ರಮಣ ತೆರವುಗೊಳಿಸಿ ವಿಸ್ತರಣೆ ಮಾಡಬೇಕು

–ಶಿವರುದ್ರ ಬಾಗಲಕೋಟೆ ಮಹಾನಗರ ಪಾಲಿಕೆ ಸದಸ್ಯ

ವಿಜಯಪುರ ನಗರದ ಪ್ರಮುಖ ರಸ್ತೆಗಳ ಸರ್ವೆ ಸ್ಕೇಚ್‌ ದಾಖಲೆಗಳೊಂದಿಗೆ ವರದಿ ನೀಡುವಂತೆ ಸರ್ವೆ ಇಲಾಖೆಗೆ ಕೋರಲಾಗಿದೆ. ವರದಿ ಪಡೆದ ನಂತರ ತೆರವಿಗೆ ಕ್ರಮವಹಿಸಲಾಗುವುದು

–ವಿಜಯಕುಮಾರ್ ಮೆಕ್ಕಳಕಿ ಆಯುಕ್ತ ಮಹಾನಗರ ಪಾಲಿಕೆ ವಿಜಯಪುರ

ಮುಖ್ಯರಸ್ತೆಗಳ ವಿವರ

ವಿಜಯಪುರ ಮಹಾನಗರ ವ್ಯಾಪ್ತಿಯಲ್ಲಿ ಅತಿ ಮುಖ್ಯವಾಗಿ ವಿಸ್ತರಣೆಯಾಗಬೇಕಿರುವ ರಸ್ತೆಗಳ ಪಟ್ಟಿ ಇಂತಿದೆ. * ಪೊಲೀಸ್‌ ಕ್ವಾರ್ಟಸ್‌ ಗೇಟ್‌ ಎದುರುಗಡೆಯಿಂದ–ವಾಟರ್‌ ಟ್ಯಾಂಕ್‌ ಕ್ರಾಸ್‌ – ಗೋದಾವರಿ ಹೋಟೆಲ್‌ ವರೆಗೆ.

* ಬಬಲೇಶ್ವರ ನಾಕಾದಿಂದ ನೀರಿನ ಟ್ಯಾಂಕ್‌ ಕ್ರಾಸ್‌ ವರೆಗೆ.

* ವಾಟರ್‌ ಟ್ಯಾಂಕ್‌ ಕ್ರಾಸ್‌ನಿಂದ – ಎಸ್‌.ಪಿ ಆಫೀಸ್‌ ವರೆಗೆ.

* ಬಾಗಲಕೋಟೆ ಕ್ರಾಸ್‌ನಿಂದ –ಸರ್ಕಾರಿ ಪಾಲಿಟೆಕ್ನಿಕ್‌ ವರೆಗೆ.

* ನಾಲಬಂದ್‌ ಮಸೀದಿಯಿಂದ ಮರಾಠ ವಿದ್ಯಾಲಯ–ತೆಕಡೆಗಲ್ಲಿ–ಮನಗೂಳಿ ಅಗಸಿವರೆಗೆ.

* ಸ್ಟೇಷನ್‌ ರಸ್ತೆಯ ಪಿಡಬ್ಲ್ಯುಡಿ ಕಚೇರಿಯಿಂದ–ಗೋಳಗುಮ್ಮಟದ ವರೆಗೆ.

* ಆಜಾದ್‌ ರಸ್ತೆಯಲ್ಲಿ ಮಿಲನ್‌ ಬಾರ್‌ನಿಂದ ಚಂದ್‌ ಬಾವಡಿ–ಮುಳ್ಳಗಸಿವರೆಗೆ.

* ಗೋದಾವರಿ ಕ್ರಾಸ್‌ ಅಥಣಿ ರಸ್ತೆಯಲ್ಲಿರುವ ಇಬ್ರಾಹಿಂ ರೋಜಾ ಕ್ರಾಸ್‌ನಿಂದ ಇಬ್ರಾಹಿಂ ರೋಜಾ ಮುಖಾಂತರ ಬಬಲೇಶ್ವರ ನಾಕಾದವರೆಗೆ.

* ಆಶ್ರಮ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆ ಅತಿಕ್ರಮಣ ತೆರವುಗೊಳಿಸಿ ವಿಸ್ತರಣೆ ಮಾಡುವ ಅಗತ್ಯ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT