ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಹಂಗಾಮಿಗೆ ಮಾ. 30ರ ವರೆಗೆ ನೀರು

ಯುಕೆಪಿ ಅಚ್ಚುಕಟ್ಟು ಪ್ರದೇಶದ ಕಾಲುವೆಗೆ ನೀರು; ಐಸಿಸಿ ಸಭೆಯಲ್ಲಿ ನಿರ್ಣಯ
Last Updated 23 ನವೆಂಬರ್ 2022, 15:10 IST
ಅಕ್ಷರ ಗಾತ್ರ

ಆಲಮಟ್ಟಿ(ವಿಜಯಪುರ): ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ವಾರಾಬಂಧಿ ಪದ್ಧತಿಗೆ ಒಳಪಟ್ಟು ಹಿಂಗಾರು ಹಂಗಾಮಿಗೆ 2023ರ ಮಾರ್ಚ್‌ 30ರ ವರೆಗೆ ಒಟ್ಟು 119 ದಿನಗಳ ಕಾಲ ನೀರು ಹರಿಸಲು ಬುಧವಾರ ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ನಿರ್ಣಯಿಸಲಾಗಿದೆ.

ಲೋಕೋಪಯೋಗಿ ಸಚಿವ, ಐಸಿಸಿ ಅಧ್ಯಕ್ಷ ಸಿ.ಸಿ. ಪಾಟೀಲ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, 14 ದಿನ ಕಾಲುವೆಗೆ ನೀರು ಚಾಲು, 10 ದಿನ ಬಂದ್ ವಾರಾಬಂಧಿ ಅಳವಡಿಸಲಾಗಿದೆ.

ಡಿ.12 ರಿಂದ ನೀರು:

ನ.24 ರಿಂದ ಡಿ.11ರ ವರೆಗೆ ಹಿಂಗಾರು ಬಿತ್ತನೆಗೆ ಅವಕಾಶ ಕಲ್ಪಿಸಿದ ನಂತರ ಡಿ.12 ರಿಂದ 2023ರ ಮಾ.30ರ ವರೆಗೆ 119 ದಿನಗಳ ಕಾಲ ವಾರಾಬಂಧಿ ಷರತ್ತಿಗೆ ಒಳಪಟ್ಟು ನೀರು ಹರಿಸಲು ನಿರ್ಧರಿಸಲಾಗಿದೆ.

108 ಟಿಎಂಸಿ ಅಡಿ ನೀರು:

ಆಲಮಟ್ಟಿ ಜಲಾಶಯದಲ್ಲಿ 103.473 ಟಿಎಂಸಿ ಅಡಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ 5.19 ಟಿಎಂಸಿ ಅಡಿ ಸೇರಿ ಬಳಕೆಗೆ ಯೋಗ್ಯ 108.663 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಜೂನ್ 2023 ರವರೆಗೆ ಕುಡಿಯುವ ನೀರು, ಭಾಷ್ಪಿಭವನ, ಕೈಗಾರಿಕೆ, ಕೆರೆ ಭರ್ತಿ ಸೇರಿ ಇನ್ನೀತರ ಬಳಕೆ ಸೇರಿ ಒಟ್ಟಾರೆ 38.544 ಟಿಎಂಸಿ ಅಡಿ ನೀರು ಅಗತ್ಯ.

ಹೀಗಾಗಿ ಕಾಲುವೆಗೆ ಸುಮಾರು 68.977 ಟಿಎಂಸಿ ಅಡಿ ನೀರು ಹರಿಸಲು, ನಾರಾಯಣಪುರ ವ್ಯಾಪ್ತಿಯ ಕಾಲುವೆಗೆ ನಿತ್ಯ 0.9 ಟಿಎಂಸಿ ಅಡಿ, ಆಲಮಟ್ಟಿ ವ್ಯಾಪ್ತಿಯ ಕಾಲುವೆಗೆ ನಿತ್ಯ 0.1 ಟಿಎಂಸಿ ಅಡಿ ಸೇರಿ ಎರಡೂ ಜಲಾಶಯ ವ್ಯಾಪ್ತಿಯ ಕಾಲುವೆಗೆ ನಿತ್ಯ ಎಲ್ಲ ಕಾಲುವೆಗಳಿಗೆ 1 ಟಿಎಂಸಿ ಅಡಿ ನೀರು ಹರಿಸುವುದು ಸೇರಿದಂತೆ ಒಟ್ಟಾರೆ 69 ದಿನಗಳ ಕಾಲ ನೀರು ಹರಿಸಲು ತೀರ್ಮಾನಿಸಲಾಯಿತು.

ನೀರಾವರಿ ಅವಧಿ 119 ದಿನ:

ಕಾಲುವೆಗೆ ಐದು ಪಾಳಿಯಲ್ಲಿ ತಲಾ 14 ದಿನಗಳಂತೆ 69 ದಿನಗಳ ಕಾಲ ನೀರು ಹರಿಸುವುದು, ತಲಾ 10 ದಿನದಂತೆ ಐದು ಪಾಳಿಯಲ್ಲಿ 50 ದಿನಗಳ ಕಾಲ ಕಾಲುವೆಗೆ ನೀರು ಹರಿಸುವುದನ್ನು ಬಂದ್ ಮಾಡುವುದು ಸೇರಿ ಒಟ್ಟಾರೆ ಹಿಂಗಾರು ಹಂಗಾಮಿನ ನೀರಾವರಿ ಅವಧಿ 119 ದಿನ. ನೀರಾವರಿ ಬಳಕೆಯಲ್ಲಿ ನೀರು ಉಳಿತಾಯವಾದರೆ ಮಾರ್ಚ್‌ನಲ್ಲಿ ನೀರಿನ ಸಂಗ್ರಹವನ್ನು ನೋಡಿಕೊಂಡು ಕೆಲ ದಿನಗಳ ಕಾಲ ಕಾಲುವೆಗೆ ನೀರು ಹರಿಸುವ ಅವಧಿ ಹೆಚ್ಚಿಸಲು ಸಭೆ ನಿರ್ಣಯಿಸಿದೆ.

ಲಘು ನೀರಾವರಿ ಬೆಳೆ:

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಶೇ 35 ಪ್ರದೇಶಕ್ಕೆ ಹಿಂಗಾರು ಹಂಗಾಮು, ಶೇ 15 ರಷ್ಟು ದ್ವಿಋತು ಬೆಳೆಗಳಿಗೆ ಸೇರಿ ಅಚ್ಚುಕಟ್ಟು ಪ್ರದೇಶದ ಶೇ 50ರಷ್ಟು ಪ್ರದೇಶಕ್ಕೆ ಹಿಂಗಾರು ಹಂಗಾಮಿಗೆ ಲಘು ನೀರಾವರಿ ಬೆಳೆಗೆ ಮಾತ್ರ ನೀರು ಹರಿಸಲು ನಿರ್ಧರಿಸಲಾಗಿದೆ.

ನಿಷೇಧಿತ ಬೆಳೆಗಳಾದ ಭತ್ತ, ಕಬ್ಬು, ಬಾಳೆ ಬೆಳೆ ಬೆಳೆಯದೇ, ಲಘು ನೀರಾವರಿ ಬೆಳೆಗಳಾದ ಜೋಳ, ಗೋಧಿ, ಮೆಕ್ಕೆಜೋಳ, ಸೂರ್ಯಕಾಂತಿ, ಸಾಸಿವೆ, ಕಡಲೆ, ಶೇಂಗಾ, ಕುಸುಬಿ, ಸಜ್ಜೆ, ಸೊಪ್ಪು, ತರಕಾರಿ ಮಾತ್ರ ಬೆಳೆಯಲು ಕೋರಲಾಗಿದೆ.

ಸಭೆಯಲ್ಲಿ ಸಚಿವರಾದ ಮುರಗೇಶ ನಿರಾಣಿ, ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಶರಣಬಸಪ್ಪ ದರ್ಶನಾಪುರ, ನರಸಿಂಹ ನಾಯಕ (ರಾಜುಗೌಡ). ಡಿ.ಎಸ್. ಹೂಲಗೇರಿ, ರಮೇಶ ಭೂಸನೂರ, ಯಶವಂತರಾಯಗೌಡ ಪಾಟೀಲ, ವೆಂಕಟರೆಡ್ಡಿ ಮುದ್ನಾಳ, ಪ್ರಕಾಶ ಹುಕ್ಕೇರಿ, ಹನುಮಂತ ನಿರಾಣಿ, ಸಂಸದ ರಾಜಾ ಅಮರೇಶ್ವರ ನಾಯಕ, ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ, ಕೆಬಿಜೆಎನ್‌ಎಲ್ ಎಂ.ಡಿ ಬಿ.ಎಸ್.ಶಿವಕುಮಾರ, ಮುಖ್ಯ ಎಂಜಿನಿಯರ್ ಎಚ್.ಸುರೇಶ, ಐಸಿಸಿ ಸದಸ್ಯ ಕಾರ್ಯದರ್ಶಿ ಪ್ರೇಮಸಿಂಗ್, ಮಂಜುನಾಥ, ಡಿ.ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT