ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣದೊಳಗಡಗಿದೆ ವಿಶ್ವ ಕಲ್ಯಾಣ: ಮಹಾಂತ ಸ್ವಾಮೀಜಿ ಮುದಗಲ್

Last Updated 5 ಆಗಸ್ಟ್ 2022, 12:53 IST
ಅಕ್ಷರ ಗಾತ್ರ

ಹುಟ್ಟಿದ್ದು ಒಂದು ದಿನ ಸಾಯುತ್ತದೆ, ಕಟ್ಟಿದ್ದು ಒಂದು ದಿನ ಬೀಳುತ್ತದೆ, ಮೊಳೆತದ್ದು ಒಂದು ದಿನ ಒಣಗುತ್ತದೆ. ಆದರೆ, ಶರಣರು ಕಟ್ಟಿದ ಕಲ್ಯಾಣ ಎಂದೆಂದಿಗೂ ಇರುತ್ತದೆ. ಏಕೆಂದರೆ ಕಲ್ಯಾಣದ ಶರಣರು ವರ್ಗಾತೀತ, ಜಾತ್ಯತೀತ, ಧರ್ಮಾತೀತವಾಗಿ ಬದುಕಿ ಸೀಮಾತೀತವಾದವರು. ಇಂಥವರು ಕಲ್ಯಾಣದಲ್ಲಿ ಬದುಕಿ, ಬಾಳಿ ಈ ವಿಶ್ವದ ಇತಿಹಾಸದಲ್ಲಿ ಉಳಿದದ್ದಕ್ಕೆ ಮಾದರಿಯೇ ‘ಕಲ್ಯಾಣದೊಳಗಡಗಿದೆ ವಿಶ್ವ ಕಲ್ಯಾಣ’

ಅಂದು ಶಿಕ್ಷಣದ ಅಧ್ಯಯನ ಕಡಿಮೆ ಇತ್ತು. ಇಂದಿನಂತೆ ಶಾಲಾ ಕಾಲೇಜುಗಳಾಗಲಿ, ವಿಶ್ವ ವಿದ್ಯಾಲಯಗಳಾಗಲಿ ಇರಲಿಲ್ಲ. ಆದರೂ ಅವರು ಉತ್ತಮವಾದ ಮತ್ತು ಸಂತೃಪ್ತಿಯ ಬದುಕನ್ನು ಬದುಕಿದ್ದರು. ಮಾನವಿಯ ಮೌಲ್ಯಗಳನ್ನು ನಡೆ ನುಡಿಯಲ್ಲಿ ಪಾಲಿಸಿದ್ದರು. ಮಾತಿನಂತೆ ಕೃತಿ ಇಲ್ಲದೆ ಹೋದರೆ ಆ ಮಾತಿಗೆ ಧಿಕ್ಕಾರ ಎಂಬ ಸಂದೇಶವನ್ನು ಕೊಟ್ಟುರು.

‘ಇವನಾರವ ಇವನಾರವ ಎಂದಿನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದಯನಿಸಯ್ಯ, ಕೂಡಲಸಂಗಮದೇವ ನಿಮ್ಮ ಮಹಾ ಮನೆಯ ಮಗನೆಂದಯನಿಸಯ್ಯ’ ಎಂದು ಎಲ್ಲರನ್ನು ಅಪ್ಪಿಕೊಂಡು ಸಮಾನತೆಯ ಸಂದೇಶದ ಸಿಂಚನ ಮಾಡಿದರು. ಪ್ರಭುದ್ದತೆಯ ಪರಮೊಚ್ಛ ಸ್ಥಿತಿಗೆ ಏರಿದರು. ಸಾಮಾನ್ಯವಾದ ಕಾಯಕ, ಸರಳ ಜೀವನ ಒಬ್ಬ ವ್ಯಕ್ತಿಯ ವಿಕಾಸಕ್ಕೆ ಸಾಕಾಗುತ್ತದೆ. ಆದ್ದರಿಂದ ಆ ಶರಣರು ಅಂದೂ ಇದ್ದರು ಇಂದೂ ಇದ್ದಾರೆ. ಅವರು ಶ್ರಮದ ಸಂಗಡ ಪ್ರಕೃತಿಯನ್ನು ತಮ್ಮ ಜೀವನದ ಮೌಲ್ಯವಾಗಿ, ಸಂಸ್ಕೃತಿ ಎಂದು ಬದುಕಿದವರು ಶರಣರು. ಶ್ರಮ ಸಂಸ್ಕೃತಿಗೆ ಬೆಳಕನ್ನು ನೀಡಿದವರು ನಮ್ಮ ಹಿರಿಯರು. ವಿಶ್ವಕ್ಕೆ ಮಾನವಿಯ ಮೌಲ್ಯಗಳ ಸಂದೇಶ ಕೊಟ್ಟು, ವಿಶ್ವಕಲ್ಯಾಣದ ಕಲ್ಪನೆ ಹೊಂದಿದವರು ನಮ್ಮ ಪೂರ್ವಜರು.

ಸಂತರು, ಮಹಾಂತರು, ಮಹಾನುಭಾವಿಗಳು ಈ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದರು. ಆದ್ದರಿಂದ ಅಲ್ಲಮಪ್ರಭುದೇವರು ಎಮ್ಮವರಿಗೆ ಸಾವಿಲ್ಲ ಎಂದರೇ, ಉಡತಡಿಯಿಂದ ಕಲ್ಯಾಣಕ್ಕೆ ಬಂದು ಅಕ್ಕಮಹಾದೇವಿ ಅಲ್ಲಿನ ಶರಣರ ಕಾಯಕ ದಾಸೋಹಗಳನ್ನು ಕಂಡು ಕಲ್ಯಾಣದ ನುಡಿ ಹಸನಾಯಿತು ಎಂದಳು. ನಮ್ಮ ಹಳ್ಳಿಯ ಗರತಿ ಶರಣರ ನೆನೆದರೆ ಸರಗಿಯ ಇಟ್ಟಂಗ, ಅರಳ ಮಲ್ಲಿಗೆಯ ಹೂ ಮುಡಿದಂಗ ಎಂದು ಹಾಡಿದ್ದಾರೆ. ಇವೆಲ್ಲದರ ಪರಿಚಯವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವದೇ ಕಲ್ಯಾಣದ ಶರಣರ ದರ್ಶನ ಪ್ರವಚನ.

•ಸಂಗ್ರಹ: ಎಂ.ಬಿ.ಕಟ್ಟಿಮನಿ

(ವಿಜಯಪುರದ ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ನಡೆಯುತ್ತಿರುವ ಶ್ರಾವಣಮಾಸದ ಪ್ರವಚನಸಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT