ಶುಕ್ರವಾರ, ಜೂನ್ 18, 2021
28 °C

ಕೆಲಸ ಮಾಡಿ ಇಲ್ಲವೇ, ಕುರ್ಚಿ ತ್ಯಾಗ ಮಾಡಿ: ಸಿಎಂಗೆ ಬಸನಗೌಡ ಪಾಟೀಲ ಯತ್ನಾಳ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಮನೆಯಲ್ಲಿ ಸುಮ್ಮನೆ ಕೂರುವ ಬದಲು ಕ್ರಿಯಾಶೀಲರಾಗಿ ಕೆಲಸ ಮಾಡಿ ಇಲ್ಲವೇ, ಕುರ್ಚಿ ತ್ಯಾಗ ಮಾಡಿ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಗಳೇ ಕೇವಲ ಜಿಂದಾಲ್‌ಗೆ ಜಮೀನು ನೀಡಲು ಕುರ್ಚಿಯ ಮೇಲೆ ಕುಳಿತುಕೊಳ್ಳಬೇಡಿ. ಕೆಲಸವಾಗದಿದ್ದರೆ ನಿವೃತ್ತಿಯಾಗಿ’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಕುರ್ಚಿಯಿಂದ ಹೋಗುವಾಗ ಒಳ್ಳೆಯ ಕೆಲಸ ಮಾಡಿ ಹೋಗಲಿ, ಬರೀ ಲೂಟಿ ಮಾಡುವುದಷ್ಟೇ ಅಲ್ಲ, ಒಳ್ಳೆಯ ಕೆಲಸ ಮಾಡಿ, ಜನರನ್ನು ಉಳಿಸುವ ಕೆಲಸ ಮಾಡಲಿ, ನಕಲಿ ಯೋಜನೆಗಳನ್ನು ಕೈ ಬಿಡಲಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂ.1500 ಕೋಟಿ, ಚರ್ಚ್ ನಿರ್ಮಾಣಕ್ಕೆ ರೂ.200 ಕೋಟಿಯಂಥ ಯೋಜನೆಗಳನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ತಡೆಯಲು ಈವರೆಗೆ ಏನೂ ತಯಾರಿ ಮಾಡಿಲ್ಲ. ಎರಡನೇ ಅಲೆಯೇ ಈಗ ಹೈರಾಣಾಗಿಸಿದೆ ಎಂದು ಅವರು ರಾಜ್ಯ ಸರ್ಕಾರದ ಕಾರ್ಯವೈಕರಿ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯವರು ಘೋಷಣೆ ಮಾಡಿರುವ ಪರಿಹಾರ ಪ್ಯಾಕೇಜ್‌ ಕುರಿತು ಪ್ರತಿಕ್ರಿಯಿಸಿದ ಅವರು, ‘ಲಾಕ್‌ಡೌನ್ ಘೋಷಣೆ ಮಾಡುವುದಕ್ಕಿಂತಲೂ ಮುಂಚೆಯೇ ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡಿ, ಬಡವರಿಗೆ, ಕೂಲಿಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಬೇಕಿತ್ತು. ಆದರೆ, ಇವರು ಕೊರೊನಾ ಹೆಚ್ಚಾದರೆ ತಮ್ಮ ಕುರ್ಚಿ ಉಳಿಯುತ್ತದೆ ಎಂಬ ಕೆಟ್ಟ ಬುದ್ದಿಯಿಂದ ಇದುವರೆಗೂ ಘೋಷಣೆ ಮಾಡದೇ ಇದೀಗ ಮಾಡಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷದವರು, ಬುದ್ದಿಜೀವಿಗಳು, ದೇಶದ್ರೋಹಿಗಳು ಕೋವಿಡ್‌ ಲಸಿಕೆ ಕುರಿತು ತಪ್ಪು ಕಲ್ಪನೆ ಕೊಟ್ಟರು. ಇದು ಮೋದಿ ಲಸಿಕೆ, ಇದು ಬಿಜೆಪಿ ಲಸಿಕೆ ಎಂದು ಅಪಪ್ರಚಾರ ಮಾಡಿ ಲಕ್ಷಾಂತರ ಲಸಿಕೆ ಹಾಳಾಗಲು ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ವಿಜಯಪುರಕ್ಕೆ ಇನ್ನೂ ಹೆಚ್ಚಿನ ಲಸಿಕೆ ಬೇಕಿದ್ದರೂ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಮುಖ್ಯಮಂತ್ರಿ ತಾರತಮ್ಯ ಮಾಡಬಾರದು. ಆರೋಗ್ಯ ಸಚಿವರಿಗೆ ಹೆಚ್ಚಿನ ಲಸಿಕೆ ನೀಡುವಂತೆ ಮನವಿ ಮಾಡಿದ್ದೇನೆ. ಲಸಿಕೆಯನ್ನು ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡದೇ ಯಾವ ಕ್ಷೇತ್ರದಲ್ಲಿ ಹೆಚ್ಚಿನ ಲಸಿಕೆ ಹಾಕಲಾಗಿದೆಯೋ ಆ ಕ್ಷೇತ್ರಕ್ಕೆ ಹೆಚ್ಚಿಗೆ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯಪುರ ನಗರದಲ್ಲಿ ಶೇ 100 ಲಸಿಕೆ ಹಾಕಲು ನಿರ್ಧರಿಸಿದ್ದೇವೆ. ಯಾರು ಈ ಲಸಿಕೆ ಬಗ್ಗೆ ಟೀಕೆ ಮಾಡುತ್ತಿದ್ದಾರೋ ಅವರು ಮನೆಯಲ್ಲಿಯೇ ಮಲಗಿಕೊಳ್ಳಲಿ. ದೇಶಪ್ರೇಮಿಗಳಿಗೆ ಲಸಿಕೆ ಹಾಕಲಾಗುವುದು. ಇಸ್ರೇಲ್‌ ಹೇಗೆ ಮಾಸ್ಕ್ ರಹಿತ ದೇಶವಾಗಿದೆಯೋ ಅದೇ ರೀತಿ ವಿಜಯಪುರವನ್ನು ಮಾಡಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು