ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಆತಂಕ ಬೇಡ: ಶಶಿಕಲಾ ಜೊಲ್ಲೆ

ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಸಭೆ
Last Updated 13 ಏಪ್ರಿಲ್ 2020, 14:05 IST
ಅಕ್ಷರ ಗಾತ್ರ

ವಿಜಯಪುರ: ’ನಗರದಲ್ಲಿ ಕೋವಿಡ್‌–19 ದೃಢಪಟ್ಟಿರುವುದರಿಂದ ಯಾರೂ ಅನಗತ್ಯವಾಗಿ ಆತಂಕಕ್ಕೆ ಒಳಗಾಗುವುದಾಗಲಿ, ಧೈರ್ಯಗುಂದುವುದಾಗಲಿ ಬೇಡ. ಜಿಲ್ಲೆಯ ಜನರೊಂದಿಗೆ ಸರ್ಕಾರ, ಜಿಲ್ಲಾಡಳಿತ ಸೇರಿದಂತೆ ನಾವಿದ್ದೇವೆ‘ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಕೋವಿಡ್‌–19 ಸಂಬಂಧ ನಡೆಸಿದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

’ಎಲ್ಲರೂ ಕೂಡಿಕೊಂಡು ಜಿಲ್ಲೆಯನ್ನು ರೋಗಮುಕ್ತವಾಗಿಸೋಣ. ವೈದ್ಯರ ಮತ್ತು ಸರ್ಕಾರದ ನಿರ್ದೇಶನದಂತೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್‌ಗಳನ್ನು ಕಡ್ಡಾಯವಾಗಿ ತೊಡಬೇಕು. ಅನಗತ್ಯವಾಗಿ ತಿರುಗಾಡುವುದನ್ನು ಸಂಪೂರ್ಣ ನಿಲ್ಲಿಸಬೇಕು’ ಎಂದು ಸಾರ್ವಜನಿಕರನ್ನು ಕೋರಿದರು.

ಜಿಲ್ಲೆಯಾದ್ಯಂತ ಕೊರೊನಾ ಸೋಂಕಿತರ ಬಗ್ಗೆ ತೀವ್ರ ನಿಗಾ ಇಡಬೇಕು. ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಯಾವುದೇ ಕಾರಣದಿಂದ ಯಾರೇ ಸಾವನ್ನಪ್ಪಿದರೂ ಅವರ ಬಗ್ಗೆ ಆಯಾ ತಾಲ್ಲೂಕು ಆಡಳಿತ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಿಡಿಒಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಜಿಲ್ಲೆಯಿಂದ ವಿಶೇಷವಾಗಿ ಸಿಂದಗಿ ಮತ್ತು ಇತರೆ ಕಡೆಗಳಿಂದ ಗುಳೆ ಹೋಗಿರುವಂತಹ ಕುಟುಂಬಗಳಿಗೆ ಆಹಾರ, ಇತರೆ ಅಗತ್ಯ ವಸ್ತುಗಳ ಪೂರೈಕೆ ಸಂಬಂಧ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಮಹಾರಾಷ್ಟ್ರ ಸರ್ಕಾರದೊಂದಿಗೂ ಚರ್ಚಿಸಿ ಸಾಧ್ಯವಿದ್ದಷ್ಟು ಅವರಿಗೆ ಸೌಲಭ್ಯ ಕಲ್ಪಿಸಲು ಹಾಗೂ ರಕ್ಷಣೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಊಟ, ದಿನಸಿ ವ್ಯವಸ್ಥೆ ಮಾಡಿ:

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ, ಕೋವಿಡ್-19 ನಿಯಂತ್ರಣಕ್ಕೆ ಕೋವಿಡ್ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳ ಸಹಕಾರ, ವೆಂಟಿಲೇಟರ್‌ಗಳ ವ್ಯವಸ್ಥೆ, ಕೊರೊನಾ ಸೋಂಕಿತ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಮಾಡಲು ಕ್ರಮಕೈಗೊಳ್ಳಬೇಕು. ಜನರಿಗೆ, ಕಾರ್ಮಿಕರಿಗೆ, ನಿರ್ಗತಿಕರಿಗೆ ಊಟ, ದಿನಸಿ ವಸ್ತುಗಳ ವ್ಯವಸ್ಥೆ ಮಾಡಬೇಕು ಎಂದರು.

ನೀರಿಗೆ ಆದ್ಯತೆ ನೀಡಿ:

ಶಾಸಕ ಯಶವಂತರಾಯಗೌಡ ಪಾಟೀಲ, ಜಿಲ್ಲೆಯಲ್ಲಿ ಕುಡಿಯುವ ನೀರಿ ಪೂರೈಕೆಗೆ ಆದ್ಯತೆ ನೀಡಬೇಕು. ವಿವಿಧ ಕಾಲುವೆಗಳಿಗೆ ನೀರು ಹರಿಸಬೇಕು, ಭೀಮಾನದಿಗೆ ಉಜನಿ ಜಲಾಶಯದಿಂದ ನೀರು ಬಿಡುವ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಎಂ.ಸಿ ಮನಗೂಳಿ, ಸಿಂದಗಿ ಭಾಗದಿಂದ ಮಹಾರಾಷ್ಟ್ರ ಮತ್ತು ಗೋವಾಗಳಿಗೆ ಹಲವು ಜನರು ಗುಳೆ ಹೋಗಿದ್ದು, ಅವರಿಗೆ ಊಟ, ವಸತಿ, ನೀರಿನ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರು.

ಶಾಸಕ ಎ.ಎಸ್ ಪಾಟೀಲ (ನಡಹಳ್ಳಿ), ತಾಲ್ಲೂಕಿನ 100 ವೈದ್ಯರು ಸ್ವಯಂ ಪ್ರೇರಣೆಯಿಂದ ಕೋವಿಡ್-19 ಚಿಕಿತ್ಸೆಗೆ ಮುಂದೆ ಬಂದಿದ್ದು, ಅವರಿಗೆ ಸುರಕ್ಷತಾ ಸಲಕರಣೆ ಪೂರೈಸಬೇಕು ಎಂದರು.

ಶಾಸಕ ದೇವಾನಂದ ಚವ್ಹಾಣ, ಮಹಾರಾಷ್ಟ್ರ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಅರುಣ ಶಹಾಪೂರ, ಕೋವಿಡ್-19 ಸೋಂಕಿತರ ಶವ ಸಂಸ್ಕಾರ ಮಾರ್ಗಸೂಚಿ ತಿಳಿಹೇಳಬೇಕು ಮತ್ತು ಕೊರೊನಾ ಲಕ್ಷಣಗಳ ಬಗ್ಗೆ ಮಾಹಿತಿ ನೀಡದೇ ಇರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಸುನೀಲ್‍ಗೌಡ ಪಾಟೀಲ, ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT