ಕಲ್ಲು ಗಣಿಗಾರಿಕೆ ವಿರುದ್ಧ ಗ್ರಾಮಸ್ಥರ ಸಡ್ಡು

7
ಚಿಕ್ಕಸೂಲಿಕೆರೆ ಸರ್ಕಾರಿ ಗೋಮಾಳ ಗುತ್ತಿಗೆಗೆ ವಿರೋಧ; ಜೀವವೈವಿಧ್ಯತೆಗೆ ಧಕ್ಕೆ ಆತಂಕ

ಕಲ್ಲು ಗಣಿಗಾರಿಕೆ ವಿರುದ್ಧ ಗ್ರಾಮಸ್ಥರ ಸಡ್ಡು

Published:
Updated:
Deccan Herald

ರಾಮನಗರ: ತಾಲ್ಲೂಕಿನ ಚಿಕ್ಕಸೂಲಿಕೆರೆ, ರಾಂಪುರ, ಹಾಗಲಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ರೈತ ಕುಟುಂಬಗಳು ಸದ್ಯ ಭಯಭೀತವಾಗಿವೆ. ಸೋಣಾರೆ ಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ಆರಂಭವಾಗುತ್ತಿದೆ ಎನ್ನುವ ಸಂಗತಿ ಅವರ ಆತಂಕಕ್ಕೆ ಕಾರಣವಾಗಿದ್ದು, ಹೋರಾಟಕ್ಕೂ ಸಜ್ಜಾಗುತ್ತಿದ್ದಾರೆ.

ಸುತ್ತಲೂ ಹಸಿರು ಹೊದ್ದ ಪರಿಸರಕ್ಕೆ ಮುಕುಟವಿಟ್ಟಂತೆ ಈ ಗುಡ್ಡವಿದೆ. ಸುತ್ತಲಿನ ಜಮೀನುಗಳಲ್ಲಿ ಮಾವು, ತೆಂಗು, ರೇಷ್ಮೆ, ರಾಗಿ, ಜೋಳ... ಹೀಗೆ ಹತ್ತಾರು ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಒಂದೊಮ್ಮೆ ಇಲ್ಲಿ ಗಣಿಗಾರಿಕೆ ಆರಂಭವಾದರೆ ಇಡೀ ಪರಿಸರ ನಾಶವಾಗುತ್ತದೆ. ಇಲ್ಲಿನ ಜೀವವೈವಿಧ್ಯತೆ ಹಾಳಾಗುವುದರ ಜೊತೆಗೆ ಅನ್ನದ ತುತ್ತಿಗೂ ಕುತ್ತು ಬರುತ್ತದೆ ಎಂದು ಇಲ್ಲಿನ ರೈತರು ಹೇಳುತ್ತಾರೆ.

ಎಲ್ಲಿ ಗಣಿಗಾರಿಕೆ: ಚಿಕ್ಕಸೂಲಿಕೆರೆ ಗ್ರಾಮದ ಸರ್ವೆ ಸಂಖ್ಯೆ 55ರಲ್ಲಿ ಸುಮಾರು 298 ಎಕರೆ 11 ಗುಂಟೆ ಸರ್ಕಾರಿ ಗೋಮಾಳವಿದೆ. ಇದರಲ್ಲಿ 112 ಎಕರೆ ಜಮೀನು ರೈತರ ಹೆಸರಿಗೆ ಮಂಜೂರಾಗಿದ್ದು, ಅವರು ಕೃಷಿ ಮಾಡಿಕೊಂಡಿದ್ದಾರೆ. ಉಳಿಕೆ 185 ಎಕರೆಯು ಗೋಮಾಳವಾಗಿ ಉಳಿದುಕೊಂಡಿದ್ದು, ಅದರಲ್ಲೂ ಸುಮಾರು 15 ಎಕರೆಯಷ್ಟು ಜಮೀನಿನಲ್ಲಿ ರೈತರು ಸಾಗುವಳಿ ಮಾಡಿಕೊಂಡಿದ್ದು, ಫಾರಂ 50, 53 ಅರ್ಜಿ ಸಲ್ಲಿಸಿದ್ದಾರೆ.

ಇದೇ ಗೋಮಾಳದಲ್ಲಿನ ಸುಮಾರು 48 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಬೃಹತ್‌ ಕಲ್ಲು ಬಂಡೆಗಳನ್ನು ಒಡೆದು ಗಣಿಗಾರಿಕೆ ಕೈಗೊಳ್ಳಲು ಒಟ್ಟು 6 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಇಲ್ಲಿ ಗಣಿಗಾರಿಕೆಗೆ 2014ರಲ್ಲಿಯೇ ಅರ್ಜಿ ಸಲ್ಲಿಕೆಯಾಗಿದ್ದು, ಈಗಾಗಲೇ ಉಪ ವಿಭಾಗಾಧಿಕಾರಿ ನೇತೃತ್ವದ ತಂಡವು ಸ್ಥಳ ಪರಿಶೀಲನೆ ನಡೆಸಿ, ಒಪ್ಪಿಗೆ ನೀಡಿದೆ. ಅದೇ ವರದಿ ಆಧರಿಸಿ ಜಿಲ್ಲಾಧಿಕಾರಿ ನೇತೃತ್ವದ ಟಾಸ್ಕ್‌ಪೋರ್ಸ್‌ ಸಮಿತಿಯು ಷರತ್ತುಗಳಿಗೆ ಒಳಪಡಿಸಿ ಅನುಮತಿ ನೀಡಿದೆ. ಪರಿಸರ ಸೂಕ್ಷ್ಮ ವಲಯದ ಆಸುಪಾಸಿನಲ್ಲಿ ಇರುವ ಕಾರಣ ಕೆಲವು ಅಡೆತಡೆಗಳು ಇದ್ದು, ಅವು ಬಗೆಹರಿದಲ್ಲಿ ಇಲ್ಲಿ ಶೀಘ್ರ ಕಲ್ಲು ಗಣಿಗಾರಿಕೆಯು ಆರಂಭಗೊಳ್ಳಲಿದೆ.

ಅಸಮಾಧಾನ: ಸರ್ಕಾರಿ ಗೋಮಾಳದ ಸ್ಥಳ ಪರಿಶೀಲನೆ ನಡೆಸಿದ ಉಪ ವಿಭಾಗಾಧಿಕಾರಿ ತಂಡವು ಇಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳಿಲ್ಲ. ಜನರಿಗೆ ಉಪಯೋಗವೂ ಇಲ್ಲ ಎಂದು ವರದಿ ನೀಡಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

‘ಈ ಗುಡ್ಡವು ಕರಡಿ, ಚಿರತೆ, ನವಿಲು, ಬಗೆಬಗೆಯ ಪಕ್ಷಿಗಳ ವಾಸಸ್ಥಾನವಾಗಿದೆ. ಚಿರತೆ, ಕರಡಿಗಳಂತೂ ಅಕ್ಕಪಕ್ಕದ ಗ್ರಾಮಗಳಿಗೆ ನುಗ್ಗುತ್ತಲೇ ಇವೆ. ಇದೇ ಗುಡ್ಡಕ್ಕೆ ಸುತ್ತಲಿನ ರೈತರು ದನಗಳನ್ನು ಮೇಯಿಸಲು ಬಿಡುತ್ತಾರೆ. ಈಚೆಗೆ ಇಲ್ಲಿ ನಾಟಿ ತಳಿಗಳ ಗೋಶಾಲೆ ಸ್ಥಾಪನೆಯಾಗಿದ್ದು, ನಿತ್ಯ ನೂರಾರು ಜಾನುವಾರುಗಳು ಇದೇ ಗುಡ್ಡದಲ್ಲಿ ಮೇಯುತ್ತಿವೆ. ಒಂದು ವೇಳೆ ಗಣಿಗಾರಿಕೆ ಆರಂಭವಾಗಿದ್ದೇ ಆದಲ್ಲಿ ಇದೆಲ್ಲದಕ್ಕೂ ಕುತ್ತು ಬರುತ್ತದೆ’ ಎನ್ನುತ್ತಾರೆ ಸ್ಥಳೀಯರಾದ ಗಿರಿಯಪ್ಪ.

‘ಬಂಡೆಗೆ ಸಮೀಪದಲ್ಲಿಯೇ ಹೈಟೆನ್ಶನ್‌ ತಂತಿಗಳು ಹಾದು ಹೋಗಿವೆ. ಅಲ್ಲಲ್ಲಿ ಚೆಕ್‌ ಡ್ಯಾಮ್‌ಗಳಿವೆ. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೇ ವರದಿ ನೀಡಿರುವುದು ಸರಿಯಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಬಂಡೆ ಪ್ರದೇಶಕ್ಕೆ ಹೊಂದಿಕೊಂಡಂತೆ ಹತ್ತಾರು ಮನೆಗಳಿದ್ದು, ಅವರೆಲ್ಲ ರೇಷ್ಮೆ, ಮಾವು ಬೆಳೆಯುತ್ತಿದ್ದಾರೆ. ಉಳಿದ ರೈತರು ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ಸಾಲ ಮಾಡಿ ಕೊಳವೆ ಬಾವಿಗಳನ್ನು ಕೊರೆಯಿಸಿ, ಜಮೀನು ಹದ ಮಾಡಿ ಬೆಳೆಯುತ್ತಿದ್ದಾರೆ. ಗಣಿಗಾರಿಕೆ ಆರಂಭವಾಗಿದ್ದೇ ಆದಲ್ಲಿ ಅವರೆಲ್ಲರ ಬದುಕು ಬೀದಿಗೆ ಬೀಳುತ್ತದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯರಾದ ಕುಮಾರ್, ಗೋಪಾಲ್‌.

ಮುಖ್ಯಮಂತ್ರಿ ಕುಮಾರಸ್ವಾಮಿ ತವರು ರಾಮನಗರ ತಾಲ್ಲೂಕಿನಲ್ಲಿಯೇ ಗಣಿಗಾರಿಕೆ ಮೂಲಕ ಪರಿಸರ ವಿನಾಶಕ್ಕೆ ಸರ್ಕಾರ ಮುಂದಾಗಿರುವುದು ಕಳವಳಕಾರಿ ಸಂಗತಿ. ಇಂತಹ ಅನಾಹುತಗಳಿಗೆ ಸರ್ಕಾರ ಅವಕಾಶ ನೀಡಬಾರದು. ಪರಿಸರ ವೈವಿಧ್ಯತೆಯನ್ನು ಕಾಪಾಡಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !