ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಳಪಾತ್ರಗಳತ್ತ ಚೆಲುವೆ ಮನಸು

Last Updated 6 ಜೂನ್ 2018, 19:30 IST
ಅಕ್ಷರ ಗಾತ್ರ

ಅರಳು ಕಂಗಳು, ಮುಖದಲ್ಲಿ ಮಾಸದ ಮುಗುಳ್ನಗು, ಮೋಹಕ ಸೌಂದರ್ಯದ ಮೂಲಕ ಮಾಡೆಲಿಂಗ್‌ ಕ್ಷೇತ್ರದಲ್ಲಿ ಮಿಂಚುತ್ತಿರುವವರು ರೂಪದರ್ಶಿ ಪ್ರಿಯಾಂಕಾ ಸಿರಿಗೆರೆ. ಇವರು ಮೂಲತಃ ಚಿತ್ರದುರ್ಗದವರು. ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದ ಪ್ರಿಯಾಂಕಾಗೆ ಅವರಿಷ್ಟದ ಮಾಡೆಲಿಂಗ್‌ ಕ್ಷೇತ್ರದಿಂದಲೂ ಅವಕಾಶಗಳು ಬರತೊಡಗಿದವು. ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿದ ಅವರು, ಆಕಸ್ಮಿಕವಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಈಗ ಷೋ ಸ್ಟಾಪರ್‌, ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.

ಪ್ರಿಯಾಂಕಾ ಅವರು ಸಣ್ಣವಯಸ್ಸಿನಲ್ಲಿಯೇ ಅಪ್ಪನನ್ನ ಕಳೆದುಕೊಂಡರು. ತನ್ನನ್ನು ಹಾಗೂ ತಂಗಿಯನ್ನು ಬೆಳೆಸಲು ಅಮ್ಮ ಪಡುತ್ತಿದ್ದ ಕಷ್ಟಗಳನ್ನು ಕಂಡು, ಪಿಯುಸಿಗೇ ಓದಿಗೆ ತಿಲಾಂಜಲಿ ನೀಡಿ ಉದ್ಯೋಗಕ್ಕೆ ಸೇರಿದರು. ‘ತಾನು ದುಡಿದು ಅಮ್ಮ, ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದಷ್ಟೇ ಗುರಿಯಿಟ್ಟುಕೊಂಡು ಬಂದಿದ್ದ ಪ್ರಿಯಾಂಕಾಗೆ ಮಾಡೆಲಿಂಗ್‌ ಕ್ಷೇತ್ರಕ್ಕೆ ಸೇರುವಂತೆ ಒತ್ತಾಯಿಸಿದವರು ಸ್ನೇಹಿತರು. ಬಳಿಕ ಪ್ರಿಯಾಂಕಾ ‘ಸಿಲ್ವರ್‌ ಸ್ಟಾರ್‌ ಮಾಡೆಲಿಂಗ್‌ ಏಜೆನ್ಸಿ’ ತರಬೇತಿಗೆ ಸೇರಿಕೊಂಡರು.

ಮೊದಲ ಸೌಂದರ್ಯ ಸ್ಪರ್ಧೆಯಲ್ಲಿಯೇ ‘ಮಿಸ್‌ ಸೌತ್‌ ಕರ್ನಾಟಕ’ ಕಿರೀಟ ಪಡೆದ ಹೆಮ್ಮೆ ಪ್ರಿಯಾಂಕಾ ಅವರದು. ಅದಾದ ಬಳಿಕ ಈ ಕ್ಷೇತ್ರದಲ್ಲಿ ಸಕ್ರಿಯರಾದ ಪ್ರಿಯಾಂಕಾ ಚೆನ್ನೈ, ಹೈದರಾಬಾದ್‌, ತಿರುವನಂತಪುರ ಹಾಗೂ ದೇಶದ ವಿವಿಧ ಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸ್‌ ಸೌತ್‌ ಕರ್ನಾಟಕ’ ಹಾಗೂ ಮೈಸೂರಿನಲ್ಲಿ ‘ಮಿಸ್‌ ಬಾಡಿ ಬ್ಯೂಟಿಫುಲ್‌’, ‘ಮಿಸ್‌ ರನ್‌ವೇ’ ಎಂಬ ಬಿರುದು ಪಡೆದುಕೊಂಡರು. ಇದಲ್ಲದೇ ಪ್ರಸಿದ್ಧ ವಸ್ತ್ರವಿನ್ಯಾಸಕರಾದ ರಿಯಾ ಕೊಡಲಿ, ರುನ ರೇ, ಶ್ರೇಯಾ ಬ್ಯಾನರ್ಜಿ, ಸಂಜನಾ ಗುಪ್ತಾ, ಮೋಹನ ರೆಡ್ಡಿ ಮೊದಲಾದವರ ರ್‍ಯಾಂಪ್‌ ವಾಕ್‌ಗಳಲ್ಲಿ ಹೆಜ್ಜೆ ಹಾಕಿದ್ದಾರೆ.

ಸದ್ಯ ಕಿರುತೆರೆಯಲ್ಲೂ ಸಕ್ರಿಯರಾಗಿರುವ ಪ್ರಿಯಾಂಕಾ, ‘ಶಾಂತಂ ಪಾಪಂ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ‘ನನಗೆ ಸಿನಿಮಾಕ್ಕಿಂತ ಕಿರುತೆರೆಯೇ ಇಷ್ಟ’ ಎಂದು ಹೇಳುವ ಅವರು, ಕಿರುತೆರೆಯಲ್ಲಿ ಉತ್ತಮ ಪಾತ್ರಕ್ಕಾಗಿ ಕಾಯುತ್ತಿದ್ದಾರೆ. ‘ನನ್ನ ಮುಖ, ದೇಹ ನೆಗೆಟೀವ್‌ ಪಾತ್ರಕ್ಕೆ ಸರಿಹೊಂದುವಂತಿದೆ. ನನಗೆ ಖಳನಾಯಕಿ ಪಾತ್ರವೇ ಇಷ್ಟ. ಧಾರಾವಾಹಿ, ಸಿನಿಮಾ ಎಂದಾಗ ನಾಯಕ, ನಾಯಕಿಯರೇ ಮುಖ್ಯವಾಗುತ್ತಾರೆ. ಆದರೆ ಖಳ ಪಾತ್ರದಿಂದಲೇ ಆ ಪಾತ್ರ ಬೆಳೆಯುವುದು. ಖಳಪಾತ್ರವೇ ಮುಖ್ಯವಾಗಿರುವಂತಹ ಧಾರಾವಾಹಿಗಳಲ್ಲಿ ನಟಿಸಲು ನನಗಿಷ್ಟ’ ಎಂದು ಮನದಾಸೆಯನ್ನು ಹಂಚಿಕೊಳ್ಳುತ್ತಾರೆ.

ಉತ್ತಮ ರೂಪದರ್ಶಿ ಎನಿಸಿಕೊಳ್ಳಲು ಸೌಂದರ್ಯದ ಜೊತೆಗೆ ಆತ್ಮವಿಶ್ವಾಸ, ಧೈರ್ಯವೂ ಮುಖ್ಯ ಎಂಬುದು ಪ್ರಿಯಾಂಕಾ ಅಭಿಪ್ರಾಯ. ‘ರೂಪ ದೇವರು ಕೊಟ್ಟ ವರ ನನಗೆ. ಚಿತ್ರದುರ್ಗದಲ್ಲಿ ಬೆಳೆದ ನಾನು ಗೊತ್ತಿಲ್ಲದ ನಗರದಲ್ಲಿ ರೂಪದರ್ಶಿಯಾಗಲು ಆತ್ಮವಿಶ್ವಾಸ ಹಾಗೂ ಧೈರ್ಯವೇ ಸಹಾಯ ಮಾಡಿತು’ ಎಂದು ವಿನಮ್ರತೆಯಿಂದ ಹೇಳುತ್ತಾರೆ.

ತಮ್ಮ ದೇಹಾಕಾರ ಕಾಪಾಡಿಕೊಳ್ಳಲು ಪ್ರಿಯಾಂಕಾ ಪ್ರತಿದಿನ ತಪ್ಪದೇ ವಾಕಿಂಗ್‌ ಮಾಡಿ, ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ‘ಯೋಗ, ಜುಂಬಾ ಡಾನ್ಸ್‌ ಕೂಡ ನನ್ನ ಆಯ್ಕೆ. ಬೆಳಿಗ್ಗೆ 6.30ರಿಂದ 8.30ರವರೆಗೆ ವ್ಯಾಯಾಮಕ್ಕೆ ಮೀಸಲು. ಆಮೇಲೆ ದಿನದ ಕೆಲಸದತ್ತ ಗಮನ. ಎಷ್ಟೇ ಕೆಲಸ ಇದ್ದರೂ ವ್ಯಾಯಾಮ ತಪ್ಪಿಸಲ್ಲ’ ಎನ್ನುತ್ತಾರೆ.

ತರಕಾರಿ ಹಾಗೂ ಮಾಂಸದ ಅಡುಗೆ ಎರಡನ್ನೂ ಇಷ್ಟಪಡುವ ಪ್ರಿಯಾಂಕಾ ತೀರಾ ಕಟ್ಟುನಿಟ್ಟಾಗಿ ಪಥ್ಯ ಮಾಡಲ್ಲಂತೆ. ‘ಬೆಳಿಗ್ಗೆ ವಾಕಿಂಗ್‌ ಹೋಗುವ ಮುನ್ನ ಹಾಗೂ ಬಂದ ಮೇಲೆ ಹಣ್ಣಿನ ತಾಜಾ ಜ್ಯೂಸ್‌ಗಳನ್ನು ಸೇವಿಸುತ್ತೇನೆ. ಅದಾದ ಬಳಿಕ ಲೈಟ್‌ ಫುಡ್‌. ರಾಗಿ ಮುದ್ದೆ, ಪಿಜ್ಜಾ ನನ್ನ ನೆಚ್ಚಿನ ತಿಂಡಿಗಳು’ ಎನ್ನುವ ಅವರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುತ್ತಾರೆ. ಇದೂ ಫಿಟ್‌ನೆಸ್‌ಗೆ ಕಾಯ್ದುಕೊಳ್ಳಲು ನೆರವಾಗಿದೆ ಎಂಬುದು ಅವರ ಮಾತು.

ಸದ್ಯ ಫ್ಯಾಷನ್‌ ಷೋ ತೀರ್ಪುಗಾರರಾಗಿ, ಷೋ ಸ್ಟಾಪರ್‌ ಆಗಿ ರ‍್ಯಾಂಪ್‌ಗಳಲ್ಲಿ ಹೆಜ್ಜೆ ಹಾಕುವ ಪ್ರಿಯಾಂಕಾ ಬಿಡುವಿನ ವೇಳೆಯಲ್ಲಿ ಮಾಡೆಲಿಂಗ್‌ ಆಸಕ್ತರಿಗೆ ಉಚಿತ ತರಗತಿಗಳನ್ನು ನಡೆಸುತ್ತಾರೆ. ಪ್ರಿಯಾಂಕಾ ಬೈಕ್‌ ಪ್ರೇಮಿ. ಬಿಡುವು ಸಿಕ್ಕಾಗಲೆಲ್ಲಾ ಬೈಕ್‌ನಲ್ಲಿ ಸುತ್ತಾಡುವುದು ಅವರ ಹವ್ಯಾಸ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT