ಯುವಜನರಲ್ಲಿ ನಾಡಪ್ರೇಮ ತುಂಬಿದ ಮೇರು ನಟ

7
ಮಾಗಡಿಯಲ್ಲಿ ಡಾ.ವಿಷ್ಣು ಸೇನಾ ಸಮಿತಿ ಕಚೇರಿ ಉದ್ಘಾಟನೆ

ಯುವಜನರಲ್ಲಿ ನಾಡಪ್ರೇಮ ತುಂಬಿದ ಮೇರು ನಟ

Published:
Updated:
Deccan Herald

ಮಾಗಡಿ: ‘ನಾಗರ ಹಾವು’ ಚಲನಚಿತ್ರದ ಮೂಲಕ ಯುವಜನತೆಯಲ್ಲಿ ನಾಡ ಪ್ರೇಮ ತುಂಬಿ ಸಮಾಜಮುಖಿ ಚಿಂತನೆಯಲ್ಲಿ ತೊಡಗಿಸಿದ್ದ ನಟ ವಿಷ್ಣುವರ್ಧನ್‌ ಅವರ ಆದರ್ಶಗಳನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದು ಜಡೇದೇವರ ಮಠದ ಇಮ್ಮಡಿ ಬಸವರಾಜು ಸ್ವಾಮಿ ತಿಳಿಸಿದರು.

ಸರ್ಕಾರಿ ಬಸ್‌ ನಿಲ್ದಾಣ ಕಟ್ಟಡದ ಮೊದಲನೆ ಮಹಡಿಯಲ್ಲಿ ಶುಕ್ರವಾರ ಡಾ.ವಿಷ್ಣುಸೇನಾ ಸಮಿತಿಯ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಚಲನ ಚಿತ್ರಗಳ ಮೂಲಕ ಸೌಹಾರ್ದದ ಬದುಕು ಕಟ್ಟಿ ಕೊಟ್ಟವರಲ್ಲಿ ವರನಟ ರಾಜ್‌ ಕುಮಾರ್‌ ಮತ್ತು ವಿಷ್ಣುವರ್ಧನ್‌ ಕನ್ನಡ ನಾಡಿನ ಬಹುಜನರ ಮೇಲೆ ಪ್ರಭಾವ ಬೀರಿದ್ದು, ಬಹುಕಾಲ ಜನಮಾನಸದಲ್ಲಿ ಉಳಿಯಲಿದ್ದಾರೆ. ಭೂತಯ್ಯನ ಮಗ ಅಯ್ಯು, ರಂಗನಾಯಕಿ, ಜಿಮ್ಮಿಗಲ್ಲು, ಕಳ್ಳಕುಳ್ಳ, ಸಿಂಗಾಪುರದಲ್ಲಿ ರಾಜಾಕುಳ್ಳ, ಕೋಟಿಗೊಬ್ಬ ಇತರೆ ಸಿನಿಮಾಗಳು ಕನ್ನಡಿಗರ ಮೇಲೆ ಬೀರಿದ ಪರಿಣಾಮವನ್ನು ಮರೆಯುವಂತಿಲ್ಲ ಎಂದರು.

ಸಮಿತಿಯ ಪದಾಧಿಕಾರಿಗಳು ತಾಯಿತಂದೆ ಗುರು ಹಿರಿಯರನ್ನು ಗೌರವದಿಂದ ಕಾಣುವಂತಾಗಬೇಕು. ಕಷ್ಟಪಟ್ಟು ದುಡಿದು, ಇತರರಿಗೂ ಹಂಚಿಕೊಂಡು ತಿನ್ನುವ ಮೂಲಕ, ಮೂಢನಂಬಿಕೆ, ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ಮಾಡಿ ದೇಶದ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ಡಾ.ವಿಷ್ಣು ಸೇನಾ ಸಮಿತಿಯ ಗೌರವಾಧ್ಯಕ್ಷ ಮಹಂತೇಶ್‌ ಮಾತನಾಡಿ, ‘ಗ್ರಾಮೀಣ ಭಾಗದ ಬಡವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಂಗವಿಕಲರಿಗೆ ಸಹಾಯಹಸ್ತ ಚಾಚುತ್ತೇವೆ. ನಾಡಿನ ನೆಲಜಲದ, ಪರಿಸರ ಸಂರಕ್ಷಣೆಯ ಜತೆಗೆ ಯುವಕರಲ್ಲಿ ಚೈತನ್ಯ ತುಂಬಲು ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.

‘ಮಹಿಳಾ ಸಬಲೀಕರಣ, ಸಂಕಟದಲ್ಲಿ ಇರುವವರ ನೆರವಿಗೆ ಮುಂದಾಗಿ ವಿಷ್ಣುವರ್ಧನ್‌ ಕಂಡ ಕನಸನ್ನು ನನಸು ಮಾಡಲು ನಾವೆಲ್ಲರೂ ಅವಿರತವಾಗಿ ಶ್ರಮಿಸುತ್ತೇವೆ’ ಎಂದರು.

ಸಮಿತಿ ಅಧ್ಯಕ್ಷ ನೇಸೆಪಾಳ್ಯದ ಜಗದೀಶ್‌ ಮಾತನಾಡಿ, ‘ಯುವಕರನ್ನು ಸಂಘಟಿಸಿ, ದುಡಿಮೆಯ ಮೂಲಕ ಸೋಮಾರಿತನ ದೂರಮಾಡುವ ಉದ್ದೇಶವಿದೆ. ನಾಡು ನುಡಿಗೆ ಕಂಟಕ ಎದುರಾದಾಗ ಸಂಘಟಿತ ಹೋರಾಟ ಮೂಲಕ ನಾಡಿನ ರಕ್ಷಣೆ ಮಾಡಲಾಗುವುದು. ಸಂಕಟದಲ್ಲಿ ಇರುವವರಿಗೆ ನೆರವಾಗುವುದು ನಮ್ಮ ಉದ್ದೇಶವಾಗಿದೆ’ ಎಂದರು.

ಸಮಿತಿ ಸಂಘಟನಾ ಕಾರ್ಯದರ್ಶಿ ರಾಜೇಶ್‌, ಖಜಾಂಚಿ ಸಂಜಯ ಕುಮಾರ್‌, ಸಮಿತಿ ಪದಾಧಿಕಾರಿಗಳಾದ ರಘು, ಕುಮಾರ್‌, ಕನ್ನಡ ಪರ ಹೋರಾಟಗಾರ ದೇವರ ಹಟ್ಟಿ ರಾಜಣ್ಣ, ವೀರಶೈವ ಮಂಡಳಿ ಅಧ್ಯಕ್ಷ ರುದ್ರಮೂರ್ತಿ, ಪ್ರಕಾಶ್‌, ಪುರಸಭೆ ಸದಸ್ಯ ಎಂ.ಬಿ.ಮಹೇಶ್, ಎಂ.ಆರ್‌.ಚಂದ್ರಶೇಖರ್‌, ರವಿಶಂಕರ್‌, ಕಾರ್‌ ನರಸಿಂಹಣ್ಣ, ತಿರುಮಲೆ ಕನ್ನಡ ಕೂಟದ ಸಂಚಾಲಕ ಶ್ರೀನಿವಾಸ್‌, ಕೆರೆಬೀದಿ ಈಶ, ಎನ್‌ಇಎಸ್‌ ಸಿದ್ದಲಿಂಗೇಶ್ವರ, ಹೊಸಪೇಟೆ ಮಾದೇಶ್‌, ಗವಿನಾಗಮಂಗಲ ಸತೀಶ್‌, ಗಿರೀಶ್‌, ಮುನಿಯಪ್ಪ, ರೂಪೇಶ್‌ ಕುಮಾರ್‌ ಇದ್ದರು. ವಿಷ್ಣುವರ್ಧನ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ವಿತರಿಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !