ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಗಲಕಾಯಿಗೆ ಜೈ ಎನ್ನಿ!

Last Updated 4 ಮೇ 2018, 19:30 IST
ಅಕ್ಷರ ಗಾತ್ರ

ಹಾಗಲಕಾಯಿ ಕಹಿ ಎಂದು ಮುಖ ಕಿವುಚುವವರೇ ಜಾಸ್ತಿ. ಆದರೆ ತೂಕ ಕಡಿಮೆ ಮಾಡಿಕೊಳ್ಳಲು ಹಾಗೂ ಮಧುಮೇಹ ನಿಯಂತ್ರಣ ಮಾಡುವಲ್ಲಿ ಹಾಗಲಕಾಯಿಗೆ ಮೊದಲ ಸ್ಥಾನ. ಹಾಗೇ ಈಗಿನ ಬದಲಾದ ಜೀವನಶೈಲಿ ಹಾಗೂ ಕೆಲಸದ ಒತ್ತಡದಲ್ಲಿ ರೋಗ ಪೀಡಿತರಾಗುವವರಿಗೆ ಹಾಗಲಕಾಯಿ ಸೇವನೆ ಉತ್ತಮ.

ಪೋಷಕಾಂಶಗಳ ಆಗರ
ಹಾಗಲಕಾಯಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ವಿಟಮಿನ್‌ ಹಾಗೂ ಖನಿಜಾಂಶಗಳಿವೆ. ಇದರಲ್ಲಿ ಕಬ್ಬಿಣಾಂಶ, ಮೆಗ್ನೇಷಿಯಂ, ಪೊಟಾಶಿಯಂ, ವಿಟಮಿನ್‌ ಎ ಮತ್ತು ಸಿ ಇದೆ. ಇದರಲ್ಲಿ ಪಾಲಕ್‌ ಸೊಪ್ಪು ಹಾಗೂ ಬ್ರೊಕೊಲಿಯಲ್ಲಿನ ಎರಡು ಪಟ್ಟು ಹೆಚ್ಚು ಕ್ಯಾಲ್ಸಿಯಂ ಹಾಗೂ ಬಿಟಾಕೆರೋಟಿನ್‌ ಇದೆ. ಅಲ್ಲದೇ ಆ್ಯಂಟಿ ಆಕ್ಸಿಡೆಂಟ್‌ ಹೇರಳವಾಗಿವೆ.

ನಮ್ಮ ಆಹಾರದಲ್ಲಿ ಹಾಗಲಕಾಯಿ ಇದ್ದರೆ ಕೊಲೆಸ್ಟರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಹೃದಯದ ಕಾಯಿಲೆಗಳು ಹಾಗೂ ಹೃದಯಾಘಾತದ ಅಪಾಯ ಕಡಿಮೆ. ಇದು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಉಸಿರಾಟದ ಮಟ್ಟವನ್ನು ಸುಧಾರಿಸುತ್ತದೆ.

ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಕಾಲ ಮುಪ್ಪಾಗುವಿಕೆಯನ್ನು ತಪ್ಪಿಸುತ್ತದೆ. ಮಧುಮೇಹ ನಿಯಂತ್ರಣಕ್ಕೆ ಸಹಾಯಕಾರಿ ಹಾಗಲಕಾಯಿಯಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವ ಪಾಲಿಪಪ್ಟೈಡ್‌ ಅಂಶ ಹೇರಳವಾಗಿವೆ. ಇದು ರಕ್ತದೊತ್ತಡ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಮಧುಮೇಹ, ಕರುಳಿನ ಹುಣ್ಣು, ಮೂಲವ್ಯಾಧಿ ರೋಗದಿಂದ ಬಳಲುತ್ತಿರುವವರು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ಗುಣವಾಗುವುದು. ಹಾಗಲಕಾಯಿಯ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು.

ಇದರಲ್ಲಿ ನಾರಿನಾಂಶ ಹೇರಳವಾಗಿದೆ. ಇದನ್ನು ವಾರದಲ್ಲಿ ನಾಲ್ಕು ದಿನ ತಿಂದರೆ ಮಲಬದ್ಧತೆ ಹಾಗೂ ಅಜೀರ್ಣ ಕಡಿಮೆಯಾಗುವುದು.

ತೂಕ ಕಡಿಮೆ ಮಾಡುತ್ತದೆ
ಇದರಲ್ಲಿ ಕ್ಯಾಲೊರಿ, ಕೊಬ್ಬು ಹಾಗೂ ಕಾರ್ಬೋಹೈಡ್ರೇಟ್‌ ಪ್ರಮಾಣ ಕಡಿಮೆ ಇದೆ. ಹೀಗಾಗಿ ಇದರ ಸೇವನೆ ತೂಕ ಕಡಿಮೆ ಮಾಡಿಕೊಳ್ಳ ಬಯಸುವವರಿಗೆ ಉತ್ತಮ. ಇದು ತುಂಬ ಸಮಯದವರಿಗೆ ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಅತಿಯಾಗಿ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಶೇಕಡ 85ರಷ್ಟು ನೀರಿನ ಅಂಶ ಇರುವುದರಿಂದ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.

ಕಹಿ ಕಡಿಮೆ ಮಾಡಲು ಹೀಗೆ ಮಾಡಿ
*ಕತ್ತರಿಸಿದ ಹಾಗಲಕಾಯಿ ತುಂಡಿನ ಮೇಲೆ ಉಪ್ಪು ಸವರಿ, 10 ನಿಮಿಷ ಹಾಗೇ ಬಿಡಿ. ಇದು ಉಪ್ಪನ್ನು ಹೀರಿಕೊಳ್ಳುವುದರಿಂದ ಕಹಿ ಸ್ವಲ್ಪ ಕಡಿಮೆಯಾಗುತ್ತದೆ.

*ಹತ್ತು ನಿಮಿಷಗಳ ಕಾಲ ಅರಿಶಿನ ನೀರಿನಲ್ಲಿ ನೆನಸಿಡಿ.

*ಸಕ್ಕರೆ ಹಾಗೂ ವಿನೆಗರ್‌ ಅನ್ನು ಸಮ ಪ್ರಮಾಣದಲ್ಲಿ ನೀರಿಗೆ ಹಾಕಿ. ಆ ನೀರನ್ನು ಕುದಿಸಿ ಅದಕ್ಕೆ ಹಾಗಲಕಾಯಿ ತುಂಡುಗಳನ್ನು ಹಾಕಿ ನೆನೆಸಬೇಕು

*ಆಲಿವ್‌ ಎಣ್ಣೆಯಲ್ಲಿ ಬಿಸಿ ಮಾಡಿ ಸ್ವಲ್ಪ ಕರಿಯಿರಿ

*ಹಾಗಲಕಾಯಿಯನ್ನು ಪಲ್ಯ, ಸಾಂಬಾರ್‌, ಜ್ಯೂಸ್‌ ಅಥವಾ ಸ್ಮೂತಿಗಳನ್ನು ಮಾಡಬಹುದು. ಹಾಗಲಕಾಯಿ, ಸೇಬು ಹಾಗೂ ಪಾಲಕ್‌ ಸೊಪ್ಪನ್ನು ಮಿಶ್ರ ಮಾಡಿಕೊಂಡು ಜ್ಯೂಸ್‌ ಮಾಡಿಕೊಂಡು ಕುಡಿಯಬಹುದು. ಚಿಪ್ಸ್‌, ಚಟ್ನಿ ಹಾಗೂ ಉಪ್ಪಿನಕಾಯಿ ಮಾಡಿಕೊಂಡರೆ ಅದರ ಕಹಿ ಗೊತ್ತಾಗುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT