ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು: ಹೋರಾಟಕ್ಕೆ ಸಜ್ಜು

ವಿವಿಧ ಸಂಘ ಸಂಸ್ಥೆಗಳ ಪ್ರಮುಖರ, ಜನಪ್ರತಿನಿಧಿಗಳ ಸಭೆ
Last Updated 23 ಜೂನ್ 2019, 20:22 IST
ಅಕ್ಷರ ಗಾತ್ರ

ಸಾಗರ: ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸಬೇಕು ಎಂಬ ರಾಜ್ಯ ಸರ್ಕಾರದ ಪ್ರಸ್ತಾವಿತ ಯೋಜನೆ ವಿರೋಧಿಸಿ ಪ್ರಬಲ ಹೋರಾಟಕ್ಕೆ ಸಜ್ಜಾಗಲು ಶನಿವಾರ ನಡೆದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ, ಜನಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಸಾಹಿತಿ ನಾ. ಡಿಸೋಜ, ‘ಲಿಂಗನಮಕ್ಕಿ ಜಲಾಶಯದಲ್ಲಿ ಶೇ 40ರಷ್ಟು ಹೂಳು ತುಂಬಿದೆ. ಈ ಕಾರಣಕ್ಕೆ ಜಲಾಶಯ ಭರ್ತಿಯಾದರೂ ಅದರ ಅರ್ಥ ಅಲ್ಲಿ ಸಾಕಷ್ಟು ನೀರು ಇದೆ ಎಂದಲ್ಲ. ಜನರ ತೆರಿಗೆ ಹಣದಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬೆಂಗಳೂರು ನಗರಕ್ಕೆ ನೀರು ಕೊಡುತ್ತೇವೆ ಎಂಬುದು ಸರ್ಕಾರದ ಮೂರ್ಖತನ’ ಎಂದು ಯೋಜನೆ ವಿರುದ್ಧ ವಾಗ್ದಾಳಿ ನಡೆಸಿದರು.

ದೇಸಿ ಚಿಂತಕ ಪ್ರಸನ್ನ, ‘ಬೆಂಗಳೂರು ಸೇರಿ ಮಹಾನಗರಗಳ ಬೆಳವಣಿಗೆಯನ್ನು ಮಿತಿಗೊಳಿಸದೆ ಇರುವುದೇ ಈಗಿನ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ತಿಂಗಳಿಗೊಮ್ಮೆ ನೀರು ಪೂರೈಸುವ ದಾರುಣ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಸುಭಿಕ್ಷವಾಗಿದ್ದರೆ ಇಡೀ ಕರ್ನಾಟಕ ಸಮೃದ್ಧವಾಗಿರುತ್ತದೆ ಎಂದು ಸರ್ಕಾರ ಭಾವಿಸಿರುವುದು’ ದುರಂತ ಎಂದರು.

ಬರಹಗಾರ ಶಶಿ ಸಂಪಳ್ಳಿ, ‘2010ರಲ್ಲಿ ರಚಿತವಾದ ಬಿ.ತ್ಯಾಗರಾಜ್ ಸಮಿತಿ 2013ರಲ್ಲಿ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಹರಿಸಬಹುದು ಎಂದು ಸರ್ಕಾರಕ್ಕೆ ವರದಿ ಕೊಟ್ಟಾಗಲೇ ಅದರ ವಿರುದ್ಧ ಮಲೆನಾಡಿಗರು ಧ್ವನಿ ಎತ್ತಬೇಕಿತ್ತು. ಈಗಿನ ಪ್ರಸ್ತಾವಿತ ಯೋಜನೆ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ಮಾಡದೆ ವಿಸ್ತೃತ ಯೋಜನಾ ವರದಿ ತಯಾರಿಸಲು ಉಪ ಮುಖ್ಯಮಂತ್ರಿ ಸೂಚನೆ ನೀಡಿರುವುದು ಎಷ್ಟು ಸರಿ’ಎಂದು ಪ್ರಶ್ನಿಸಿದರು.

ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ, ‘ಮಲೆನಾಡಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇದ್ದಿದ್ದರೆ ಬೆಂಗಳೂರಿಗೆ ನೀರು
ಕೊಡಬಹುದಿತ್ತು. ಆದರೆ ಈ ಭಾಗದ ಹಳ್ಳಿಗಳಲ್ಲೇ ಕುಡಿಯುವ ನೀರಿನ ಕೊರತೆ ತೀವ್ರವಾಗಿ ಕಾಡುತ್ತಿರುವಾಗ ಇಲ್ಲಿಂದ ಬೆಂಗಳೂರಿಗೆ ನೀರು ಹರಿಸುವುದು ಯಾವುದೇ ಕಾರಣಕ್ಕೂ ಕಾರ್ಯಸಾಧುವಲ್ಲ’ ಎಂದು
ಹೇಳಿದರು.

ಸಾಮಾಜಿಕ ಕಾರ್ಯಕರ್ತ ಹರ್ಷಕುಮಾರ್ ಕುಗ್ವೆ, ‘ಸರ್ಕಾರದ ಪ್ರಸ್ತಾವಿತ ಯೋಜನೆ ವಿರೋಧಿಸಿ ಮಲೆನಾಡಿನಲ್ಲಿ ಪ್ರಬಲವಾದ ಪ್ರತಿರೋಧದ ಧ್ವನಿ ವ್ಯಕ್ತವಾಗಲೇಬೇಕಿದೆ. ಇಲ್ಲಿನವರ ಜೀವನ್ಮರಣದ ಪ್ರಶ್ನೆ ಎನ್ನುವ ರೀತಿಯಲ್ಲಿ ತೀವ್ರವಾಗಿ ರಾಜಕೀಯರಹಿತ ಹೋರಾಟ ರೂಪಿಸಿದಾಗ ಸರ್ಕಾರವನ್ನು ಮಣಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಇಂಧನ ತಜ್ಞ ಶಂಕರ್ ಶರ್ಮ, ‘ಸರ್ಕಾರ ಯಾವ ಸಮಿತಿಯನ್ನು ತಜ್ಞರ ಸಮಿತಿ ಎಂದು ಹೇಳುತ್ತದೆಯೋ ಹಲವು ಬಾರಿ ಅದರಲ್ಲಿ ತಜ್ಞರೇ ಇರುವುದಿಲ್ಲ. ಈಗಿನ ಪ್ರಸ್ತಾವಿತ ಯೋಜನೆ ಜಾರಿಗೆ ಬಂದರೆ ಅದನ್ನು ಕಾರ್ಯಗತಗೊಳಿಸಲು ಲಿಂಗನಮಕ್ಕಿ ಜಲಾಶಯದಿಂದ ಉತ್ಪಾದನೆಯಾಗುವ ಶೇ 50ರಷ್ಟು ವಿದ್ಯುತ್ ಬೇಕಾಗುತ್ತದೆ’ ಎಂದು ತಿಳಿಸಿದರು.

ಬಿಜೆಪಿಯ ಟಿ.ಡಿ. ಮೇಘರಾಜ್, ಕಾಂಗ್ರೆಸ್‌ನ ಬಿ.ಆರ್. ಜಯಂತ್, ಮಲ್ಲಿಕಾರ್ಜುನ ಹಕ್ರೆ, ಪ್ರಭಾವತಿ ಚಂದ್ರಕಾಂತ್, ಕಲಗೋಡು ರತ್ನಾಕರ್, ವಿವಿಧ ಸಂಘಟನೆಗಳ ಪ್ರಮುಖರಾದ ಬಿ.ಎಚ್. ರಾಘವೇಂದ್ರ, ಅಜಯ್ ಶರ್ಮ, ಚಂದ್ರಶೇಖರ ಗೂರ್ಲಕೆರೆ, ವಾಮದೇವ ಗೌಡ, ಅ.ಪು.ನಾರಾಯಣಪ್ಪ, ಕೆ.ವಿ. ಪ್ರವೀಣ್ ಕುಮಾರ್, ಶಿವಾನಂದ ಕುಗ್ವೆ, ರಂಗಕರ್ಮಿಗಳಾದ ಚಿದಂಬರರಾವ್ ಜಂಬೆ, ಕೆ.ಜಿ. ಕೃಷ್ಣಮೂರ್ತಿ, ಉಮಾಮಹೇಶ್ವರ ಹೆಗಡೆ ಮಾತನಾಡಿದರು.

ಎಚ್.ಬಿ. ರಾಘವೇಂದ್ರ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT