ಭಾನುವಾರ, ಸೆಪ್ಟೆಂಬರ್ 15, 2019
30 °C
ಅಂದಾಜು ₹22 ಲಕ್ಷ ವೆಚ್ಚ; ಎರಡು ತಿಂಗಳಿಂದ ಸ್ಥಗಿತ

ಶುದ್ಧೀಕರಣ ಘಟಕದ ನೀರೇ ಅಶುದ್ಧ!

Published:
Updated:
Prajavani

ನಾಲತವಾಡ: ಇದ್ದೂ ಇಲ್ಲದಂತಿರುವ ಜಲ ಶುದ್ಧೀಕರಣ ಘಟಕ. ಕಲುಷಿತಗೊಂಡಿರುವ ನದಿ ನೀರು ನೇರವಾಗಿ ಪೂರೈಕೆ. ಇದರಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಭೀತಿ. ಕಂಡೂ ಕಾಣದಂತಿರುವ ಅಧಿಕಾರಿಗಳು.

–ಇವು ಮುದ್ದೇಬಿಹಾಳ ತಾಲ್ಲೂಕು ನಾಲತವಾಡ ಗ್ರಾಮದ ಜನರು ಎದುರಿಸುತ್ತಿರುವ ಸಮಸ್ಯೆ.

ನದಿ ನೀರು ಹಲವಾರು ಕಾರಣಗಳಿಂದ ಕಲುಷಿತಗೊಂಡಿದ್ದು, ಕಾಯಿಲೆ ಹರಡುತ್ತಿದೆ. ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ 10 ವರ್ಷಗಳ ಹಿಂದೆ ಅಂದಾಜು ₹22 ಲಕ್ಷ ವೆಚ್ಚದಲ್ಲಿ ಜಲ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ. ಆದರೆ, ಈ ಘಟಕ ಎರಡು ತಿಂಗಳಿನಿಂದ ಸ್ಥಗಿತಗೊಂಡಿದೆ. ಹೆಸರಿಗೆ ಮಾತ್ರ ಜಲಶುದ್ಧೀಕರಣ ಘಟಕ ಇದ್ದು, ಈಗ ಅದು ಇದ್ದೂ ಇಲ್ಲದಂತಾಗಿದೆ.

ನಾಲತವಾಡಕ್ಕೆ ಕೃಷ್ಣಾ ನದಿಯ ನೀರನ್ನು ನೇರವಾಗಿ ಕುಡಿಯಲು ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

18 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಪಟ್ಟಣದಲ್ಲಿ ರಾಜೀವಗಾಂಧಿ ಜಲ ನಿರ್ಮಲ ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ 2 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಮತ್ತು ಶುದ್ಧ ನೀರನ್ನಾಗಿ ಶೋಧಿಸುವ ಮರಳು ಸಂಗ್ರಹಣೆ 2 ತೊಟ್ಟಿಗಳನ್ನು ಅಳವಡಿಸಲಾಗಿದೆ. ಆದರೆ, ಮೂರು ವರ್ಷಗಳಿಂದ ನಿರ್ವಹಣೆ ಇಲ್ಲ.

‘ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಲ ಶುದ್ಧೀಕರಣ ಘಟಕದತ್ತ ಗಮನ ಹರಿಸುತ್ತಿಲ್ಲ. ಹೀಗಾಗಿ ಅಶುದ್ಧ
ನೀರನ್ನೇ ಕುಡಿಯುವಂತಾಗಿದೆ’ ಎಂದು ಗ್ರಾಮದ ರುದ್ರು ಇಲಕಲ್‌ ಹಾಘೂ
ರಾಜು ಮಸಬಿನಾಳ ಬೇಸರ ವ್ಯಕ್ತಪಡಿಸುತ್ತಾರೆ.

‘ಪಟ್ಟಣ ಪಂಚಾಯಿತಿಯಿಂದ ಕ್ಲೋರಿನೇಶನ್, ಬ್ಲೀಚಿಂಗ್ ಪೌಡರ್ ಮೂಲಕ ನೀರನ್ನು ಶುದ್ಧೀಕರಿಸಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)