ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಗೂಳಿ ಶಾಖಾ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಪಾದಯಾತ್ರೆ

ಅಖಂಡ ಕರ್ನಾಟಕ ರೈತ ಸಂಘದಿಂದ ಆಕ್ರೋಶ
Last Updated 16 ಸೆಪ್ಟೆಂಬರ್ 2019, 12:26 IST
ಅಕ್ಷರ ಗಾತ್ರ

ವಿಜಯಪುರ: ಮನಗೂಳಿ ಶಾಖಾ ಕಾಲುವೆಗೆ 5 ದಿನಗಳಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪಾದಯಾತ್ರೆ ನಡೆಸಲಾಯಿತು.

ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ‘ಕಲಗುರ್ಕಿ ಬಳಿ ಹಾದು ಹೋಗಿರುವ ರೈಲ್ವೆ ಬ್ರಿಡ್ಜ್‌ ಅಂಡರ್ ಪಾಸಿಂಗ್ ಕಾಲುವೆಯಲ್ಲಿ ಪುಸ್ಸಿಂಗ್ ಬಾಕ್ಸ್ ಕಾಮಗಾರಿ ನಿಲ್ಲಿಸಬೇಕು. ಮನಗೂಳಿ ಶಾಖಾ ಕಾಲುವೆಗೆ ನೀರು ಹರಿಸಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ರೈಲು ತಡೆ ಚಳವಳಿ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ರೈಲ್ವೆ ಇಲಾಖೆಯವರು ಪದೇ ಪದೇ ಪುಸ್ಸಿಂಗ್ ಬಾಕ್ಸ್ ನಿರ್ಮಾಣ ನೆಪದಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸುತ್ತಿದ್ದಾರೆ. 7-8 ತಿಂಗಳ ಹಿಂದೆ ಕೂಡಗಿ ಬಳಿ ಪುಸ್ಸಿಂಗ್ ಬಾಕ್ಸ್ ಕಾಮಗಾರಿ ನಡೆಸಿದ್ದರಿಂದ ಅಲ್ಲಿಯೂ ಕೂಡ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದರು. ಈಗ ಮತ್ತೆ ಕಲಗುರ್ಕಿ ತಳೇವಾಡ ಬಳಿ ಪುಸ್ಸಿಂಗ್ ಬಾಕ್ಸ್ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಆ ಮೂಲಕ ನೀರು ಹರಿಸುವುದನ್ನು ತಡೆಹಿಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈಲ್ವೆ ಇಲಾಖೆಯ ಈ ಕ್ರಮದಿಂದಾಗಿ ಸುಮಾರು 15 ಹಳ್ಳಿಗಳಲ್ಲಿ ಕುಡಿಯುವ ನೀರಿನ ತತ್ವಾರ ಉಂಟಾಗಿದೆ. ಜಾನುವಾರುಗಳಿಗೆ ನೀರು ಸಿಗುತ್ತಿಲ್ಲ. ತಕ್ಷಣ ಕಾಮಗಾರಿ ನಿಲ್ಲಿಸಿ ಅಥವಾ ಪಕ್ಕದಲ್ಲಿ ಬೇರೆ ಕಾಲುವೆ ತೋಡಿ ಪೈಪ್ ಅಳವಡಿಸಿ ಕೆರೆ ತುಂಬಿಸಲು ಅನುವು ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ಹುಣಶ್ಯಾಳ ಶ್ರೀಮಠದ ಸಂಗನಬಸವ ಸ್ವಾಮೀಜಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧರಾಮಪ್ಪ ರಂಜಣಗಿ ಹಾಗೂ ರೈತ ಮುಖಂಡ ಅಪ್ಪುಗೌಡ ಪಾಟೀಲ (ಮನಗೂಳಿ) ಮಾತನಾಡಿದರು.

ಮನವಿ ಸ್ವೀಕರಿಸಿದ ಅಧಿಕಾರಿಗಳು, ‘ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಲು ಅನುವು ಮಾಡಿಕೊಡಲಾಗುವುದು’ ಎಂದು ತಿಳಿಸಿದರು. ಇದಕ್ಕೆ ಒಪ್ಪದ ರೈತರು ನಿರ್ದಿಷ್ಟ ದಿನ ಹೇಳಿ ಎಂದು ಪಟ್ಟು ಹಿಡಿದರು. ‘ಮೇಲಾಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಅಧಿಕಾರಿಗಳು ಭರವಸೆ ನೀಡಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ಬಸವನಬಾಗೇವಾಡಿ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ರಾಮ ಅಂಗಡಗೇರಿ, ಉಪಾಧ್ಯಕ್ಷ ಹೊನಕೇರಪ್ಪ ತೆಲಗಿ, ಈರಣ್ಣ ದೇವರಗುಡಿ, ಶಾರದಾ ಲಮಾಣಿ, ಕೃಷ್ಣಪ್ಪ ಬಮರಡ್ಡಿ, ಮಲ್ಲಯ್ಯ ಮಠಪತಿ, ದಯಾನಂದ ವಸ್ತ್ರದ, ಶ್ರೀಶೈಲ ನಾಗೋಡ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT