ಕೊಪ್ಪಳ: ಹಲವಾರು ಐತಿಹಾಸಿಕ ಕಥನಗಳನ್ನು ಹಾಗೂ ಸ್ವಾರಸ್ಯಕರ ಸಂಗತಿಗಳನ್ನು ತನ್ನ ಒಡಲೊಳಗೆ ತುಂಬಿಕೊಂಡಿರುವ ಕೊಪ್ಪಳ ಜಿಲ್ಲೆಯ ಭಾನಾಪುರ ಗ್ರಾಮದ ಹೆಸರು ಕೇಳಿದಾಕ್ಷಣ ಅದೇನೊ ಕುತೂಹಲ ಮನೆ ಮಾಡುತ್ತದೆ. ಕೆದಕಿ, ಕಣ್ಣು ಅರಳಿಸಿಕೊಂಡು ಆ ಸಂಗತಿಗಳತ್ತ ಕಣ್ಣು ಹಾಯಿಸಬೇಕು ಎನಿಸುತ್ತದೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಿಲ್ಲೆಗೆ ಭೇಟಿ ನೀಡಿದ ಏಕೈಕ ತಾಣ ಭಾನಾಪುರ. ಕುಕನೂರು ತಾಲ್ಲೂಕಿನಲ್ಲಿರುವ ಐತಿಹಾಸಿಕ ಈ ಗ್ರಾಮಕ್ಕೆ ಗಾಂಧೀಜಿ ಹರಿಜನೋದ್ಧಾರ ಪ್ರವಾಸದ ಅಂಗವಾಗಿ 1934ರ ಮಾರ್ಚ್ 3ರಂದು ಗ್ರಾಮದ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಇದು ಪೂರ್ವ ನಿರ್ಧರಿತ ಕಾರ್ಯಕ್ರಮವಾಗಿತ್ತು. ಸ್ವಾತಂತ್ರ್ಯ ಯೋಧರಾಗಿದ್ದ ಶಿರೂರು ವೀರಭದ್ರಪ್ಪ ಹಾಗೂ ಅವರ ತಂಡದವರು ಮೊದಲೇ ಯೋಜನೆ ರೂಪಿಸಿ ಗಾಂಧೀಜಿ ಭಾನಾಪುರಕ್ಕೆ ಬರುವಂತೆ ನೋಡಿಕೊಂಡಿದ್ದರು. ಹೋರಾಟಗಾರರು ಮತ್ತು ಸ್ಥಳೀಯರು ಅವರನ್ನು ಭೇಟಿಯಾಗಿ ಸ್ವಾಗತಿಸಿದ್ದರು. ಆಗ 10–15ರಿಂದ ಸಾವಿರ ಜನ ಸೇರಿದ್ದರು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಗಾಂಧೀಜಿ ಅವರ ಭೇಟಿಯ ಸಮಯದಲ್ಲಿ 19 ವರ್ಷದವರಾಗಿದ್ದ ಹೆಸರಾಂತ ಚಿತ್ರ ಕಲಾವಿದ ಕಾಳಪ್ಪ ಪತ್ತಾರ ಅವರು ಗಾಂಧೀಜಿಯವರ ಮುಖಭಾವ ಗಮನಿಸಿ ಅಲ್ಲೇ ಕುಳಿತು ಅವರ ಸುಂದರವಾದ ಭಾವಚಿತ್ರ ರಚಿಸಿ ಸಮರ್ಪಿಸಿದ್ದರು. ಆ ಯುವಕನ ಪ್ರತಿಭೆ ಮೆಚ್ಚಿಕೊಂಡ ಗಾಂಧೀಜಿ ಆ ಚಿತ್ರಕ್ಕೆ ತಮ್ಮ ಹಸ್ತಾಕ್ಷರ ಹಾಕಿ ನಂತರ ಅದನ್ನು ಹರಾಜು ಹಾಕಿ ಬಂದ ಹಣವನ್ನು ಕಾಳಪ್ಪ ಪತ್ತಾರ ಅವರ ಹೆಸರಿನಲ್ಲೇ ಹರಿಜನ ಕಲ್ಯಾಣ ನಿಧಿಗೆ ದೇಣಿಗೆ ಸ್ವೀಕರಿಸಿದ್ದರು ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಭಾನಾಪುರದಲ್ಲಿ ಗಾಂಧೀಜಿಯವರು ಅಸ್ಪೃಶ್ಯತೆ ನಿರ್ಮೂಲನೆಯ ಸಂದೇಶ ಸಾರಿದರು. ಇದೇ ಸ್ಥಳದಲ್ಲಿ ತಳಕಲ್ ಗ್ರಾಮದ ಚುಟ್ಟವ್ವ ಹರಿಜನ ಎಂಬ ಮಹಿಳೆಯ ಕೈಯಿಂದ ನೀರು ಕುಡಿಯುವ ಮೂಲಕ ಅಸ್ಪೃಶ್ಯತೆ ಆಚರಣೆಗೆ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಭಾನಾಪುರದ ರೈಲು ನಿಲ್ದಾಣ ಜಿಲ್ಲೆಯ ಗಾಂಧಿಪ್ರಿಯರ ಪಾಲಿಗೆ ಸದಾ ಪವಿತ್ರ ತಾಣ. ಗಾಂಧೀಜಿ ಅವರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಈ ಗ್ರಾಮದಲ್ಲಿ ಮಾಡಲಾಗುತ್ತದೆ. ಕೊಪ್ಪಳದ ಹೆಸರಾಂತ ಸಂಘಟನೆ ಗಾಂಧಿ ಬಳಗ ಪ್ರತಿ ಅಕ್ಟೋಬರ್ 2ರಂದು ನಡೆಸುವ ಪಾದಯಾತ್ರೆಯನ್ನು ಮೊದಲ ಬಾರಿಗೆ ಭಾನಾಪುರಕ್ಕೆ ಮಾಡಿದ್ದು ವಿಶೇಷವಾಗಿತ್ತು. ನೂರಾರು ಜನ ಕೊಪ್ಪಳದಿಂದ ಭಾನಾಪುರದ ತನಕ 15 ಕಿ.ಮೀ. ಪಾದಯಾತ್ರೆ ತೆರಳಿದ್ದರು.

ಭಾನಾಪುರ ರೈಲು ನಿಲ್ದಾಣದಲ್ಲಿ ಈಗಲೂ ಮಹಾತ್ಮ ಗಾಂಧೀಜಿ ಭಾವಚಿತ್ರ ಹಾಕಲಾಗಿದೆ. ಗಾಂಧೀಜಿ ಭೇಟಿ ನೀಡಿ ಜನಸಮೂಹ ಉದ್ದೇಶಿಸಿ ಮಾತನಾಡುವಾಗ ಕಾಳಪ್ಪ ಪತ್ತಾರ ತಾವು ರಚಿಸಿದ ಗಾಂಧೀಜಿ ಭಾವಚಿತ್ರ ಸಮರ್ಪಿಸಿದ್ದರು. ಆ ಐತಿಹಾಸಿಕ ಘಟನೆಯ ಸ್ಮರಣಾರ್ಥ ಕಲಾವಿದ ಹಾಗೂ ಅವರ ಪುತ್ರ ಶಂಕರ ಪತ್ತಾರ ಅವರು ತೈಲವರ್ಣದಲ್ಲಿ ಗಾಂಧೀಜಿ ಚಿತ್ರ ರಚಿಸಿ ಕಾಣಿಕೆಯಾಗಿ ನೀಡಿದ್ದಾರೆ. ಈ ಐತಿಹಾಸಿಕ ಕಾರಣಕ್ಕಾಗಿ ಭಾನಾಪುರ ರೈಲು ನಿಲ್ದಾಣಕ್ಕೆ ಗಾಂಧೀಜಿ ಅವರ ಹೆಸರು ನಾಮಕರಣ ಮಾಡಬೇಕು ಎನ್ನುವ ಬೇಡಿಕೆಯೂ ಇದೆ.

ಬಾಲಿವುಡ್ ಕಲಾವಿದರಾದ ಅಭಿಷೇಕ ಬಚ್ಚನ್-ಐಶ್ವರ್ಯ ರೈ ಅಭಿನಯದ 'ಗುರು' ಚಿತ್ರದ ಚಿತ್ರೀಕರಣ ಕೂಡ ಭಾನಾಪುರದ ರೈಲು ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿತ್ತು. ಅದಕ್ಕಾಗಿ ನೈರುತ್ಯ ರೈಲ್ವೆ ಅಮರಾವತಿ ಎಕ್ಸಪ್ರೆಸ್ ರೈಲಿನ ನಿಲುಗಡೆ ತಾತ್ಕಾಲಿಕವಾಗಿ ರದ್ದುಪಡಿಸಿತ್ತು. ಹಲವು ತಿಂಗಳುಗಳ ಬಳಿಕ ಸಂಪೂರ್ಣವಾಗಿ ನಿಲುಗಡೆ ರದ್ದುಮಾಡಿತ್ತು. ಈಗಲೂ ಆ ರೈಲು ಭಾನಾಪುರದಲ್ಲಿ ನಿಲುಗಡೆಯಾಗುತ್ತಿಲ್ಲ ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಇಟಗಿಗೆ ಸಮೀಪ: ಕರ್ನಾಟಕದ ದೇವಾಲಯಗಳ ಚಕ್ರವರ್ತಿ ಎನ್ನುವ ಹೆಗ್ಗಳಿಕೆ ಹೊಂದಿರುವ ಕುಕನೂರು ತಾಲ್ಲೂಕಿನ ಇಟಗಿಯ ಮಹಾದೇವ ದೇವಾಲಯ ಕೂಡ ಭಾನಾಪುರದಿಂದ 12 ಕಿ.ಮೀ. ದೂರದಲ್ಲಿದೆ.

ಮಹಾದೇವ ದೇವಾಲಯವನ್ನು ಅಣ್ಣಿಗೇರಿಯಲ್ಲಿರುವ ಅಮೃತೇಶ್ವರ ದೇವಾಲಯದ ಮೂಲ ಮಾದರಿ ಬಳಸಿ ನಿರ್ಮಿಸಲಾಗಿದೆ ಎಂದೇ ಹೇಳಲಾಗುತ್ತಿದೆ. ಅದೇ ರೀತಿಯ ವಿನ್ಯಾಸ ಮತ್ತು ವಾಸ್ತುಶಿಲ್ಪದ ಅಂಶಗಳನ್ನು ಹೊಂದಿದ್ದು, ಕಲ್ಲುಗಳಲ್ಲಿ ಅರಳಿರುವ ಸೂಕ್ಷ್ಮ ಕೆತ್ತನೆಗಳು, ಕಲಾಕೃತಿಗಳು ಆಕರ್ಷಿಸುವಂತಿವೆ.

ಪಶ್ಚಿಮ ಚಾಲುಕ್ಯ ರಾಜ ವಿಕ್ರಮಾದಿತ್ಯ ಅವರ ಸೈನ್ಯದಲ್ಲಿದ್ದ ದಂಡನಾಯಕ ಮಹಾದೇವ ಈ ದೇವಾಲಯ ನಿರ್ಮಿಸಿದರು ಎನ್ನುವ ಐತಿಹ್ಯವಿದೆ. ಈ ದೇವಾಲಯದಲ್ಲಿರುವ ಶಿಲ್ಪಗಳು, ಗೋಡೆಗಳು, ಕಂಬಗಳು ಮತ್ತು ಗೋಪುರದ ಮೇಲೆ ಉತ್ತಮವಾಗಿ ರಚಿಸಲಾದ ಕೆತ್ತನೆಗಳು ಚಾಲುಕ್ಯ ಕುಶಲಕರ್ಮಿಗಳ ಅಭಿರುಚಿಗೆ ಸಾಕ್ಷಿಯಂತಿವೆ. ಐತಿಹಾಸಿಕವಾದ ಈ ದೇವಸ್ಥಾನದಲ್ಲಿ ಕಡಚಲು ಯಂತ್ರದಲ್ಲಿ ತಯಾರಿಸಿದ ಕಂಬಗಳ ಮಂಟಪ, ಗೋಳಾಕಾರದ ಚಾವಣಿಯೊಂದಿಗೆ ಮುಖಮಂಟಪ ಪ್ರವೇಶದ್ವಾರ, ಮುಖಮಂಟಪ ನಿರ್ಮಿಸಲಾಗಿದೆ. ಆಕರ್ಷಕ ಕೆತ್ತನೆಗಳು, ನುಣುಪಾದ ಕಂಬಗಳು ಮತ್ತು ಸುಂದರವಾದ ಗೋಪುರಗಳನ್ನು ಹೊಂದಿರುವ ಕಾರಣ ದೇವಸ್ಥಾನದ ವಾಸ್ತುಶಿಲ್ಪ ನೋಡಲು ದೇಶ, ವಿದೇಶಗಳು ಪ್ರವಾಸಿಗರು ಬರುತ್ತಾರೆ. ಮುಂಬೈ, ಹುಬ್ಬಳ್ಳಿಯಿಂದ ಬರುವವರಿಗೆ ರೈಲಿನ ಸೌಲಭ್ಯಗಳು ಇವೆ. ದೇಶದ ವಿವಿಧ ಭಾಗಗಳಿಗೆ ಹುಬ್ಬಳ್ಳಿ ರೈಲು ನಿಲ್ದಾಣ ಸಂಪರ್ಕ ಹೊಂದಿದ್ದು, ಹುಬ್ಬಳ್ಳಿಯಿಂದಲೂ ಭಾನಾಪುರಕ್ಕೆ ರೈಲಿನ ವ್ಯವಸ್ಥೆಯಿದೆ. ಹೀಗಾಗಿ ಭಾನಾಪುರ ಎನ್ನುವ ಹೆಸರು ಸೂಜಿಗಲ್ಲಿನಂತೆ ಸದಾ ಸೆಳೆಯುತ್ತಲೇ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.