ಕಲಬುರಗಿ: ಜಿಲ್ಲೆಯ ಸನ್ನತಿ–ಕನಗನಹಳ್ಳಿ ಪರಿಸರದಲ್ಲಿ ‘ಅಧೋಲೋಕ ಮಹಾಚೈತ್ಯ ಬೌದ್ಧ ಮಹಾಸ್ತೂಪ’ ಪತ್ತೆಯಾಗುವ ಮೂಲಕ ಸುಮಾರು 2,300 ವರ್ಷಗಳ ಹಿಂದೆಯೇ ಜಿಲ್ಲೆ ಪ್ರಮುಖ ಬೌದ್ಧ ನೆಲೆಯಾಗಿತ್ತು ಎಂಬುದು ದೃಢಪಟ್ಟಿದೆ.

ಇದೀಗ ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಇರಬಹುದಾದ ಇನ್ನಷ್ಟು ಬೌದ್ಧ ನೆಲೆಗಳನ್ನು ಪತ್ತೆ ಹಚ್ಚಿ ಉತ್ಖನನ ನಡೆಸುವಂತೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಇತ್ತೀಚೆಗೆ ಪ್ರಸ್ತಾಪಿಸುವ ಮೂಲಕ ಬೌದ್ಧ ಸಂಸ್ಕೃತಿಯ ಆಳವನ್ನು ಇನ್ನಷ್ಟು ವಿಸ್ತರಿಸಲು ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮೌರ್ಯರ ಕಾಲದಿಂದಲೇ ಸನ್ನತಿ ಪರಿಸರದಲ್ಲಿ ಬೌದ್ಧ ನೆಲೆ ಇತ್ತು. ಇದೊಂದು ಪ್ರಮುಖ ಆವಾಸ ಸ್ಥಾನವಾಗಿತ್ತು ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದರು. 2,300 ವರ್ಷಗಳ ಹಿಂದೆ ಅಧೋಲೋಕ ಮಹಾಚೈತ್ಯ ಹೆಸರಿನ ಬೌದ್ಧಸ್ತೂಪ ನಿರ್ಮಾಣವಾಗಿದ್ದರೂ ಇದು ಲೋಕಕ್ಕೆ ತಿಳಿಯಲು 1954ರವರೆಗೂ ಕಾಯಬೇಕಾಯಿತು. ಹಿರಿಯ ಇತಿಹಾಸ ಸಂಶೋಧಕ ಕಪಟರಾಳ ಕೃಷ್ಣರಾವ್ ಅವರು 1954ರಲ್ಲಿ ಪ್ರಥಮ ಬಾರಿಗೆ ಸನ್ನತಿ ಒಂದು ಪ್ರಾಚೀನ ಬೌದ್ಧ ಕೇಂದ್ರವಾಗಿತ್ತು ಎಂದು ಹೇಳುವ ಮೂಲಕ ಇತಿಹಾಸ ತಜ್ಞರ ಗಮನ ಸೆಳೆದರು. 1964ರಲ್ಲಿ ಹಿರಿಯ ಸಂಶೋಧಕ ಪಿ.ಬಿ.ದೇಸಾಯಿ ಅವರು ಸನ್ನತಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೌದ್ಧ ನೆಲೆಗಳಿವೆ ಎಂದರು. ಇದಕ್ಕೆ ಪೂರಕವೆಂಬಂತೆ ಉತ್ಖನನದ ವೇಳೆ ಪತ್ತೆಯಾದ ಬೌದ್ಧ ಚೈತ್ಯಾಲಯದಿಂದ ಆನತಿ ದೂರದ ಭೀಮಾ ದಂಡೆಗೆ ಹೊಂದಿಕೊಂಡಿರುವ ಚಂದ್ರಲಾ ಪರಮೇಶ್ವರಿ ದೇವಸ್ಥಾನದ ಸಂಕೀರ್ಣದಲ್ಲಿದ್ದ ಕಾಳಿದೇವಿ ಗುಡಿ ಚಾವಣಿ 1989ರಲ್ಲಿ ಕುಸಿದ ಸಂದರ್ಭದಲ್ಲಿ ದೇವಿಯ ಮೂರ್ತಿಯಿದ್ದ ತಳಪಾಯದಲ್ಲಿ ಪ್ರಾಕೃತ ಭಾಷೆಯ ಬ್ರಾಹ್ಮಿ ಲಿಪಿಯನ್ನೊಳಗೊಂಡ ಶಾಸನ ಬಂಡೆಯ ಜೊತೆಗೆ ಇನ್ನೂ ಮೂರು ಶಾಸನಗಳು ಸಿಕ್ಕವು. ಕನಗನಹಳ್ಳಿಯ ರಣಮಂಡಲದಲ್ಲಿ ಬೌದ್ಧ ಸ್ತೂಪ ಇದ್ದುದನ್ನು ಈ ಶಾಸನಗಳು ಬಹಿರಂಗಪಡಿಸಿದವು.

ಹೀಗಾಗಿ, ರಣಮಂಡಲದ 86 ಹೆಕ್ಟೇರ್ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ರಾಜ್ಯ ಪುರಾತತ್ವ ಇಲಾಖೆ ಜಂಟಿಯಾಗಿ 1994ರಿಂದ 2001ರವರೆಗೆ ಉತ್ಖನನ ಕಾರ್ಯ ನಡೆಸಿದವು. ಮಹಾಸ್ತೂಪ, ಮಣ್ಣಿನ ಪದಕಗಳು, ಶಾತವಾಹನ ಪೂರ್ವ ಮತ್ತು ಶಾತವಾಹನರ ಕಾಲದ ನಾಣ್ಯಗಳು, ಮನೆಯ ಇಟ್ಟಿಗೆಯ ಸುಸಜ್ಜಿತ ತಳಪಾಯಗಳು, ಬುದ್ಧನ ಪ್ರತಿಮೆಗಳು, ಪದ್ಮ ಪಾದಗಳು, ಜಾತಕ ಕಥೆಗಳನ್ನು ಹೇಳುವ ಶಿಲಾ ಫಲಕಗಳು, ಮೌರ್ಯ ಚಕ್ರವರ್ತಿ ಅಶೋಕನು ತನ್ನ ಪರಿವಾರದೊಂದಿಗಿರುವ ‘ರಾಯೋ ಅಶೋಕ’ ಎಂಬ ಲಿಪಿಸಹಿತ ಶಿಲಾ ಉಬ್ಬು ಫಲಕ ಹಾಗೂ ಬ್ರಾಹ್ಮಿ ಲಿಪಿಯಲ್ಲಿ ಬರೆದ ಪ್ರಾಕೃತ ಭಾಷೆಯ ಶಾಸನಗಳು ಸಿಕ್ಕವು.

ಇದು ಬೌದ್ಧ ಪರಂಪರೆಯ ಸಂಶೋಧನೆಯಲ್ಲಿ ತೊಡಗಿದವರಿಗೆ ದೊಡ್ಡ ನಿಧಿಯೊಂದು ಸಿಕ್ಕಂತಾಯಿತು. ದೂರದ ಜರ್ಮನಿ, ಜಪಾನ್ ಸೇರಿದಂತೆ ವಿವಿಧ ದೇಶಗಳ ಸಂಶೋಧಕರು ಸನ್ನತಿಗೆ ಧಾವಿಸಿ ಹಲವು ತಿಂಗಳುಗಳ ಕಾಲ ಸಂಶೋಧನೆ ನಡೆಸಿದರು.

ಈ ಬೌದ್ಧ ನೆಲೆಯ ಸಂಶೋಧನೆ ಪ್ರಯತ್ನಗಳ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿಯ (ಐಸಿಎಚ್ಆರ್) ಪ್ರಾದೇಶಿಕ ನಿರ್ದೇಶಕ ಎಸ್.ಕೆ.ಅರುಣಿ, ‘ಜರ್ಮನಿಯ ಸಂಶೋಧಕಿ ಮೋನಿಕಾ ಝಿನ್ ಅವರು ಸುಮಾರು 20 ವರ್ಷಗಳ ಕಾಲ ಸಂಶೋಧನೆ ನಡೆಸಿ ‘ಇನ್ಸ್ಕ್ರಿಪ್ಷನ್ಸ್ ಆಫ್ ಸನ್ನತಿ’ ಎಂಬ ಕೃತಿಯನ್ನು ಹೊರತಂದಿದ್ದಾರೆ. ಈಗಲೂ ಜರ್ಮನಿಯಲ್ಲಿ ಸನ್ನತಿಯ ಬೌದ್ಧ ಸ್ತೂಪದ ಕುರಿತು ಉಪನ್ಯಾಸಗಳು ನಡೆಯುತ್ತಿವೆ. ಸನ್ನತಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ನಷ್ಟು ಸಂಶೋಧನೆ ನಡೆಸಿದರೆ ಮತ್ತಷ್ಟು ಮಾಹಿತಿ ಸಿಗುತ್ತದೆ. ಪ್ರಾಚೀನ ಕಾಲದಲ್ಲಿಯೇ ಸನ್ನತಿ ಒಂದು ದೊಡ್ಡ ಜನವಸತಿ ಪ್ರದೇಶವಾಗಿದ್ದಿರಬಹುದು. ಕಾಶ್ಮೀರ, ಸಾಂಚಿ, ಅಮರಾವತಿ, ಗುಜರಾತ್ನಿಂದ ಬೌದ್ಧ ಧರ್ಮದ ಅನುಯಾಯಿಗಳು ಇಲ್ಲಿಗೆ ಭೇಟಿ ನೀಡಿದ್ದರು. ಇನ್ನಷ್ಟು ಹೊಳಹುಗಳು ಉತ್ಖನನದಿಂದ ಸಿಗಬಹುದು. ಆ ನಿಟ್ಟಿನಲ್ಲಿ ಸಂಶೋಧಕರು ಗಮನ ಹರಿಸಬೇಕು’ ಎನ್ನುತ್ತಾರೆ.

‘ಮಹಾರಾಷ್ಟ್ರದ ಪಂಢರಪುರ, ಸೀನಾ ನದಿ, ಭೀಮಾ ನದಿಯ ದಂಡೆಗುಂಟ ಬೌದ್ಧ ನೆಲೆಗಳು ದೊರೆಯುತ್ತಿವೆ. ಭೀಮಾ ನದಿ ಹರಿದ ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ, ಶಹಾಪುರ ತಾಲ್ಲೂಕಿನ ರೋಜಾ, ಶಿರವಾಳ ಗ್ರಾಮದ ಬಳಿಯೇ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಕುರುಹುಗಳು ದೊರೆಯುವ ಸಾಧ್ಯತೆ ಇದೆ. ಭೀಮಾ ನದಿಯ ಸುತ್ತಮುತ್ತಲೇ ಏಕೆ ಬೌದ್ಧ ನೆಲೆಗಳು ಸ್ಥಾಪನೆಯಾಗಿದ್ದವು ಎಂಬುದರ ಬಗ್ಗೆ ಸಂಶೋಧನೆ ನಡೆಸಿದರೆ ಮಹತ್ವದ ಮಾಹಿತಿ ಸಿಗಬಹುದು’ ಎನ್ನುತ್ತಾರೆ ಅವರು.

ಹಂಪಿ ಕನ್ನಡ ವಿ.ವಿ.ಯ ಇತಿಹಾಸ ಪ್ರಾಧ್ಯಾಪಕರಾಗಿದ್ದ ಪ್ರೊ.ಲಕ್ಷ್ಮಣ ತೆಲಗಾವಿ ಅವರು ‘ಊರುಗಳ ಸಾಂಸ್ಕೃತಿಕ ಅಧ್ಯಯನ’ ಸಂಪುಟದ ತಮ್ಮ ಲೇಖನದಲ್ಲಿ ಸನ್ನತಿಯ ಕುರಿತು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಉತ್ಖನನ ಆರಂಭ: ಕಳೆದ ಅವಧಿಯಲ್ಲಿ ಕಲಬುರಗಿ ಕ್ಷೇತ್ರದ ಸಂಸದರಾಗಿದ್ದ ಡಾ. ಉಮೇಶ್ ಜಾಧವ್ ಅವರು ಬೌದ್ಧ ಸ್ತೂಪ ಇರುವ ಸನ್ನತಿ ಪರಿಸರದ ಅಭಿವೃದ್ಧಿಯ ಅಗತ್ಯವನ್ನು ಪ್ರಸ್ತಾಪಿಸಿ ಕೇಂದ್ರದ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ₹ 3 ಕೋಟಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದಿದ್ದರು. ಹೀಗಾಗಿ, ರಣಮಂಡಲ ಎಂದು ಕರೆಯಲಾಗುವ ಅಧೋಲೋಕ ಮಹಾಚೈತ್ಯದ ಆವರಣದ ಉತ್ಖನನ ಕಾರ್ಯ ಶುರುವಾಗಿ ಬಹುತೇಕ ಮುಕ್ತಾಯದ ಹಂತ ತಲುಪಿದೆ.

ಈ ಬೌದ್ಧ ಸ್ತೂಪವಿರುವ ಸನ್ನತಿಯು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಆಸಕ್ತಿ ವಹಿಸಿದ್ದರಿಂದ ಸನ್ನತಿ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ಕ್ರಮ ಕೈಗೊಂಡಿದ್ದಾರೆ. ಬೌದ್ಧ ಸ್ತೂಪದ ಸಮೀಪದಲ್ಲಿ ಪ್ರವಾಸಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ₹8.5 ಕೋಟಿ ಅನುದಾನವನ್ನು ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.