ಬೆಳಗಾವಿ ಜಿಲ್ಲೆಯ ಬಹುತೇಕ ಹೆದ್ದಾರಿಗಳಲ್ಲಿ ಈಗ ಎತ್ತ ಕಣ್ಣು ಹಾಯಿಸಿದರೂ ಪಾದಯಾತ್ರಿಗಳದ್ದೇ ದಂಡು. ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಜನರು ಹೆದ್ದಾರಿಗುಂಟ ಹೆಜ್ಜೆಹಾಕುತ್ತ, ಆಂಧ್ರಪ್ರದೇಶದ ಶ್ರೀಶೈಲದ ಮಲ್ಲಿಕಾರ್ಜುನ ಸನ್ನಿಧಿಯತ್ತ ಹೆಜ್ಜೆಹಾಕುತ್ತಿದ್ದಾರೆ.

ಇಂದಿನ ಹೈಟೆಕ್ ಯುಗದಲ್ಲಿ ಬಸ್, ಕಾರು, ರೈಲು ಮತ್ತು ವಿಮಾನ ಸೌಕರ್ಯಕ್ಕೇನೂ ಕೊರತೆ ಇಲ್ಲ. ಆದರೂ, ಪಾದಯಾತ್ರೆ ಮೂಲಕವೇ ದೇವರ ಸನ್ನಿಧಿ ತಲುಪುವ ಸಂಸ್ಕೃತಿಯನ್ನು ಬೆಳಗಾವಿ ಜಿಲ್ಲೆಯ ಜನರು ಕಾಪಾಡಿಕೊಂಡು ಬಂದಿದ್ದಾರೆ.

ಇತ್ತೀಚೆಗೆ ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿ ನಡೆದ ಭಾರತ ಹುಣ್ಣಿಮೆ ಜಾತ್ರೆ ಹಾಗೂ ಹುಬ್ಬಳ್ಳಿಯ ಸಿದ್ಧಾರೂಢಮಠದಲ್ಲಿ ನಡೆದ ಜಾತ್ರೆಗೆ ಕಾಲ್ನಡಿಗೆ ಮೂಲಕವೇ ತೆರಳಿ, ಭಕ್ತಿ ಸಮರ್ಪಿಸಿದ್ದರು. ಈಗ ಶ್ರೀಶೈಲದಲ್ಲಿ ನಡೆಯುವ ಜಾತ್ರೆ ಸರದಿ.

ಯುಗಾದಿ ದಿನ ಶ್ರೀಶೈಲದಲ್ಲಿ ಬೃಹತ್ ಜಾತ್ರೆ ಜರುಗುತ್ತದೆ. ಅದಕ್ಕೆ ಸಾಕ್ಷಿಯಾಗಲು ಬೆಳಗಾವಿ ಜಿಲ್ಲೆಯ ಹಳ್ಳಿ–ಹಳ್ಳಿಗಳಿಂದ ಜನರು ಪಾದಯಾತ್ರೆ ಆರಂಭಿಸಿದ್ದಾರೆ. ಕೆಲವರು ಮೊದಲ ಸಲ ಯಾತ್ರೆ ಕೈಗೊಂಡಿದ್ದರೆ, ಇನ್ನೂ ಕೆಲವರು 15ರಿಂದ 20 ವರ್ಷಗಳಿಂದ ಹೋಗುತ್ತಿದ್ದಾರೆ. ಪುರುಷರು, ಮಹಿಳೆಯರು, ಯುವಜನರು, ವೃದ್ಧರು.. ಹೀಗೆ ಎಲ್ಲ ವಯೋಮಾನದವರೂ ಯಾತ್ರೆ ಕೈಗೊಂಡವರಲ್ಲಿ ಇದ್ದಾರೆ. ಕಾಲಿಗೆ ಮರಗಾಲು ಕಟ್ಟಿಕೊಂಡು ನಡೆಯುವವರೂ ಕಾಣಸಿಗುತ್ತಾರೆ.

ಕನಿಷ್ಠ 20 ಭಕ್ತರನ್ನು ಒಳಗೊಂಡ ತಂಡಗಳು ಭಕ್ತಿಯಿಂದ ಮಲ್ಲಿಕಾರ್ಜುನ ಸನ್ನಿಧಿಯತ್ತ ಹೆಜ್ಜೆಹಾಕುತ್ತಿವೆ. ಗೋಕಾಕ ತಾಲ್ಲೂಕಿನ ಮಮದಾಪುರ ತಂಡದಲ್ಲಿ 150, ರಾಮದುರ್ಗ ತಾಲ್ಲೂಕಿನ ತೋರಣಗಟ್ಟಿ, ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ತಂಡದಲ್ಲಿ ತಲಾ 80 ಮತ್ತು ಸೊಪ್ಪಡ್ಲ ತಂಡದಲ್ಲಿ 70 ಮಂದಿ ಇದ್ದಾರೆ. ಭಕ್ತಿಯಿಂದ ಯಾತ್ರೆ ಕೈಗೊಂಡ ಇವರಿಗೆ ಮಾರ್ಗಮಧ್ಯೆ ಹಲವರು ಊಟ, ಉಪಾಹಾರ, ತಂಪು ಪಾನೀಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಮಲ್ಲಯ್ಯನ ಕಂಬಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

18 ವರ್ಷಗಳಿಂದ ಹೋಗುತ್ತಿದ್ದೇವೆ..

‘ಕಳೆದ 18 ವರ್ಷಗಳಿಂದ ನಾವು ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ಹೊರಟಿದ್ದೇವೆ. ಈ ಬಾರಿಯೂ ಮೂರು ಊರುಗಳ 230 ಮಂದಿ ಯಾತ್ರೆ ಆರಂಭಿಸಿದ್ದೇವೆ. ವರ್ಷಪೂರ್ತಿ ಕೃಷಿ ಮಾಡುವುದು ಇದ್ದದ್ದೆ. ಇದರ ಮಧ್ಯೆಯೇ ವರ್ಷದಲ್ಲೊಂದು ತಿಂಗಳು, ಮಲ್ಲಯ್ಯ ಅಜ್ಜನ ಸೇವೆಗೆ ಸಮಯ ತೆಗೆದಿಡುತ್ತೇವೆ. ಈ ಸೇವೆಯಲ್ಲೊಂದು ಏನೋ ಖುಷಿ ಇದೆ’ ಎಂದು ಸೊಪ್ಪಡ್ಲ ಗ್ರಾಮದ ಬಸನಗೌಡ ಪಾಟೀಲ ಹೇಳುತ್ತಾರೆ.

‘14 ದಿನ ಪಾದಯಾತ್ರೆ ಮೂಲಕ ಸಾಗಿ, ಯುಗಾದಿ ಜಾತ್ರೆಗೆ ಸಾಕ್ಷಿಯಾಗುತ್ತೇವೆ. ಅಷ್ಟೇ ಅಲ್ಲ; ಐದು ದಿನ ಶ್ರೀಶೈಲದಲ್ಲೇ ದಾಸೋಹವನ್ನೂ ಆಯೋಜಿಸಿ, ಸಾವಿರಾರು ಭಕ್ತರಿಗೆ ಮಹಾಪ್ರಸಾದ ಉಣಬಡಿಸುತ್ತೇವೆ’ ಎನ್ನುತ್ತಾರೆ.

‘ನಾನು ಮೊದಲ ಸಲ ಯಾತ್ರೆಗೆ ಹೋದಾಗಿನ ಪರಿಸ್ಥಿತಿಗೂ, ಈಗಿನದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆಗ ಯಾತ್ರೆ ಮಾರ್ಗದಲ್ಲಿ ಯಾರೂ ಊಟ, ಉಪಾಹಾರ ನೀಡುತ್ತಿರಲಿಲ್ಲ. ಈಗ ನಮ್ಮೂರು ಬಿಟ್ಟರೆ, ಶ್ರೀಶೈಲ ತಲುಪುವವರೆಗೂ ಹಸಿವು ಮತ್ತು ಬಾಯಾರಿಕೆ ಚಿಂತೆ ಇಲ್ಲ. ಮಾರ್ಗದುದ್ದಕ್ಕೂ ಊಟ, ಉಪಾಹಾರ, ಕುಡಿಯುವ ನೀರು, ಮಜ್ಜಿಗೆ, ಅಂಬಲಿ ಕೊಡುತ್ತಾರೆ’ ಎಂದು ಹೇಳುತ್ತಾರೆ.

ನಿತ್ಯ 40 ಕಿ.ಮೀ ನಡಿಗೆ

‘ನಾವು ನಸುಕಿನ ಜಾವ 2.30ಕ್ಕೆ ನಡೆಯಲು ಆರಂಭಿಸಿದರೆ, 10 ಗಂಟೆಯವರೆಗೂ ಹೆಜ್ಜೆಹಾಕುತ್ತೇವೆ. ನಂತರ ವಿಶ್ರಾಂತಿ ಪಡೆದು, ಸಂಜೆ 4.30ರಿಂದ ರಾತ್ರಿ 8ರವರೆಗೆ ಮತ್ತೆ ನಡೆಯುತ್ತೇವೆ. ದಿನಕ್ಕೆ ಏನಿಲ್ಲವೆಂದರೂ 40ರಿಂದ 45 ಕಿ.ಮೀ ದೂರವನ್ನು ಕಾಲ್ನಡಿಗೆ ಮೂಲಕ ಕ್ರಮಿಸುತ್ತೇವೆ. ಇಂಥ ಕಡೆಯಲ್ಲೇ ವಾಸ್ತವ್ಯ ಅಂತೇನಿಲ್ಲ. ಬಹುತೇಕವಾಗಿ ಊರ ಹೊರವಲಯದ ಕೃಷಿಭೂಮಿಯಲ್ಲೇ ವಾಸ್ತವ್ಯ ಹೂಡಿ ಮುಂದೆ ಸಾಗುತ್ತೇವೆ’ ಎನ್ನುತ್ತಾರೆ ಗೋಕಾಕ ತಾಲ್ಲೂಕಿನ ಮಮದಾಪುರದ ಸುರೇಶಗೌಡ ಪಾಟೀಲ.

‘ಯಾತ್ರೆ ಮಾರ್ಗದ ಪ್ರತಿ ಊರಲ್ಲಿ ಎರಡ್ಮೂರು ಕಡೆ ಊಟದ ವ್ಯವಸ್ಥೆ ಮಾಡಿರುತ್ತಾರೆ. ಹುಗ್ಗಿ, ಹೋಳಿಗೆ, ಅನ್ನ, ಸಾರು ಹೀಗೆ.. ಮೃಷ್ಟಾನ್ನ ಭೋಜನ ಉಣಬಡಿಸುತ್ತಾರೆ. ಹಣ್ಣು, ಬಿಸ್ಕತ್ತು ನೀಡುತ್ತಾರೆ. ಈಗ ಗೊಡಚಿಯಲ್ಲಿದ್ದು, ಮಾ.15 ಅಥವಾ 16ರಂದು ಶ್ರೀಶೈಲ ತಲುಪುತ್ತೇವೆ’ ಎನ್ನುತ್ತ ಪಯಣ ಮುಂದುವರಿಸಿದರು.

ಮುದಗಲ್ನಲ್ಲಿ ದಾಸೋಹ

ಬೆಳಗಾವಿ ಜಿಲ್ಲೆಯ ಮೂಡಲಗಿಯ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಅನ್ನದಾಸೋಹ ಸೇವಾ ಸಮಿತಿಯವರು ಸತತ ಮೂರನೇ ವರ್ಷ ರಾಯಚೂರು ಜಿಲ್ಲೆಯ ಮುದಗಲ್ನ ಸುಲ್ತಾನಪುರ ರಸ್ತೆಯಲ್ಲಿ ಐದು ದಿನ ದಾಸೋಹ ಏರ್ಪಡಿಸಿದ್ದಾರೆ.

‘ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಂದ ಬರುವ ಭಕ್ತರೆಲ್ಲ ಮುದಗಲ್ನಲ್ಲಿ ಸೇರುತ್ತಾರೆ. ಹಾಗಾಗಿ ಮಾರ್ಚ್ 4ರಿಂದ 8ರವರೆಗೆ 24x7 ಮಾದರಿಯಲ್ಲಿ ದಾಸೋಹ ಏರ್ಪಡಿಸಿದ್ದೇವೆ. ಬೆಳಿಗ್ಗೆ ಉಪಾಹಾರಕ್ಕೆ ಇಡ್ಲಿ, ಶಿರಾ–ಉಪ್ಪಿಟ್ಟು ನೀಡುತ್ತೇವೆ. ಅನ್ನ–ಸಾರಿನೊಂದಿಗೆ ಬೇಳೆ ಹುಗ್ಗಿ, ಶಾವಿಗೆ ಪಾಯಸ ಕೂಡ ಉಣಬಡಿಸುತ್ತೇವೆ. ಸುಮಾರು 45ರಿಂದ 50 ಮಂದಿ ಸೇರಿಕೊಂಡು ಈ ಸೇವೆ ಮಾಡುತ್ತಿದ್ದೇವೆ’ ಎಂದು ಸಮಿತಿ ಸದಸ್ಯ ಸುಭಾಷ ಅವಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.