ವಿಶ್ವ ಪಾರಂಪರಿಕ ತಾಣ ಹಂಪಿ ಇತಿಹಾಸದ ಗಟ್ಟಿ ನೆಲ. ಇಲ್ಲಿನ ಬಂಡೆಗಲ್ಲುಗಳು ನೋಡಲು ಎಷ್ಟು ಸುಂದರವೋ, ಈ ಬಂಡೆಗಳು ಕಂಡ ಇತಿಹಾಸವೂ ಅಷ್ಟೇ ರೋಚಕ. ಬಹುತೇಕ ಇಲ್ಲಿನ ಕಲ್ಲುಗಳನ್ನೇ ಬಳಸಿಕೊಂಡು ನಿರ್ಮಿಸಿದಂತಹ ಸ್ಮಾರಕಗಳು ಆರೇಳು ಶತಮಾನ ಕಳೆದ ಬಳಿಕವೂ ಜಗ್ಗದೆ, ಕುಗ್ಗದೆ ಉಳಿದಿವೆ ಎಂದರೆ ಈ ನೆಲದ ಗಟ್ಟಿತನ ಅರ್ಥವಾದೀತು. ಇಂತಹ ನೆಲದಲ್ಲಿ ಕಾಡಿಲ್ಲದಿದ್ದರೂ ನೂರಾರು ಆನೆಗಳು ಓಡಾಡಿಕೊಂಡಿದ್ದವು. ಶತ್ರು ಪಾಳಯದ ಎದೆಯಲ್ಲಿ ನಡುಕ ಹುಟ್ಟಿಸಿದ್ದವು. ಇಂದು ಆನೆಗಳ ಹಿಂಡು ಉಳಿದಿಲ್ಲ, ಇದ್ದ ಒಂದು ಆನೆ ‘ಲಕ್ಷ್ಮಿ’ಯೂ ಅನಾರೋಗ್ಯ ಕಾರಣಕ್ಕೆ ಕೋಲಾರದತ್ತ ತೆರಳಿದೆ. ಈ ಗಜಪಯಣ ಕಂಡು ನೂರಾರು ಹೃದಯಗಳು ಮಮ್ಮಲ ಮರುಗಿವೆ.

ಆನೆಗಳೆಂದರೆ ವಿಜಯನಗರದ ಆನೆ ಎಂಬಂತಹ ಮಾತು ಜಗತ್ತಿನ ನಾನಾ ಭಾಗಗಳಲ್ಲಿ ಒಂದು ಕಾಲದಲ್ಲಿ ಮನೆಮಾತಾಗಿತ್ತು. ವಿಜಯನಗರ ಸಾಮ್ರಾಜ್ಯದ ಮೇಲೆ ಆಕ್ರಮಣ ನಡೆದು, ಕೊಳ್ಳೆ ಹೊಡೆಯುತ್ತಿದ್ದಾಗ ಆನೆಗಳ ಮೇಲೆಯೇ ಅಪಾರ ಪ್ರಮಾಣದ ಚಿನ್ನ, ವಜ್ರ, ವೈಢೂರ್ಯಗಳನ್ನು ಹೇರಿ ಪೆನಗೊಂಡದತ್ತ ಸಾಗಿಸಲಾಯಿತು ಎಂಬ ಇತಿಹಾಸವೂ ಇದೆ. ‘ಕರಿಸಿರಿಯಾನ’ದಂತಹ ಕಾದಂಬರಿಗಳು ಇಂತಹ ಕತೆಯನ್ನು ಹೇಳುತ್ತಿದ್ದರೆ ವಿಜಯನಗರದ ಭವ್ಯ ಇತಿಹಾಸ ಕಣ್ಣ ಮುಂದೆ ಹಾದು ಹೋಗುತ್ತದೆ. ಕಣ್ಣು ತೇವಗೊಳ್ಳುತ್ತದೆ.

ಆನೆಗಳ ಸಾಲುಗಳ ಇತಿಹಾಸ ಮರೆಯಬೇಡಿ. ಈಗ ಇರುವ ಒಂದು ಆನೆಯನ್ನು ಇಲ್ಲಿಯೇ ಆರೈಕೆ ಮಾಡಿ, ನಮ್ಮ ಕಣ್ಣೆದುರಲ್ಲೇ ಅದು ಇರಬೇಕು ಎಂಬ ಜನರ ಕೂಗು ಅರಣ್ಯ ರೋದನವಾಗಿದೆ. ಮಾವುತ ರಾಜಣ್ಣ ಪರಿಪರಿಯಾಗಿ ಬೇಡಿಕೊಂಡರೂ ಅದಕ್ಕೂ ಬೆಲೆ ಸಿಗದಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಒಂದು ಬಾರಿ ಆನೆಯನ್ನು ದೇವಸ್ಥಾನದಿಂದ ಹೊರಗೆ ಕಳುಹಿಸಿದರೆ ಮತ್ತೆ ಅದನ್ನು ತರದೆ ಹೋಗಬಹುದು, ಹಾಗಾದರೆ ಹಂಪಿ ಮುಂದೆ ಶಾಶ್ವತವಾಗಿ ಆನೆ ಇಲ್ಲದ ಬರಡು ಊರಾಗಿಬಿಡುತ್ತದೆ ಎಂಬ ಆತಂಕ ಸ್ಥಳೀಯರದ್ದು. ಆದರೆ ಚಿಕಿತ್ಸೆ ಅನಿವಾರ್ಯ ಎಂಬ ತಜ್ಞ ವೈದ್ಯರ ಸಲಹೆಯನ್ನು ಒಪ್ಪಿ ಎಲ್ಲರೂ ಭಾರವಾದ ಮನಸ್ಸಿನಿಂದ ಆನೆಯನ್ನು ಬೀಳ್ಕೊಟ್ಟಿದ್ದಾರೆ. ಮೂರು ತಿಂಗಳ ಬಳಿಕ ಮತ್ತೆ ಲಕ್ಷ್ಮಿ ಹಂಪಿಗೆ ಬರುತ್ತಾಳೆ ಎಂಬ ಸಮಾಧಾನಪಟ್ಟುಕೊಂಡಿದ್ದಾರೆ.

ಲಕ್ಷ್ಮಿಗೆ ಏನಾಗಿತ್ತು: ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ 36 ವರ್ಷದ ಅನೆ ‘ಲಕ್ಷ್ಮಿ’ ಅನಾರೋಗ್ಯದಿಂದ ಬಳಲುತ್ತಿದೆ. ಅದರ ಅಂಗಾಲುಗಳಲ್ಲಿ ಬಿರುಕುಗಳು ಕಾಣಿಸಿವೆ. ಚರ್ಮದಲ್ಲಿ ಗಂಟುಗಳಿವೆ, ಹಿಂಭಾಗದಲ್ಲಿ ಗಡ್ಡೆಗಳಿವೆ. ಹೀಗಾಗಿ ಆನೆಗೆ ಚಿಕಿತ್ಸೆ ಬೇಕೇ ಬೇಕು ಎಂದು ವೈದ್ಯರು ಸಲಹೆ ನೀಡಿದ್ದರು. ಲಕ್ಷ್ಮಿಗೆ ವಿಶೇಷ ಆನೆ ಶಿಬಿರದಲ್ಲೇ ಚಿಕಿತ್ಸೆ ಕೊಡಿಸಬೇಕು ಎಂದೂ ವೈದ್ಯರು ಸೂಚಿಸಿದ್ದರು. ಹೀಗಾಗಿ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಲಕ್ಷ್ಮೀಪುರ ಆನೆ ಶಿಬಿರದ ವೈದ್ಯರನ್ನು ಜಿಲ್ಲಾಡಳಿತ ಸಂಪರ್ಕಿಸಿ ವಿಚಾರಿಸಿದಾಗ ಸೂಕ್ತ ಚಿಕಿತ್ಸೆ ನೀಡುವ ಭರವಸೆ ದೊರಕಿತ್ತು. ಅದರಂತೆ ಅಲ್ಲಿಂದ ವೈದ್ಯರು ಬಂದು ಪರಿಶೀಲಿಸಿ ಆನೆಯನ್ನು ಶೀಘ್ರ ಕಳುಹಿಸಿಕೊಡಲು ಸೂಚಿಸಿದ್ದರು. ಹೀಗಾಗಿ ಮೇ 27ರಂದು ನಸುಕಿನಲ್ಲಿ ಲಕ್ಷ್ಮಿಯನ್ನು ಕೋಲಾರದತ್ತ ಕಳುಹಿಸಿಕೊಡಲಾಯಿತು.

ಭಾವುಕ ಕ್ಷಣ: ಲಕ್ಷ್ಮಿ ಹಂಪಿಯ ಕಣ್ಮಣಿ. ಇಲ್ಲಿ ಅದು ಸುಮಾರು 32 ವರ್ಷಗಳಿಂದಲೂ ಇದೆ. ಮರಿಯಾನೆ 5 ವರ್ಷವಿದ್ದಾಗ ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿಯಿಂದ ಇಲ್ಲಿಗೆ ತರಲಾಗಿತ್ತು. ಅಂದಿನಿಂದಲೂ ಇದರ ಮಾವುತ ಆಗಿದ್ದವರು ರಾಜಣ್ಣ. ಅವರು ಇದಕ್ಕೆ ಮೊದಲು ಇದ್ದ ಆನೆಯನ್ನೂ ಸುಮಾರು ನಾಲ್ಕೈದು ವರ್ಷ ನೋಡಿಕೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅದು ಸಕ್ರೆಬೈಲ್ ಆನೆ ಶಿಬಿರದಲ್ಲಿ ಮೃತಪಟ್ಟ ಬಳಿಕ ಈ ಆನೆ ಮರಿಯನ್ನು ತರಲಾಗಿತ್ತು.

ಆನೆ ಬೆಳೆಯತ್ತ ಬೆಳೆಯುತ್ತ ಹಂಪಿಯ ಆಕರ್ಷಣೆಯ ಕೇಂದ್ರವಾಗಿತ್ತು. ನಿತ್ಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವುದು, ದೇವಸ್ಥಾನದಲ್ಲಿ ನಡೆಯುವ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುವುದು, ಭಕ್ತರಿಗೆ ಸೊಂಡಿಲಿನಿಂದ ಆಶೀರ್ವಾದ ಮಾಡುವುದು ಇದರ ದಿನಚರಿ. ಜಿಲ್ಲೆಯ ಕೆಲವೆಡೆ, ಹೊರಜಿಲ್ಲೆಯ ಕೆಲವೆಡೆ ನಡೆಯುತ್ತಿದ್ದ ಜಾತ್ರೆ, ಉತ್ಸವಗಳಲ್ಲಿ ಈ ಲಕ್ಷ್ಮಿಯೇ ಪ್ರಧಾನ ಆಕರ್ಷಣೆಯಾಗಿತ್ತು. ಹಂಪಿ ಉತ್ಸವದ ಸಂದರ್ಭದಲ್ಲಿ ಹೊಸಪೇಟೆಯಲ್ಲಿ ವಸಂತೋತ್ಸವ ಎಂಬ ಜಾನಪದ ಜಾಥಾ ನಡೆಯುತ್ತದೆ. ಅಲ್ಲಿ ಲಕ್ಷ್ಮಿ ಆನೆಯ ಮೇಲೆ ಅಂಬಾರಿ ಇಟ್ಟು, ಅದರಲ್ಲಿ ತಾಯಿ ಭುವನೇಶ್ವರಿಯ ಉತ್ಸವ ಮೂರ್ತಿಯನ್ನು ಇಟ್ಟು ಮೆರವಣಿಗೆ ನಡೆಸಲಾಗುತ್ತಿತ್ತು. ಪ್ರತಿ ವರ್ಷ ಈ ಜಂಬೂಸವಾರಿ ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಇದೇ ರೀತಿ ಬೆಂಗಳೂರು ಸಹಿತ ಹಲವಾರು ಜಿಲ್ಲೆಗಳಲ್ಲಿ ಲಕ್ಷ್ಮಿ ಉತ್ಸವಗಳಲ್ಲಿ ಪಾಲ್ಗೊಂಡಿದೆ. ಒಂದು ಉತ್ಸವದಲ್ಲಿ ಪಾಲ್ಗೊಂಡರೆ ಈ ಲಕ್ಷ್ಮಿಗಾಗಿ ಉತ್ಸವದ ಸಂಘಟಕರು ದೇವಸ್ಥಾನಕ್ಕೆ ₹50 ಸಾವಿರ ಶುಲ್ಕ ಪಾವತಿಸಬೇಕು. ಹೀಗೆ ವರ್ಷದಲ್ಲಿ 15ಕ್ಕೂ ಅಧಿಕ ಉತ್ಸವಗಳಲ್ಲಿ ಲಕ್ಷ್ಮಿ ಪಾಲ್ಗೊಳ್ಳುತ್ತಿತ್ತು. ಆ ಮೂಲಕ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಏಳೆಂಟು ಲಕ್ಷ ರೂಪಾಯಿ ಆದಾಯವನ್ನು ತಂದುಕೊಡುತ್ತಿತ್ತು. ಉಳಿದ ದಿನಗಳಲ್ಲಿ ಲಕ್ಷ್ಮಿ ಹಂಪಿಯ ಕಣ್ಮಣಿಯಾಗಿತ್ತು.

ಆದರೆ ಹಂಪಿಯಲ್ಲಿ ಲಕ್ಷ್ಮಿ ಬಹುತೇಕ ಕಲ್ಲು ಚಪ್ಪಡಿಯ ಮೇಲೆಯೇ ನಿಲ್ಲಬೇಕಾದ, ಮಲಗಬೇಕಾದ ಸ್ಥಿತಿ ಇತ್ತು. ಇದರಿಂದ ಅದರ ಕಾಲುಗಳು ಬಿರುಕು ಬಿಟ್ಟಿದ್ದವು. ಮೈಮೇಲೆ ಗಂಟುಗಳು ಕಾಣಿಸಿದ್ದವು. ಕೆಲವೊಮ್ಮೆ ಭಕ್ತರು ನೀಡುತ್ತಿದ್ದ ಬಾಳೆಹಣ್ಣು ತಿಂದು (ರಾಸಾಯನಿಕ ಸಿಂಪಡಿಸಿದ ಬಾಳೆಹಣ್ಣಿನ ಸಿಪ್ಪೆ ತಿಂದರೆ ಹೊಟ್ಟೆಯಲ್ಲಿ ತೊಂದರೆ) ಅನಾರೋಗ್ಯಕ್ಕೆ ಒಳಗಾದುದು ಸಹ ಇದೆ. ಅದಕ್ಕಾಗಿ ಬಾಳೆಹಣ್ಣು ಚೀಲವನ್ನು ದೇವಸ್ಥಾನದೊಳಗೆ ತರಲೇಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಭಕ್ತರ ಬ್ಯಾಗ್, ಚೀಲ ತಪಾಸಣೆ ಮಾಡಿಯೇ ಒಳಗೆ ಬಿಡುತ್ತಿದ್ದ ಪ್ರಸಂಗವೂ ನಡೆದಿತ್ತು.

‘ಆನೆಯೊಂದಿಗೆ ನಮ್ಮ ಬಾಂಧವ್ಯ ಎಂತಹದ್ದು ಎಂದು ವಿವರಿಸಿ ಹೇಳಲು ಸಾಧ್ಯವೇ ಇಲ್ಲ. ಅದು ನನ್ನ ಮಾತನ್ನು, ನನ್ನ ಮೊಮ್ಮಗ ಭುವನ್ ಮತ್ತು ನನ್ನ ಕುಟುಂಬದ ಒಂದಿಬ್ಬರ ಮಾತನ್ನಷ್ಟೇ ಕೇಳುತ್ತದೆ. ಸಾಮಾನ್ಯವಾಗಿ ಮಾವುತರ ಮಾತನ್ನಷ್ಟೇ ಆನೆಗಳು ಕೇಳುವಂತೆ ಲಕ್ಷ್ಮಿ ಸಹ ಅದೇ ರೀತಿಯಲ್ಲಿ ಬೆಳೆದು ಬಂದಿತ್ತು. ಅದು ಒಂದು ದಿನವೂ ನನ್ನನ್ನು ತುಳಿದುದು, ನನಗೆ ಸೊಂಡಿಲಲ್ಲಿ ಹೊಡೆದುದು ಇಲ್ಲವೇ ಇಲ್ಲ. ಅದರ ಆರೈಕೆಯಲ್ಲಿ, ಅದರ ಸಾಂಗತ್ಯದಲ್ಲಿ ನಾನು ನನ್ನನ್ನೇ ಕಳೆದು ಹೋಗುತ್ತಿದ್ದೆ. ನಿಜಕ್ಕೂ ಅದರಷ್ಟು ಸೌಮ್ಯ ಸ್ವಭಾವದ ಆನೆ ಹೆಚ್ಚಿನ ಸಂಖ್ಯೆಯಲ್ಲಿ ಇರಲಾರದು ಎಂದೇ ನನ್ನ ಭಾವನೆ. ಇಂತಹ ಆನೆಯನ್ನು ಹಂಪಿಯಿಂದ ದೂರ ಕಳುಹಿಸುವಾಗ ಬೇಸರ ಆಗದೆ ಇರುತ್ತದೆಯೇ?’ ಎಂದು ಭಾವುಕರಾಗಿ ಕೇಳುತ್ತಾರೆ ಆನೆಯ ಮಾವುತ ರಾಜಣ್ಣ.

ಸದ್ಯ ರಾಜಣ್ಣ ಅವರು ಆನೆಯ ಜತೆಯಲ್ಲಿ ಲಕ್ಷ್ಮೀಪುರದ ಆನೆ ಶಿಬಿರದಲ್ಲೇ ಉಳಿದುಕೊಂಡಿದ್ದಾರೆ. ಆನೆಗೆ ಅಲ್ಲಿ ಮಣ್ಣಿನ ನೆಲ ಸಿಕ್ಕಿದೆ, ತನ್ನಂತ ಆರೇಳು ಆನೆಗಳು ಅಲ್ಲಿ ಇರುವುದನ್ನು ಅದು ಗಮನಿಸಿದೆ. ಚಿಕಿತ್ಸೆಗೆ ಸ್ಪಂದಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಹಂಪಿಯ ಜನ ಅದನ್ನೇ ನಿರೀಕ್ಷಿಸುತ್ತಿದ್ದಾರೆ.

ಹಂಪಿಯ ಆನೆ ಇತಿಹಾಸ

ವಿಜಯನಗರದ ಅರಸರ ಕಾಲದಲ್ಲಿ ಇಲ್ಲಿನ ಗಜಪಡೆ ಬಹಳ ಖ್ಯಾತಿ ಗಳಿಸಿತ್ತು. ಎಲ್ಲ ರಾಜವಂಶದವರು ಪ್ರಬಲವಾದ ಗಜಪಡೆಯನ್ನು (ಆನೆಗಳ ಸೈನ್ಯ) ಹೊಂದಿದ್ದರು. ಯುದ್ಧಗಳಲ್ಲಿ ಶತ್ರುಗಳ ಕೋಟೆಗಳನ್ನು ಧ್ವಂಸಗೊಳಿಸಲು, ಭಾರವಾದ ಆಯುಧಗಳನ್ನು ಹೊರಲು ಮತ್ತು ಶತ್ರು ಸೈನ್ಯವನ್ನು ಚದುರಿಸಲು ಆನೆಗಳನ್ನು ಬಳಸಲಾಗುತ್ತಿತ್ತು. ಆನೆಗಳು ನೂರಾರು ಸಂಖ್ಯೆಯಲ್ಲಿ ಇದ್ದವು ಎಂಬುದನ್ನು ಇತಿಹಾಸದ ಪುಟಗಳು ಹೇಳುತ್ತವೆ.

ಹಂಪಿಯ ಪ್ರಮುಖ ಆಕರ್ಷಣೆಗಳಲ್ಲಿ 'ಆನೆ ಲಾಯ' ಸಹ ಒಂದು. ಇಲ್ಲಿ ಹತ್ತಾರು ಆನೆಗಳನ್ನು ಕಟ್ಟಿ ಹಾಕಲಾಗುತ್ತಿತ್ತು ಎಂಬ ಇತಿಹಾಸ ಇಲ್ಲಿಗೆ ಭೇಟಿ ನೀಡಿದ ಎಲ್ಲರಿಗೂ ತಿಳಿಸುವ ಸಂಗತಿ. ಆನೆಗಳಿಗೆ ಆಸರೆ ನೀಡಿದ ತಾಣ ಇಂದಿಗೂ ಜಗ್ಗದೆ, ಕುಗ್ಗದೆ ಉಳಿದಿದೆ. ಹಾಗಿದ್ದರೆ ಗಜಪಡೆಗೆ ರಾಜರು ಎಂತಹ ಸ್ಥಾನಮಾನ ನೀಡಿದ್ದರು ಎಂಬುದನ್ನೂ ತಿಳಿಯಲು ಸಾಧ್ಯವಿದೆ.

ಆನೆಲಾಯ ಎಂಬುದು ರಾಜಮನೆತನದ ಆನೆಗಳನ್ನು ಕಟ್ಟಲು ಬಳಸುತ್ತಿದ್ದ ಭವ್ಯವಾದ ಕಟ್ಟಡ. ಇಲ್ಲಿ ಒಟ್ಟು 11 ದೊಡ್ಡ ಗುಮ್ಮಟಾಕಾರದ ಕೋಣೆಗಳಿವೆ. ಇವುಗಳನ್ನು ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪ್ರತಿಯೊಂದು ಕೋಣೆಯೂ ವಿಶಾಲವಾಗಿದ್ದು, ಆನೆಗಳನ್ನು ಸರಪಳಿಯಿಂದ ಕಟ್ಟಲು ಅಳವಡಿಸಲಾಗಿದ್ದ ದೊಡ್ಡ ಕೊಂಡಿಗಳನ್ನು ಇಂದಿಗೂ ಇಲ್ಲಿ ಕಾಣಬಹುದು.

ಮೈಸೂರು ದಸರಾ ಇಂದು ಜಗದ್ವಿಖ್ಯಾತ. ಆದರೆ ಈ ದಸರಾ ಮೆರವಣಿಗೆ ಮೊದಲು ಆರಂಭವಾದುದು ಹಂಪಿಯಲ್ಲಿ ಎಂಬುದಕ್ಕೆ ಇತಿಹಾಸದ ಹಲವು ಪುರಾವೆಗಳು ಸಾಕ್ಷಿ ಹೇಳುತ್ತಿವೆ. ದಸರಾ (ನವರಾತ್ರಿ) ಹಬ್ಬದ ಸಮಯದಲ್ಲಿ ಆನೆಗಳನ್ನು ಚಿನ್ನ, ಬೆಳ್ಳಿ ಮತ್ತು ರೇಷ್ಮೆ ಬಟ್ಟೆಗಳಿಂದ ಅಲಂಕರಿಸಿ ವೈಭವದ ಮೆರವಣಿಗೆ ನಡೆಸಲಾಗುತ್ತಿತ್ತು. ರಾಜರು ಆನೆಯ ಮೇಲಿರುವ ಅಂಬಾರಿಯಲ್ಲಿ ಕುಳಿತು ಪ್ರಜೆಗಳಿಗೆ ದರ್ಶನ ನೀಡುತ್ತಿದ್ದರು. ಮಹಾನವಮಿ ದಿಬ್ಬದ ಮೇಲೆ ಕುಳಿತುಕೊಳ್ಳುವ ರಾಜ ಮತ್ತು ಅವರ ಪರಿವಾರದವರು ಆನೆಗಳ ಭವ್ಯ ಮೆರವಣೆಯನ್ನು ಕಣ್ತುಂಬಿಕೊಳ್ಳುತ್ತಿದ್ದರು.

ಶಿಲ್ಪಕಲೆಗಳಲ್ಲಿ ಆನೆಗಳು: ಹಂಪಿಯ ವಿರೂಪಾಕ್ಷ ದೇವಸ್ಥಾನ, ಹಜಾರ ರಾಮ ದೇವಸ್ಥಾನ ಮತ್ತು ವಿಜಯವಿಠ್ಠಲ ದೇವಸ್ಥಾನದ ಗೋಡೆಗಳ ಮೇಲೆ ಆನೆಗಳ ಸುಂದರವಾದ ಕೆತ್ತನೆಗಳನ್ನು ಕಾಣಬಹುದು. ಯುದ್ಧದ ದೃಶ್ಯಗಳು, ಸಾಂಸ್ಕೃತಿಕ ಮೆರವಣಿಗೆಗಳು ಮತ್ತು ಆನೆಗಳ ಸೌಂದರ್ಯವನ್ನು ಕಲ್ಲಿನಲ್ಲಿ ಸುಂದರವಾಗಿ ಕೆತ್ತಲಾಗಿದೆ. ರಾಮಾಯಣದ ಕಥೆಗಳನ್ನು ಬಿಂಬಿಸುವ ಕೆತ್ತನೆಗಳಲ್ಲೂ ಆನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ.

ಹಂಪಿಯಲ್ಲಿ ನೂರಾರು ಆನೆಗಳು ಬಿಟ್ಟುಹೋದ ಹೆಜ್ಜೆ ಗುರುತುಗಳು ಇಂದು ಅಷ್ಟಾಗಿ ಕಾಣಿಸದೆ ಇರಬಹುದು. ಆದರೆ ಆ ಪರಂಪರೆಯ ಕೊಂಡಿಯಂತೆ ಇರುವ ‘ಲಕ್ಷ್ಮಿ’ ಮತ್ತೆ ಹಂಪಿಗೆ ಬರಬೇಕು, ಗುಣಮುಖವಾಗಲಿರುವ ಅದನ್ನು ಹಂಪಿಯಲ್ಲಿ ಮತ್ತೆ ಯೋಗ್ಯ, ಆರೋಗ್ಯಕರ ಮಣ್ಣಿನ ಆವರಣದಲ್ಲಿ ಉಳಿಸಬೇಕು, ಮೂರು ತಿಂಗಳಲ್ಲಿ ಮತ್ತೆ ಲಕ್ಷ್ಮಿಯನ್ನು ನೋಡುವ ಅವಕಾಶ ನಮಗೆ ಸಿಗಬೇಕು ಎಂಬುದು ಇಲ್ಲಿನ ಸಾವಿರಾರು ಜನರ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.