ಚಾಮರಾಜನಗರ: ಬಂಡೀಪುರ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿ ಧಾಮಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಮಾನವ–ಪ್ರಾಣಿ ಸಂಘರ್ಷ ಮಿತಿ ಮೀರಿದೆ.

ಆಹಾರ ಅರಸಿ ನಾಡಿನತ್ತ ಮುಖ ಮಾಡುತ್ತಿರುವ ವನ್ಯಜೀವಿಗಳು ಜನ–ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ. ಜಾನುವಾರು ಹತ್ಯೆಗೆ ಪ್ರತೀಕಾರವಾಗಿ ವನ್ಯಜೀವಿಗಳಿಗೆ ವಿಷವಿಕ್ಕಿ ಕೊಲ್ಲುವಂತಹ ಕೃತ್ಯಗಳು ಅಲ್ಲಲ್ಲಿ ನಡೆಯುತ್ತಿವೆ.

ಬೆಳೆ ನಾಶ, ಕಾಡುಪ್ರಾಣಿಗಳ ಉಪಟಳ, ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ವಿಳಂಬ ಪರಿಣಾಮ ಕಾಡಂಚಿನ ಜನರು ಹಾಗೂ ಅರಣ್ಯ ಇಲಾಖೆ ನಡುವೆ ದೊಡ್ಡ ಕಂದಕ ನಿರ್ಮಾಣವಾಗಿದೆ. ದಶಕಗಳ ಹಿಂದೆ ವನ್ಯಜೀವಿಗಳ ಜೊತೆ ಸಹಬಾಳ್ವೆ ನಡೆಸುತ್ತಿದ್ದ ಕಾಡಂಚಿನ ನಿವಾಸಿಗಳು ಭೀತಿಯಲ್ಲಿ ಬದುಕಬೇಕಾದ ಪರಿಸ್ಥಿತಿಗೆ ತಲುಪಿದ್ದಾರೆ.

ಅಂಕಿ ಅಂಶಗಳು:

ಅರಣ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ 2023–24ನೇ ಸಾಲಿನಲ್ಲಿ ಜಿಲ್ಲೆಯ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ 2,778 ಬೆಳೆ ನಾಶ ಪ್ರಕರಣಗಳು ವರದಿಯಾಗಿವೆ.

ಕಾಡುಪ್ರಾಣಿಗಳ ದಾಳಿಯಿಂದ 406 ಜಾನುವಾರು ಮೃತಪಟ್ಟಿವೆ. 13 ಜನರು ಬಲಿಯಾಗಿದ್ದಾರೆ. ಒಬ್ಬರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. 32 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 23 ಕಡೆಗಳಲ್ಲಿ ಜನರ ಆಸ್ತಿಗೆ ನಷ್ಟವಾಗಿದೆ.

ಅದೇ ರೀತಿ 2024–25ನೇ ಸಾಲಿನಲ್ಲಿ 1881 ಬೆಳೆನಾಶ ಪ್ರಕರಣ, 414 ಜಾನುವಾರು ಸಾವು, ಐವರು ವನ್ಯಜೀವಿಗಳ ದಾಳಿಗೆ ಮರಣ ಹೊಂದಿದ್ದಾರೆ. ಇಬ್ಬರು ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗಿದ್ದಾರೆ, 17 ಮಂದಿ ಗಾಯಗೊಂಡಿದ್ದಾರೆ. 28 ಕಡೆಗಳಲ್ಲಿ ಆಸ್ತಿಗಳು ನಾಶವಾಗಿವೆ.

2025–26ನೇ ಸಾಲಿನಲ್ಲಿ (ಫೆ.28ರವರೆಗಿನ ಮಾಹಿತಿ) ವನ್ಯಜೀವಿಗಳ ದಾಳಿಗೆ ಬರೋಬ್ಬರಿ 2821 ಬೆಳೆ ನಷ್ಟ ಪ್ರಕರಣಗಳು ನಡೆದಿದ್ದು 534 ಜಾನುವಾರು ಬಲಿಯಾಗಿವೆ, ಆರು ಮಂದಿ ಮೃತಪಟ್ಟು 24 ಮಂದಿ ಗಾಯಗೊಂಡಿದ್ದಾರೆ. 24 ಕಡೆಗಳಲ್ಲಿ ಆಸ್ತಿ ನಷ್ಟ ಘಟನೆಗಳು ನಡೆದಿವೆ.

2023–24, 2024–25ನೇ ಸಾಲಿನ ಅಂಕಿ ಅಂಶಗಳಿಗೆ ಹೋಲಿಕೆ ಮಾಡಿದರೆ 2025–26ನೇ ಸಾಲಿನಲ್ಲಿ ಬೆಳೆ ನಾಶ ಹಾಗೂ ಜಾನುವಾರು ಸಾವು ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದ್ದು ಜಿಲ್ಲೆಯಲ್ಲಿ ಮಾನವ ಪ್ರಾಣಿ ಸಂಘರ್ಷ ಮಿತಿಮೀರಿರುವುದಕ್ಕೆ ನಿದರ್ಶನವಾಗಿದೆ.ರೈತರ ಬೆಳೆ ನಾಶಕ್ಕೆ ಅರಣ್ಯ ಇಲಾಖೆ ಪರಿಹಾರ ವಿತರಿಸುತ್ತಿದ್ದರೂ ವೈಜ್ಞಾನಿಕ ಪರಿಹಾರ ನಿಗದಿಮಾಡಿಲ್ಲ. ಬಿತ್ತನೆ ಬೀಜ, ನಾಟಿ, ರಸಗೊಬ್ಬರ, ಕೂಲಿ, ನಿರ್ವಹಣೆ ಖರ್ಚು ಲೆಕ್ಕ ಹಾಕಿದರೆ ಸರ್ಕಾರ ನೀಡುತ್ತಿರುವುದು ಬಿಡುಗಾಸು ಪರಿಹಾರವಷ್ಟೆ ಎನ್ನುತ್ತಾರೆ ರೈತರು.

ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣ:

ಪ್ರಾಣಿಗಳ ಆವಾಸದೊಳಗೆ ಅತಿಕ್ರಮ ಪ್ರವೇಶ, ಕಾಡಿನೊಳಗೆ ಪ್ರಾಣಿಗಳ ಗಣನೀಯ ಹೆಚ್ಚಳ, ಗಡಿಗಾಗಿ ವನ್ಯಜೀವಿಗಳ ಕಾದಾಟ, ಮೇವಿನ ಕೊರತೆ, ನೀರಿನ ಅಲಭ್ಯತೆ, ಸಫಾರಿ ಹೀಗೆ ಹಲವು ವಿಚಾರಗಳು ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಲು ಕಾರಣ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಮಿತಿಮೀರಿದ ಕಳೆ:
ಲಂಟಾನಾ, ಇಪೊಟೋರಿಯಂನಂತಹ ಆಕ್ರಮಣಕಾರಿ ಕಳೆ ಸಸ್ಯಗಳು ಅರಣ್ಯದೊಳಗೆ ಹಬ್ಬುತ್ತಿದ್ದು ಸ್ಥಳೀಯವಾಗಿ ಬೆಳೆಯುವ ಹುಲ್ಲಿನ ಪ್ರಬೇಧಗಳು ಹಾಗೂ ಬಿದಿರಿನ ಸಸ್ಯಗಳನ್ನು ನಾಶ ಮಾಡುತ್ತಿವೆ. ಪರಿಣಾಮ ಸಸ್ಯಹಾರಿ ಪ್ರಾಣಿಗಳಿಗೆ ಮೇವಿನ ಕೊರತೆ ಎದುರಾಗಿದ್ದು ಕಾಡಂಚಿನ ಜಮೀನುಗಳ ಮೇಲೆ ದಾಳಿ ನಡೆಸಿ ಫಸಲನ್ನು ತಿಂದು ಹಾಕುತ್ತಿವೆ. ಕಾಡಿನೊಳಗೆ ಬಲಿಪ್ರಾಣಿಗಳ ಕೊರತೆ ಎದುರಾಗಿರುವುದರಿಂದ ಮಾಂಸಹಾರಿ ಪ್ರಾಣಿಗಳಾದ ಹುಲಿ, ಚಿರತೆಗಳು ಕಾಡಂಚಿನ ಗ್ರಾಮಗಳತ್ತ ನುಗ್ಗುತ್ತಿವೆ. ಮನೆಯ ಮುಂದೆ ಕಟ್ಟಿರುವ ನಾಯಿಗಳು, ಕೊಟ್ಟಿಗೆಯಲ್ಲಿ ಕಟ್ಟಿರುವ ಹಸು, ಕರು, ಮೇಕೆಗಳನ್ನು ಕೊಂದು ತಿಂದು ಹಾಕುತ್ತಿವೆ. ಸುಲಭವಾಗಿ ಬೇಟೆಗಳು ಸಿಗುವ ಕಾರಣಕ್ಕೆ ಪ್ರಾಣಿಗಳು ನಾಡಿಗೆ ನುಗ್ಗುವುದನ್ನು ರೂಢಿಸಿಕೊಂಡಿವೆ ಎನ್ನುತ್ತಾರೆ ಸ್ಥಳೀಯರು.

ಬದಲಾದ ಕೃಷಿ ಪದ್ಧತಿ:
ಕಾಡಂಚಿನಲ್ಲಿ ಹೆಚ್ಚುತ್ತಿರುವ ಕೃಷಿ ಚಟುವಟಿಕೆಗಳು ಹಾಗೂ ಬದಲಾದ ಬೆಳೆ ಪದ್ಧತಿಯಿಂದ ಪ್ರಾಣಿಗಳು ನಾಡಿನತ್ತ ಲಗ್ಗೆ ಇಡುತ್ತಿದ್ದು ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿದೆ. ಹಿಂದೆಲ್ಲ ಕಾಡಂಚಿನ ಜಮೀನುಗಳಲ್ಲಿ ಮಳೆ ಆಧಾರಿತವಾಗಿ ಬೆಳೆ ಬೆಳೆಯುವ ಪದ್ಧತಿ ಇತ್ತು. ಈಚೆಗೆ ಆಧುನಿಕ ಕೃಷಿ ಪದ್ಧತಿಗೆ ಒಗ್ಗಿಕೊಂಡಿರುವ ರೈತರು ಬೆಳೆ ಪದ್ಧತಿ ಬದಲಾಯಿಸಿದ್ದು ವರ್ಷಪೂರ್ತಿ ತರಕಾರಿ, ಹಣ್ಣು ಸಹಿತ ವನ್ಯಜೀವಿಗಳನ್ನು ಆಕರ್ಷಿಸುವಂತಹ ಆಹಾರ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಬದಲಾದ ಬೆಳೆ ಪದ್ಧತಿಯೂ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಲು ಪ್ರಮುಖ ಕಾರಣ. ಕಾಡಂಚಿನ ಕೃಷಿ ಜಮೀನುಗಳು ಫಾರ್ಮ್ ಹೌಸ್, ತೋಟಗಳಾಗಿ ಬದಲಾಗುತ್ತಿವೆ, ವಾಣಿಜ್ಯ ಬೆಳೆಗಳ ಕ್ಷೇತ್ರ ವಿಸ್ತಾರವಾಗುತ್ತಿದೆ, ಜಮೀನಿನೊಳಗೆ ಪ್ರಾಣಿಗಳ ನೀರಡಿಕೆ ತಣಿಸಲು ಪೂರಕವಾಗಿ ನೀರಿನ ಮೂಲಗಳು ಲಭ್ಯವಾಗುತ್ತಿರುವುದು ಕೂಡ ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಕಾಡುಪ್ರಾಣಿಗಳಿಗೆ ನಿರ್ದಿಷ್ಟ ಗಡಿ ಇರುವುದಿಲ್ಲ, ಆಹಾರಕ್ಕಾಗಿ ಕಾಡಾಗಲಿ, ನಾಡಾಗಲಿ ನುಗ್ಗುತ್ತವೆ. ಜಿಲ್ಲೆಯಲ್ಲಿ ವಿಶಾಲವಾದ ಆನೆ ಕಾರಿಡಾರ್ ಇದ್ದು ಬೇಸಗೆಯಲ್ಲಿ ಆನೆಗಳು ಬಂಡೀಪುರ ಅರಣ್ಯದಿಂದ ಕಬಿನಿ ಹಿನ್ನೀರಿನವರೆಗೂ ಆಹಾರ ಹಾಗೂ ನೀರು ಅರಸಿ ಹೋಗುತ್ತವೆ. ಹೀಗೆ ಹೀಗೆ ಸಾಗುವಾಗ ಕಾಡಂಚಿನಲ್ಲಿರುವ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ತಿಂದು ಹಾಕುತ್ತಿರುವುದು ಸಮಸ್ಯೆಗೆ ಕಾರಣ ಎನ್ನುತ್ತಾರೆ ಅಧಿಕಾರಿಗಳು.

ಸಫಾರಿ ಕಾರಣವೇ ?:
ಸಫಾರಿ ಹೆಸರಿನಲ್ಲಿ ಕಾಡಿನೊಳಗೆ ಮಿತಿ ಮೀರಿ ವಾಹನಗಳು ಸಂಚರಿಸುತ್ತಿರುವುದು ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗಲು ಕಾರಣ ಎಂಬುದು ರೈತರ ಆರೋಪ. ಆದಾಯ ಹೆಚ್ಚಿಕೊಳ್ಳುವ ಸಲುವಾಗಿ ಅರಣ್ಯ ಇಲಾಖೆ ಸಫಾರಿ ಹೆಸರಿನಲ್ಲಿ ಕಾಡಿನೊಳಗೆ ನೂರಾರು ಪ್ರವಾಸಿಗರನ್ನು ಕರೆದುಕೊಂಡು ಹೋಗುವುದರಿಂದ ವನ್ಯಪ್ರಾಣಿಗಳ ಸ್ವಚ್ಛಂದ ಓಡಾಟಕ್ಕೆ ಅಡ್ಡಿಯುಂಟಾಗಿ ಕಾಡಿನಿಂದ ನಾಡಿನತ್ತ ಬರುತ್ತಿವೆ. ಇದು ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್.

ಹನೂರು ಹೈರಾಣ:

ಜಿಲ್ಲೆಯಲ್ಲಿ ಮಾನವ ವನ್ಯಜೀವಿ ಸಂಘರ್ಷದಿಂದ ಹೆಚ್ಚು ಬಾಧಿತವಾಗಿರುವುದು ಹನೂರು ತಾಲ್ಲೂಕು. ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳನ್ನು ಒಡಲೊಳಗೆ ಇರಿಸಿಕೊಂಡಿರುವ ತಾಲ್ಲೂಕಿನಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಮಿತಿಮೀರಿದಿದೆ. ಕಾಡು ಪ್ರಾಣಿಗಳ ಉಪಟಳ ಇಲ್ಲಿನ ರೈತರು ಹಾಗೂ ಕಾಡಂಚಿನ ಗ್ರಾಮಗಳ ಜನರನ್ನು ಹೈರಾಣಾಗಿಸಿದೆ.

ತಾಲ್ಲೂಕಿನಲ್ಲಿ ಒಟ್ಟು ಭೂಭಾಗದ ಶೇ 60ರಷ್ಟು ಅರಣ್ಯ ಇದೆ. ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳ ಸುತ್ತಲೂ ಹಳ್ಳಿಗಳು ಇವೆ. ಹಿಂದೆ ಕಾಡಿನೊಂದಿಗೆ ಸಹಜೀವನ ನಡೆಸುತ್ತಿದ್ದ ಜನರ ಬದುಕೀಗೆ ಅಯೋಮಯವಾಗಿದೆ. ಕೃಷಿ ಹಾಗೂ ಜಾನುವಾರು ಸಾಕಾಣಿಕೆ ಕಾಡಂಚಿನ ಬಹುತೇಕ ಜನರ ಜೀವನಾಧಾರ. ಮಾನವ ಪ್ರಾಣಿ ಸಂಘರ್ಷಕ್ಕೆ ಕುಲಕಸುಬು ತೊರೆಯಬೇಕಾದ ಸ್ಥಿತಿಗೆ ಇಲ್ಲಿನ ಜನರು ತಲುಪಿದ್ದಾರೆ.

ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಗೆ ಪಿ.ಜಿ ಪಾಳ್ಯ, ಹೂಗ್ಯಂ, ರಾಮಾಪುರ ಹಾಗೂ ಪಾಲಾರ್ ವನ್ಯಜೀವಿ ವಲಯಗಳು ಒಳಪಟ್ಟಿದ್ದು ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿವೆ. ಕೊಳ್ಳೇಗಾಲ ಬಫರ್, ಹನೂರು ಬಫರ್ ಹಾಗೂ ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ವಲಯಗಳ ವ್ಯಾಪ್ತಿಗೆ ಹೊಂದಿಕೊಂಡತೆ ಬಹಳಷ್ಟು ಗ್ರಾಮಗಳಿವೆ.

ಕಾವೇರಿ ವನ್ಯಧಾಮ ವ್ಯಾಪ್ತಿಯಲ್ಲಿ ಹನೂರು ಉಪ ವಿಭಾಗದ ಕೊತ್ತನೂರು, ಹನೂರು, ಕೌದಳ್ಳಿ , ಗೋಪಿನಾಥಂ ಕನಕಪುರ ಉಪ ವಿಭಾಗದ ಮುಗ್ಗೂರು, ಹಲಗೂರು ಹಾಗೂ ಸಂಗಮ ವಲಯಗಳು ಬರಲಿದ್ದು ಇಲ್ಲಿಯೂ ಹಲವು ಗ್ರಾಮಗಳಿವೆ. ಹಿಂದೆಲ್ಲ ಬೇಸಗೆ ಸಮಯದಲ್ಲಿ ಮಾತ್ರ ಕಾಡುಪ್ರಾಣಿಗಳು ವಿಶೇಷವಾಗಿ ಆನೆಗಳು ರೈತರ ಜಮೀನು ಹಾಗೂ ಗ್ರಾಮಗಳತ್ತ ಬರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ನಿತ್ಯ ಪ್ರಾಣಿಗಳ ಉಪಟಳ ಶುರುವಾಗಿದೆ.

2015ರಿಂದ 2017ವರೆಗೆ ಒಡೆಯರಪಾಳ್ಯ, ಬೈಲೂರು, ಹುತ್ತೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ 15ಕ್ಕೂ ಹೆಚ್ಚು ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ರೈತರು ಫಸಲು ರಕ್ಷಣೆ ಮಾಡಿಕೊಳ್ಳುವುದೇ ಸವಾಲಾಗಿದೆ. ಪ್ರಾಣ ಒತ್ತೆಯಿಟ್ಟು ಬೆಳೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಒಡೆಯರಪಾಳ್ಯ ಗ್ರಾಮದ ಮಹಾದೇವಸ್ವಾಮಿ.

ಪ್ರತೀಕಾರದ ಹತ್ಯೆ:

ಮಲೆಮಹದೇಶ್ವರ ವನ್ಯಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಹಸುವನ್ನು ಹುಲಿ ಕೊಂದು ಹಾಕಿತು ಎಂಬ ಕಾರಣಕ್ಕೆ ಜಾನುವಾರು ಕಳೆಬರಕ್ಕೆ ವಿಷ ಹಾಕಿ ತಾಯಿ ಹುಲಿ ಹಾಗೂ ನಾಲ್ಕು ಮರಿಗಳನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಹನೂರು ಬಫರ್ ವಲಯದ ಪಚ್ಚೆದೊಡ್ಡಿ ಅರಣ್ಯದಲ್ಲಿ ಹಸು ಕೊಂದ ಕಾರಣಕ್ಕೆ ವಿಷ ಹಾಕಿ ಹುಲಿಯನ್ನು ಹತ್ಯೆ ಮಾಡಿ ದೇಹವನ್ನು ಮೂರು ಭಾಗಗಳಾಗಿ ಕಡಿದು ಹಾಕಲಾಗಿತ್ತು. ಈಚೆಗೆ ಗುಂಡಾಲ್ ಜಲಾಶಯದಲ್ಲಿ ಉರುಳಿಗೆ ಸಿಕ್ಕು ಹುಲಿ ಬಲಿಯಾಗಿತ್ತು.

ಮಾನವ ಪ್ರಾಣಿ ಸಂಘರ್ಷ ತಡೆಗೆ ಕ್ರಮ:

ಪ್ರಾಣಿಗಳು ರೈತರ ಬೆಳೆ ನಾಶ ಮಾಡದಂತೆ, ಜನ ಜಾನುವಾರುಗಳ ಮೇಲೆ ದಾಳಿ ನಡೆಸದಂತೆ ತಡೆಯಲು ಬಂಡೀಪುರ ಅರಣ್ಯದಲ್ಲಿ ಕಮಾಂಡಿಗ್ ಸೆಂಟರ್ ತೆರೆಯಲಾಗಿದೆ. ಅಲ್ಲಲ್ಲಿ ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಪ್ರಾಣಿಗಳು ಕಾಡಿನಿಂದ ಹೊರ ಬರುವುದನ್ನು ಪತ್ತೆಹಚ್ಚಿಕಮಾಂಡ್ ಸೆಂಟರ್ಗೆ ಮಾಹಿತಿ ರವಾನಿಸುತ್ತವೆ. ಇದರ ಆಧಾರದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಪ್ರಾಣಿಗಳು ಬಂದಿರುವ ಸ್ಥಳಕ್ಕೆ ತೆರಳಿ ಕಾಡಿನೊಳಗೆ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಡಂಚಿನಲ್ಲಿ ಸೋಲಾರ್ ಬೇಲಿ, ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. 2026ನೇ ಸಾಲಿನಲ್ಲಿ 27 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಗೆ ಸರ್ಕಾರ ಮಂಜೂರಾತಿ ನೀಡಿದ್ದು ಮೊದಲ ಹಂತದಲ್ಲಿ 8 ಕಿ.ಮೀ ಕಾಮಗಾರಿ ಆರಂಭವಾಗಲಿದೆ. 310 ಕಿ.ಮೀ ವಿಸ್ತಾರ ಹೊಂದಿರುವ ಬಂಡೀಪುರ ಅರಣ್ಯದೊಳಗೆ 90 ಕಿ.ಮೀ ತಡೆ ಬೇಲಿ ನಿರ್ಮಿಸಲಾಗಿದ್ದು ಹಂತ ಹಂತವಾಗಿ ಎಲ್ಲೆಡೆ ತಡೆಬೇಲಿ ಹಾಕಲಾಗುತ್ತಿದೆ. ಇದರಿಂದ ಮಾನವ ಪ್ರಾಣಿ ಸಂಘರ್ಷ ತೀರಾ ಕಡಿಮೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.