ಕಲಬುರಗಿ: ಅದು 2023ರ ಮೇ ತಿಂಗಳು. ತಗ್ಗು ದಿನ್ನೆಗಳಿಂದ ಕೂಡಿದ್ದ 42 ಎಕರೆಗಳಷ್ಟು ವಿಶಾಲ ಪ್ರದೇಶ. ಅಕ್ಷರಶಃ ಕಲ್ಲು–ಮಣ್ಣಿನ ಕೆಂಪು ಬೆಂಗಾಡು. ಬಿಸಿಲಿಗೆ ನೆಲ ಚುರುಗುಟ್ಟುತ್ತಿತ್ತು; ಮಳೆಗಾಲದಲ್ಲಿ ಒಂದಿಷ್ಟು ಕುರುಚಲು ಹಸಿರು ಮೊಳೆಯುತಿತ್ತು. ಸುತ್ತಲೂ ಬರೀ ಕಾಂಪೌಂಡ್ ಮಾತ್ರವೇ ಕಾಣುತ್ತಿತ್ತು...

ಆದರೆ, ಮೂರು ವರ್ಷಗಳಲ್ಲಿ ಎಲ್ಲವೂ ಅಲ್ಲಿ ಬದಲಾಗಿದೆ! 2026ರ ಮೇ ತಿಂಗಳ ಹೊತ್ತಿಗೆ ಬೆಂಗಾಡು ಇದೀಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. 42 ಎಕರೆ 38 ಗುಂಟೆ ಪ್ರದೇಶದ ಅಲ್ಲಲ್ಲಿ ಗಿಡಗಳು ಬೆಳೆದು ನೆರಳು ಚೆಲ್ಲಿವೆ. ನೂರಾರು ಸಸ್ಯಗಳು ಕೊಂಬೆ ಅರಳಿಸಿ ಬೆಳೆಯುತ್ತಿವೆ. ಅತ್ಯಾಧುನಿಕ ವಿನ್ಯಾಸದ ಸುಸಜ್ಜಿತ ಪಂಜರಗಳಲ್ಲಿ ಪಕ್ಷಿಗಳ ಕಲರವ, ಗಿಳಿ–ನವಿಲುಗಳ ನಲಿದಾಟ, ಮಂಗಗಳ ಕುಚೇಷ್ಟೆ, ಮೊಸಳೆಗಳು ಸ್ವಚ್ಛಂದ ವಿಹಾರ, ಜಿಂಕೆಗಳ ಓಡಾಟ ಕಾಣುತ್ತಿದೆ. ಬೆಂಗಳೂರಿನಿಂದ ಬಂದ ಸಿಂಹಗಳು ತೊಗರಿ ನಾಡಿನಲ್ಲಿ ಘರ್ಜಿಸಲು ಅಣಿಯಾಗಿವೆ. ಹುಲಿಗಳು, ಜಿಬ್ರಾ ಇನ್ನಷ್ಟೇ ಬರಲು ಕಾಯುತ್ತಿವೆ...!

ಇದು ಜಿಲ್ಲೆಯ ಕಾಳಗಿ ತಾಲ್ಲೂಕಿನ ಚಿತ್ತಾಪುರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಮಾಡಬೂಳ ಸಮೀಪ ನಿರ್ಮಾಣಗೊಂಡಿರುವ ‘ಕಲಬುರಗಿ ಮೃಗಾಲಯ’ದ ಚಿತ್ರಣ. ಈ ಮೃಗಾಲಯವು ಮೇ 18ರಂದು ಉದ್ಘಾಟನೆಗೆ ಸಜ್ಜಾಗಿದೆ. ಬೆಂಗಾಡಿನಂತಿದ್ದ ಪ್ರದೇಶವೊಂದು ಸುಂದರ ಪ್ರವಾಸಿತಾಣವಾಗಿ ಬದಲಾಗಲು ಪ್ರಬಲ ರಾಜಕೀಯ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳು ಪರಿಶ್ರಮವೇ ಕಾರಣ.

ಮೇಲ್ದರ್ಜೆಗೇರಿದ ಮೃಗಾಲಯ

ಕಲಬುರಗಿ ನಗರದಲ್ಲಿ 1988ರಲ್ಲೇ ಕಿರು ಮೃಗಾಲಯ ಹಾಗೂ ಮಕ್ಕಳ ಉದ್ಯಾನ ಸ್ಥಾಪನೆಯಾಗಿತ್ತು. 1997ರಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅದಕ್ಕೆ ಮಾನ್ಯತೆ ಸಿಕ್ಕಿತ್ತು. ನಗರದ ಹೃದಯಭಾಗದ ಒಟ್ಟು 6 ಎಕರೆ 33 ಗುಂಟೆಯ ಪೈಕಿ ಎರಡೂವರೆ ಎಕರೆಯಷ್ಟು ಪ್ರದೇಶದಲ್ಲಿ ಸಸ್ಯಾಹಾರಿ, ಮಾಂಸಾಹಾರಿ ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು ಸೇರಿದಂತೆ 22 ಬಗೆಯ 80 ಪ್ರಾಣಿ–ಪಕ್ಷಿಗಳಿದ್ದವು. ಇನ್ನುಳಿದ ಪ್ರದೇಶದಲ್ಲಿ ಮಕ್ಕಳ ಉದ್ಯಾನ, ಪುಟಾಣಿ ರೈಲು, ಆಟೋಪಕರಣಗಳು ಇದ್ದವು. ವಾರ್ಷಿಕವಾಗಿ ಲಕ್ಷದಷ್ಟು ವೀಕ್ಷಕರು ಭೇಟಿ ನೀಡುತ್ತಿದ್ದರು.

ಎರಡೇ ಎಕರೆ ಪ್ರದೇಶ ವನ್ಯಜೀವಿಗಳಿಗೆ ಸಿಗುತ್ತಿತ್ತಾದ್ದರಿಂದ ಅವುಗಳ ‘ಸ್ವಚ್ಛಂದ’ ಬದುಕಿಗೆ ತೊಡಕಾಗಿತ್ತು. ಪ್ರವಾಸೋದ್ಯಮ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ವನ್ಯಜೀವಿಗಳ ಸಮಸ್ಯೆಗೆ ಸ್ಪಂದಿಸಿದರು. ‘ಕಿರು ಮೃಗಾಲಯ’ವನ್ನು ಸ್ಥಳಾಂತರಿಸಿ ಮಾಡಿ ವಿಸ್ತರಿಸಲು ನಿರ್ಧರಿಸಿದರು. ಅದಕ್ಕಾಗಿ ಮಾಡಬೂಳ ವ್ಯಾಪ್ತಿಯಲ್ಲಿ 42 ಎಕರೆ 38 ಗುಂಟೆ ಜಾಗವನ್ನು 2018ರ ಡಿಸೆಂಬರ್ 14ರಂದು ಮಂಜೂರಾಯಿತು.

ನವೀನ ಮೃಗಾಲಯಕ್ಕೆ ‘ಹೊಸ ಶ್ರಮ’

ಕಿರು ಮೃಗಾಲಯ ವಿಸ್ತರಿಸಿ, ಸ್ಥಳಾಂತರಿಸುವ ಪ್ರಕ್ರಿಯೆ ಸುಗಮವೇನೂ ಆಗಿರಲಿಲ್ಲ. ಹೊಸ ಮೃಗಾಲಯ ಸ್ಥಾಪನೆಗೆ ಹಿಡಿಯುವಷ್ಟೇ ಶ್ರಮ ಇದಕ್ಕೂ ಹಿಡಿದಿದೆ. ಮೃಗಾಲಯ ಸ್ಥಾಪನೆಗೆ ರಾಜ್ಯ ಮೃಗಾಲಯ ಪ್ರಾಧಿಕಾರ ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರಗಳ ಹಲವು ಸಮಿತಿಗಳ ಅನುಮೋದನೆ ಬೇಕಿತ್ತು.

ಹೊಸ ಮೃಗಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾಸ್ಟರ್ ಪ್ಲ್ಯಾನ್ ರೂಪಿಸಿ ಕೇಂದ್ರಕ್ಕೆ ಕಳುಹಿಸಿತ್ತು. ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಸೆಕ್ಷನ್ 38(1) ಅಡಿಯಲ್ಲಿ ಮೃಗಾಲಯ ಸ್ಥಾಪನೆಗೆ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ 2021ರ ಸೆಪ್ಟೆಂಬರ್ 9ರಂದು ಪೂರ್ವಾನುಮತಿ ದೊರೆಯಿತು. ಆಗ ನಿಗದಿತ ಜಾಗದಲ್ಲಿ ಬರೀ ಕಾಂಪೌಂಡ್ ನಿರ್ಮಾಣವಾಯಿತು. ಬಳಿಕ ಸರ್ಕಾರ ಬದಲಾಯಿತು; ಮೃಗಾಲಯ ವಿಸ್ತರಣೆಯೂ ವೇಗ ಕಳೆದುಕೊಂಡಿತು. ವರ್ಷಗಳೇ ಉರುಳಿದವು.

2023ರಲ್ಲಿ ರಾಜ್ಯದಲ್ಲಿ ಮತ್ತೆ ಸರ್ಕಾರ ಬದಲಾಯಿತು. ಪ್ರಿಯಾಂಕ್ ಖರ್ಗೆ ಮತ್ತೆ ಸಚಿವರಾದರು. ಹಿಂದೆ ಆರಂಭಿಸಿದ ಮೃಗಾಲಯ ಸ್ಥಳಾಂತರಕ್ಕೆ ವಿಶೇಷ ಒತ್ತು ಕೊಟ್ಟರು. ಮೊದಲ ಹಂತದಲ್ಲಿ ಕೊಳವೆಬಾವಿಗಳು, ಹಸಿರೀಕರಣ ಬೆಳೆಸುವುದು, ಯುಜಿಡಿ, ಕುಡಿಯುವ ನೀರು, ಕಿಚನ್, ಆಸ್ಪತ್ರೆ, ವಿದ್ಯುತ್ ಸಂಪರ್ಕ, ಗೇಟ್, 2.5 ಲಕ್ಷ ಲೀಟರ್ ಸಾಮರ್ಥ್ಯದ ಜಲಸಂಗ್ರಹಗಾರ, ಸರ್ವಿಸ್ ರಸ್ತೆ, ಪಾರ್ಕಿಂಗ್, ಶೌಚಾಲಯಗಳು, ಶೆಡ್ಗಳು, ಬೆಂಚ್ಗಳು, ಉದ್ಯಾನ, ಮಕ್ಕಳ ಆಟದ ಪ್ರದೇಶ, ಸೂಚನಾ ಫಲಕಗಳ ಅಳವಡಿಕೆಯಂಥ ಮೂಲ ಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲಾಯಿತು.

2ನೇ ಹಂತದಲ್ಲಿ ಪಂಜರಗಳ ಸ್ಥಾಪನೆ ಶುರುವಾಯಿತು. ಹೊಸ ಮೃಗಾಲಯದಲ್ಲಿ ಒಟ್ಟು 56 ಜಾತಿಯ ಪ್ರಾಣಿ–ಪಕ್ಷಿಗಳಿಗೆ ಪಂಜರಗಳು ನಿರ್ಮಾಣವಾಗಲಿವೆ. ಅದರಲ್ಲಿ ಆರು ನಿಶಾಚರಿಗಳು, 10 ಭಾರತೀಯ ಪಕ್ಷಿಗಳು, 6 ಸಣ್ಣ ಪಕ್ಷಿಗಳು, 6 ಪೀಸಂಟ್ಗಳು, 10 ಸಸ್ತನಿಗಳು, 4 ಪ್ರೈಮೇಟ್ಗಳು, 6 ಶಾಖಾಹಾರಿ ಪ್ರಾಣಿಗಳು, 8 ಉಭಯಚರ/ಸರೀಸೃಪಗಳು ಸೇರಿವೆ. ಸದ್ಯ, ಆಮೆ, ಘರಿಯಾಲ್, ಮೊಸಳೆ, ಚುಕ್ಕೆ ಜಿಂಕೆ, ಗೋಲನ್ ಜಾಕಲ್, ಹುಲಿ, ಸಿಂಹ, ಸ್ಲೋತ್ ಕರಡಿ, ಜಿಬ್ರಾ, ಬಬೂನ್, ಲಂಗೂರು ಹಾಗೂ ವಿವಿಧ ಪಕ್ಷಿಗಳಿಗಾಗಿ ಒಟ್ಟು 23 ಸುಸಜ್ಜಿತ ಹಾಗೂ ನವೀನ ವಿನ್ಯಾಸದ ಪಂಜರಗಳು ಪೂರ್ಣಗೊಂಡಿವೆ.

ಏನೆಲ್ಲ ಇವೆ? ಇನ್ನೇನು ಬರಲಿವೆ?

ಸದ್ಯ ಹೊಸ ಮೃಗಾಲಯದಲ್ಲಿ ಆಮೆಗಳು, ಮೊಸಳೆಗಳು, ಎಮು ಪಕ್ಷಿ, ಸಿಲ್ವರ್ ಪೀಸಂಟ್, ಗಿಳಿಗಳು, ನವಿಲುಗಳು, ಜಾಕಲ್, ಕಪ್ಪು ಗಿಡುಗಗಳು, ಲಂಗೂರ್, ಕಪ್ಪು ಜಿಂಕೆಗಳು, ಹೆಬ್ಬಾವುಗಳಿವೆ. ಬೆಂಗಳೂರಿನ ಬನ್ನೇರುಘಟ್ಟದ ಜೈವಿಕ ಉದ್ಯಾನದಿಂದ ಒಂದೂವರೆ ವರ್ಷ ಪ್ರಾಯದ ಎರಡು ಸಿಂಹಗಳು ಈಗಾಗಲೇ ಕಲಬುರಗಿ ಮೃಗಾಲಯಕ್ಕೆ ಬಂದಿದ್ದು, ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.

ಇನ್ನೊಂದು ತಿಂಗಳಲ್ಲಿ ಸಾಂಬರ್, ರೆಡ್ ಜಂಗಲ್ ಫೌಲ್ ಬರಲಿವೆ. ಮುಂದಿನ ಮೂರು ತಿಂಗಳಲ್ಲಿ ಹುಲಿ, ಬಬೂನ್, ಸ್ಲೋತ್ ಕರಡಿ, ಕಾಳಿಂಗ ಸರ್ಪ ನೋಡಲು ಸಿಗಲಿವೆ. ಮುಂದಿನ ತಿಂಗಳಲ್ಲಿ ಜಿಬ್ರಾ, ಘರಿಯಾಲ್ ಹಾಗೂ ಇತರೆ ಪಕ್ಷಿ ಮತ್ತು ಸರೀಸೃಪ ಜಾತಿಗಳ ವನ್ಯ ಜೀವಿಗಳು ಕಲಬುರಗಿ ಮೃಗಾಲಯ ಸೇರಲಿವೆ.

‘ಬರೀ ಸ್ಥಳಾಂತರವಲ್ಲ; ಸುದೀರ್ಘ ಪ್ರಕ್ರಿಯೆ’

ಜನರ ಪಾಲಿಗೆ ಇದೊಂದು ಕಲಬುರಗಿಯಲ್ಲಿದ್ದ ಕಿರು ಮೃಗಾಲಯವನ್ನು ಮಾಡಬೂಳಕ್ಕೆ ಸ್ಥಳಾಂತರ ಪ್ರಕ್ರಿಯೆ ಅಷ್ಟೇ ಆಗಿರಬಹುದು. ಆದರೆ, ತಾಂತ್ರಿಕವಾಗಿ ಅದೊಂದು ಹೊಸ ಮೃಗಾಲಯವೇ ಆಗಿದೆ. ಒಂದು ಹೊಸ ಮೃಗಾಲಯ ಆರಂಭಿಸುವ ಎಲ್ಲವೂ ಪ್ರಕ್ರಿಯೆಗಳನ್ನೇ ಇದಕ್ಕೂ ಅನುಸರಿಸಲಾಯಿತು. ಹಸಿರೀಕರಣ ಪ್ರಮಾಣ, ಪಂಜರಗಳ ಅಳತೆ ಏನಿರಬೇಕು? ಎಷ್ಟು ಪ್ರದೇಶ ವನ್ಯಜೀವಿಗಳಿಗೆ ಮೀಸಲಿಡಬೇಕು? ಎಷ್ಟು ಪ್ರದೇಶವನ್ನು ತೆರೆದ ಜಾಗವಾಗಿ ಬಿಡಬೇಕು? ಎಂಬೆಲ್ಲದಕ್ಕೂ ಕೇಂದ್ರದ ವಿವಿಧ ಸಮಿತಿಗಳ ಅನುಮೋದನೆ ಪಡೆಯಬೇಕಿತ್ತು. ಇದೆಲ್ಲವೂ ಪ್ರಕ್ರಿಯೆ ಸುಗಮವಾಗಿ ಮುಗಿದು ಇದೀಗ ಮೃಗಾಲಯ ಉದ್ಘಾಟನೆಗೆ ಸಜ್ಜಾಗಿದೆ. ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಪ್ರಿಯಾಂಕ್ ಖರ್ಗೆ ಅವರ ಪ್ರಬಲ ಇಚ್ಛಾಶಕ್ತಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ಬೆವರಿದೆ.

‘2021ರಲ್ಲಿ ಮೃಗಾಲಯದ ಕಾಮಗಾರಿಗೆ ಪೂರ್ವಾನುಮತಿ ದೊರೆಯಿತು. ಬಳಿಕ ಅನೇಕ ಅಡೆ–ತಡೆಗಳು ಎದುರಾದವು. 2023ರ ಜುಲೈನಲ್ಲಿ ಕಾಮಗಾರಿ ಮತ್ತೆ ವೇಗ ಪಡೆಯಿತು. ಮೂರು ಹಂತದಲ್ಲಿ ಅಭಿವೃದ್ಧಿ ಮಾಡಲಾಯಿತು. 2025ರ ಸೆಪ್ಟೆಂಬರ್ ಹೊತ್ತಿಗೆ ಬಹುತೇಕ ಎಲ್ಲ ಕಾಮಗಾರಿ ಮುಗಿಸಲಾಗಿತ್ತು. ಆಗ ಕೇಂದ್ರದ ಸಮಿತಿ ಬಂದು ವೀಕ್ಷಿಸಿತು. ನಂತರ 2026ರ ಮಾರ್ಚ್ 8ರಂದು ಮೃಗಾಲಯದ ಆರಂಭಕ್ಕೆ ಹಸಿರು ನಿಶಾನೆ ತೋರಿತು. ಹಳೆಯ ಮೃಗಾಲಯದಿಂದ ಹೊಸ ಮೃಗಾಲಯಕ್ಕೆ ಪ್ರಾಣಿಗಳ ಸ್ಥಳಾಂತರವೂ ಸುದೀರ್ಘ ಪ್ರಕ್ರಿಯೆ. ಅದಕ್ಕೂ ಸಾಕಷ್ಟು ಫಾಲೋಅಪ್ ಮಾಡಲಾಯಿತು. ಅಂತಿಮವಾಗಿ 2026ರ ಮಾರ್ಚ್ 9ಕ್ಕೆ ಹೊಸ ಮೃಗಾಲಯಕ್ಕೆ ಪ್ರಾಣಿಗಳ ಸ್ಥಳಾಂತರಕ್ಕೂ ಅನುಮತಿ ದಕ್ಕಿತು’ ಎಂದು ಡಿಸಿಎಫ್ ಸುಮಿತಕುಮಾರ್ ಪಾಟೀಲ ವಿವರಿಸುತ್ತಾರೆ.

‘ಸ್ಥಳಾಂತರಕ್ಕೂ ಮುನ್ನ ಅವುಗಳ ಆರೋಗ್ಯ ಹೇಗಿದೆ? ಯಾವುದಾದರೂ ರೋಗವಿದೆಯಾ? ಎಂಬುದೆಲ್ಲ ಪರೀಕ್ಷಿಸಬೇಕಾಗುತ್ತದೆ. ಸ್ಥಳಾಂತರಕ್ಕೂ ಮುನ್ನ ಪ್ರಾಣಿಗಳನ್ನು ವೀಕ್ಷಕರಿಂದ ಬೇರ್ಪಡಿಸಬೇಕಾಗುತ್ತದೆ. ಹೀಗಾಗಿ ಕಲಬುರಗಿಯ ಕಿರು ಮೃಗಾಲಯದಲ್ಲಿನ ಪ್ರಾಣಿ–ಪಕ್ಷಿಗಳನ್ನು 2026ರ ಜನವರಿ 1ರಿಂದಲೇ ಕ್ವಾರಂಟೈನ್ ಮಾಡಲಾಗಿತ್ತು. ಏಪ್ರಿಲ್ನಿಂದ ಒಂದೊಂದಾಗಿ ಪ್ರಾಣಿಗಳನ್ನು ಹೊಸ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ. ಸದ್ಯ 13 ವನ್ಯಜೀವಿಗಳು ಅಲ್ಲಿವೆ. ಬೆಂಗಳೂರಿನ ಬನ್ನೇರುಘಟ್ಟದಿಂದ ಎರಡು ಸಿಂಹಗಳನ್ನು ತಂದಿದ್ದು, ಸದ್ಯ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ’ ಎಂದು ಅವರು ಹೇಳುತ್ತಾರೆ.

ಪ್ರವಾಸಿಗರ ಸೆಳೆಯಲಿದೆ ‘ಮೃಗಾಲಯ’

‘ಮಾಡಬೂಳದಲ್ಲಿ ನಿರ್ಮಿಸಿರುವ ಕಲಬುರಗಿ ಮೃಗಾಲಯವು ಜಿಲ್ಲೆಯ ಪ್ರಮುಖ ಹೊಸ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಒಂದಾಗಲಿದೆ. ಸುಮಾರು 43 ಎಕರೆಗಳಷ್ಟು ವಿಸ್ತೀರ್ಣದಲ್ಲಿರುವ ಕಲಬುರಗಿ ಮೃಗಾಲಯವನ್ನು ₹35 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನು ಕಲಬುರಗಿ ಮತ್ತು ವಿಶಾಲವಾದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರಮುಖ ವನ್ಯಜೀವಿ, ಶಿಕ್ಷಣ ಹಾಗೂ ಕುಟುಂಬ ಮನರಂಜನಾ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಹೊಸ ಮೃಗಾಲಯವು ನಿಶಾಚರಿಗಳು, ಭಾರತೀಯ ಪಕ್ಷಿಗಳು, ಪೀಸೆಂಟ್ಗಳು, ಸಸ್ತನಿಗಳು, ಪ್ರೈಮೇಟ್ಗಳು, ಸಸ್ಯಹಾರಿಗಳು, ಉಭಯಚರಗಳು ಮತ್ತು ಸರೀಸೃಪಗಳು ಸೇರಿದಂತೆ 56 ಪ್ರಭೇದ ಪ್ರಾಣಿ-ಪಕ್ಷಿಗಳನ್ನು ಒಳಗೊಂಡಿರಲಿದೆ. ಶೀಘ್ರವೇ ಸಿಂಹ, ಹುಲಿ, ಕರಡಿ, ಜೀಬ್ರಾ, ಬಬೂನ್ ಕೂಡ ವೀಕ್ಷಕರ ಕಣ್ಣೋಟಕ್ಕೆ ದಕ್ಕಲಿವೆ’ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮೃಗಾಲಯದ ರೂವಾರಿ ಪ್ರಿಯಾಂಕ್ ಖರ್ಗೆ.

ಭೇಟಿ ಸಮಯ, ಟಿಕೆಟ್ ದರ

ಮೃಗಾಲಯವು ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ತೆರೆದಿರಲಿದ್ದು, ಪ್ರಾಣಿ–ಪಕ್ಷಿಗಳ ವೀಕ್ಷಣೆಗೆ ಲಭ್ಯವಾಗಿರಲಿದೆ. ಪ್ರತಿ ಮಂಗಳವಾರ ರಜೆ ಇರಲಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ₹40, 12 ವರ್ಷ ಮೇಲ್ಪಟ್ಟವರಿಗೆ ₹75 ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ₹25 ಟಿಕೆಟ್ ದರ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.