ಮಡಿಕೇರಿ: ಕೊಡಗು ಜಿಲ್ಲೆ ಒಂದೊಂದು ಕಾಲದಲ್ಲೂ ಒಂದೊಂದು ಬಗೆಯಲ್ಲಿ ನೋಡುಗರನ್ನು ಸೆಳೆಯುತ್ತದೆ. ಬೇಸಿಗೆ, ಮಳೆಗಾಲ, ಚಳಿಗಾಲದಲ್ಲಿ ತನ್ನದೇ ವಿಶೇಷ ಸೌಂದರ್ಯವನ್ನು ಹೊರಸೂಸುವುದು ಇಲ್ಲಿನ ವಿಶೇಷ. ಇಂತಹ ಸೌಂದರ್ಯ ಬೇರೆ ಜಿಲ್ಲೆಗಳಲ್ಲಿ ಕಾಣಬರುವುದಿಲ್ಲ.

ಬೇಸಿಗೆಯ ಮೊದಲ ಮಳೆಯನ್ನು ಹೂ ಮಳೆ ಎಂದೇ ಇಲ್ಲಿ ಕರೆಯಲಾಗುತ್ತದೆ. ಮೊದಲ ಮಳೆಯ ನಂತರ ಅರಳುವ ಕಾಫಿ ಹೂಗಳು ಸ್ವರ್ಗವನ್ನೇ ಧರೆಗಿಳಿಸುತ್ತದೆ. ಇಡೀ ತೋಟದಲ್ಲೆಲ್ಲ ಮುತ್ತಿನ ಮಣಿಗಳು ಉದುರಿದಂತೆ ಕಾಣಿಸುತ್ತದೆ. ಮಳೆಗಾಲದಲ್ಲಿ ಧೋ ಎಂದು ಒಂದೇ ಸಮನೆ ಬಿಡದೇ ಸುರಿಯುವ ಮಳೆ ಮತ್ತೊಂದು ಬಗೆಯ ಸೌಂದರ್ಯವನ್ನು ನೋಡುಗರ ಮುಂದಿಡುತ್ತದೆ. ಚಳಿಗಾಲದಲ್ಲಿ ಮಂಜು ಮುಸುಕಿ ಕಾಶ್ಮೀರದಂತಹ ಚಳಿಯನ್ನು ಕಾಣಿಸುತ್ತದೆ. ಇವೆಲ್ಲವೂ ಕೊಡಗಿನ ವೈವಿಧ್ಯಮಯವಾದ ಪ್ರಕೃತಿ ಸೌಂದರ್ಯಕ್ಕೆ ಸಾಕ್ಷಿಯಾಗಿದೆ.

ಈಗ ಬೇಸಿಗೆ. ಬಿಸಿಲಿನ ತಾಪ ತುಸು ಹೆಚ್ಚೇ ಇದೆ. ಆದರೆ, ಸುಡುವ ಬಿಸಿಲಿದ್ದರೂ ಬೇರೆ ಜಿಲ್ಲೆಗಳಲ್ಲಿ ಆಗುವಷ್ಟು ಸೆಕೆ ಇಲ್ಲಿಲ್ಲ. ತಣ್ಣನೆಯ ಗಾಳಿ ಮೈಮನಗಳನ್ನು ತಂಪಾಗಿಡುತ್ತದೆ. ಹಾಗಾಗಿ, ಬಿಸಿಲಿದ್ದರೂ ಸೆಕೆ ಎನಿಸದ ವಿಶಿಷ್ಟ ಬೇಸಿಗೆ ಕೊಡಗಿನಲ್ಲಿದೆ. ಈಗಂತೂ ಈಚೆಗೆ ಮಳೆ ಸುರಿದು ವಾತಾವರಣ ಮತ್ತಷ್ಟು ತಂಪಾಗಿದೆ. ಈಗ ಮಡಿಕೇರಿಯಲ್ಲಿರುವುದೇ ಒಂದು ಸ್ವರ್ಗದಂತೆ ಭಾಸವಾಗುತ್ತಿದೆ.

ಇನ್ನು ಮಳೆ ಬಿದ್ದಿರುವ ಕಡೆ ಈಗಾಗಲೇ ಕಾಫಿ ಹೂಗಳು ಅರಳಿ ಪ್ರಕೃತಿ ಪ್ರಿಯರನ್ನು ಬರಸೆಳೆಯುತ್ತಿವೆ. ಶ್ವೇತಸುಂದರಿಯರಂತೆ ತೋಟಗಳೆಲ್ಲವೂ ನಯನ ಮನೋಹರವಾಗಿ ಕಾಣುತ್ತಿವೆ. ಮಳೆ ಬೀಳದ ಕಡೆ ತೋಟಗಳ ಮಾಲೀಕರೇ ಕೃತಕವಾದ ನೀರನ್ನು ಕೊಟ್ಟು ಹೂವರಳಿಸಿದ್ದಾರೆ. ಹಾಗಾಗಿ, ಎಲ್ಲೇ ಸುತ್ತಾಡಿದರೂ ಒಂದಲ್ಲ ಒಂದು ಕಡೆ ಕಾಫಿ ತೋಟಗಳಲ್ಲಿ ಶ್ವೇತ ವರ್ಣಿಯರು ಕಣ್ಣಿಗೆ ಕಾಣುತ್ತಾರೆ

ಒಂದರೆಕ್ಷಣ ಹೊತ್ತು ಈ ಬಿಳಿಯ ಬಣ್ಣದ ಹೂಗಳ ತೋಟವನ್ನೇ ದಿಟ್ಟಿಸಿ ನೋಡಿದರೆ ಗಂಟೆ ಕಳೆದರೂ ಗೊತ್ತಾಗುವುದೇ ಇಲ್ಲ. ಮೂಗಿಗೆ ಅಡರುವ ಸುವಾಸನೆ, ಹಕ್ಕಿಗಳ ಚಿಲಿಪಿಲಿ ಗಾನ, ತಂಪಾಗಿ ಬೀಸುವ ತಂಪೆಲರು, ಇದಕ್ಕಿಂತ ಬೇರೆ ಸ್ವರ್ಗ ಬೇಕೇ ಎಂದನಿಸದೇ ಇರದು.

ಈ ಕಾಫಿ ಹೂಗಳಿಗೆ ಮುತ್ತಿಕೊಳ್ಳುವ ಜೇನ್ನೋಣಗಳು, ದುಂಬಿಗಳನ್ನು ನೋಡುವುದೂ ಕಣ್ಣಿಗೆ ಮತ್ತಷ್ಟು ಆನಂದ ಕೊಡುತ್ತದೆ. ಗುಂಯ್ ಗುಡುವ ದುಂಬಿಗಳ ದಂಡೇ ತೋಟಗಳಲ್ಲಿನ ಶ್ವೇತ ಸುಂದರಿಯರಿಗೆ ಮುತ್ತಿಗೆ ಹಾಕುತ್ತದೆ. ಜೇನ್ನೊಣಗಳೂ ಹೂವಿಗೆ ಮುತ್ತಿಕ್ಕಿ, ಹೂವಿಗೆ ಒಂದಿನಿತೂ ನೋವಾಗದ ಹಾಗೆ ಅದರ ಮಕರಂದ ಹೀರಿ ಮತ್ತೊಂದು ಸುಂದರಿಗೆ ಗಾಳ ಹಾಕುತ್ತದೆ. ಈ ಬಗೆಯ ಪ್ರಕೃತಿಯಲ್ಲಿನ ಆಟವು ಬೇರೆ ಜಿಲ್ಲೆಗಳಲ್ಲಿ ಸಿಗುವುದು ಅಪರೂಪ.

ಮುಂಚೆ ಎಲ್ಲ ಬೇಸಿಗೆಯ ಕಾಲದಲ್ಲೂ ಚಳಿಗಾಲದಂತಹ ಚಳಿ ಇರುತ್ತಿತ್ತು. ಹಾಗಾಗಿ, ಇದನ್ನು ಕರ್ನಾಟಕದ ಕಾಶ್ಮೀರ ಎಂದು ಕರೆದರು ಎಂದು ಹಿರಿಯರು ಹೇಳುತ್ತಾರೆ. ಆದರೆ, ಈಗ ಮೊದಲಿನಂತಹ ಚಳಿ ಇಲ್ಲ. ಮಳೆ ಬಾರದಿದ್ದರೆ ಬೇಸಿಗೆಯಲ್ಲಿ ಕೆಂಡದಂತಹ ಅನುಭವ ಸಿಗುತ್ತದೆ. ಉಷ್ಣಾಂಶ ಒಮ್ಮೊಮ್ಮೆ 34 ಡಿಗ್ರಿಗೂ ಏರಿದ ಉದಾಹರಣೆ ಈ ಬಾರಿ ಬೇಸಿಗೆಯಲ್ಲೂ ಆಗಿದೆ. ಕಳೆದೆರಡು ವರ್ಷದ ಹಿಂದೆ 36 ಡಿಗ್ರಿಯನ್ನೂ ದಾಟಿತ್ತು. ಇಂತಹ ಸ್ಥಿತಿ ಆಗಾಗ್ಗೆ ತಲೆದೋರುತ್ತಲೇ ಇದೆ.

ಪ್ರಕೃತಿಯ ನಾಶ, ವೇಗವಾಗಿ ಬೆಳೆಯುತ್ತಿರುವ ನಗರಗಳು, ಕಾಂಕ್ರೀಟಿಕರಣ, ಎಲ್ಲೆಲ್ಲೂ ನಿರ್ಮಾಣವಾಗುತ್ತಿರುವ ಕಟ್ಟಡಗಳು, ಕಡಿಮೆಯಾಗುತ್ತಿರುವ ಹಸಿರು ಇವೆಲ್ಲವೂ ತಂಪಾದ ನಗರಿ ಬೆಂಕಿಯಂತಾಗಲು ಕಾರಣ ಎಂದು ತಜ್ಞರು ಹೇಳುತ್ತಾರೆ. ಈಚೆಗಷ್ಟೇ ಗೋಣಿಕೊಪ್ಪಲುವಿನ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಈ ಕುರಿತು ಪರಿಣತರು ಆತಂಕವನ್ನೂ ವ್ಯಕ್ತಪಡಿಸಿದರು.

ಬೇಸಿಗೆಯಲ್ಲಿ ಮಳೆ ಬಾರದ ಹೋದರೆ ತಂಪಾದ ವಾತಾವರಣ ಈಗ ಸಿಗುವುದಿಲ್ಲ. ಆದರೂ ಕೆಲವೊಂದು ಕಡೆ ವಿಶಿಷ್ಟ ಅನುಭವಗಳಾಗುತ್ತವೆ. ದುಬಾರೆಯಲ್ಲಿರುವ ಹಾಡಿಗೆ, ಸಾಕಾನೆ ಶಿಬಿರಕ್ಕೆ ಕಾವೇರಿನದಿಯನ್ನು ನಡೆದುಕೊಂಡೇ ದಾಟುವ ಅವಕಾಶ ಸಿಗುತ್ತದೆ. ಮಳೆಗಾಲದಲ್ಲಿ ಭೋರ್ಗರೆಯುತ ಹರಿಯುತ್ತಾ ಕೆಲವೊಮ್ಮೆ ಮಳೆ ಬಿರುಸು ಇದ್ದಾಗ ದೋಣಿಯನ್ನೂ ನಡೆಸಲಾಗದೇ ಇರುವಂತಹ ಸನ್ನಿವೇಶ ಸೃಷ್ಟಿಯಾಗುವ ಈ ಜೀವನದಿ ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯಲ್ಲಿ ನಿಶ್ಚಲಳಾಗುವುದು ಇಲ್ಲಿನ ಪ್ರಕೃತಿ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಾಕ್ಷಿ ಎಂತಿದೆ.

ನದಿಯಲ್ಲಿ ಕಪ್ಪು ಕಲ್ಲಿನ ಮೇಲೆ ಸುಲಭವಾಗಿ ಈ ದಡದಿಂದ ಆ ದಡಕ್ಕೆ ದಾಟಿ ಹೋಗುವಾಗ ಒಂದು ಬಗೆಯ ಖುಷಿ ಮೂಡುತ್ತದೆ. ಬೇರೆಲ್ಲೂ ಇಂತಹ ಸೌಭಾಗ್ಯ ಸಿಗದು ಎನಿಸುತ್ತದೆ. ಇದು ಬೇಸಿಗೆಯಲ್ಲಿ ಕೊಡಗಿನಲ್ಲಿ ಸಿಗುವ ವಿಶಿಷ್ಟ ಅನುಭವ ಎನಿಸುತ್ತದೆ. ಆದರೆ, ತುಸು ಯೋಚಿಸಿದಾಗ, ನದಿ ಇಷ್ಟು ಬೇಗ ಬರಿತಾಯಿತೇ? ಎಂಬ ಪ್ರಶ್ನೆಯೂ ಮೂಡುತ್ತದೆ.

ನದಿ ಬೇಸಿಗೆಯಲ್ಲಿ ಬರಿದಾಗಲು ಮಳೆ ಪ್ರಮಾಣ ಕಡಿಮೆಯಾಗುವುದು ಕಾರಣ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಅದಕ್ಕಿಂತಲೂ ಹೆಚ್ಚಾಗಿ ಇಲ್ಲಿ ನದಿಯನ್ನು ಸೇರುವ ಸಣ್ಣ ಸಣ್ಣ ತೊರೆಗಳು ಮುಗುಮ್ಮನೇ ಬತ್ತುತ್ತಿರುವುದು ಸಹ ಕಾರಣ ಎನಿಸಿದೆ. ಗದ್ದೆಗಳು ವೇಗವಾಗಿ ನಿವೇಶನಗಳಾಗುತ್ತಿವೆ, ಕೃಷಿ ಭೂಮಿಯಲ್ಲಿ ಹೊಸ ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಹೀಗಾಗಿ, ಆ ಪ್ರದೇಶಗಳಲ್ಲಿ ಹಿಂದೆ ಇದ್ದ ನೀರಿನ ಒರತೆ ಬತ್ತಿದೆ. ಇಂತಹ ಅನೇಕ ನೀರಿನ ಒರತೆಗಳು ನದಿ ಸೇರದೇ ನದಿ ಬಡವಾಗುತ್ತಿದೆ ಎಂದು ನಿಸರ್ಗ ತಜ್ಞರು ವಿಶ್ಲೇಷಿಸುತ್ತಾರೆ.

ವಾದ, ವಿವಾದಗಳು ಏನೇ ಇರಲಿ, ಕೊಡಗಿಗೆ ಬಂದು ಇಲ್ಲಿನ ಬೇಸಿಗೆಯ ಸವಿಯನ್ನು ಸವಿಯಲು ಇದು ಸಕಾಲ. ಇಲ್ಲಿನ ತಂಪೆಲರು, ಶ್ವೇತವರ್ಣದ ಕಾಫಿ ಹೂಗಳು, ದುಂಬಿಗಳ ಝೇಂಕಾರ, ಜೇನ್ನೋಣಗಳ ನಿನಾದ ಇನ್ನೂ ಇವೆ. ಇನ್ನೇಕ ತಡ, ಬನ್ನಿ ಕೊಡಗಿನತ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.