ಕೊಪ್ಪಳ: ವರನಟ ಡಾ. ರಾಜಕುಮಾರ್ ಅಭಿನಯದ ಗುರಿ ಚಿತ್ರದಲ್ಲಿ ಚಿ. ಉದಯಶಂಕರ್ ರಚನೆಯ ‘ವಸಂತ ಕಾಲ ಬಂದಾಗ ಮಾವು ಚಿಗುರಲೇಬೇಕು ಕೋಗಿಲೆ ಹಾಡಲೆಬೇಕು’ ಎನ್ನುವ ಹಾಡನ್ನು ಕೊಪ್ಪಳ ಜಿಲ್ಲೆಯ ಮಾವು ಬೆಳೆಗಾರರ ಸಲುವಾಗಿ ‘ವಸಂತ ಮಾಸ ಬಂದಾಗ ರೈತ ನಗಲೇಬೇಕು’ ಎಂದು ಬದಲಾಯಿಸಿ ಹೇಳಬಹುದು.

ಕೊಪ್ಪಳ ಜಿಲ್ಲೆಯಲ್ಲಿ ಮಾರ್ಚ್ ಆರಂಭವಾಗುತ್ತಿದ್ದಂತೆಯೇ ಬಿರುಬಿಸಿಲು ಆರಂಭವಾಗುವುದು ಒಂದಡೆಯಾದರೆ ಮಾವಿನ ತೋಪಿನಲ್ಲಿ ಹೂಗಳ ರಾಶಿ ಕೂಡ ಕಂಗೊಳಿಸುತ್ತದೆ. ರೈತರ ಅಪಾರ ಶ್ರಮ, ಕೃಷಿಯ ಬಗ್ಗೆ ಹೊಂದಿರುವ ಪ್ರೀತಿ ಹಾಗೂ ರೈತ ಬೆಳೆದ ಮಾವುಗಳಿಗೆ ಮಾರುಕಟ್ಟೆ ಜೊತೆಗೆ ‘ಕೊಪ್ಪಳ ಕೇಸರ್’ ಎನ್ನುವ ಬ್ರ್ಯಾಂಡ್ ಕಟ್ಟಿಕೊಡುತ್ತಿರುವ ತೋಟಗಾರಿಕಾ ಇಲಾಖೆಯ ಸಹಕಾರದ ಕಾರಣಕ್ಕಾಗಿ ಜಿಲ್ಲೆಯ ಮಾವು ಹೊರರಾಜ್ಯಗಳಲ್ಲಿಯೂ ಜನರ ಬಾಯಿ ರುಚಿಯ ಆಸೆ ಈಡೇರಿಸುತ್ತಿದೆ.

ಜಿಲ್ಲೆಯಲ್ಲಿ ಕೇಸರ್, ದಶಹರಿ, ತೋತಾಪೂರಿ, ಮಲ್ಲಿಕಾ, ಬೆನೆಶಾನ್, ಸಿಂಧೂರಿ, ಇಮಾಮ ಸೇರಿದಂತೆ ವಿವಿಧ ತಳಿಗಳ ಮಾವು ಬೆಳೆಯಲಾಗುತ್ತಿದೆಯಾದರೂ ಕೇಸರ್ ತಳಿಗೆ ಹೆಚ್ಚು ಬೇಡಿಕೆ. ಆದ್ದರಿಂದ ರೈತರು ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದಕ್ಕೆ ವಿದಾಯ ಹೇಳಿ ಕಡಿಮೆ ಖರ್ಚು ಹಾಗೂ ಹೆಚ್ಚು ಲಾಭ ತಂದುಕೊಡುತ್ತಿರುವ ಮಾವಿನ ಬೆಳೆಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ.

ಹೀಗಾಗಿ ಹೂ ಬಿಡುತ್ತಿದ್ದಂತೆಯೇ ರೈತನ ಜೇಬಿಗೂ ಹಣ ಸೇರುತ್ತದೆ. ಕಾಯಿ ಬಿಡುವ ತಿಂಗಳ ಮೊದಲೇ ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುವ ವ್ಯಾಪಾರಿಗಳು ತೋಟವನ್ನು ಗುತ್ತಿಗೆ ಪಡೆದು ತೋಟದ ಮಾಲೀಕರಿಗೆ ಹಣ ಪಾವತಿಸುತ್ತಾರೆ. ಋತು ಮುಗಿಯುತ್ತಿದ್ದಂತೆಯೇ ವ್ಯಾಪಾರಿಗಳ ಜೇಬು ಕೂಡ ಭರ್ತಿಯಾಗುತ್ತದೆ.

ಕೇಸರ್ಗೆ ಯಾಕೆ ಬೇಡಿಕೆ: ರಾಜ್ಯದ ತೋಟಗಾರಿಕಾ ಕ್ಷೇತ್ರದ ಹಬ್ ಆಗಿ ಬೆಳೆಯುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ಆರೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಸ್ಥಳೀಯ ಹವಾಗುಣ, ಮಣ್ಣಿನ ಕಾರಣಕ್ಕಾಗಿ ಕೊಪ್ಪಳ ಕೇಸರ್ ರುಚಿಯಾಗಿರುತ್ತವೆ.

ಇಲ್ಲಿನ ಹಣ್ಣುಗಳು ಹೊಂದಿರುವಷ್ಟೇ ರುಚಿಯನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ಕೇಸರ್ ತಳಿಗಳು ಕೂಡ ಹೊಂದಿವೆ. ಆದರೆ ಈ ಎರಡೂ ರಾಜ್ಯಗಳ ಫಸಲು ಮೇ ಅಂತ್ಯದಿಂದ ಆರಂಭವಾಗುತ್ತದೆ. ಆ ವೇಳೆಗಾಗಲೇ ಜಿಲ್ಲೆಯ ಮಾವಿನ ಹಣ್ಣುಗಳು ಶೇ. 70ರಷ್ಟು ಮಾರಾಟವಾಗುತ್ತಿರುವುದು ಜಿಲ್ಲೆಯ ಮಾವು ಬೆಳೆಗಾರರನ್ನು ಉದ್ಯಮಿಗಳನ್ನಾಗಿ ಮಾಡುತ್ತಿದೆ.

ಕಳೆದ ವರ್ಷ ಕೊಪ್ಪಳ ತಾಲ್ಲೂಕಿನ ಯಲಮಗೇರಿ ಎಂಬ ಗ್ರಾಮದಲ್ಲಿ ಯುವರೈತ ಪಾಲಾಕ್ಷಗೌಡ ಮೇಟಿ ಆರೇಳು ವರ್ಷಗಳಿಂದ ನಿರಂತರವಾಗಿ ಪಪ್ಪಾಯ ಬೆಳೆದು ಈಗ ಮಾವು ಬೆಳೆದಿದ್ದಾರೆ. ಒಂದು ಋತುವಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಸ್ಥಳೀಯ ದಲ್ಲಾಳಿಗಳು ನೇರವಾಗಿ ರೈತರ ಹೊಲಕ್ಕೆ ಬಂದು ಖರೀದಿಸಿ ಅದನ್ನು ಮುಂಬೈ, ಕೋಲ್ಕತ್ತ ಹಾಗೂ ದೆಹಲಿ ಮಾರುಕಟ್ಟೆ ಮೂಲಕ ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ದಾಳಿಂಬೆ ಶ್ರೀಲಂಕಾ ಮತ್ತು ದುಬೈಗೆ ರಫ್ತಾಗುತ್ತಿದೆ. ತೋಟಗಾರಿಕಾ ಇಲಾಖೆ ವತಿಯಿಂದಲೂ ಪ್ರತಿವರ್ಷ ಮೇಳ ಆಯೋಜನೆ ಮಾಡಲಾಗುತ್ತಿದ್ದು, ಅಲ್ಲಿಯೂ ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ವೇದಿಕೆ ಲಭಿಸುತ್ತದೆ. ಮಾವಿನ ಹಣ್ಣುಗಳ ಮಾರಾಟದ ಜೊತೆ ಕಾಯಿ ಇರುವಾಗಲೇ ಉಪ್ಪಿನಕಾಯಿ ಸೇರಿದಂತೆ ಮಾವು ಮೌಲ್ಯವರ್ಧನೆ ಮಾಡಿ ಆದಾಯದ ವಿವಿಧ ಮೂಲಗಳನ್ನು ರೈತರು ಹುಡುಕಿಕೊಂಡಿದ್ದಾರೆ.

ಮಾವಿನ ಋತು ಆರಂಭವಾಗುವ ಪೂರ್ವದಲ್ಲಿ ತಮ್ಮ ಹೊಲದಲ್ಲಿನ ಹಣ್ಣುಗಳನ್ನು ಯಾರೂ ಕದ್ದುಕೊಂಡು ಹೋಗಬಾರದು ಎನ್ನುವ ಕಾರಣಕ್ಕೆ ಹೊಲದ ಸುತ್ತಲೂ ’ಗಸ್ತಿ’ಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ರೈತರು ನಗುವಿನ ಮೊಗ ಅರಳಿಸುತ್ತಿದ್ದಾರೆ. ಹೀಗಾಗಿ ವಸಂತ ಕಾಲ ರೈತನ ನಗುವಿಗೂ ಸುಗ್ಗಿಕಾಲದಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.