ಬೀದರ್: ಸುಂಯ್.. ಸುಂಯ್.. ಹೀಗೆ ಇಲ್ಲಿ ದಿನಬೆಳಗಾದ್ರೆ ಈ ಶಬ್ದ ಸಾಮಾನ್ಯ. ಕಣ್ಣು ಮಿಟುಕಿಸಿ ನೋಡುವಷ್ಟರಲ್ಲಿ ಆಕಾಶದಲ್ಲಿ ಮರೆಯಾಗುವ ಲೋಹದ ಹಕ್ಕಿಗಳು. ಅವುಗಳ ಬಗೆಬಗೆಯ ಕಸರತ್ತು, ಕರಾಮತ್ತು ನೋಡುವುದೇ ಕಣ್ಣುಗಳಿಗೆ ಹಿತಾನುಭವ.

ಇಂಥದ್ದೊಂದು ಅನುಭವ ಪಡೆಯಬೇಕಾದರೆ ಬೀದರ್ ನಗರಕ್ಕೆ ಬರಬೇಕು. ಏಕೆಂದರೆ ಇಲ್ಲಿ ಭಾರತೀಯ ವಾಯುಪಡೆಯ ತರಬೇತಿ ಕೇಂದ್ರವಿದೆ. ಇಲ್ಲಿ ನಿತ್ಯವೂ ಯುದ್ಧ ವಿಮಾನಗಳ ತರಬೇತಿ ನೀಡಲಾಗುತ್ತದೆ. ಯುದ್ಧದ ಸಂದರ್ಭದಲ್ಲಿ ಬಳಸಲಾಗುವ ಎಲ್ಲ ಪಟ್ಟುಗಳನ್ನು ಕಲಿಸಿಕೊಡಲಾಗುತ್ತದೆ. ಇದನ್ನು ಆಕಾಶದಲ್ಲಿ ಕಣ್ಣಾಡಿಸಿದರೆ ನೋಡಲು ಸಿಗುತ್ತದೆ. ಬಹಳ ಹತ್ತಿರದಿಂದ ವಿಮಾನಗಳ ಟೇಕಾಫ್ ಹಾಗೂ ಲ್ಯಾಂಡಿಂಗ್ ಕೂಡ ನೋಡಬಹುದು. ನಗರದ ನ್ಯೂ ಆದರ್ಶ ಕಾಲೊನಿ, ಚಿದ್ರಿಗೆ ಹೊಂದಿಕೊಂಡಂತೆ ಬೀದರ್ ವಾಯುಪಡೆ ತರಬೇತಿ ಕೇಂದ್ರವಿದೆ. ಇಲ್ಲಿಂದ ಹಾದು ಹೋದರೆ ಯಾವಾಗಲೂ ವಿಮಾನಗಳ ಸದ್ದು ಕರ್ಣಗಳಿಗೆ ಅಪ್ಪಳಿಸುತ್ತದೆ. ವಿಮಾನಗಳ ಹಾರಾಟ, ಅವುಗಳು ಇಳಿಯುವ ದೃಶ್ಯಗಳನ್ನು ಬಹಳ ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು.

ಹೇಳಿ ಕೇಳಿ ಇದು ಭಾರತೀಯ ವಾಯುಪಡೆ ತರಬೇತಿ ಕೇಂದ್ರ. ಇಲ್ಲಿ ಹೊರಗಿನವರಿಗೆ ಪ್ರವೇಶ ನಿಷಿದ್ಧ. ಕೇಂದ್ರದ ಸುತ್ತಲೂ 8ರಿಂದ 10 ಅಡಿ ಕಾಂಪೌಂಡ್ ನಿರ್ಮಿಸಿ, ಅದರ ಮೇಲೆ ತಂತಿ ಬೇಲಿ ಹಾಕಲಾಗಿದೆ. ಅಲ್ಲಲ್ಲಿ ವೀಕ್ಷಣಾ ಗೋಪುರಗಳು, ಸಿಸಿಟಿವಿ ಕ್ಯಾಮೆರಾಗಳು, ಎಕೆ–47 ಕೈಯಲ್ಲಿ ಹಿಡಿದ ಯೋಧರ ಹದ್ದಿನ ಕಣ್ಣು ಹಗಲು–ರಾತ್ರಿ ಇರುತ್ತದೆ. ಆದರೆ, ಆಕಾಶದಲ್ಲಿ ಹಾರಾಡುವ ವಿಮಾನಗಳನ್ನು ನೋಡುವುದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ.

ಎರಡನೇ ವಿಶ್ವಯುದ್ಧದ ಹಿನ್ನೆಲೆ:

ಬೀದರ್ ವಾಯುಪಡೆ ತರಬೇತಿ ಕೇಂದ್ರಕ್ಕೆ ದೀರ್ಘ ಇತಿಹಾಸವಿದೆ. 1943ರಿಂದ 1947ರ ನಡುವೆ ಈ ಕೇಂದ್ರ ನಿರ್ಮಿಸಲಾಗಿದೆ. ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಅಮೆರಿಕದ ವಾಯು ಪಡೆಯವರು ಈ ರನ್ವೇ ನಿರ್ಮಿಸಿದ್ದರು. ಇದು ವಿಶ್ವದರ್ಜೆಯ ರನ್ ವೇ ಎಂದು ಗುರುತಿಸಿಕೊಂಡಿತ್ತು. ಈಗಲೂ ಸಹ ಅಷ್ಟೇ.

ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳ ವಿಮಾನಗಳು ಬೀದರ್ ವಾಯುನೆಲೆಯಲ್ಲಿ ತೈಲ ತುಂಬಿಸಿಕೊಂಡು ಜಪಾನ್ ಮತ್ತು ಅದರ ದೋಸ್ತಿ ರಾಷ್ಟ್ರಗಳ ಮೇಲೆ ಬಾಂಬ್ಗಳ ಸುರಿಮಳೆಗೈಯುತ್ತಿದ್ದವು. ದಕ್ಷಿಣ ಭಾರತದ ಸುರಕ್ಷಿತ ರನ್ ವೇ ಎಂಬ ಹೆಗ್ಗಳಿಕೆ ಇದು ಹೊಂದಿತ್ತು. ಅಂದಿನ ಕಾಲದಲ್ಲಿ ನವದೆಹಲಿ, ಕೋಲ್ಕತ್ತ ಸೇರಿದಂತೆ ಕೆಲವೇ ಕೆಲವು ರನ್ವೇಗಳಲ್ಲಿ ಬೀದರ್ ವಾಯುಪಡೆ ತರಬೇತಿ ಕೇಂದ್ರದ ನೆಲೆಗೂ ವಿಶೇಷ ಮಹತ್ವ ಇತ್ತು. ಅಂದಹಾಗೆ, ಈ ಭಾಗ ಅಂದು ಹೈದರಾಬಾದಿನ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು.

ಬೀದರ್, ನೆರೆಯ ತೆಲಂಗಾಣದ ಹೈದರಾಬಾದ್, ತಮಿಳುನಾಡಿನ ಚೆನ್ನೈ ಜೊತೆ ಉತ್ತಮ ರಸ್ತೆ ಮತ್ತು ರೈಲು ಸಂಪರ್ಕ ಹೊಂದಿತ್ತು. ಲ್ಯಾಟ್ರೈಟ್ನಿಂದ ಸಮೃದ್ಧವಾದ ಕೆಂಪು ನೆಲ ವಾಯು ಪಡೆ ತರಬೇತಿ ಕೇಂದ್ರ ನಿರ್ಮಾಣಕ್ಕೆ ಸೂಕ್ತವಾಗಿತ್ತು. ಆ ಕಾಲದಲ್ಲಿ ರೈಲು ನಿಲ್ದಾಣದಿಂದ ವಾಯುಪಡೆ ಕೇಂದ್ರದ ವರೆಗೆ ರೈಲು ಸಂಪರ್ಕ ಕಲ್ಪಿಸಲಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಈ ಕೇಂದ್ರ ನಿಜಾಮನ ಅಧೀನಕ್ಕೆ ಒಳಪಟ್ಟಿತ್ತು. ಭಾರತ ಸರ್ಕಾರದೊಂದಿಗಿನ ಸಂಘರ್ಷದ ಸಂದರ್ಭದಲ್ಲಿ ಈ ಕೇಂದ್ರದಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ನಿಜಾಮರು ಇದನ್ನು ಬಳಸಿಕೊಳ್ಳುತ್ತಿದ್ದರು.

1948ರಲ್ಲಿ ನಿಜಾಮರೊಂದಿಗೆ ನಡೆದ ಸಂಘರ್ಷದ ಸಂದರ್ಭದಲ್ಲಿ ಭಾರತೀಯ ಸೇನೆಯು ಈ ಕೇಂದ್ರದ ಮೇಲೆ ದಾಳಿ ನಡೆಸಿತ್ತು. ಬಳಿಕ ಹಲವು ದಿನಗಳ ವರೆಗೆ ಈ ಕೇಂದ್ರದ ಬಳಕೆ ನಿಂತು ಹೋಗಿತ್ತು. 1952 ಮತ್ತು 1962ರ ಸಂದರ್ಭದಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರು ವಾಯುಪಡೆ ತರಬೇತಿ ಕೇಂದ್ರಕ್ಕೆ ಬಂದು, ನೆರೆಯ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದರು. ಭಾರತ–ಚೀನಾ ಯುದ್ಧದ ನಂತರ ದಕ್ಷಿಣ ಭಾರತದಲ್ಲಿ ವಾಯುಪಡೆ ಕೇಂದ್ರವೊಂದನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಆಗ ಥಟ್ಟನೆ ಹೊಳೆದದ್ದೇ ಬೀದರ್ ವಾಯುನೆಲೆ. ಆನಂತರದಲ್ಲಿ ವಾಯುಪಡೆಯ ತರಬೇತಿ ಕೇಂದ್ರ ಆರಂಭಿಸಲಾಯಿತು. ಅಂದಿನಿಂದ ಇಂದಿನವರೆಗೆ ಕೇಂದ್ರ ಯಶಸ್ವಿಯಾಗಿ ನಡೆಯುತ್ತಿದೆ.

ಸೂರ್ಯಕಿರಣ ವಿಮಾನಗಳ ತರಬೇತಿ ಕೇಂದ್ರ ಎಂಬ ದೊಡ್ಡ ಹೆಗ್ಗಳಿಕೆ ಇದಕ್ಕಿದೆ. ಏಕೆಂದರೆ ಆರಂಭದಿಂದ ಹೆಚ್ಚಾಗಿ ಸೂರ್ಯಕಿರಣ ವಿಮಾನಗಳ ತರಬೇತಿ ಇಲ್ಲಿ ಕೊಡಲಾಗುತ್ತಿತ್ತು. ಈಗಲೂ ಅದು ಮುಂದುವರೆದಿದೆ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಏರ್ ಶೋ ಪ್ರಸ್ತುತಪಡಿಸಿದ ಕೀರ್ತಿ ಸೂರ್ಯಕಿರಣ ವಿಮಾನಗಳ ತಂಡಕ್ಕಿದೆ. ಪ್ರತಿವರ್ಷ ಬೀದರ್ ಕೋಟೆಯ ಮೇಲೂ ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ ಏರ್ಪಡಿಸಿ, ಭಾರತೀಯ ವಾಯುಪಡೆಯ ಮಹತ್ವ ಸಾರಲಾಗುತ್ತದೆ.

2008ರಲ್ಲಿ ಬೀದರ್ ವಾಯುಪಡೆ ತರಬೇತಿ ಕೇಂದ್ರಕ್ಕೆ ‘ಹಾಕ್’ ಯುದ್ಧ ವಿಮಾನಗಳು ಬಂದಿಳಿದವು. ದೇಶದ ಮೊದಲ ಹಾಕ್ ಯುದ್ಧ ವಿಮಾನಗಳ ತರಬೇತಿ ಕೇಂದ್ರ ಎಂಬ ಹಿರಿಮೆಗೆ ಪಾತ್ರವಾಯಿತು. ಅದಾದ ನಂತರ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಬಹುತೇಕ ಯುದ್ಧ ವಿಮಾನಗಳು ಇಲ್ಲಿನ ತರಬೇತಿ ಕೇಂದ್ರದ ನೆಲ ಸ್ಪರ್ಶಿಸಿವೆ.

ಉತ್ತರ ಕರ್ನಾಟಕ, ಅದರಲ್ಲೂ ಕಲ್ಯಾಣ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಿಗೆ ಭೇಟಿ ನೀಡುವಾಗ ಗಣ್ಯರು ಈ ವಾಯುಪಡೆ ತರಬೇತಿ ಕೇಂದ್ರದ ಮೂಲಕವೇ ಹಾದು ಹೋಗುತ್ತಾರೆ. ವಿಶೇಷ ವಿಮಾನದಲ್ಲಿ ಇಲ್ಲಿಗೆ ಬಂದಿಳಿದು, ಇಲ್ಲಿಂದ ಹೆಲಿಕ್ಯಾಪ್ಟರ್ ಅಥವಾ ರಸ್ತೆ ಮಾರ್ಗವಾಗಿ ತೆರಳುತ್ತಾರೆ. ಈ ದೇಶದ ಹಲವು ರಾಷ್ಟ್ರಪತಿಗಳು, ಪ್ರಧಾನಿಗಳು, ಕೇಂದ್ರ ಮಂತ್ರಿಗಳು, ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಗಣ್ಯರು ಸೇರಿದಂತೆ ಹಲವರು ಈ ಕೇಂದ್ರದ ಮೂಲಕ ಹಾದು ಹೋಗುವುದು ಈಗಲೂ ಸರ್ವೇ ಸಾಮಾನ್ಯ.

ಭಾರತೀಯ ವಾಯುಪಡೆಗೆ ಸೇರಿದ ಈ ರನ್ವೇ ಮೂಲಕವೇ ನಾಗರಿಕ ವಿಮಾನಯಾನ ಸೇವೆ ಕೂಡ ಆರಂಭಿಸಲಾಗಿದೆ. ಕೇಂದ್ರದ ಒಂದು ಭಾಗದಲ್ಲಿ ಟರ್ಮಿನಲ್ ನಿರ್ಮಿಸಲಾಗಿದ್ದು, ಜನರಿಗೆ ವಿಮಾನ ಸೇವೆಯೂ ಲಭ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.