ಹೂವಿನಹಡಗಲಿ (ವಿಜಯನಗರ ಜಿಲ್ಲೆ): ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಜನರ ಬಹುದಿನಗಳ ಕನಸಾಗಿದ್ದ ಮಹತ್ವಕಾಂಕ್ಷಿ ‘ಸಿಂಗಟಾಲೂರು ಏತ ನೀರಾವರಿ ಯೋಜನೆ’ ಚಾಲನೆಗೊಂಡು 14 ವರ್ಷ ಕಳೆದಿದೆ. ಕಾಲುವೆಯ ಕೊನೇ ಭಾಗಕ್ಕೆ ಇನ್ನೂ ನೀರು ತಲುಪಿಲ್ಲ ಎಂಬುದು ಹಳೆಯ ಮಾತು, ಶೇ 50ರಷ್ಟು ಭೂ ಪ್ರದೇಶಕ್ಕೂ ನೀರು ಹರಿಯುತ್ತಿಲ್ಲ ಎಂಬುದೇ ವಾಸ್ತವ. ಒಂದು ಅತ್ಯುತ್ರಮ ಯೋಜನೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಹೇಗೆ ಜನಸ್ನೇಹಿ ಯೋಜನೆ ಆಗುವುದಿಲ್ಲ ಎಂಬುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನವಾಗಿ ಕಾಣಿಸುತ್ತಿದೆ.

ಹೂವಿನಹಡಗಲಿ ತಾಲ್ಲೂಕಿನ ರಾಜವಾಳ, ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಮಧ್ಯದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ 3.12 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಬ್ಯಾರೇಜ್ ನಿರ್ಮಿಸಲಾಗಿದೆ. ಬಲದಂಡೆ ಹೂವಿನಹಡಗಲಿ ತಾಲ್ಲೂಕಿನಲ್ಲಿ ಕಾಲುವೆ ನೀರಾವರಿಯಿಂದ 35,791 ಎಕರೆ, ಎಡ ದಂಡೆಯ ಮುಂಡರಗಿ ತಾಲ್ಲೂಕಿನಲ್ಲಿ 12,590 ಎಕರೆ ಕಾಲುವೆ ನೀರಾವರಿ, ಗದಗ, ಕೊಪ್ಪಳ ಜಿಲ್ಲೆಯ 2,16,848 ಎಕರೆ ಸೂಕ್ಷ್ಮ ನೀರಾವರಿಗೆ ಈ ಯೋಜನೆ ಒಳಪಟ್ಟಿದೆ. ಎಡ ಮತ್ತು ಬಲದಂಡೆ ಎರಡೂ ಸೇರಿ ಒಟ್ಟು 2,65,229 ಎಕರೆ ಭೂ ಪ್ರದೇಶಕ್ಕೆ ನೀರುಣಿಸುವ ಯೋಜನೆ ಇದಾಗಿದೆ.

ಸಾವಿರಾರು ಕೋಟಿ ರೂಪಾಯಿ ಮೊತ್ತದ ನೀರಾವರಿ ಯೋಜನೆ ಅನುಷ್ಠಾನಗೊಳಿಸಿರುವ ಸರ್ಕಾರ, ಇದರ ಸೂಕ್ತ ನಿರ್ವಹಣೆಯನ್ನೇ ಮರೆತಂತೆ ಕಾಣಿಸುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆ, ಮುಳುಗಡೆ ಸಂತ್ರಸ್ತರ ಪುನರ್ವಸತಿ, ಪುನರ್ ನಿರ್ಮಾಣ ಕೆಲಸಗಳು ಅರ್ಧಕ್ಕೆ ನಿಂತಿವೆ. ಬಲದಂಡೆ ಭಾಗದ ಹೂವಿನಹಡಗಲಿ ತಾಲ್ಲೂಕಿನಲ್ಲಿ 40.32 ಕಿ.ಮೀ. ಶಾಖಾ ಕಾಲುವೆ, 109.99 ಕಿ.ಮೀ. ವಿತರಣಾ ಕಾಲುವೆಗಳನ್ನು ನಿರ್ಮಿಸಲಾಗಿದ್ದು, ಬಹುತೇಕ ಕಾಲುವೆಗಳು ದುರಸ್ತಿಗೀಡಾಗಿವೆ. ಕೆಲವೆಡೆ ಕಾಲುವೆ ಕಾಣಿಸದಂತೆ ಜಾಲಿಪೊದೆ, ಗಿಡಗಂಟೆಗಳು ಬೆಳೆದಿವೆ. ಅನೇಕ ಕಡೆ ಕಾಲುವೆಗಳು ಬಿರುಕು ಬಿಟ್ಟು ಸೋರುತ್ತಿವೆ. ಹೂಳು ತುಂಬಿಕೊಂಡು ಸಮತಟ್ಟಾಗಿವೆ. ಸೋರಿಕೆಯ ನೀರು ಹೊಲಗಳಿಗೆ ಹರಿದು ಬೆಳೆಗಳು ಹಾನಿಗೀಡಾಗುತ್ತಿವೆ ಎಂದು ರೈತರು ತಗಾದೆ ತೆಗೆಯುತ್ತಿದ್ದಾರೆ.

ಕಾಲುವೆಗಳನ್ನು ಅವೈಜ್ಞಾನಿಕವಾಗಿ ತೋಡಿರುವುದರಿಂದ ಹಾಗೂ ಕೆಲವೆಡೆ ದುರಸ್ತಿಯ ಕಾರಣಕ್ಕೆ ಕೊನೆಯ ಭಾಗಕ್ಕೆ ಇನ್ನೂ ನೀರು ತಲುಪಿಲ್ಲ. ಮಾಗಳ, ಅಯ್ಯನಹಳ್ಳಿ, ದಾಸರಹಳ್ಳಿ ತಾಂಡ ಬಳಿ ವಿತರಣಾ ಕಾಲುವೆಗಳು ಆಗಿಲ್ಲ. ಹೊಲಗಾಲುವೆಗಳು ನಿರ್ಮಾಣವಾಗದೇ ಬಹುತೇಕ ರೈತರು ಮೋಟಾರ್ ಪಂಪ್ ಅಳವಡಿಸಿಕೊಂಡೇ ಹೊಲಗಳಿಗೆ ನೀರು ಹರಿಸಿಕೊಳ್ಳಬೇಕಿದೆ. ಕೆಲ ರೈತರಿಗೆ ಯೋಜನೆ ವರದಾನವಾಗಿದ್ದರೆ, ಹಲವರಿಗೆ ನಿರಾಸೆ ತಂದಿದೆ.

ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ತುಂಗಭದ್ರಾ ನದಿಯ ನೀರನ್ನು ಬಳಸಿಕೊಂಡು ಈ ಭಾಗವನ್ನು ಬರಮುಕ್ತಗೊಳಿಸಬಹುದಾದ ಯೋಜನೆ ಅನುಷ್ಠಾನಗೊಂಡಿದ್ದರೂ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಇಚ್ಛಾಸಕ್ತಿಯ ಕೊರತೆಯಿಂದ ಅದು ಸಾಧ್ಯವಾಗಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.

ಪರಿಷ್ಕಾರಗೊಳ್ಳುತ್ತಲೇ ಸಾಗಿರುವ ಯೋಜನೆ

1992ರಲ್ಲಿ ಮಂಜೂರಾಗಿದ್ದ ಸಿಂಗಟಾಲೂರು ಏತ ನೀರಾವರಿ ಯೋಜನೆ ತಾಂತ್ರಿಕ ಅನುಮೋದನೆಯೊಂದಿಗೆ ಅಧಿಕೃತ ಚಾಲನೆಗೊಂಡಿದ್ದು 1996-97ರಲ್ಲಿ. ಮೊದಲು 7.64 ಟಿಎಂಸಿ ಅಡಿ ನೀರು ಬಳಸಿಕೊಂಡು ಎಡ ಮತ್ತು ಬಲ ದಂಡೆಯ 40 ಸಾವಿರ ಎಕರೆಗೆ ಮಾತ್ರ ನೀರುಣಿಸುವ ₹63.62 ಕೋಟಿ ವೆಚ್ಚದ ಯೋಜನೆ ಸಿದ್ದವಾಗಿತ್ತು. ನಂತರ 29-12-2000 ರಲ್ಲಿ ಪರಿಷ್ಕಾರಗೊಂಡು 18.55 ಟಿಎಂಸಿ ಅಡಿ ನೀರಿನ ಬಳಕೆಯೊಂದಿಗೆ ₹595 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ದೊರಕಿತ್ತು. 2011 ರಲ್ಲಿ ಈ ಯೋಜನಾ ವರದಿ ₹1,864.50 ಕೋಟಿಗೆ ಪರಿಷ್ಕರಣೆಗೊಂಡಿತ್ತು. 2013-14ರಲ್ಲಿ ಈ ಯೋಜನೆ ಮತ್ತೆ ಪರಿಷ್ಕರಣೆಗೊಂಡು ಎಡ ದಂಡೆಯ ಭಾಗದಲ್ಲಿ ಸೂಕ್ಷ್ಮ ಹಾಗೂ ಹನಿ (ಮೈಕ್ರೋ) ನೀರಾವರಿಗೆ ಒಳಪಡಿಸಿ, 2.65 ಲಕ್ಷ ಎಕರೆಗೆ ನೀರುಣಿಸುವ ₹5768 ಕೋಟಿ ಮೊತ್ತದ ಯೋಜನೆ ಜಾರಿಯಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್, ಸಚಿವ ಎಚ್.ಕೆ.ಪಾಟೀಲ್, ಮಾಜಿ ಸಚಿವರಾದ ಈಟಿ ಶಂಭುನಾಥ, ಎಸ್.ಎಸ್.ಪಾಟೀಲ್, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಬಿ.ಚಂದ್ರನಾಯ್ಕ ಶ್ರಮಿಸಿದ್ದಾರೆ.

ಬಲಭಾಗದ ಮೊದಲನೇ ಹಂತದ ನೀರೆತ್ತುವ ಘಟಕ

ಸಿಂಗಟಾಲೂರು ಬ್ಯಾರೇಜ್ನಿಂದ 1.15 ಕಿ.ಮೀ. ಉದ್ದದ ಇಂಟೇಕ್ ಕಾಲುವೆ ತೋಡಿ ಜಾಕ್ವೆಲ್ ಪಂಪ್ ಹೌಸ್ ನಿರ್ಮಿಸಲಾಗಿದೆ. ಇದರಿಂದ ಮೂರು ಶಾಖಾ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. 5.70 ಕಿ.ಮೀ. ಉದ್ದದ ಕೆ.ಅಯ್ಯನಹಳ್ಳಿ ಶಾಖಾ ಕಾಲುವೆಯಿಂದ 5,000 ಎಕರೆ, 4 ಕಿ.ಮೀ. ಉದ್ದ ರಾಜವಾಳ ಶಾಖಾ ಕಾಲುವೆಯಿಂದ 3,000 ಎಕರೆ, 5 ಕಿ.ಮೀ. ಉದ್ದದ ಮಾಗಳ ಶಾಖಾ ಕಾಲುವೆಯಿಂದ 4,000 ಎಕರೆಯಂತೆ ಒಟ್ಟು 12,000 ಎಕರೆ ಭೂ ಪ್ರದೇಶ ನೀರಾವರಿ ಅಚ್ಚುಕಟ್ಟಿಗೆ ಸೇರಿದೆ.

ಬಲ ಭಾಗದ ಎರಡನೇ ನೀರೆತ್ತುವ ಘಟಕ:
ಎರಡನೇ ಘಟಕದ ಅಡಿಯಲ್ಲಿ 25.43 ಕಿ.ಮೀ. ಉದ್ದದ ಹೂವಿನಹಡಗಲಿ ಶಾಖಾ ಕಾಲುವೆ ತೋಡಲಾಗಿದೆ. 13 ಕಿ.ಮೀ. ವರೆಗೆ 14,800 ಎಕರೆ ಪ್ರದೇಶ ನೀರಾವರಿ ಸೌಲಭ್ಯಕ್ಕೆ ಒಳಪಟ್ಟಿದೆ. 13ನೇ ಕಿ.ಮೀ. ನಿಂದ 25.43 ಕಿ.ಮೀ. ವರೆಗೆ ಅಲ್ಲಲ್ಲಿ ವಿತರಣಾ ಕಾಲುವೆಗಳ ನಿರ್ಮಾಣ ಕೆಲಸ ಇನ್ನೂ ಬಾಕಿ ಇದೆ. ಈ ವಿತರಣಾ ಕಾಲುವೆಯಿಂದ 8,991 ಎಕರೆಗೆ ನೀರು ಹರಿಯಬೇಕಿದ್ದು, ಸಮರ್ಪಕ ಕಾಲುವೆಗಳಿಲ್ಲದೇ ರೈತರಿಗೆ ನೀರಾವರಿ ಸೌಲಭ್ಯ ಮರೀಚಿಕೆಯಾಗಿದೆ.

146 ಗ್ರಾಮಗಳಿಗೆ ಅನುಕೂಲ

ಈ ಯೋಜನೆಯಿಂದ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ 51, ಗದಗ ಜಿಲ್ಲೆಯ 72, ಕೊಪ್ಪಳ ಜಿಲ್ಲೆಯ 23 ಗ್ರಾಮಗಳು ನೀರಾವರಿಗೆ ಒಳಪಟ್ಟಿವೆ. ಹೂವಿನಹಡಗಲಿ ಪಟ್ಟಣ, ಗದಗ-ಬೆಟಗೇರಿ ನಗರಗಳಿಗೆ ಯೋಜನೆಯ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸಲಾಗುತ್ತದೆ. ಹೂವಿನಹಡಗಲಿ, ಕೂಡ್ಲಿಗಿ ತಾಲ್ಲೂಕುಗಳ ಕೆರೆ ತುಂಬಿಸುವ ಯೋಜನೆ, ಹಗರಿಬೊಮ್ಮನಹಳ್ಳಿ ತಾಲ್ಲೂಕು ಮಾಲವಿ ಜಲಾಶಯಕ್ಕೆ ನೀರು ಹರಿಸುವ ಯೋಜನೆ. ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಈ ನೀರಾವರಿ ಯೋಜನೆ ಸಹಕಾರಿಯಾಗಿದೆ. ಕುಡಿಯುವ ನೀರು, ಕೃಷಿ, ಮೀನುಗಾರಿಕೆಗೆ ಪೂರಕವಾಗಿದೆ.

ಸಿಂಗಟಾಲೂರು ಬ್ಯಾರೇಜ್ನ ತಾಂತ್ರಿಕ ಮಾಹಿತಿ

ಹೂವಿನಹಡಗಲಿ ತಾಲ್ಲೂಕು ರಾಜವಾಳ ಮತ್ತು ಮುಂಡರಗಿ ತಾಲ್ಲೂಕು ಹಮ್ಮಿಗಿ ಗ್ರಾಮ ಮಧ್ಯೆ ತುಂಗಭದ್ರಾ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿದೆ. 387.50 ಮೀ. ಉದ್ದ, 30 ಮೀಟರ್ ಎತ್ತರದ ಬ್ಯಾರೇಜ್ ನಿರ್ಮಿಸಲಾಗಿದೆ. 12.50 ಮೀ.* 8.30 ಮೀ. ಅಳತೆಯ 26 ವರ್ಟಿಕಲ್ ಲಿಫ್ಟ್ ಗೇಟ್ ಗಳನ್ನು ಅಳವಡಿಸಲಾಗಿದೆ. ಸುರಕ್ಷತೆಗಾಗಿ ಸಾಪ್ಟ್ ಲಾಗ್ ಗೇಟ್ ವ್ಯವಸ್ಥೆ ಅಳವಡಿಸಿರುವುದು ವಿಶೇಷ. ಬ್ಯಾರೇಜ್ ಮೇಲೆ 6.50 ಮೀ. ಅಗಲದ ರಸ್ತೆ ನಿರ್ಮಿಸಲಾಗಿದೆ. ಬ್ಯಾರೇಜ್ ಸಮೀಪ ನದಿಯ ಸರಾಸರಿ ತಳಮಟ್ಟ 498 ಮೀ. ಹಾಗೂ ಬ್ಯಾರೇಜಿನ ಮೇಲ್ಮಟ್ಟ 509 ಮೀ. ಇದ್ದು, ಸಂಗ್ರಹಣಾ ಸಾಮರ್ಥ್ಯ 3.12 ಟಿ.ಎಂ.ಸಿ. ಆಗಿರುತ್ತದೆ.

ಯೋಜನೆ ವ್ಯಾಪ್ತಿಯ ಮುಳುಗಡೆ ಗ್ರಾಮಗಳು ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಳ್ಳದೇ ಇರುವುದರಿಂದ ನೀರು ಸಂಗ್ರಹಣೆಯ ಎತ್ತರವನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತದೆ. ಈ ವರ್ಷ 5.76 ಮೀ. ನಿಂದ 5.78 ಮೀ ಎತ್ತರಕ್ಕೆ ನೀರು ನಿಲ್ಲಿಸಿ, 2.43 ಟಿ.ಎಂ.ಸಿ. ನೀರು ಸಂಗ್ರಹಿಸಲಾಗಿದೆ.

ಮುಳುಗಡೆ ವ್ಯಾಪ್ತಿಯಲ್ಲಿ ನಾಲ್ಕು ಗ್ರಾಮಗಳು

ಬ್ಯಾರೇಜ್ನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ನಿಲ್ಲಿಸಿದರೆ ಬಲದಂಡೆ ಹೂವಿನಹಡಗಲಿ ತಾಲ್ಲೂಕಿನ ಅಲ್ಲಿಪುರ, ಎಡದಂಡೆಯ ಮುಂಡರಗಿ ತಾಲ್ಲೂಕಿನ ಗುಮ್ಮಗೋಳ, ಬಿದರಳ್ಳಿಮ ವಿಠಲಾಪುರ ಗ್ರಾಮಗಳು ಮುಳುಗಡೆಯಾಗಲಿವೆ. ಈಗಾಗಲೇ ಅಲ್ಲಿಪುರ ಮತ್ತು ಗುಮ್ಮಗೋಳ ಗ್ರಾಮಗಳನ್ನು ಪುನರ್ವಸತಿ ಪುನರ್ ನಿರ್ಮಾಣ ಯೋಜನೆಯಡಿ ₹109.91 ಕೋಟಿ ವೆಚ್ಚದಲ್ಲಿ ನವಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬಿದರಳ್ಳಿ ಮತ್ತು ವಿಠಲಾಪುರ ಸೇರಿ ಒಂದು ಪುನರ್ವಸತಿ ಗ್ರಾಮವೆಂದು ಗುರುತಿಸಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಬಲದಂಡೆ ಭಾಗದಲ್ಲಿ 1719 ಎಕರೆ, ಎಡ ದಂಡೆಯಲ್ಲಿ 1171 ಕೃಷಿ ಭೂಮಿ ಮುಳುಗಡೆಯಾಗಿವೆ.

ಭೂ ಪರಿಹಾರಕ್ಕಾಗಿ ರೈತರ ಪರದಾಟ

ಈ ಯೋಜನೆಯ ಕಾಲುವೆ ನಿರ್ಮಾಣ, ಸ್ಥಳಾಂತರ ನವ ಗ್ರಾಮಗಳ ನಿರ್ಮಾಣಕ್ಕೆ 15 ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಂಡಿರುವ ಕೃಷಿ ಭೂಮಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೆಲವರಿಗಷ್ಟೇ ಪರಿಹಾರ ದೊರೆತಿದ್ದು, ಎಡ, ಬಲ ದಂಡೆಯ ನೂರಾರು ರೈತರಿಗೆ ಭೂ ಪರಿಹಾರ ಇನ್ನೂ ಮರೀಚಿಕೆಯಾಗಿದೆ.

ಉಳುಮೆಗೆ ಭೂಮಿಯೂ ಇಲ್ಲದೇ ಭೂ ಪರಿಹಾರವೂ ಸಿಗದೇ ರೈತರು ಅತಂತ್ರರಾಗಿದ್ದಾರೆ. ಯೋಜನೆ ಕಚೇರಿಗಳ ಮುಂದೆ ಹಲವು ಬಾರಿ ರೈತರು ಪ್ರತಿಭಟಿಸಿದ್ದಾರೆ, ಕಣ್ಣೀರು ಹಾಕಿದ್ದಾರೆ. ಜನಪ್ರತಿನಿಧಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಬಾರಿ ಸರ್ಕಾರ ಭರವಸೆ ನೀಡಿದೆ ಹೊರತು ಪರಿಹಾರ ನೀಡಿಲ್ಲ.

ಇಲ್ಲಿನ ವಿಶೇಷ ಭೂ ಸ್ವಾಧೀನ ಕಚೇರಿಗೆ ಸರ್ಕಾರ ಕಾಯಂ ಅಧಿಕಾರಿಯನ್ನು ನೇಮಿಸಲೇ ಇಲ್ಲ. ಉಪ ವಿಭಾಗ ಅಧಿಕಾರಿಗಳನ್ನೇ ಪ್ರಭಾರಿಯಾಗಿ ನೇಮಿಸುತ್ತಾ ಬಂದಿದೆ. ಕಚೇರಿಯಲ್ಲಿ ಅಗತ್ಯ ಸಿಬ್ಬಂದಿಯೂ ಇಲ್ಲದೇ ಭೂ ಪರಿಹಾರ ಕಡತಗಳು ದೂಳು ಹಿಡಿದಿವೆ.

ಶೇ 50ರಷ್ಟು ಪ್ರದೇಶಕ್ಕೂ ನೀರು ಹರಿಯುತ್ತಿಲ್ಲ

ಬಲದಂಡೆಯ ಹೂವಿನಹಡಗಲಿ ತಾಲ್ಲೂಕಿನಲ್ಲಿ ಶೇ 50ರಷ್ಟು ಭೂ ಪ್ರದೇಶಕ್ಕೂ ನೀರು ಹರಿಯುತ್ತಿಲ್ಲ. ಕೆ.ಅಯ್ಯನಹಳ್ಳಿ ಶಾಖಾ ಕಾಲುವೆಯಿಂದ ಶೇ 35ರಷ್ಟು, ರಾಜವಾಳ ಶಾಖಾ ಕಾಲುವೆಯಿಂದ ಶೇ 30ರಷ್ಟು, ಮಾಗಳ ಮತ್ತು ಹೂವಿನಹಡಗಲಿ ಶಾಖಾ ಕಾಲುವೆಯಿಂದ ಶೇ 60 ರಷ್ಟು ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ಕಾಲುವೆಗಳ ಕೊನೇ ರೀಚ್ನಲ್ಲಿರುವ ಗ್ರಾಮಗಳಿಗೆ ಇನ್ನೂ ನೀರು ತಲುಪಿಲ್ಲ. ಹೊಳಗುಂದಿ, ದಾಸರಹಳ್ಳಿ, ಕೊಯಿಲಾರಗಟ್ಟಿ, ಹಿರೇಮಲ್ಲನಕೆರೆ, ಹಿರೇಹಡಗಲಿ, ಹಗರನೂರು, ವಡ್ಡಿನಹಳ್ಳಿ ತಾಂಡ, ಹಾಲ್ ತಿಮ್ಲಾಪುರ, ನವಲಿ ಇನ್ನಿತರೆ ಗ್ರಾಮಗಳ ಜಮೀನುಗಳಿಗೆ ನೀರು ತಲುಪಿಲ್ಲ.

ಪ್ರತಿ ಚುನಾವಣೆ ಸಂದರ್ಭದಲ್ಲಿ ‘ಸಿಂಗಟಾಲೂರು ಏತ ನೀರಾವರಿ ಯೋಜನೆ’ ಬರೀ ಚುನಾವಣಾ ವಿಷಯವಾಗಿ ಬಳಕೆಯಾಗಿದೆ. ಪೂರ್ಣ ಅಚ್ಚುಕಟ್ಟಿಗೆ ನೀರು ಹರಿಸುವ, ಯೋಜನೆಯನ್ನು ಇಡೀ ತಾಲ್ಲೂಕಿಗೆ ವಿಸ್ತರಿಸುವ ಬಗ್ಗೆ ರಾಜಕಾರಣಿಗಳು ಭರವಸೆ ನೀಡುತ್ತಾ ಬಂದಿದ್ದಾರೆ ಹೊರತು ಅದರ ಅನುಷ್ಠಾನ ಆಗಲಿಲ್ಲ.

ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಬಲ ದಂಡೆಯಲ್ಲಿ ಕಾಲುವೆ ನೀರಾವರಿ ಹಾಗೂ ಎಡ ದಂಡೆಯಲ್ಲಿ ಸೂಕ್ಷ್ಮ (ಮೈಕ್ರೋ) ನೀರಾವರಿ ವ್ಯವಸ್ಥೆಗಾಗಿ ₹5,768.04 ಕೋಟಿ ಪರಿಷ್ಕೃತ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ದರಪಟ್ಟಿಗಳ ವ್ಯತ್ಯಾಸ ಹಾಗೂ ಕಾಮಗಾರಿ ವಿಳಂಬದಿಂದಾಗಿ ಯೋಜನಾ ವೆಚ್ಚ ₹7,199.31 ಕೋಟಿಗೆ ಏರಿಕೆಯಾಗಿದೆ. 2025ರ ಮಾರ್ಚ್ ಅಂತ್ಯಕ್ಕೆ ಈ ಯೋಜನೆಗೆ ₹4,875.65 ಕೋಟಿ ಖರ್ಚಾಗಿದೆ. ಬಾಕಿ ಉಳಿದ ಕಾಮಗಾರಿಗಳಿಗೆ ₹2,323.66 ಕೋಟಿ ಅಗತ್ಯವಿದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಸಾವಿರಾರು ರೈತರಿಗೆ ಸಮಾಧಾನ ನಿಶ್ಚಿತ. ಯೋಜನೆ ಜಾರಿಗೆ ಬಂದ ಬಳಿಕ ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ, ಆಂಧ್ರಪ್ರದೇಶ, ಬಳಿಕ ಬಂಗಾಳಕೊಲ್ಲಿ ಸೇರಿಬಿಟ್ಟಿದೆ. ಹೂವಿನಹಡಗಲಿ ರೈತರ ಜಮೀನಿಗೆ ಅದೇ ನೀರು ಹರಿಯಲು ಹೆಚ್ಚೇನೂ ಪ್ರಯತ್ನ ಇನ್ನು ಮಾಡಬೇಕಿಲ್ಲ. ಒಂದಿಷ್ಟು ಮನಸ್ಸು, ಒಂದಿಷ್ಟು ಸಂಕಲ್ಪ, ಮತ್ತೊಂದಿಷ್ಟು ಇಚ್ಛಾಶಕ್ತಿಯಷ್ಟೇ ಸಾಕು ಎಂದು ಜನರು ಹೇಳುತ್ತಿದ್ದಾರೆ. ಸರ್ಕಾರ ಇತ್ತ ಇನ್ನಾದರೂ ಕಣ್ಣು ತೆರೆದು ನೋಡಲಿ ಎಂಬುದು ಅವರೆಲ್ಲರ ಕೋರಿಕೆ.

ಪ್ರತಿಕ್ರಿಯೆಗಳು

‘ಈ ಯೋಜನೆಯ ನಿರ್ವಹಣೆಗೆ ಅನುದಾನ ಹಾಗೂ ರೈತರಿಗೆ ಭೂ ಪರಿಹಾರ ಕೋರಿ ಹಲವು ಬಾರಿ ಸದನದಲ್ಲಿ ಗಮನ ಸೆಳೆದಿರುವೆ. ಕಾಲುವೆ ದುರಸ್ತಿಗೆ ನೀಡಿರುವ ₹5 ಕೋಟಿ ಯಾತಕ್ಕೂ ಸಾಲುವುದಿಲ್ಲ. ರೈತರೊಂದಿಗೆ ಸೇರಿ ಹೋರಾಟ ಮಾಡುವೆ’

ಕೃಷ್ಣನಾಯ್ಕ, ಶಾಸಕ, ಹೂವಿನಹಡಗಲಿ

‘ಅನುದಾನ ಕೊರತೆಯಿಂದ ನಿರ್ವಹಣೆ ಸಮಸ್ಯೆಯಾಗಿದೆ. ಈ ಬಾರಿ ಪೂರ್ಣ ಅಚ್ಚುಕಟ್ಟಿಗೆ ನೀರು ಹರಿಸಲು ಯೋಜನೆ ಹಾಕಿಕೊಂಡಿದ್ದೇವೆ’

ಶಿವಮೂರ್ತಿ, ಕಾರ್ಯನಿರ್ವಾಹಕ ಎಂಜಿನಿಯರ್, ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಭಾಗ, ಹಡಗಲಿ.

‘ಕಾಲುವೆಗಳ ದುರಸ್ತಿ ಹಾಗೂ ಆಧುನೀಕರಣಕ್ಕಾಗಿ ಸರ್ಕಾರಕ್ಕೆ ₹38 ಕೋಟಿಯ ಪ್ರಸ್ತಾವ ಸಲ್ಲಿಸಲಾಗಿತ್ತು. ₹5 ಕೋಟಿ ಬಿಡುಗಡೆಯಾಗಿದ್ದು, ಮುಖ್ಯ ಕಾಲುವೆಗಳ ದುರಸ್ತಿ ಮಾಡಿಸುತ್ತೇವೆ’

ರಾಘವೇಂದ್ರ ಎಚ್.ಸಿ., ಎಇಇ, ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಭಾಗ, ಹಡಗಲಿ.

‘ಹೂವಿನಹಡಗಲಿ ತಾಲ್ಲೂಕನ್ನು ಸಂಪೂರ್ಣ ನೀರಾವರಿಯಾಗಿರುವ ಕನಸಿನೊಂದಿಗೆ ಎಂ.ಪಿ.ಪ್ರಕಾಶ್ ಈ ಯೋಜನೆ ರೂಪಿಸಿದ್ದರು. ಆದರೆ, ನಿರ್ವಹಣೆ ಕೊರತೆಯಿಂದ ಕೊನೆಯ ಭಾಗದ ರೈತರು ಇನ್ನೂ ನೀರು ಕಂಡಿಲ್ಲ. ಚುನಾವಣೆಯಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಈ ಯೋಜನೆ ನೆನಪಾಗುತ್ತದೆ

ಎಲ್.ಸೋಮಿನಾಯ್ಕ, ರೈತ ದಾಸರಹಳ್ಳಿ ತಾಂಡ

‘ಯೋಜನೆ ಚಾಲನೆಗೊಂಡು ಒಂದೂವರೆ ದಶಕ ಕಳೆದರೂ ಪೂರ್ಣ ಅಚ್ಚುಕಟ್ಟಿಗೆ ನೀರು ಹರಿದಿಲ್ಲ. ಅಡೆತಡೆಗಳನ್ನು ನಿವಾರಿಸಿ ಇಡೀ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ರೈತರಿಗೆ ತಕ್ಷಣ ಭೂ ಪರಿಹಾರ ನೀಡಬೇಕು’

ಎಂ.ಶಿವರಾಜ್, ಕಾರ್ಯದರ್ಶಿ ರೈತ ಸಂಘ, ಹಡಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.