ಶಿರಸಿ: ದಟ್ಟವಾದ ಮಲೆನಾಡಿನ ಅಡವಿಯೊಳಗೆ ಹೆಜ್ಜೆ ಇಡುತ್ತಿದ್ದಂತೆ, ನಾಗರಿಕ ಪ್ರಪಂಚದ ಗದ್ದಲಗಳೆಲ್ಲ ದೂರ ಸರಿದು ಪ್ರಕೃತಿಯ ನಿಗೂಢ ಮೌನವೊಂದು ಆವರಿಸಿಕೊಳ್ಳುತ್ತದೆ. ಹಕ್ಕಿಗಳ ಚಿಲಿಪಿಲಿ, ಎಲೆಗಳ ಮರ್ಮರ ಧ್ವನಿ ಮತ್ತು ಎಲ್ಲೋ ದೂರದಲ್ಲಿ ಬಳುಕುತ್ತಾ ಹರಿಯುವ ಶಾಲ್ಮಲಾ ನದಿಯ ಜುಳುಜುಳು ನಿನಾದ. ಇವೆಲ್ಲದರ ನಡುವೆ ಕಣ್ಣು ಹಾಯಿಸಿದರೆ ಸಿಗುವುದೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಐತಿಹಾಸಿಕ ಸೋಂದಾ ಕೋಟೆ. ಹೌದು, ಇದು ಕೇವಲ ಮಣ್ಣು-ಕಲ್ಲುಗಳ ರಾಶಿಯಲ್ಲ. ಹಸಿರ ಮಡಿಲಲ್ಲಿ ಮಲಗಿರುವ ಇತಿಹಾಸದ ಹೆಜ್ಜೆಗುರುತು!

ಬೆಳಗ್ಗಿನ ಮಂಜಿನ ಮುಸುಕನ್ನು ಸರಿಸುತ್ತಾ ಇಲ್ಲಿನ ಸಿಂಹಾಸನದ ದಿಬ್ಬದ ಮೇಲೆ ನಿಂತರೆ, ನಮಗರಿವಿಲ್ಲದಂತೆ ಕಾಲದ ಚಕ್ರ 450 ವರ್ಷಗಳಷ್ಟು ಹಿಂದಕ್ಕೆ ಉರುಳುತ್ತದೆ. ಕಣ್ಣೆದುರು ಕಡು ಬಿಸಿಲಿನಲ್ಲಿ ಹೊಳೆಯುವ ಕತ್ತಿ-ಗುರಾಣಿಗಳು, ಶತ್ರುಗಳ ಎದೆ ನಡುಗಿಸುವ ಫಿರಂಗಿಗಳ ಗರ್ಜನೆ, ವಿಜಯನಗರದ ಪತನದ ನಂತರವೂ ಕರಾವಳಿ-ಮಲೆನಾಡನ್ನು ದರ್ಪದಿಂದ ಆಳಿದ ಸೋದೆ ಅರಸರ ವೈಭವ ಕಣ್ಣಿಗೆ ಕಟ್ಟಿದಂತಾಗುತ್ತದೆ. ಬ್ರಿಟಿಷರನ್ನೇ ಹೆದರಿಸಿ ಓಡಿಸಿದ ವೀರ ಸೋದೆ ಸದಾಶಿವರಾಯರ ರಾಜ ಗಾಂಭೀರ್ಯದ ಕೆಚ್ಚು ಈ ಮಣ್ಣಿನ ಕಣಕಣದಲ್ಲೂ ಅಡಗಿದೆ. ಆದರೆ, ಕಣ್ಣು ಬಿಟ್ಟು ವಾಸ್ತವಕ್ಕೆ ಬಂದರೆ ಎದೆಯಲ್ಲೊಂದು ಶೂನ್ಯ ಆವರಿಸುತ್ತದೆ. ಅಂದು ಶತ್ರುಗಳಿಗೆ ದುರ್ಭೇದ್ಯವಾಗಿದ್ದ ಈ ಭವ್ಯ ಕೋಟೆ, ಇಂದು ಕಾಲದ ಕ್ರೂರತೆಗೆ ಮತ್ತು ಇಲಾಖೆಗಳ ಘೋರ ನಿರ್ಲಕ್ಷ್ಯಕ್ಕೆ ಸಿಲುಕಿ ಅನಾಥವಾಗಿ ನಿಂತಿದೆ. ಒಂದು ಕಾಲದ ಸಾಮ್ರಾಜ್ಯದ ಹೆಮ್ಮೆಯ ರಾಜಧಾನಿ ಇಂದು ದಟ್ಟ ಕಾಡಿನ ಬೇರುಗಳ ಮಧ್ಯೆ ಸಿಲುಕಿ ಉಸಿರುಗಟ್ಟುತ್ತಿದೆ. ಇತಿಹಾಸದ ಈ ಭವ್ಯ ಪುಟಗಳು ಕಣ್ಣೆದುರೇ ಮಣ್ಣಾಗುತ್ತಿದೆ.

ಸೋಂದಾ ಸಾಮ್ರಾಜ್ಯದ ಇತಿಹಾಸವು ಅತ್ಯಂತ ರೋಮಾಂಚನಕಾರಿಯಾದುದು. ಕ್ರಿ.ಶ. 1555 ರಲ್ಲಿ ಅರಸಪ್ಪ ನಾಯಕ ಎಂಬ ಜೈನ ಮುಖ್ಯಸ್ಥನಿಂದ ಸೋಂದಾ ಸಾಮ್ರಾಜ್ಯವು ಸ್ಥಾಪಿತವಾಯಿತು. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ತಮ್ಮ ಆಳ್ವಿಕೆ ಆರಂಭಿಸಿದ ಸೋಂದಾ (ಸೋದೆ) ಅರಸರು, ವಿಜಯನಗರದ ಪತನದ ನಂತರ ಸ್ವತಂತ್ರವಾಗಿ ರಾಜ್ಯಭಾರ ಮಾಡಿದರು. ಇವರು ಕೇವಲ ಹೆಸರಿಗಷ್ಟೇ ರಾಜರಾಗಿರಲಿಲ್ಲ. ಹದಿನಾರನೇ ಶತಮಾನದಲ್ಲಿ ಇಡೀ ಮಲೆನಾಡು ಮತ್ತು ಕರಾವಳಿ ತೀರದ ವ್ಯಾಪಾರ, ರಾಜಕೀಯವನ್ನು ನಿಯಂತ್ರಿಸುವ ಶಕ್ತಿಯಾಗಿ ಬೆಳೆದಿದ್ದರು.

ಸೋಂದಾ ಅರಸರಲ್ಲಿ ಅತ್ಯಂತ ಪರಾಕ್ರಮಿ ಎಂದರೆ ಸೋದೆ ಸದಾಶಿವರಾಯರು. ಬ್ರಿಟಿಷರು ಭಾರತದ ಕರಾವಳಿ ಪ್ರದೇಶಗಳನ್ನು ತನ್ನಿಷ್ಟದಂತೆ ನಿಯಂತ್ರಿಸಲು ಸುಂಕೇರಿಯಿಂದ ಕಾರವಾರದ ಕಡೆಗೆ ಮುತ್ತಿಗೆ ಹಾಕಲು ಬಂದಾಗ, ಅವರನ್ನು ಎದುರಿಸಿ, ದೂಳೀಪಟ ಮಾಡಿದ ವೀರೇತಿಹಾಸ ಸದಾಶಿವರಾಯರದ್ದಾಗಿದೆ. ಯಾವ ಮಹಾ ಚಕ್ರವರ್ತಿಗಳಿಗೂ ಕಮ್ಮಿ ಇಲ್ಲದಂತೆ ವೈಭವದ, ಧಾರ್ಮಿಕ ಮತ್ತು ಸಾಂಸ್ಕೃತಿಕ ಆಡಳಿತವನ್ನು ಇಲ್ಲಿನ ಅರಸರು ನಡೆಸಿದ್ದರು. ಈ ಸಂಸ್ಥಾನವು ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ ಹೆಮ್ಮೆಯಿಂದ ಮೆರೆದಿತ್ತು. ಆದರೆ ಇಂದು ಅಂಥ ಇತಿಹಾಸದ ಮೈಲಿಗಲ್ಲುಗಳು ಮಣ್ಣಲ್ಲಿ ಕರಗುತ್ತಿವೆ.

ಕೋಟೆಯ ಒಳಗೆ ಪ್ರವೇಶಿಸುತ್ತಿದ್ದಂತೆ ಇಂದಿಗೂ ಗತವೈಭವದ ಸಾಕ್ಷಿಯಾಗಿ ಕೆಲವು ಅಪರೂಪದ ಸ್ಮಾರಕಗಳು ಕಾಣಸಿಗುತ್ತವೆ. ಕೋಟೆಯ ಆವರಣದಲ್ಲಿ ಶತ್ರುಗಳ ಎದೆ ನಡುಗಿಸುತ್ತಿದ್ದ 7 ರಿಂದ 8 ಪ್ರಾಚೀನ ಬೃಹತ್ ಫಿರಂಗಿಗಳನ್ನು ಸಾಲಾಗಿ ಜೋಡಿಸಿಡಲಾಗಿದೆ. ಕೋಟೆಯ ದಿಬ್ಬದ ಮೇಲೆ ಒಂದೇ ಕಲ್ಲಿನಿಂದ ಕೆತ್ತಲಾದ ಭವ್ಯವಾದ ಕಲ್ಲಿನ ಮಂಚವಿದೆ. ಈ ರಾಜಮಂಚದ ಕಂಬಗಳ ಮೇಲೆ ಕೃಷ್ಣಲೀಲೆಯ ಸುಂದರವಾದ ಕೆತ್ತನೆಗಳನ್ನು ಮಾಡಲಾಗಿದ್ದು, ಅಂದಿನ ಶಿಲ್ಪಕಲೆಯ ಉನ್ನತ ಮಟ್ಟವನ್ನು ಸಾರುತ್ತದೆ.

ಕೋಟೆಯ ಒಳಭಾಗದಲ್ಲಿ ಶಿವಲಿಂಗವಿರುವ ಸುಂದರ ಪುರಾತನ ಶಿವಾಯಲವಿದೆ. ಕೋಟೆಯ ಮುಖ್ಯ ಪ್ರವೇಶದ್ವಾರದ ಬಳಿ ರಕ್ಷಕನಂತೆ ನಿಂತಿರುವ ಕೋಟೆ ಹನುಮಂತ ಮತ್ತು ಈ ಪ್ರದೇಶದ ಕ್ಷೇತ್ರಪಾಲನಾದ ಹುಲಿದೇವರ ಮೂರ್ತಿಗಳನ್ನು ಕಾಣಬಹುದು. ಕಲ್ಲಿನಿಂದ ನಿರ್ಮಿಸಲಾದ ಹಳೆಯ ಕುದುರೆ ಲಾಯ, ಸುಂದರವಾದ ಕಲ್ಲಿನ ದೋಣಿ ಮತ್ತು ನೀರಿನ ಟ್ಯಾಂಕ್ಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.

ಯಾವುದೇ ಒಂದು ಸಾಮ್ರಾಜ್ಯದ ಪತನದ ಕಥೆ ಅತ್ಯಂತ ಕರುಣಾಜನಕವಾಗಿರುತ್ತದೆ. ಸೋಂದಾ ಕೋಟೆಯ ವಿನಾಶ ಆರಂಭವಾಗಿದ್ದು ಕ್ರಿ.ಶ. 1763 ರಲ್ಲಿ. ಮೈಸೂರಿನ ಸುಲ್ತಾನ್ ಹೈದರ್ ಅಲಿ ಸೋಂದಾ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದನು. ಭೀಕರ ಯುದ್ಧದ ನಂತರ ಹೈದರ್ ಅಲಿಯ ಸೈನ್ಯವು ಸೋಂದಾ ಕೋಟೆಯನ್ನು ಧ್ವಂಸಗೊಳಿಸಿತು.

ಈ ದಾಳಿಗೆ ತತ್ತರಿಸಿದ ಸೋಂದಾದ ಕೊನೆಯ ರಾಜ ಇಮ್ಮಡಿ ಸದಾಶಿವರಾಯರು ತನ್ನ ಕುಟುಂಬ ಮತ್ತು ಉಳಿದ ಸೈನಿಕರೊಂದಿಗೆ ಗೋವಾಕ್ಕೆ ಪಲಾಯನ ಮಾಡಬೇಕಾಯಿತು. ಅರಸರು ಹೋದ ಮೇಲೆ, ರಾಜಧಾನಿಯಾಗಿದ್ದ ಭವ್ಯ ನಗರಿ ಮತ್ತು ಕೋಟೆ ಕಾಡಿನ ಪಾಲಾಯಿತು. ಅಂದಿನಿಂದ ಇಂದಿನವರೆಗೆ ಈ ಕೋಟೆಯು ಕೇವಲ ಅವಶೇಷಗಳ ರೂಪದಲ್ಲೇ ಉಳಿದುಕೊಂಡಿದೆ. ಪ್ರಸ್ತುತ ಸೋಂದಾ ಕೋಟೆಯ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಕೇಂದ್ರ ಪುರಾತತ್ವ ಇಲಾಖೆಯು ಕೋಟೆಯ ಒಳಗಿರುವ ಸಣ್ಣ ದೇವಾಲಯ, ಫಿರಂಗಿಗಳು ಮತ್ತು ಅಲಂಕೃತ ಕಲ್ಲಿನ ಮಂಚವನ್ನು ಮಾತ್ರ ತನ್ನ ಸಂರಕ್ಷಣೆಗೆ ಒಳಪಡಿಸಿದೆ. ಆದರೆ, ಇವುಗಳನ್ನು ಹೊರತುಪಡಿಸಿ ಉಳಿದ ಸುಮಾರು 30 ಎಕರೆಗೂ ಅಧಿಕ ವಿಸ್ತಾರವಾದ ಕೋಟೆ ಆವರಣವು ಸಂಪೂರ್ಣವಾಗಿ ಕಾಡಿನಂತೆ ಮಾರ್ಪಟ್ಟಿದೆ. ನೂರಾರು ಅಮೂಲ್ಯ ಸ್ಮಾರಕಗಳು ಯಾವುದೇ ರಕ್ಷಣೆಯಿಲ್ಲದೆ ಸೊರಗುತ್ತಿವೆ. ಜಾಗೃತ ವೇದಿಕೆ ಸೋಂದಾ ಹಾಗೂ ಸ್ವರ್ಣವಲ್ಲೀ ಮಹಾಸಂಸ್ಥಾನ ಇದರ ರಕ್ಷಣೆಯ ಕಾರ್ಯ ಮಾಡುತ್ತಿದ್ದರೂ ಇನ್ನಷ್ಟು ಅಗತ್ಯವಿದೆ. ಸ್ಥಳೀಯರ ಪ್ರಕಾರ, ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಕಲ್ಲಿನ ದೋಣಿಗಳು, ಎರಡು ದೊಡ್ಡ ಫಿರಂಗಿಗಳು, ವೀರಗಲ್ಲುಗಳು, ರಹಸ್ಯ ಸುರಂಗಗಳು, ರಾಜಮನೆತನದ ರಾಣಿಯರ ಸ್ನಾನ ಗೃಹ, ದೇವರ ಮೂಲ, ಕುದುರೆ ಲಾಯ, ವಿಶಿಷ್ಟ ನಕ್ಷತ್ರ ಬಾವಿ, ರಾಟಾಳ ಬಾವಿ, ಭವ್ಯ ಗೋಪುರ, ಅರಮನೆಯ ಅಡುಗೆಮನೆ ಹಾಗೂ ಸುಧಾರಿತ ನೀರಾವರಿ ವ್ಯವಸ್ಥೆಯ ಅವಶೇಷಗಳು ಇಂದು ರಕ್ಷಣೆಯಿಲ್ಲದೇ ಅಲ್ಲಲ್ಲಿ ಮಣ್ಣು ಪಾಲಾಗುತ್ತಿವೆ. ಗಿಡಗಂಟಿಗಳು ಬೆಳೆದು ಇವುಗಳ ಮೂಲ ಸ್ವರೂಪವೇ ನಾಶವಾಗುತ್ತಿದೆ. ಕೋಟೆ ಆವರಣದಲ್ಲಿರುವ ಶಿವಮಂದಿರ ಜೀರ್ಣೋದ್ಧಾರಗೊಳ್ಳುತ್ತಿದ್ದರೂ, ಶಾಲ್ಮಲಾ ನದಿಯ ಸಂಗಮದ ಬಳಿ ನಿರ್ಮಿಸಲಾದ ರಕ್ಷಣಾ ಗೋಡೆ ಕುಸಿಯುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಕೇಂದ್ರ ಪುರಾತತ್ವ ಇಲಾಖೆ ಮಾತ್ರ ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ ಎನ್ನುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜಾಗೃತ ವೇದಿಕೆ ಸಂಚಾಲಕ ರತ್ನಾಕರ ಬಾಡಲಕೊಪ್ಪ ಪ್ರಕಾರ, 'ಸೋಂದಾ ಕೋಟೆ ಪ್ರದೇಶದಲ್ಲಿ ಇಲಾಖೆಯ ವತಿಯಿಂದ ಇನ್ನಷ್ಟು ಆಳವಾದ ಉತ್ಖನನ ಮತ್ತು ಐತಿಹಾಸಿಕ ಅಧ್ಯಯನಗಳು ನಡೆಯಬೇಕು. ಮಣ್ಣಿನಡಿ ಹೂತು ಹೋಗಿರುವ ಇತಿಹಾಸವನ್ನು ಹೊರತೆಗೆಯಬೇಕಿದೆ. ಕೋಟೆಯ ಜಾಗದಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ ಜಾರಿ ಮಾಡಬೇಕು. ಈಗಾಗಲೇ ಜೀವ ವೈವಿಧ್ಯ ಮಂಡಳಿಗೆ ಸಲ್ಲಿಕೆಯಾಗಿರುವ ಪ್ರಸ್ತಾವನೆಗೆ ಸರ್ಕಾರ ತಕ್ಷಣ ಅನುಮತಿ ನೀಡಿ, ಇದನ್ನು ಜೀವ ವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಬೇಕು. ಸ್ಮಾರಕಗಳು ಇರುವ ಸ್ಥಳಗಳಲ್ಲಿ ಮಳೆ-ಗಾಳಿಯಿಂದ ರಕ್ಷಿಸಲು ಕಲ್ಲು ಅಥವಾ ಮರದ ಕಟ್ಟೆ ಶೆಡ್ಗಳನ್ನು ನಿರ್ಮಿಸಬೇಕು.

ಪ್ರವಾಸಿಗರು ಸುಲಭವಾಗಿ ಓಡಾಡಲು ಪಾದಚಾರಿ ಮಾರ್ಗ ಮತ್ತು ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು.

ಸ್ಮಾರಕಗಳ ಕಳ್ಳತನ ಮತ್ತು ಹಾನಿ ತಡೆಯಲು ಕಾಯಂ ವಾಚ್ಮನ್ ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡಲು ಅಧಿಕೃತ ಗೈಡ್ಗಳನ್ನು ನೇಮಿಸಬೇಕು.

ದೂರದ ಊರುಗಳಿಂದ ಬರುವವರಿಗಾಗಿ ವಿಶ್ರಾಂತಿ ಗೃಹ, ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶಾಲ್ಮಲಾ ನದಿಯ ಪಕ್ಕದಿಂದ ನೇರವಾಗಿ ಕೋಟೆಯ ಆವರಣಕ್ಕೆ ಸಂಪರ್ಕ ಕಲ್ಪಿಸಲು ಒಂದು ತೂಗುಸೇತುವೆ ನಿರ್ಮಿಸಿದರೆ, ಇದು ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ ಕೋಟೆಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುತ್ತದೆ' ಎನ್ನುತ್ತಾರೆ.

ಇತಿಹಾಸ ಸಂಶೋಧಕ ಲಕ್ಷ್ಮೀಶ ಹೆಗಡೆ ಸೋಂದಾ, 'ಕನ್ನಡ ನೆಲದ ವೀರ ಇತಿಹಾಸವನ್ನು ಸಾರುವ ಸೋಂದಾ ಕೋಟೆಯನ್ನು ನಾವು ಇಂದು ನಿರ್ಲಕ್ಷಿಸಿದರೆ, ಮುಂದಿನ ಪೀಳಿಗೆಗೆ ನಮ್ಮ ಪೂರ್ವಜರ ಸಾಧನೆಗಳನ್ನು ಪರಿಚಯಿಸಲು ಯಾವುದೇ ಸಾಕ್ಷ್ಯಗಳು ಉಳಿಯುವುದಿಲ್ಲ. ಕೇವಲ ಪುಸ್ತಕದ ಪುಟಗಳಲ್ಲಿ ಇತಿಹಾಸ ಓದುವುದಕ್ಕೂ, ಕಣ್ಣೆದುರು ಸ್ಮಾರಕಗಳನ್ನು ನೋಡುವುದಕ್ಕೂ ವ್ಯತ್ಯಾಸವಿದೆ. ಈ ಕೋಟೆಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ' ಎನ್ನುತ್ತಾರೆ ಅವರು.

'ಸೋಂದಾ ಕೋಟೆ ಇಂದು ಕೇವಲ ಕಲ್ಲುಗಳ ಗುಂಪಲ್ಲ, ಅದು ಕನ್ನಡಿಗರ ಸ್ವಾಭಿಮಾನದ ಸಂಕೇತ. ಸರ್ಕಾರ, ಪುರಾತತ್ವ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳು ಒಟ್ಟಾಗಿ ಸೇರಿ ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ, ಸಹ್ಯಾದ್ರಿಯ ಹಸಿರಿನ ಮಡಿಲಲ್ಲಿರುವ ಈ ಐತಿಹಾಸಿಕ ರತ್ನವು ಕಾಲದ ಗರ್ಭದಲ್ಲಿ ಶಾಶ್ವತವಾಗಿ ಮರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ಎಂಬುದು ಅವರ ಕಳಕಳಿಯ ಮಾತಾಗಿದೆ.

ನದಿ ತಟದ ಕೋಟೆ:

ಸಹ್ಯಾದ್ರಿ ಪಾರಂಪರಿಕ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಈ ಪ್ರದೇಶವು ಪಶ್ಚಿಮ ಘಟ್ಟಗಳ ದಟ್ಟವಾದ ಅರಣ್ಯದ ಒಡಲಲ್ಲಿದೆ. ಕೋಟೆಯ ಒಂದು ಪಕ್ಕದಲ್ಲಿ ಪವಿತ್ರ ಶಾಲ್ಮಲಾ ನದಿಯು ಕಣಿವೆಗಳ ನಡುವೆ ಪ್ರವಹಿಸುತ್ತದೆ.

ದಟ್ಟವಾದ ಹಸಿರು, ಎತ್ತರದ ಮರಗಳು, ಇತಿಹಾಸದ ಅವಶೇಷಗಳು ಮತ್ತು ಚಾರಣಕ್ಕೆ ಯೋಗ್ಯವಾಗಿರುವ ಕಡಿದಾದ ಹಾದಿಗಳು ಪ್ರವಾಸಿಗರನ್ನು ಮತ್ತು ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತವೆ. ಇತಿಹಾಸದ ಜತೆಗೆ ಪ್ರಕೃತಿಯ ಶಾಂತತೆಯನ್ನು ಅನುಭವಿಸಲು ಇದೊಂದು ಸೂಕ್ತ ತಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.