ತುಮಕೂರು: ಜಿಲ್ಲೆಯಲ್ಲಿ ಮಾನವ– ವನ್ಯಜೀವಿ ಸಂಘರ್ಷ ಹೆಚ್ಚುತ್ತಲೇ ಸಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿ ಪತ್ತೆ ಹಚ್ಚುವುದು ವೇಗ ಪಡೆಯುತ್ತಿಲ್ಲ. ಇಂದಿಗೂ 101 ಪ್ರಕರಣಗಳು ವಿಲೇವಾರಿಗಾಗಿ ಎದುರು ನೋಡುತ್ತಿವೆ.

30 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಉಳಿದ 71 ಪ್ರಕರಣಗಳು ತನಿಖಾ ಹಂತದಲ್ಲಿವೆ. ವನ್ಯಜೀವಿಗಳು ಅಸಹಜವಾಗಿ ಮೃತಪಟ್ಟ ಪ್ರಕರಣಗಳ ತನಿಖೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯನ್ನು ನೇಮಿಸಲಾಗುತ್ತದೆ. ಅವರೇ ತನಿಖೆ ಪೂರ್ಣಗೊಳಿಸಬೇಕು. ಆದರೆ ಅರಣ್ಯ ಅಧಿಕಾರಿಗಳು ತನಿಖೆಯ ಜತೆಗೆ ಇಲಾಖೆಯ ಇತರೆ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಕಾಲಕ್ಕೆ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.

2025ರ ಆಗಸ್ಟ್ ತಿಂಗಳಿನಲ್ಲಿ ಮಧುಗಿರಿ ತಾಲ್ಲೂಕಿನ ಹನುಮಂತಪುರದಲ್ಲಿ 20ಕ್ಕೂ ಹೆಚ್ಚು ನವಿಲು ಅನುಮಾನಾಸ್ಪದವಾಗಿ ಮೃತಪಟ್ಟವು. ಈವರೆಗೂ ಸಾವಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಯಾವ ಕಾರಣಕ್ಕೆ ನವಿಲುಗಳು ಸಾವನ್ನಪ್ಪಿವೆ? ಉದ್ದೇಶ ಪೂರ್ವಕವಾಗಿ ನವಿಲು ಹತ್ಯೆ ಮಾಡಲಾಯಿತೇ? ಎಂಬ ತನಿಖೆ ಹಲವು ತಿಂಗಳುಗಳಿಂದ ನಡೆಯುತ್ತಿದೆ. ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವ ಸುಳಿವೂ ಸಿಕ್ಕಿಲ್ಲ.

ಈ ವರ್ಷದ ಆರಂಭದಲ್ಲಿ ತಾಲ್ಲೂಕಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 11 ಮಂಗಗಳ ಕಳೇಬರ ಪತ್ತೆಯಾಗಿತ್ತು. ವಿಷಪ್ರಾಶನದಿಂದ ಮಂಗಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು. ‘ವಿಷಯುಕ್ತ ಆಹಾರ ಸೇವನೆಯಿಂದ ಮಂಗಗಳು ಮೃತಪಟ್ಟಿವೆ’ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡಿತ್ತು. ಮಂಗಗಳಿಗೆ ವಿಷ ಹಾಕಿದವರು ಯಾರು? ಎಂಬುದನ್ನು ಪತ್ತೆ ಮಾಡಲಾಗಿಲ್ಲ.

ತಾಲ್ಲೂಕಿನ ಕೆಸರುಮಡು ಸಮೀಪದ ಮುದಿಗೆರೆ- ತಿಮ್ಮಯ್ಯನಪಾಳ್ಯ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಒಂದು ವರ್ಷದ ಗಂಡು ಚಿರತೆ ಉಸಿರು ಚೆಲ್ಲಿತ್ತು. ಇದಕ್ಕೆ ಕಾರಣವಾದ ವಾಹನ ಪತ್ತೆಯಾಗಿಲ್ಲ. ಇವು ಉದಾಹರಣೆಗಳಷ್ಟೇ. ಇಂತಹ ಸಾಕಷ್ಟು ಪ್ರಕರಣಗಳಲ್ಲಿ ತನಿಖೆ ಕಾರ್ಯ ನನೆಗುದಿಗೆ ಬಿದ್ದಿದೆ.

‘ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು, ವನ್ಯಜೀವಿಗಳ ಮರಣೋತ್ತರ ಪರೀಕ್ಷೆ ನಡೆಸಲು ಮಾತ್ರ ಸೀಮಿತವಾಗಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದಾಖಲಾದ ಪ್ರಕರಣಗಳ ತನಿಖೆಗೆ ವೇಗ ನೀಡುತ್ತಿಲ್ಲ’ ಎಂಬುವುದು ಜಿಲ್ಲೆಯ ವನ್ಯಜೀವಿ ಪ್ರೇಮಿಗಳ ಆರೋಪ.

60ಕ್ಕೂ ಹೆಚ್ಚು ಚಿರತೆ ಸೆರೆ

ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ 60ಕ್ಕೂ ಹೆಚ್ಚು ಚಿರತೆ ಸೆರೆ ಹಿಡಿಯಲಾಗಿದೆ. ಇದೇ ಅವಧಿಯಲ್ಲಿ 6 ಕರಡಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಚಿರತೆಗಳು ಗ್ರಾಮಗಳಿಗೆ ನುಗ್ಗಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. 2025ರ ಡಿಸೆಂಬರ್ ತಿಂಗಳಿನಲ್ಲಿ ತುರುವೇಕೆರೆ ಭಾಗದಲ್ಲಿ ಚಿರತೆ ದಾಳಿಯಿಂದ ಮಹಿಳೆ ಮೃತಪಟ್ಟಿದ್ದರು. ಇದರ ನಂತರ ಚಿಕ್ಕನಾಯಕನಹಳ್ಳಿ ಶಿರಾ ತುರುವೇಕೆರೆ ವ್ಯಾಪ್ತಿಯಲ್ಲಿ ಬೋನು ಅಳವಡಿಸಲಾಗಿತ್ತು. ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ 7 ಚಿರತೆಗಳು ಬೋನಿಗೆ ಬಿದ್ದಿವೆ.

ತನಿಖೆ ನಿಧಾನವಾಗಿಲ್ಲ

ಅರಣ್ಯ ಇಲಾಖೆಯಲ್ಲಿ ದಾಖಲಾದ ಪ್ರಕರಣಗಳ ತನಿಖೆ ನಿಧಾನವಾಗಿಲ್ಲ. ಹಲವು ವಿಚಾರಣೆ ಹಂತದಲ್ಲಿವೆ. ಇನ್ನೂ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇಲಾಖೆ ಕೆಲಸದ ಜತೆಗೆ ತನಿಖಾ ಕಾರ್ಯವೂ ನಡೆಯುತ್ತಿದೆ. ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಿಲ್ಲ. ಜಿ.ಆರ್.ಶಶಿಧರ್ ಉಪ ಅರಣ್ಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.