ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರ ನೇಮಕ ಯಾವಾಗ?

ಬಾರದ ಸರ್ಕಾರದ ಆದೇಶ; ‘ಹೊಂದಾಣಿಕೆ’ ಕಸರತ್ತು
Last Updated 22 ಜುಲೈ 2019, 19:33 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ 31 ಸರ್ಕಾರಿ ಕಾಲೇಜುಗಳಲ್ಲಿ 91 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರದಿಂದ ಆದೇಶ ಬಾರದ ಹಿನ್ನೆಲೆಯಲ್ಲಿ ‘ಹೊಂದಾಣಿಕೆ ಕಸರತ್ತು’ ಅನಿವಾರ್ಯವಾಗಿದೆ.

91 ಹುದ್ದೆಗಳಲ್ಲಿ ಶಿಕ್ಷಣ (ಎಜುಕೇಷನ್‌) ವಿಷಯದಲ್ಲಿ ಅತೀ ಹೆಚ್ಚು ಅಂದರೆ 17, ವ್ಯವಹಾರ ಅಧ್ಯಯನದಲ್ಲಿ 13 ಹುದ್ದೆಗಳು ಖಾಲಿ ಇವೆ.

‘ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ವಿಳಂಬವಾದ ಕಾರಣ ನಮ್ಮ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕಡಿಮೆ ಕಾರ್ಯಭಾರವಿರುವ ಅನುದಾನಿತ ಕಾಲೇಜುಗಳ ಉಪನ್ಯಾಸಕರನ್ನು ಖಾಲಿ ಇರುವ ಹುದ್ದೆಗಳಿಗೆ ನಿಯೋಜಿಸಲಾಗಿದೆ. ಇದರ ಬದಲು ತಕ್ಷಣ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು’ ಎಂದು ಹೆಸರು ಹೇಳಲು ಇಚ್ಛಿಸದ ಅನುದಾನಿತ ಕಾಲೇಜಿನ ಉಪನ್ಯಾಸಕರೊಬ್ಬರು ಹೇಳಿದರು.

‘ಪ್ರತಿ ವರ್ಷ ಹೊಸದಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಬೋಧನಾ ಅನುಭವ, ಪಿಎಚ್.ಡಿ, ನೆಟ್/ಸೆಟ್ ಪರೀಕ್ಷೆಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದು ವಾಡಿಕೆ. ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆದೇಶ ಹೊರಡಿಸದ ಕಾರಣ ನಾವುಗಳು ಪರದಾಡುವಂತಾಗಿದೆ’ ಎಂದು ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಪದವೀಧರರು ಅಳಲು ತೋಡಿಕೊಳ್ಳುತ್ತಾರೆ.

‘ಒಬ್ಬ ಉಪನ್ಯಾಸಕನಿಗೆ ಒಂದು ವಾರಕ್ಕೆ 20 ಅವಧಿ, ಪ್ರಯೋಗಳು ಇದ್ದರೆ 24 ಅವಧಿ ಕಾರ್ಯಭಾರ ಇರುತ್ತದೆ. ಆದರೆ, ಕೆಲವು ಕಾಲೇಜುಗಳಲ್ಲಿ ಇಷ್ಟು ಕಾರ್ಯಭಾರ ಇಲ್ಲ. ಅಂತಹ 65 ಉಪನ್ಯಾಸಕರನ್ನು ಗುರುತಿಸಿ, ಹುದ್ದೆಗಳು ಖಾಲಿ ಇರುವ ಸರ್ಕಾರಿ ಕಾಲೇಜುಗಳಿಗೆ ನಿಯೋಜಿಸಲಾಗಿದೆ. ಈ ಹಿಂದೆ ಇದ್ದ ಅತಿಥಿ ಉಪನ್ಯಾಸಕರಿಗೆ ಬೋಧನೆ ಮಾಡುವಂತೆ ಸೂಚಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ರೀತಿಯ ತೊಂದರೆ ಆಗಿಲ್ಲ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜೆ.ಎಸ್.ಪೂಜೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅತಿಥಿ ಉಪನ್ಯಾಸಕರಾಗಿ ಈ ಹಿಂದೆ ಸೇವೆ ಸಲ್ಲಿಸಿದವರಿಗೆ ಬೋಧನೆ ಮಾಡುವಂತೆ ಸೂಚಿಸಲಾಗಿದೆ. ಆಗಸ್ಟ್‌ನಲ್ಲಿ ಸರ್ಕಾರದ ಆದೇಶ ಬಂದ ನಂತರ, ಅವರಿಗೆ ನೇಮಕಾತಿ ಪತ್ರ ವಿತರಿಸಲಾಗುವುದು. ಇದೊಂದು ತಿಂಗಳು ಸಂಭಾವನೆ ಇಲ್ಲದೆ ಕೆಲಸ ಮಾಡಿದಂತಾಗುತ್ತದೆ. ಅವರು ಕೂಡ ಒಪ್ಪಿಕೊಂಡಿದ್ದು, ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಅತಿಥಿ ಉಪನ್ಯಾಸಕರಿಗೆ ಸದ್ಯ ತಿಂಗಳಿಗೆ ₹9 ಸಾವಿರ ಗೌರವ ಧನ ನೀಡಲಾಗುತ್ತಿದೆ. ಜೂನ್, ಜುಲೈ ತಿಂಗಳಲ್ಲಿ ನಿವೃತ್ತರಾದ ಉಪನ್ಯಾಸಕರ ಸೇವೆಯನ್ನೂ ಪಡೆದುಕೊಳ್ಳಲಾಗುತ್ತಿದೆ. ಅತಿಥಿ ಉಪನ್ಯಾಸಕರು ನೇಮಕವಾಗುವವರೆಗೆ ಬೋಧನೆ ಮಾಡುವಂತೆ ಅವರಲ್ಲಿ ಮನವಿ ಮಾಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT