ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದಿಂದಲೇ ಸ್ಪರ್ಧೆ: ವಿನಯ ಕುಲಕರ್ಣಿ

Last Updated 5 ನವೆಂಬರ್ 2022, 7:45 IST
ಅಕ್ಷರ ಗಾತ್ರ

ಧಾರವಾಡ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಲು ಆಹ್ವಾನ ಬಂದಿದೆ. ಆದರೆ ನಾನು ಧಾರವಾಡ ಕ್ಷೇತ್ರದಿಂದಲೇ ಸ್ಪರ್ಧಿಸುವೆ’ ಎಂದು ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಸ್ಪಷ್ಟಪಡಿಸಿದರು.

ಚನ್ನಮ್ಮನ ಕಿತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಹಾವೇರಿ ಜಿಲ್ಲೆಯ ಶಿಗ್ಗಾವಿ, ಬೆಳಗಾವಿ ಜಿಲ್ಲೆಯ ಕಿತ್ತೂರು ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಆಹ್ವಾನವಿದೆ. ಆದರೆ ನನ್ನ ಕ್ಷೇತ್ರದ ಜನರ ಸೇವೆ ಮಾಡುವ ಇಂಗಿತ ಹೊಂದಿದ್ದೇನೆ. ಹೀಗಾಗಿ ಧಾರವಾಡದಿಂದಲೇ ಸ್ಪರ್ಧಿಸುವೆ’ ಎಂದರು.

‘ಈ ಕ್ಷೇತ್ರಕ್ಕೆ ಈಗಾಗಲೇ ಹಲವು ಆಕಾಂಕ್ಷಿಗಳಿದ್ದಾರೆ. ಟಿಕೆಟ್‌ ನೀಡುವಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ನನಗೆ ಅಧಿಕಾರ ಮುಖ್ಯವಲ್ಲ, ಕೆಲಸ ಮುಖ್ಯ. ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ, ಜನತೆ ನನ್ನನ್ನು ಏಕೆ ತಿರಸ್ಕರಿಸಿದರು ಎಂದು ಗೊತ್ತಿಲ್ಲ. ಈ ಕ್ಷೇತ್ರದಿಂದಲೇ ನನ್ನನ್ನು ಎರಡು ಬಾರಿ ಆಯ್ಕೆ ಮಾಡಿದ್ದಕ್ಕೆ ನಾನು ಋಣಿಯಾಗಿದ್ದೇನೆ’ ಎಂದು ಹೇಳಿದರು.

‘ನನಗೆ ಹಣ ಗಳಿಕೆಯ ಆಸೆ ಇಲ್ಲ. ಬಡವರು, ದೀನ ದಲಿತರ ಸೇವೆ ನನ್ನ ಧ್ಯೇಯ. ಬಿಜೆಪಿ ನಾಯಕರಿಗೆ ನನ್ನ ಬಗ್ಗೆ ಅಪಪ್ರಚಾರ ಮಾಡಲು ಬೇರೆ ವಿಷಯಗಳಿಲ್ಲದ ಕಾರಣ ಇಲ್ಲಸಲ್ಲದ ವಿಷಯ ಮಾತನಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ನನ್ನ 25 ವರ್ಷದ ರಾಜಕೀಯ ಬದುಕಿನಲ್ಲಿ ಎಂದೂ ಇಂಥ ದ್ವೇಷದ ರಾಜಕೀಯ ಮಾಡಿಲ್ಲ. ಸದ್ಯ ನನಗೆ ಕ್ಷೇತ್ರ ಪ್ರವೇಶಕ್ಕೆ ನಿಷೇಧವಿದೆ. ವಿಧಾನಸಭಾ ಚುನಾವಣೆ ಒಳಗಾಗಿ ಕ್ಷೇತ್ರ ಪ್ರವೇಶಿಸಲು ನ್ಯಾಯಾಲಯ ಅನುಮತಿ ನೀಡುವ ಭರವಸೆ ಇದೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ನಮ್ಮ ಹೋರಾಟ ನಡೆದಿದೆ. ಆದರೆ, ಮುಸ್ಲಿಂ ಸೇರಿದಂತೆ ಮತ್ತೊಂದು ಸಮುದಾಯದ ಮೀಸಲಾತಿ ಕಸಿಯುವ ಉದ್ದೇಶವಿಲ್ಲ. ಸಮಾಜ ಒಡೆದು ಆಳುವ ಉದ್ದೇಶ ಹೊಂದಿರುವ ಬಿಜೆಪಿ ನಾಯಕರು ಇಂಥ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ’ ಎಂದು ಶಾಸಕರಾದ ಅರವಿಂದ ಬೆಲ್ಲದ ಮತ್ತು ಬಸವನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಮೂರು ಲಕ್ಷ ಜನ ಸೇರುವ ಸಾಧ್ಯತೆ
‘ವಿನಯ ಕುಲಕರ್ಣಿ ಅವರು 54ನೇ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿ ಬಳಗದಿಂದ ನ. 7ರಂದು ಚನ್ನಮ್ಮನ ಕಿತ್ತೂರಿನಲ್ಲಿ ‘ಜನನಾಯಕನಿಂದ ಜನ ನಮನ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದಕ್ಕೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದ್ದು, ಅದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ’ ಎಂದು ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ಪಾಟೀಲ ಹೇಳಿದರು.

‘ಇದು ಪಕ್ಷಾತೀತವಾದ ಕಾರ್ಯಕ್ರಮವಾಗಿದ್ದು, ವಿನಯ ಅವರ ಅಭಿಮಾನಿಗಳೇ ಸೇರಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಇಲ್ಲಿನ ಮಿನಿ ವಿಧಾನಸೌಧದ ಬಳಿಯ ಬೃಹತ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಹಲವಾರು ಮಠಾಧೀಶರು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಸಿದ್ದರಾಯಮ್ಮ, ಚಿತ್ರನಟ ದರ್ಶನ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 4ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಬರುವ ಜನರಿಗೆ ನೀರು, ಊಟದ ವ್ಯವಸ್ಥೆ, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಜನ್ಮದಿನದ ನಿಮಿತ್ತ ಆಯಾ ಊರುಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ’ ಎಂದು ಹೇಳಿದರು.

ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT