ಶುಕ್ರವಾರ, ಏಪ್ರಿಲ್ 3, 2020
19 °C

ನಾಳೆ ‘ಸೃಷ್ಟಿ-2020' ಮಹಿಳಾ ಸಮ್ಮೇಳನ, ಉಪನ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಮಾರ್ಚ್ 8ರ ಬೆಳಿಗ್ಗೆ 8.30ರಿಂದ ರಾತ್ರಿ 8.30ರವರೆಗೆ ‘ಸೃಷ್ಟಿ-2020' ಮಹಿಳಾ ಸಮ್ಮೇಳನ ಹಾಗೂ ಉಪನ್ಯಾಸ ಮಾಲಿಕೆ ಆಯೋಜಿಸಲಾಗಿದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್‌ ಈ ಕಾರ್ಯಕ್ರಮ ಆಯೋಜಿಸಿದೆ. ರೋಟರಿ ಕ್ಲಬ್ ಭಾರತದಲ್ಲಿ ಆರಂಭವಾಗಿ 100 ವರ್ಷ ಪೂರೈಸಿದೆ. ಹಾಗಾಗಿ, ಮಹಿಳಾ ದಿನಾಚರಣೆ ವೈಶಿಷ್ಟಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಉಪನ್ಯಾಸ ಮಾಲಿಕೆಯಲ್ಲಿ ಮಹಿಳೆಯರ ಕುರಿತ ಪ್ರಮುಖ ವಿಷಯಗಳ ಚರ್ಚೆ ನಡೆಯಲಿದೆ ಎಂದು ರೋಟರಿಕ್ಲಬ್ ಶಿವಮೊಗ್ಗದ ಅಧ್ಯಕ್ಷೆ ಸುನೀತಾ ಶ್ರೀಧರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ಬೆಳಿಗ್ಗೆ 9.30ಕ್ಕೆ ಬೆಂಗಳೂರು ರೋಟರಿ ಮಾಜಿ ಗವರ್ನರ್ ಮಧುರಾ ಛತ್ರಪತಿ ಸಮ್ಮೇಳನ ಉದ್ಘಾಟಿಸುವರು. ಶಿವಮೊಗ್ಗ ಜಿಲ್ಲಾ ಗವರ್ನರ್ ಬಿ.ಎನ್.ರಮೇಶ್, ಮೇಯರ್ ಸುವರ್ಣಾ ಶಂಕರ್, ಮೈಸೂರು ಜಿಲ್ಲಾ ಇನ್ನರ್‌ವ್ಹೀಲ್ ಅಧ್ಯಕ್ಷೆ ಅನುರಾಧಾ ನಂದಕುಮಾರ್, ರೋಟರಿ ಸಹಾಯಕ ಗವರ್ನರ್ ಎಂ.ಮುರುಳಿ, ಮಹಿಳಾ ಸದಸ್ಯತ್ವ ಅಭಿವೃದ್ಧಿ ಅಧ್ಯಕ್ಷೆ ಡಾ.ಬಿ.ಕೆ. ಸೌಮ್ಯರಾಣಿ ಉಪಸ್ಥಿತರಿರುವರು ಎಂದರು.

ಬೆಳಿಗ್ಗೆ 10.30ಕ್ಕೆ ಸ್ತ್ರೀ ಸ್ವಾತಂತ್ರ್ಯ ಸ್ಥಿತಿ-ಗತಿ ಕುರಿತು ರಂಗಕರ್ಮಿ ಸೇತುರಾಮ್, 11.30ಕ್ಕೆ ಮಕ್ಕಳಾಟವಲ್ಲ, ಮಕ್ಕಳ ಪಾಲನೆ-ಮಹಿಳೆಯರ ಪಾತ್ರ ಕುರಿತು ಮನೋರೋಗ ತಜ್ಞೆ ಡಾ.ಗೀತಾ ದೇಸಾಯಿ ಉಪನ್ಯಾಸ ನೀಡುವರು. ಮಧ್ಯಾಹ್ನ ಮಹಿಳೆಯರಿಗೆ ಆಟೋಟ ಸ್ಪರ್ಧೆ ಇರುತ್ತದೆ. ಸ್ವಯಂ ರಕ್ಷಣೆ ಕುರಿತು ಕಿರುತೆರೆ ಕಲಾವಿದೆ ಜಯಲಕ್ಷ್ಮೀ ಪಾಟೀಲ್ ಪ್ರಾತ್ಯಕ್ಷಿಕೆಯ ಉಪನ್ಯಾಸ ನೀಡುವರು ಎಂದು ವಿವರ ನೀಡಿದರು.

ಮಧ್ಯಾಹ್ನ 3ಕ್ಕೆ ಆಕಾಶವಾಣಿ ನಿವೃತ್ತ ಉದ್ಘೋಷಕಿ ರಾಣಿ ರತ್ನರಾವ್ ವಿಚಾರಗೋಷ್ಠಿ ನಡೆಸಿಕೊಡುವರು. ಮಹಿಳೆಯರ ಹಕ್ಕುಗಳು ಮತ್ತು ಶೋಷಣೆ ಕುರಿತು ನ್ಯಾಯಾಧೀಶರಾದ ಇಷ್ರತ್ ಜಹನ್ ಆರಾ, ಮಹಿಳೆಯರ ಸ್ವಶಕ್ತತೆ ಮತ್ತು ಸಬಲೀಕರಣ ಕುರಿತು ಉದ್ಯಮಿ ಪದ್ಮಾ ಶೇಷಾದ್ರಿ, ಮಹಿಳೆಯರ ಮಾನಸಿಕ ಸ್ಥಿತಿಗತಿ ಕುರಿತು ಆಪ್ತ ಸಮಾಲೋಚಕಿ ಶಾಂತಾ ನಾಗರಾಜ್ ಉಪನ್ಯಾಸ ನೀಡುವರು ಎಂದು ಮಾಹಿತಿ ನೀಡಿದರು.

ಸಂಜೆ 5ಕ್ಕೆ ರೋಟರಿ ಮಹಿಳಾ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ಹಾಸ್ಯದೊಂದಿಗೆ ಸರಳ ಜೀವನ ಮೌಲ್ಯಗಳು ವಿಷಯ ಕುರಿತು ಸಂಧ್ಯಾಶಣೈ ಉಪನ್ಯಾಸ ನೀಡುವರು. ರಾತ್ರಿ 7.30ಕ್ಕೆ ನಡೆಯುವ ಸಮಾರೋಪದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ, ಉಪ ಮೇಯರ್ ಸುರೇಖಾ ಮುರಳೀಧರ್ ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಪಿ.ನಾರಾಯಣ್, ಡಾ.ಕಂಚನ್ ಕುಲಕರ್ಣಿ, ಡಾ.ರಕ್ಷಾರಾವ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)