ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಸಬಲೀಕರಣಕ್ಕೆ ಮುನ್ನುಡಿ ಬರೆದ ‘ಸ್ತ್ರೀ ಸಂಕುಲ’

ರಾಜ್ಯ ಸರ್ಕಾರದಿಂದ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಯೋಜನೆ ಜಾರಿ
Last Updated 8 ಮಾರ್ಚ್ 2020, 11:16 IST
ಅಕ್ಷರ ಗಾತ್ರ

ಶಿವಮೊಗ್ಗ: ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯ ಸೇರಿ ಎಲ್ಲ ಕ್ಷೇತ್ರಗಳನ್ನೂ ಮಹಿಳೆ ಪ್ರತಿನಿಧಿಸಿದ್ದಾಳೆ. ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರದ ಹಲವು ಯೋಜನೆಗಳೂ ನಿರೀಕ್ಷಿತ ಪ್ರಗತಿ ಸಾಧಿಸಿವೆ.

ಮಹಿಳೆಯರ ಅಭಿವೃದ್ಧಿಗೆ, ಶಿಕ್ಷಣಕ್ಕೆ, ಸಾಮಾಜಿಕ ಚಟುವಟಿಕೆಯನ್ನು ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ 2000–01ರಲ್ಲಿ ‘ಸ್ತ್ರೀ ಶಕ್ತಿ’ ಸ್ವಸಹಾಯ ಸಂಘ ಯೋಜನೆ ಜಾರಿಗೊಳಿಸಿತು.

ಸ್ವಸಹಾಯ ಸಂಘಗಳಲ್ಲಿ ಹೆಚ್ಚಾಗಿಆರ್ಥಿಕವಾಗಿ ಹಿಂದುಳಿದವರು, ಅಶಿಕ್ಷಿತರು, ಕಡಿಮೆ ಶಿಕ್ಷಣ ಪಡೆದವರು, ವಿಧವೆಯರು, ಕೂಲಿ ಕೆಲಸದವರು, ಶೋಷಿತ ವರ್ಗದವರು ತೊಡಗಿಕೊಂಡಿದ್ದಾರೆ. ಸ್ವಾವಲಂಬಿಗಳಾಗಲು ಗುಂಪೊಂದನ್ನು ರಚಿಸಿಕೊಂಡು ಕಿರು ಆರ್ಥಿಕ ವ್ಯವಹಾರ ನಡೆಸುತ್ತಿದ್ದಾರೆ.

ಸ್ತ್ರೀಶಕ್ತಿ ಸಂಘಗಳು ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ, ಸಾಮಾಜಿಕ ಮತ್ತು ಶೈಕ್ಷಣಿಕ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿವೆ. ಮೊದಲು ಗ್ರಾಮಗಳಲ್ಲಿ ಆರಂಭವಾದ ಈ ಸಂಘಗಳು ಕ್ರಮೇಣ ನಗರ ಪ್ರದೇಶಗಳಿಗೂ ವ್ಯಾಪಿಸಿ, ಅಲ್ಲಿರುವ ಮಹಿಳೆಯರಲ್ಲಿ ಮೂಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮತ್ತು ಅವರ ಆರ್ಥಿಕತೆಯು ಸಕಾರಾತ್ಮಕ ಪ್ರಗತಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.

ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸುವುದು, ಹೊಲಿಗೆ, ಉಪ್ಪಿನಕಾಯಿ, ಅಡಿಕೆ ಹಾಳೆ ತಯಾರಿಸುವುದು, ಹಪ್ಪಳ ಸಂಡಿಗೆ, ಪಾನಿಪುರಿ, ಎಲೆಕ್ಟ್ರಿಕಲ್, ಬ್ಯೂಟಿ ಪಾರ್ಲರ್, ಮ್ಯಾಟ್‌ ತಯಾರಿಕೆ, ತರಕಾರಿ, ಹಣ್ಣು ಮಾರಾಟ, ಕಸೂತಿ, ಎರೆಹುಳು ಗೊಬ್ಬರ ತಯಾರಿಕೆ, ನರ್ಸರಿ, ಜಾನುವಾರು ಸಾಕಣೆ, ರೇಷ್ಮೆ ಹುಳು ಸಾಕಣೆ, ಸಣ್ಣ ಕೈಗಾರಿಕೆ ಸ್ಥಾಪನೆ, ಅಲಂಕಾರಿಕ ಮೀನು ಸಾಕಣೆ ಹೀಗೆ ವಿವಿಧ ಚಟುವಟಿಕೆಯಲ್ಲಿ ಮಹಿಳೆಯರು ತೊಡಗಿಕೊಂಡಿದ್ದಾರೆ.

ಬಾಲ್ಯ ವಿವಾಹ, ಮದ್ಯಪಾನ, ವರದಕ್ಷಿಣೆ, ಬಾಲ ಕಾರ್ಮಿಕ ಪದ್ಧತಿ, ಅತ್ಯಾಚಾರ, ಕೌಟುಂಬಿಕ ಕಲಹ, ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸಂಘಗಳೂ
ಇವೆ.

ಪೋಷಣ್ ಅಭಿಯಾನ, ರಾಷ್ಟ್ರೀಯ ಹಬ್ಬಗಳು, ಬಡವರ ಮದುವೆಗೆ ಬಟ್ಟೆ, ತಾಳಿ ನೀಡುವುದು, ಮಕ್ಕಳ ಜನ್ಮದಿನ ಆಚರಣೆ ಹೀಗೆ ಸಂಘದಿಂದ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.

ಸಂಘದಿಂದ ಅನುಕೂಲಗಳು: ಮಹಿಳೆಯರಿಗೆ ಹಣಕಾಸು, ಬ್ಯಾಂಕ್‌ ವ್ಯವಹಾರ, ಲೆಕ್ಕಪತ್ರ ನಿರ್ವಹಣೆ, ಉದ್ಯಮಶೀಲತೆ ಹಾಗೂ ಕೌಶಲಾಭಿವೃದ್ಧಿ ತರಬೇತಿ, ಸಾಲ ನಿರ್ವಹಣೆ, ಸಂವಹನ, ನಾಯಕತ್ವದ ಬಗ್ಗೆ ವಿವಿಧ ಹಂತಗಳಲ್ಲಿ ತರಬೇತಿ
ನೀಡಲಾಗುತ್ತಿದೆ.

ಸದಸ್ಯರು ಉಳಿತಾಯ ಮಾಡಿದ ಹಣದಿಂದ ಶೇ 2 ಅಥವಾ 1ರಷ್ಟು ಬಡ್ಡಿಗೆ ಆಂತರಿಕ ಸಾಲ ನೀಡುವುದು. ಹೆಚ್ಚು ಉಳಿತಾಯ ಮಾಡಿದ ಸಂಘಕ್ಕೆ ಪ್ರೋತ್ಸಾಹ ಧನ ನೀಡುವುದು. ಶೈಕ್ಷಣಿಕ ಸಾಲ, ಮನೆ ಕಟ್ಟಲು, ನಿವೇಶನ ಖರೀದಿಸಲು, ಸಣ್ಣ ಕೈಗಾರಿಕೆ ಸ್ಥಾಪನೆಗೆ ಸಾಲ ನೀಡಲಾಗುತ್ತದೆ. ಬಂದಂತಹ ಲಾಭದಿಂದ ವರ್ಷಕ್ಕೊಮ್ಮೆ ಪ್ರವಾಸ ಕೈಗೊಳ್ಳಲಾಗುತ್ತದೆ.

ಸ್ವಸಹಾಯ ಸಂಘದಿಂದ ಅನೇಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ. ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ ಸ್ತ್ರೀಶಕ್ತಿ ಒಂದಾಗಿ ಶ್ರಮಿಸುತ್ತಿವೆ.

ಸಮಸ್ಯೆಗಳು

ಸ್ವಸಹಾಯ ಸಂಘಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಬೇಸಿಗೆ ಕಾಲದಲ್ಲಿ ಯಾವುದೇ ಕೃಷಿ ಚಟುವಟಿಕೆ ಇರದ ಕಾರಣ ಸಂಘದ ಮಹಿಳೆಯರು ತಿನಿಸುಗಳನ್ನು, ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ಆದರೆ, ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಇಲ್ಲ.

ಉತ್ಪನ್ನಗಳ ಮೇಲೆ ಅಂಟಿಸುವ ಲೇಬಲ್‌ಗಳನ್ನೂ ನೀಡುವುದಿಲ್ಲ. ಯಾವುದೋ ಮೂಲೆಯಲ್ಲಿ ಸಂಘದ ಭವನ ನಿರ್ಮಾಣ
ಮಾಡಿದರೆ ಅಲ್ಲಿ ನಾವು ತಯಾರಿಸಿದ ಉತ್ಪನ್ನಗಳನ್ನು ಕೊಳ್ಳಲು ಯಾರೂ ಬರುವುದಿಲ್ಲ. ಹೀಗಾಗಿ ತಯಾರಿಸಿದ
ಉತ್ಪನ್ನಗಳು, ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು’ ಎಂಬುದು ಸ್ತ್ರೀ ಶಕ್ತಿ ಸಂಘದ ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮೀ ಹಾಗೂ ಕಾರ್ಯದರ್ಶಿ ಪ್ರೇಮಾ ಅವರ ಒತ್ತಾಯ.

ಆದಾಯ ಬರುವ ಹೊಲಿಗೆ ತರಬೇತಿ, ಬ್ಯೂಟಿ ಪಾರ್ಲರ್‌ ಮತ್ತು ಪ್ರಸ್ತುತ ಅಗತ್ಯವಿರುವ ತರಬೇತಿಗಳನ್ನು ಉಚಿತವಾಗಿ ಇನ್ನೂ ಹೆಚ್ಚಿನ ತರಬೇತಿಗಳನ್ನು ನೀಡುವ ಅಗತ್ಯವಿದೆ ಎನ್ನುವುದು ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರಾದ ಭಾರತಿ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT