ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸವಲತ್ತು ಪಡೆಯಲು ಸಲಹೆ

ಕಾರ್ಮಿಕ ಸಮ್ಮಾನ ದಿನಾಚರಣೆ ಕಾರ್ಯಕ್ರಮ ಆಯೋಜನೆ
Last Updated 1 ಮಾರ್ಚ್ 2019, 12:18 IST
ಅಕ್ಷರ ಗಾತ್ರ

ರಾಮನಗರ: ‘ಅಸಂಘಟಿತ ವಲಯದ ಕಾರ್ಮಿಕರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮವಾದ ಜೀವನ ರೂಪಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎನ್. ನಾಗರಾಜು ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಅರ್ಹ ಕಾರ್ಮಿಕರನ್ನು ತಲುಪಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಕಾರ್ಮಿಕರ ಶ್ರಮದಿಂದಲೇ ದೇಶದ ಅಭಿವೃದ್ದಿ ಸಾಧ್ಯ. ಕಾರ್ಮಿಕರಿಗಾಗಿ ಜೀವ ವಿಮೆ ಹಾಗೂ ಹಲವಾರು ಉಪಯುಕ್ತ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತಂದಿವೆ. ದುಡಿಯುವ ಕೈಗಳಿಗೆ ಸಮಾಜ ಸದಾ ಋುಣಿಯಾಗಿರಬೇಕು. ಕಾರ್ಮಿಕರು ತಮಗಿರುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಎನ್. ನಟರಾಜ್ ಮಾತನಾಡಿ, ಇಂದು ಸರ್ಕಾರದ ಯೋಜನೆಗಳನ್ನು ಪಡೆದ ಫಲಾನುಭವಿಗಳು ಈ ಯೋಜನೆಗಳ ಅರಿವಿಲ್ಲದ ಕಾರ್ಮಿಕರಿಗೆ ತಿಳಿಸಬೇಕು. ಇದರಿಂದ ಎಲ್ಲಾ ಕಾರ್ಮಿಕರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಮಿಕರು ದುರಾಭ್ಯಾಸ, ದುಶ್ಚಟಗಳಿಗೆ ಒಳಗಾಗದೇ ಶಿಸ್ತಿನ ಜೀವನ ನಡೆಸಬೇಕು. ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು. ನಿಮಗಾಗಿಯೇ ಇರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈಮುಹಿಲನ್ ಮಾತನಾಡಿ, ಅಸಂಘಟಿತ ವಲಯದ ಕಾರ್ಮಿಕರು ಶ್ರಮಜೀವಿಗಳು. ನೀವು ಕೆಲಸ ಮಾಡುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ನಿಮಗಾಗಿಯೇ ಇರುವ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗೆ ತೆರಳಿ, ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಕಾರ್ಮಿಕರ ಕೆಲಸಗಳಿಗಾಗಿಯೇ ಕಂಪ್ಯೂಟರ್‌ ಆಪರೇಟರ್‌ ನೇಮಕ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್‌, ಕಾರ್ಮಿಕಾಧಿಕಾರಿ ಶಿವಾನಂದ, ಕಾರ್ಮಿಕ ನಿರೀಕ್ಷಕರಾದ ಯತೀಶ್‌ಕುಮಾರ್, ಮಂಜುನಾಥ್, ಮುನಿಲಿಂಗೇಗೌಡ, ಸುಷ್ಮಾ, ಯೋಜನಾ ನಿರ್ದೇಶಕ ಬಿ.ಆರ್. ದಿನೇಶ್ ಇದ್ದರು.

ವಿದ್ಯಾರ್ಥಿನಿ ಜ್ಯೋತಿ ಪ್ರಾರ್ಥಿಸಿದರು. ನೇತ್ರಾವತಿ ಮತ್ತು ತಂಡದವರು ನಾಡಗೀತೆ ಹಾಡಿದರು. ಸಹಾಯಕ ಕಾರ್ಮಿಕ ಆಯುಕ್ತ ಎಸ್. ರೇವಣ್ಣ ಸ್ವಾಗತಿಸಿದರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರಮಿಕರಿಗೆ ಪುರಸ್ಕಾರ
ಕಾರ್ಯಕ್ರಮದಲ್ಲಿ 14 ಮಂದಿಗೆ ಶ್ರಮ ಸಮ್ಮಾನ ಪ್ರಶಸ್ತಿ, 130 ಮಂದಿಗೆ ವಿಶೇಷ ಪುರಸ್ಕಾರ ಪ್ರಶಸ್ತಿ ಹಾಗೂ 50 ಮಂದಿಗೆ ಸಮಾಧಾನಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

***
ಕಾರ್ಮಿಕ ಇಲಾಖೆಯ ಯೋಜನೆ, ಸೌಲಭ್ಯಗಳ ಕುರಿತು ಬಹುತೇಕರಿಗೆ ಮಾಹಿತಿ ಇಲ್ಲ. ಅಧಿಕಾರಿಗಳು ಇದರ ಅರಿವು ಮೂಡಿಸಬೇಕು
-ಜಿ.ಎನ್. ನಟರಾಜು,ತಾ.ಪಂ. ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT