‘ರೈತರಲ್ಲಿ ಸಂಘಟನೆ, ಜಾಗೃತಿ ಅಗತ್ಯ’

7
ಆಹಾರ ಉತ್ಪನ್ನಗಳ ಸಂಸ್ಕರಣೆ, ಸರ್ಕಾರದ ಯೋಜನೆಗಳ ಮಾಹಿತಿ ಕಾರ್ಯಾಗಾರ

‘ರೈತರಲ್ಲಿ ಸಂಘಟನೆ, ಜಾಗೃತಿ ಅಗತ್ಯ’

Published:
Updated:
Deccan Herald

 ರಾಮನಗರ: ‘ರೈತರು ಜಾಗೃತರಾಗಿ ಸಂಘಟಿತರಾಗದ ಹೊರತು ಸರ್ಕಾರದ ಯಾವ ಯೋಜನೆಗಳೂ ಪ್ರಯೋಜನ ಆಗಲಾರವು’ ಎಂದು ಸಂಸದ ಡಿ.ಕೆ. ಸುರೇಶ್‌ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ, ಕೃಷಿ, ತೋಟಗಾರಿಕೆ ಇಲಾಖೆ ಆಹಾರ ಕರ್ನಾಟಕ ನಿಗಮದ ವತಿಯಿಂದ ಆಹಾರ ಸಂಸ್ಕರಣ ತಾಂತ್ರಿಕತೆ ಹಾಗೂ ಸರ್ಕಾರಗಳಿಂದ ಲಭ್ಯವಿರುವ ಯೋಜನೆಗಳ ಕುರಿತು ಶುಕ್ರವಾರ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸರ್ಕಾರಗಳು ಹೊಟ್ಟೆಯಲ್ಲಿರುವ ಮಗುವಿನಿಂದ ಹಿಡಿದು ವ್ಯಕ್ತಿ ಮಣ್ಣಾಗುವವರೆಗೂ ಎಲ್ಲರಿಗೂ ಒಂದಲ್ಲ ಒಂದು ಯೋಜನೆ ನೀಡುತ್ತಿವೆ. ಆದರೆ ಎಲ್ಲ ಸವಲತ್ತುಗಳೂ ಬಲಾಢ್ಯರ ಪಾಲಾಗುತ್ತಿವೆ. ರಾಜ್ಯ ಸರ್ಕಾರ ರೈತರ ₨40 ಸಾವಿರ ಕೋಟಿ ಬೆಳೆ ಸಾಲ ಮನ್ನಾ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅವರು ವಿಷಾದಿಸಿದರು.

ಸರ್ಕಾರವು ರೈತರ ಅನುಕೂಲಕ್ಕಾಗಿ ಮಣ್ಣು ಆರೋಗ್ಯ ಕಾರ್ಡುಗಳನ್ನು ವಿತರಿಸಿದರೂ ಅದರ ಅರಿವು ಮೂಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಯಾವ ರೈತನೂ ಅದನ್ನು ಆಧರಿಸಿ ಕೃಷಿ ಮಾಡುತ್ತಿಲ್ಲ. ಒಂದು ಕಾಲದಲ್ಲಿ ಸಿರಿಧಾನ್ಯಗಳು ನಮ್ಮ ನಿತ್ಯದ ಆಹಾರವಾಗಿದ್ದವು. ಇಂದು ಅದನ್ನು ಪ್ಯಾಕೆಟ್‌ಗಳಲ್ಲಿ ಪ್ರದರ್ಶನಕ್ಕೆ ಇಡುವಂತಹ ಪರಿಸ್ಥಿತಿ ಇದೆ. ಹೊಲ ಉಳುಮೆ, ನಾಟಿ, ಗೊಬ್ಬರ ಹಾಕುವುದನ್ನು ಪರಿಚಯಿಸುವ ಟೂರಿಸಂ ಬಂದಿರುವುದು ದುರಂತ. ನಾವು ಇನ್ನಾದರೂ ಎಚ್ಚೆತ್ತು ಕೃಷಿಯತ್ತ ಮನಸ್ಸು ಮಾಡಬೇಕು. ಮುಂದೆ ರೈತರೇ ಈ ದೇಶದ ಆರ್ಥಿಕತೆಯನ್ನು ಮುನ್ನಡೆಸುವ ಕಾಲ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಇಂದು ಬೆಂಗಳೂರಿನಲ್ಲಿ ನಾಟಿ ಹಸುವಿನ ಹಾಲಿಗೆ ಪ್ರತಿ ಲೀಟರ್‌ಗೆ ₨100–120 ಬೆಲೆ ಇದೆ. ಸಾವಯವ, ಸಿರಿಧಾನ್ಯಗಳಿಂದ ಮಾಡಿದ ಒಂದು ಊಟಕ್ಕೆ ₨500ರವರೆಗೆ ಬೆಲೆ ಇದೆ. ರೈತರು ಸ್ವಸಹಾಯ ಗುಂಪುಗಳ ರಚನೆ ಮಾಡಿಕೊಂಡು ಒಗ್ಗಟ್ಟಿನಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮ ಉತ್ಪನ್ನಗಳಿಗೆ ತಾವೇ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸನ್ಮಾನ: ಕೃಷಿ ಸಂಸ್ಕರಣೆ ಉದ್ಯಮದಲ್ಲಿ ಯಶಸ್ಸು ಸಾಧಿಸಿದ ಉದ್ಯಮಿಗಳಾದ ಬಿಳಗುಂಬ ವಾಸು, ಡಾ. ಪೂರ್ಣಚಂದ್ರ. ಸುಧಾ, ಜಯಚಂದ್ರ ಶರ್ಮ, ಮಾದೇಗೌಡ ಹಾಗೂ ರಾಮಕೃಷ್ಣಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಬಿಗ್‌ ಬಜಾರ್ ಮಾರುಕಟ್ಟೆ ಪ್ರತಿನಿಧಿ ರಾಧಾಕೃಷ್ಣ, ಗ್ರೀನ್‌ನೆಸ್ಟ್ ಕಂಪನಿಯ ವ್ಯವಸ್ಥಾಪಕ ಪೂರ್ಣಚಂದ್ರ ಮೊದಲಾದವರು ರೈತರೊಟ್ಟಿಗೆ ಮಾಹಿತಿ ಹಂಚಿಕೊಂಡರು.

ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷೆ ದಿವ್ಯಾ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸಿಇಒ ಮುಲ್ಲೈ ಮುಹಿಲನ್, ಸದಸ್ಯರಾದ ಶಂಕರ್, ನಾಗರಾಜು, ಪ್ರಸನ್ನ, ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜು, ಮಾಗಡಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜು, ವಿವಿಧ ಇಲಾಖೆಗಳ ಅಧಿಕಾರಿಗಳಾದ ಅಂಬಿಕಾ, ಗೀತಾ, ಜಯಚಂದ್ರ, ರೈತ ಮುಖಂಡರಾದ ಸಿ. ಪುಟ್ಟಸ್ವಾಮಿ, ಮಲ್ಲಯ್ಯ ಇದ್ದರು.

ಹರೀಶ್ ಪ್ರಾರ್ಥಿಸಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ಸ್ವಾಗತಿಸಿದರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.
ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳ ಆಸಕ್ತ ರೈತರು ಹಾಗೂ ಕೃಷಿ ಕ್ಷೇತ್ರದ ಉದ್ಯಮಿಗಳು ಪಾಲ್ಗೊಂಡರು.

ಮೂರು ಜಿಲ್ಲೆಗಳಲ್ಲಿ ಮೆಗಾ ಫುಡ್‌ ಪಾರ್ಕ್‌
ರಾಜ್ಯದ ಆಯ್ದ ಮೂರು ಜಿಲ್ಲೆಗಳಲ್ಲಿ ಮೆಗಾ ಫುಡ್‌ ಪಾರ್ಕ್‌ ಹಾಗೂ ಹೋಬಳಿ ಮಟ್ಟದಲ್ಲಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸರ್ಕಾರವು ನಿರ್ಧರಿಸಿದೆ. ರಾಮನಗರ, ಕೋಲಾರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಈ ಯೋಜನೆಯು ಅನುಷ್ಠಾನಗೊಳ್ಳಲಿದೆ ಎಂದರು.
ಕನಕಪುರ ತಾಲ್ಲೂಕಿನ ಶಿವನಹಳ್ಳಿ ಮೆಗಾ ಡೇರಿಯು ನವೆಂಬರ್‌ನಲ್ಲಿ ಕಾರ್ಯಾರಂಭ ಮಾಡಲಿದೆ. ಇದರಿಂದ ಹಾಲಿನ ಮೌಲ್ಯವರ್ಧನೆ ಸಾಧ್ಯವಾಗಲಿದ್ದು, ಈ ಭಾಗದ ರೈತರಿಗೆ ಮುಂದಿನ ಏಪ್ರಿಲ್–ಮೇನಿಂದ ಪ್ರತಿ ಲೀಟರ್‌ ಹಾಲಿಗೆ ₨2–3 ಹೆಚ್ಚುವರಿ ದರ ಸಿಗಲಿದೆ ಎಂದು ಭರವಸೆ ನೀಡಿದರು.

ಇಸ್ರೇಲ್‌ ಕೃಷಿ ಮಾದರಿ ಕಷ್ಟ
ರಾಜ್ಯದಲ್ಲಿ ಇಸ್ರೇಲ್‌ ಕೃಷಿ ಪದ್ಧತಿ ಅಳವಡಿಕೆಯು ಕಷ್ಟಸಾಧ್ಯ. ಅದರ ಅಗತ್ಯವೂ ಇಲ್ಲ ಎಂದು ಡಿ.ಕೆ. ಸುರೇಶ್‌ ಹೇಳಿದರು.
ಇಸ್ರೇಲ್‌ನಲ್ಲಿ ಕೇವಲ 1 ಕೋಟಿ ಜನರಿದ್ದಾರೆ. ರೈತರಲ್ಲಿನ ಶಿಸ್ತು ಒಗ್ಗಟ್ಟು, ಉತ್ಪನ್ನದ ಗುಣಮಟ್ಟ, ಮಾರುಕಟ್ಟೆ ಈ ಎಲ್ಲ ವ್ಯವಸ್ಥೆಗಳಿಂದಾಗಿ ಅಲ್ಲಿ ಕೃಷಿ ಯಶಸ್ಸು ಕಂಡಿದೆ. ಆದರೆ 130 ಕೋಟಿ ಜನರಿರುವ ದೇಶದಲ್ಲಿ ಇಂತಹ ಪದ್ಧತಿ ಜಾರಿಗೆ ತರುವುದು ಕಷ್ಟ. ನಮ್ಮಲ್ಲಿ ಶಿಸ್ತು ಕಡಿಮೆ. ರೈತರು ಇದು ನನ್ನದು ಎಂದು ತೀರ್ಮಾನಿಸಿದಾಗ ಮಾತ್ರ ಯೋಜನೆಯ ಯಶಸ್ಸು ಸಾಧ್ಯ ಎಂದರು.

ಮಳಿಗೆಗಳಲ್ಲಿ ಪ್ರದರ್ಶನ
ಕಾರ್ಯಾಗಾರದ ಅಂಗವಾಗಿ ಜಿ.ಪಂ. ಭವನದ ಆವರಣದಲ್ಲಿ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು.
ಕೃಷಿ ಮತ್ತು ಆಹಾರ ಸಂಸ್ಕರಣೆ ವಿಭಾಗದಲ್ಲಿ ಯಶಸ್ಸು ಕಂಡಿರುವ ಉದ್ಯಮಿಗಳು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು ತಾವು ಕೈಗೊಂಡಿರುವ ಕಾರ್ಯಕ್ರಮಗಳು, ಉತ್ಪನ್ನಗಳ ತಯಾರಿಕೆ ಕುರಿತು ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಸಿರಿಧಾನ್ಯಗಳಿಂದ ಮಾಡಿದ ಬಿಸಿಬೇಳೆ ಬಾತ್‌, ಮೊಸರನ್ನ ಹಾಗೂ ವಡೆ ಉಣಬಡಿಸಲಾಯಿತು. ಜೊತೆಗೆ ಹಣ್ಣಿನ ಸಲಾಡ್‌, ಪ್ಯಾಕ್‌ ಮಾಡಿದ ಎಳೆನೀರಿನ ಬಾಟಲಿಯನ್ನೂ ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !