ಸರ್ಕಾರ, ಸಂಘಸಂಸ್ಥೆಗಳ ಸಹಕಾರ ಅಗತ್ಯ’

7
ವಿಕೋಪ, ವಿಪತ್ತು ಮತ್ತು ನಿರ್ವಹಣೆಯ ತರಬೇತಿ ಕಾರ್ಯಾಗಾರ

ಸರ್ಕಾರ, ಸಂಘಸಂಸ್ಥೆಗಳ ಸಹಕಾರ ಅಗತ್ಯ’

Published:
Updated:
Deccan Herald

ರಾಮನಗರ: ಪ್ರಕೃತಿ ವಿಕೋಪಗಳು ಆಕಸ್ಮಿಕವಾಗಿ ಬಂದೆರಗುವ ಘಟನೆಗಳಾದರೂ ,ಅಂತಹ ಅನಾಹುತಗಳನ್ನು ಎದುರಿಸಲು ನಾವು ಸದಾ ಸನ್ನದ್ಧರಾಗಿರಬೇಕಾಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್‌ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಬಸರೂರ್‌ ರಾಜೀವಶೆಟ್ಟಿ ಹೇಳಿದರು.

ಇಲ್ಲಿನ ಅಲ್ ಕರೀಂ ಸಮುದಾಯ ಭವನದಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಜಿಲ್ಲಾ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ ವಿಕೋಪ, ವಿಪತ್ತು ಮತ್ತು ನಿರ್ವಹಣೆಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಠಾತ್ತಾಗಿ ಬಂದೆರಗುವ ವಿಪತ್ತುಗಳ ನಿರ್ವಹಣೆಯಲ್ಲಿ ಸರ್ಕಾರದ ಜತೆಗೆ ಸಂಘಸಂಸ್ಥೆಗಳು, ಸಾರ್ವಜನಿಕರ ಸಹಕಾರ, ಸಹಭಾಗಿತ್ವವೂ ಅಗತ್ಯ. ಕೇವಲ ಸರ್ಕಾರಿ ವ್ಯವಸ್ಥೆಯಿಂದಷ್ಟೇ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಗಲಾರದು ಎಂದರು.

ರಸ್ತೆಯ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳು ಕಡಿಮೆಯಾಗುತ್ತವೆ. ಕೇಂದ್ರ ಸರ್ಕಾರ ಇದೇ 21ರಿಂದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರಥಮ ಚಿಕಿತ್ಸೆ, ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಾಗಾರಗಳು ನಡೆಯುವಂತೆ ಮಾಡಿರುವುದು ಸ್ವಾಗತಾರ್ಹ ಎಂದರು.

ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ರಾಜ್ಯ ಘಟಕದ ಉಪ ಸಭಾಪತಿ ಅಪ್ಪರಾವ್‌ ಅಕ್ಕೋಣೆ ಮಾತನಾಡಿ ರೆಡ್‌ಕ್ರಾಸ್‌ ಸಂಸ್ಥೆ ಸಮಾಜದಲ್ಲಿ ಸೇವಾ ಚಟುವಟಿಕೆಗಳನ್ನು ಮಾಡುವ ಜತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುತ್ತಿದೆ. ಪ್ರಪಂಚದ 200ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂದಿನ ಯುವ ಸಮುದಾಯ ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ದೇಹದ ಯಾವುದೇ ಭಾಗವನ್ನು ಕೃತಕವಾಗಿ ಹಾಕಿ ಸರಿಪಡಿಸಬಹುದು. ಆದರೆ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆದ್ದರಿಂದ ಜನರು ವರ್ಷಕ್ಕೆ ಒಮ್ಮೆಯಾದರೂ ಸಂಘಸಂಸ್ಥೆಗಳು ಆಯೋಜಿಸುವ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡಬೇಕು ಎಂದರು.

ತರಬೇತಿ ಅವಶ್ಯ: ಲಯನ್ಸ್‌ ಕ್ಲಬ್‌ನ ಡಾ.ಪಿ.ಆರ್‌.ಎಸ್. ಚೇತನ್‌ ಮಾತನಾಡಿ ನೈಸರ್ಗಿಕ ಮತ್ತು ಮಾನವ ನಿರ್ಮಿತ ಅಪಾಯಗಳನ್ನು ಗುರುತಿಸಿ ಅದನ್ನು ಹೇಗೆ ಎದುರಿಸಬೇಕು. ಸ್ಥಳೀಯ ವಾಗಿ ಇರುವ ಸಾಧನ ಸಲಕರಣೆ, ನುರಿತ ತಜ್ಞರು, ಬೇಕಿರುವ ಸಲಕರಣೆಗಳ ಬಗ್ಗೆ ಪಟ್ಟಿಮಾಡಿ ಸ್ಥಳೀಯರನ್ನು ತರಬೇತಿ ಗೊಳಿಸಬೇಕು ಎಂದರು.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ. ಶೇಷಾದ್ರಿ ಐಯ್ಯರ್, ಪದಾಧಿಕಾರಿಗಳಾದ ಆರ್.ಎ. ಖಾನ್, ವಿ. ಬಾಲಕೃಷ್ಣ, ಎನ್.ವಿ. ಲೋಕೇಶ್‌, ಬಿ.ಕೆ. ಕೃಷ್ಣಮೂರ್ತಿ, ಪರಮಶಿವಯ್ಯ, ಸಿದ್ದಿಕಿ, ಚಂದ್ರಶೇಖರ್, ಸಿಫಾತುಲ್ಲಾಖಾನ್‌, ಸಾಹುಕಾರ್‌ ಅಮ್ಜದ್‌ ಇದ್ದರು.

ವಿದ್ಯಾರ್ಥಿನಿಯರಾದ ರಕ್ಷಿತಾ, ಪವಿತ್ರಾ ಪ್ರಾರ್ಥಿಸಿದರು.

ಮಕ್ಕಳಿಗೆ ಮಾಹಿತಿ ಅಗತ್ಯ
‘ಪ್ರಾಥಮಿಕ ಹಂತದಲ್ಲೇ ಶಾಲೆಯಲ್ಲಿ ಮಕ್ಕಳಿಗೆ ಪ್ರತಿಯೊಂದು ವಿಪತ್ತುಗಳು ಬಂದಾಗ ಹೇಗೆ ರಕ್ಷಿಸಿಕೊಳ್ಳಬೇಕು ಹಾಗೂ ಇತರರನ್ನು ಹೇಗೆ ರಕ್ಷಿಸಬೇಕು ಎಂಬ ಮಾಹಿತಿಯನ್ನು ನೀಡುವುದರಿಂದ ಅಪಘಾತಗಳನ್ನು ತಡೆಯಬಹುದು’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಡಾ.ವಿ.ಎಲ್‌.ಎಸ್. ಕುಮಾರ್ ತಿಳಿಸಿದರು.

ನಿತ್ಯವೂ ಸಮಾಜದಲ್ಲಿ ಒಂದಿಲ್ಲೊಂದು ಅವಘಡಗಳು ನಡೆಯುತ್ತಿರುತ್ತವೆ ಇವುಗಳಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಹಾಗೂ ಹೇಗೆ ನಡೆಯದಂತೆ ಮುಂಜಾಗ್ರತೆ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !