ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತ ವೈಭವ ಕಳೆದುಕೊಂಡ ಮಲೆನಾಡು

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರದಲ್ಲಿ ಜಿಲ್ಲಾಧಿಕಾರಿ ದಯಾನಂದ ಕಳವಳ
Last Updated 5 ಜೂನ್ 2019, 15:26 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಎಂದು ಖ್ಯಾತಿ ಪಡೆದ ಶಿವಮೊಗ್ಗ ಇಂದು ಗತ ವೈಭವ ಕಳೆದುಕೊಂಡಿದೆ. ಒಂದು ಕಾಲದಲ್ಲಿ ಜೀವ ವೈವಿಧ್ಯತೆಯ ತಾಣವಾಗಿದ್ದ ಜಿಲ್ಲೆ ಪರಿಸರ ಅಸಮತೋಲದತ್ತ ಸಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಕಳವಳ ವ್ಯಕ್ತಪಡಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ, ಜಿಲ್ಲಾಡಳಿತ, ಶಿವಮೊಗ್ಗ ನಗರಪಾಲಿಕೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯ ಪರಿಸರದ ಮೇಲೆ ಮಾಡುತ್ತಿರುವ ನಿರಂತರ ದಾಳಿ ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ. ಒಂದು ಕಾಲದಲ್ಲಿ ರಾಜ್ಯದಲ್ಲೇ ಅಧಿಕ ಮಳೆ ಸುರಿಯುತ್ತಿದ್ದ ಆಗುಂಬೆ, ಹುಲಿಕಲ್‌ ಪ್ರದೇಶದಲ್ಲೂ ವಾಡಿಕೆ ಮಳೆ ಪ್ರಮಾಣ ಕುಂಠಿತವಾಗಿದೆ. ಇದಕ್ಕೆ ನಮ್ಮಲ್ಲಿ ಪರಿಸರದ ಮೇಲಿನ ಅನಾಸಕ್ತಿಯೇ ಕಾರಣ ಎಂದು ದೂರಿದರು.

ಜನರ ಅನುಕೂಲಕ್ಕೆ ಬಳಸುವ ಪ್ಲಾಸ್ಟಿಕ್ ಧೈತ್ಯ ಭೂತವಾಗಿ ಮನುಕುಲವನ್ನೇ ಕಾಡುತ್ತಿದೆ. ಸೂಕ್ತ ವಿಲೇವಾರಿಗೂ ಗಮನಹರಿಸುತ್ತಿಲ್ಲ. ಇಚ್ಚಾಶಕ್ತಿಯ ಕೊರತೆಯೂ ಅದಕ್ಕೆ ಕಾರಣವಿರಬಹುದು. ಪರಿಸರ ಸ್ವಚ್ಚವಾಗಿಟ್ಟುಕೊಳ್ಳಲು, ಅದರ ಸಮತೋಲನ ಕಾಯ್ದುಕೊಳ್ಳಲು ಎಲ್ಲರೂ ಸಂಕಲ್ಪ ಮಾಡಬೇಕು. ಕೇವಲ ಗಿಡನೆಟ್ಟು ಪರಿಸರ ದಿನ ಆಚರಿಸುವುದಕ್ಕಿಂತ ನೆಟ್ಟಿರುವ ಗಿಡಗಳನ್ನು ಜತನದಿಂದ ಕಾಯ್ದು ಪೋಷಿಸುವ ಮನೋಭಾವ ತೋರಬೇಕು ಎಂದರು.

ನಗರದ ವಿವಿಧ ಶಾಲಾ–ಕಾಲೇಜುಗಳ ಒಂದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಒಂದೆಡೆ ಕಲೆತು ನಂತರ ಪಾಲಿಕೆ ವ್ಯಾಪ್ತಿಯ 35 ವಾರ್ಡುಗಳಲ್ಲಿ 35ತಂಡಗಳಾಗಿ ಕಾರ್ಯನಿರ್ವಸಲಿದ್ದಾರೆ. ಅಲ್ಲಿನ ಕಸ, ಪ್ಲಾಸ್ಟಿಕ್‌ ಆಯ್ದು ತರುತ್ತಾರೆ. ಆ ಮೂಲಕ ನಗರದ ನಾಗರಿಕರಿಗೆ ಪರಿಸರ ಸ್ವಚ್ಛತೆಯ ಅರಿವು ಮೂಡಿಸಲಾಗುವುದು. ಕಸದ ವ್ಯವಸ್ಥಿತ ವಿಲೇವಾರಿ ಮಾಡುವಂತೆ ತಿಳಿಸಲಾಗುವುದು. ಪರಿಸರ ಸಂರಕ್ಷಣೆ ಇಲಾಖೆಗಳ ಅಧಿಕಾರಿಗಳು, ಪಾಲಿಕೆಯ ಜವಾಬ್ದಾರಿಯಲ್ಲ. ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಎಲ್ಲರೂ ಅರಿಯಬೇಕಿದೆ ಎಂದರು.

ವಿವಿಧ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸರ್ಕಾರಿ ನೌಕರರು ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್‌ ಸಂಗ್ರಹಿಸಿದರು. ಆಯನೂರು ಬಳಿಯ ಟ್ರೀ ಪಾರ್ಕ್‌ ಆವರಣದಲ್ಲಿ ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನ ಆಚರಿಸಲಾಯಿತು.

ನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸಲು, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಮರಿಯಾ, ಉಪ ಮೇಯರ್ ಎಸ್‌.ಎನ್‌.ಚನ್ನಬಸಪ್ಪ, ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಜೆಸಿಂತಾ ಡಿಸೋಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT