‘ಡೈಕ್ಲೊಫಿನಾಕ್ ಬಳಕೆ: ಜನಜಾಗೃತಿ ಅವಶ್ಯ’

7
ಅಂತರರಾಷ್ಟ್ರೀಯ ರಣಹದ್ದು ಜಾಗೃತಿ ದಿನಾಚರಣೆ

‘ಡೈಕ್ಲೊಫಿನಾಕ್ ಬಳಕೆ: ಜನಜಾಗೃತಿ ಅವಶ್ಯ’

Published:
Updated:
Deccan Herald

ರಾಮನಗರ: ರಣಹದ್ದುಗಳಿಗೆ ಮಾರಾಣಾಂತಿಕವಾದ ಡೈಕ್ಲೊಫಿನಾಕ್‌ ಔಷಧಿಯು ಬೇರೆ ಬೇರೆ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಹೆಜ್ಜೆ ಇಟ್ಟಿದೆ. ಇದರ ಬಳಕೆ ಮಾಡದಂತೆ ವೈದ್ಯರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಅಂತರರಾಷ್ಟ್ರೀಯ ಪಕ್ಷಿ ತಜ್ಞ ಕ್ರಿಸ್ ಬೌಡೆನ್ ಅಭಿಪ್ರಾಯಪಟ್ಟರು.

ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್‌ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಗರದ ಸಾಹಸ ಕಲಾ ಶಿಕ್ಷಣ ಕೇಂದ್ರದಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ರಣಹದ್ದು ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾನುವಾರುಗಳಿಗೆ ನೋವು ನಿವಾರಕ ಚುಚ್ಚುಮದ್ದಾಗಿ ನೀಡುತ್ತಿದ್ದ ಡೈಕ್ಲೋಫಿನಾಕ್‌ ರಾಸಾಯನಿಕ ಈಗಾಗಲೇ ಹದ್ದುಗಳ ಸಂತತಿಯನ್ನು ನಾಶ ಮಾಡಿದೆ. ಸರ್ಕಾರ ಎಚ್ಚೆತ್ತುಕೊಂಡು ಜಾನುವಾರುಗಳಿಗೆ ಈ ಚುಚ್ಚುಮದ್ದು ಬಳಕೆ ಹಾಗೂ ಉತ್ಪಾದನೆಯ ಮೇಲೆ ನಿಷೇಧ ಹೇರಿದೆ. ಆದರೆ ಮನುಷ್ಯರಿಗೆ ಇದೇ ಮಾದರಿಯ ಔಷಧ ಬಳಸುತ್ತಿರುವುದು ಅಪಾಯಕಾರಿ. ನೇಪಾಳ ಮಾದರಿಯಲ್ಲಿ ಭಾರತದಲ್ಲೂ ಇಂತಹ ರಾಸಾಯನಿಕ ಬಳಕೆ ಸಂಪೂರ್ಣವಾಗಿ ನಿಲ್ಲಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಣಹದ್ದುಗಳಿಗೆ ಹಲವು ವೈಶಿಷ್ಟ್ಯಗಳಿವೆ. ಅವು ಬೇಟೆಯಾಡುವುದಿಲ್ಲ. ಬದಲಾಗಿ ಸತ್ತ ಪ್ರಾಣಿಗಳ ಮಾಂಸವನ್ನಷ್ಟೇ ತಿನ್ನುತ್ತವೆ. ಅವುಗಳ ಸಂತತಿ ಕ್ಷೀಣಿಸಿದಂತೆಲ್ಲ ಬೀದಿನಾಯಿಗಳ ವಂಶಾವಳಿ ಹೆಚ್ಚಿದೆ. ಪರಿಣಾಮವಾಗಿ ಭಾರತದಲ್ಲಿ ರೇಬಿಸ್ ಕಾಯಿಲೆ ಶೇ 30ರಷ್ಟು ಉಲ್ಬಣಗೊಂಡಿದ್ದು, ದೇಶವು ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ಸರ್ಕಾರವು ‘ಮೆಲೋಕ್ಸಿಕ್ಯಾಮ್‌’ ಎಂಬ ರಣಹದ್ದು ಸ್ನೇಹಿ ರಾಸಾಯನಿಕವನ್ನು ಪಶು ವೈದ್ಯಕೀಯ ಇಲಾಖೆಗೆ ಸರಬರಾಜು ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಇದು ದೇಶದ ಇತರ ರಾಜ್ಯಗಳಿಗೂ ಮಾದರಿ ಆಗಬೇಕು ಎಂದು ಹೇಳಿದರು.

ಪಶು ವೈದ್ಯಕೀಯ ತಜ್ಞ ದೇವೋಜಿತ್‌ ದಾಸ್ ಉಪನ್ಯಾಸ ನೀಡಿ, ಡೈಕ್ಲೊಫಿನಾಕ್ ಬಳಕೆಯಿಂದಾದ ದುಷ್ಪರಿಣಾಮಗಳ ಕುರಿತು ವಿವರಿಸಿದರು. ಈ ರಾಸಾಯನಿಕಕ್ಕೆ ಬದಲಾಗಿ ಮೆಲೋಕ್ಸಿಕ್ಯಾಮ್‌ ಎನ್ನುವ ರಾಸಾಯನಿಕ ಲಭ್ಯವಿದೆ. ಇದರ ಬಳಕೆ ಬಗ್ಗೆ ಸ್ಥಳೀಯ ವೈದ್ಯರು ಹಾಗೂ ಸಾರ್ವಜನಿಕರನ್ನು ಉತ್ತೇಜಿಸಬೇಕು ಎಂದು ಕೋರಿದರು.

ಹೋರಾಟದ ನೆನಪು: ಪರಿಸರವಾದಿ ಪ್ರೊ. ಶಿವನಂಜಯ್ಯ ಮಾತನಾಡಿ ರಾಮದೇವರ ಬೆಟ್ಟ ಹಾಗೂ ರಣಹದ್ದು ಉಳಿವಿಗೆ ಇಲ್ಲಿ ನಡೆದ ಹೋರಾಟಗಳ ನೆನಪು ಮಾಡಿಕೊಂಡರು.

‘2010ರಲ್ಲಿ ಸಂಘಟಿತ ಹೋರಾಟದಿಂದಾಗಿ ಇಲ್ಲಿಗೆ ಸಮೀಪದ ರೆಸಾರ್ಟ್‌ ಮುಚ್ಚದೇ ಹೋಗಿದ್ದರೆ ಇಂದು ಇಲ್ಲಿ ರಣಹದ್ದುಗಳ ಸಂತತಿಯೇ ಇರುತ್ತಿರಲಿಲ್ಲ. ರೆಸಾರ್ಟುಗಳ ಹಾವಳಿಯಿಂದಾಗಿ ಕೊಡಗು ವಿನಾಶವಾದ ಉದಾಹರಣೆ ಇಂದು ನಮ್ಮ ಕಣ್ಣ ಮುಂದೆಯೇ ಇದೆ. ಇಲ್ಲಿನ ರೆಸಾರ್ಟ್ ಪ್ರಕರಣ ಸದ್ಯ ನ್ಯಾಯಾಲಯದಲ್ಲಿ ಇದ್ದು, ಅರಣ್ಯ ಇಲಾಖೆಯು ಸೂಕ್ತ ವಾದ ಮಂಡಿಸಬೇಕಿದೆ’ ಎಂದರು.

‘ರಣಹದ್ದುಗಳು ಆಹಾರವಿಲ್ಲದೆ ನಾಟಿಕೋಳಿಗಳ ಗಾತ್ರಕ್ಕೆ ಕುಗ್ಗಿವೆ. ಅವುಗಳ ಆಹಾರ ಕ್ರಮದ ಬಗ್ಗೆ ಸಂಶೋಧನೆ ಮಾಡಿ ಅದಕ್ಕೆ ತಕ್ಕಂತೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾವೇರಿ ವನ್ಯಜೀವಿ ಧಾಮದ ಡಿಸಿಎಫ್‌ ಮಂಜುನಾಥ್ ಮಾತನಾಡಿ, ಸ್ಥಳೀಯರನ್ನು ನೇಚರ್ ಗೈಡ್‌ ಆಗಿ ನೇಮಿಸಿಕೊಂಡು ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಪ್ರೊ. ಸುಬ್ರಮಣ್ಯ ಮಾತನಾಡಿ, ರಾಮದೇವರ ಬೆಟ್ಟವು ಸೇರಿದಂತೆ ಸುತ್ತಲಿನ ಬೆಟ್ಟಗುಡ್ಡಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಯೋಜನೆ ರೂಪಿಸುವಂತೆ ಕಿವಿಮಾತು ಹೇಳಿದರು.

ರಾಮನಗರ ವೈಲ್ಡ್‌ಲೈಫ್‌ ವಾರ್ಡನ್‌ ಪ್ರಶಾಂತ್‌, ಆರ್ಎಫ್‌ಒ ದಾಳೇಶ್, ಡಿಆರ್ಎಫ್‌ಒ ಕುಮಾರ್, ಗಾರ್ಡ್‌ ಸುಮಲತಾ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ, ಬಿಜೆಪಿ ಮುಖಂಡ ರಾಮಾಂಜನೇಯ, ಟ್ರಸ್ಟ್‌ನ ಪದಾಧಿಕಾರಿಗಳಾದ ಚಂದ್ರೇಗೌಡ, ಗಂಗಾಧರ್‌ ಬೈರಾಪಟ್ಟಣ, ನಾಗರಾಜ್‌ ಬೇತೂರು, ಪ್ರವೀಣ್‌ ಇದ್ದರು.

ಪರ್ಯಾಯ ಮಾರ್ಗದ ಪ್ರಸ್ತಾವ
‘ರಾಮದೇವರ ಬೆಟ್ಟದಲ್ಲಿ ಇರುವ ಪಟ್ಟಾಭಿರಾಮ ದೇಗುಲಕ್ಕೆ ಪರ್ಯಾಯ ರಸ್ತೆ ಮಾರ್ಗ ನಿರ್ಮಾಣ ಯೋಜನೆಯು ಪರಿಶೀಲನೆಯ ಹಂತದಲ್ಲಿ ಇದೆ’ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಹೇಳಿದರು.
‘ಈಗ ಇರುವ ಮಾರ್ಗದಲ್ಲಿ ಹೆಚ್ಚಿನ ಓಡಾಟದಿಂದ ರಣಹದ್ದುಗಳ ಆವಾಸಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ಹೀಗಾಗಿ ಬೆಟ್ಟದ ಮತ್ತೊಂದು ತುದಿಯಿಂದ ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಇಲ್ಲವೇ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮಾಡಲಾಗುವುದು’ ಎಂದರು.

ಬೆಟ್ಟದಲ್ಲಿ ಪಕ್ಷಿ ವೀಕ್ಷಣೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಅರಣ್ಯ ಕಾಲೇಜಿನ 60ಕ್ಕೂ ಹೆಚ್ಚು ವಿದ್ಯಾರ್ಥಿ–ವಿದ್ಯಾರ್ಥಿನಿಯರು ಶ್ರೀಧರ್‌ ಭಟ್‌ ನೇತೃತ್ವದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಇವರೊಟ್ಟಿಗೆ ಚನ್ನಪಟ್ಟಣ ಪದವಿ ಕಾಲೇಜಿನ ವಿದ್ಯಾರ್ಥಿಗಳೂ ಭಾಗಿಯಾದರು. ಎಲ್ಲರೂ ಮುಂಜಾನೆ ರಾಮದೇವರ ಬೆಟ್ಟಕ್ಕೆ ಪರಿಸರ ನಡಿಗೆ ಕೈಗೊಂಡರು. ಬಳಿಕ ಬೈನಾಕ್ಯುಲರ್ ಮೂಲಕ ಪಕ್ಷಿವೀಕ್ಷಣೆ ಮಾಡಿದರು.

1 ಕೋಟಿ – 1980ರಲ್ಲಿ ದೇಶದಲ್ಲಿದ್ದ ರಣಹದ್ದುಗಳ ಅಂದಾಜು ಸಂಖ್ಯೆ
20 ಸಾವಿರ – ಪ್ರಸ್ತುತ ದೇಶದಲ್ಲಿರುವ ರಣಹದ್ದುಗಳ ಸಂಖ್ಯೆ
ಶೇ 99.9 – ಕಳೆದ ಇಪ್ಪತ್ತು ವರ್ಷದಲ್ಲಿ ರಣಹದ್ದುಗಳ ಸಂತತಿಯ ನಾಶದ ಪ್ರಮಾಣ

ಭಾರತದಲ್ಲಿ ಡೈಕ್ಲೊಫಿನಾಕ್ ಬಳಕೆ ಸಂಪೂರ್ಣ ನಿಲ್ಲಬೇಕು. ದೇಶದ ವಿವಿಧೆಡೆ ರಣಹದ್ದುಗಳಿಗಾಗಿ ಸುರಕ್ಷತಾ ವಲಯಗಳು ನಿರ್ಮಾಣ ಆಗಬೇಕು
– ಕ್ರಿಸ್ ಬೌಡೆನ್, ಪಕ್ಷಿ ತಜ್ಞ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !