ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯ ಸಮಗ್ರ ವರದಿಗೆ ಮುಖ್ಯಮಂತ್ರಿ ಸೂಚನೆ

ತಪ್ಪು ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಿಎಂ ತರಾಟೆ
Last Updated 5 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಗೆ ನೆರೆ ಪೀಡಿತರ ನೆರವಿಗೆ ಎಷ್ಟು ಅನುದಾನ ಬೇಕು ಎನ್ನುವುದನ್ನು 15 ದಿನದೊಳಗೆ ಸಮಗ್ರ ವರದಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರವಾಹ ಕಾರ್ಯಗಳ ಹಾಗು ಅಭಿವೃದ್ಧಿ ಕಾರ್ಯಕ್ರಮಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನೆರೆ ಪೀಡಿತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಬೇರೆ ಜಿಲ್ಲೆಗಿಂತ ಇಲ್ಲಿ ಹೆಚ್ಚಿನ ಅನಾಹುತವಾಗಿಲ್ಲ. ಆದರೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿರುವದಾಗಿ ತಿಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಎಂ. ಕುರ್ಮಾರಾವ್ ಮಾತನಾಡಿ, ಜಿಲ್ಲೆಯ ನದಿ ದಂಡೆ ಬಳಿ ಇರುವ 13 ಗ್ರಾಮಗಳನ್ನು ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಸಿಎಂ ಮಾತನಾಡಿ, ಆ 13 ಗ್ರಾಮಗಳ ಜನರು ಶೇಕಡ 100ರಷ್ಟು ಸ್ಥಳಾಂತರಗೊಳ್ಳುತ್ತಿದ್ದರೆ ಮಾತ್ರ ಈ ಬಗ್ಗೆ ವರದಿ ಕೊಡಿ. 1000 ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು

ನಗರದಲ್ಲಿರುವ ಜಾಕ್‌ವೆಲ್ ಹಳೆದಾಗಿದ್ದು, ಅದನ್ನು ಬದಲಾಯಿಸಲು ಈಗಾಗಲೇ ₹29 ಕೋಟಿ ಅನುದಾನವಿದೆ. ಆದರೆ, ಇನ್ನೂ ₹7 ಕೋಟಿ ಬಾಕಿ ಇರುವುದರಿಂದ ಅದನ್ನು ಬಿಡುಗಡೆ ಮಾಡಿಸಬೇಕು ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಸಿಎಂ ಬಳಿ ಬೇಡಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಾಕಿ ಉಳಿದಿರುವ ಹಣವನ್ನು ಶೀಘ್ರ ನೀಡಲಾಗುವುದು ಎಂದು ತಿಳಿಸಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ರಸ್ತೆಗಳು, ಸೇತುವೆಗಳು ಹಾಳಾಗಿವೆ. ಪ್ರತಿ ಬಾರಿ ಹೆಚ್ಚಿನ ಪ್ರವಾಹ ಬಂದಾಗ ಇಂತಹ ಪರಿಸ್ಥಿತಿ ತಪ್ಪಿದ್ದಲ್ಲ. ಆದ್ದರಿಂದ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಯಾದಗಿರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೊಸ ಜಾಕ್‍ವೆಲ್ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡಿಲ್ಲ. ಇದಕ್ಕಾಗಿ ಈಗಾಗಲೇ ₹22 ಕೋಟಿ ಅಂದಾಜುವೆಚ್ಚ ತಯಾರಿಸಲಾಗಿದೆ. ಆದರೆ, ಕಾಮಗಾರಿಗೆ ₹29 ಕೋಟಿ ಅವಶ್ಯಕತೆ ಇದೆ ಎಂದು ಹೇಳಿದರು.

ಶಾಸಕ ನರಸಿಂಹನಾಯಕ ಅವರು ಮಾತನಾಡಿ, ಸುರಪುರದಲ್ಲಿ ಕುಡಿಯುವ ನೀರು ಸರಬರಾಜು ಸಂಬಂಧಿಸಿದಂತೆ ಪ್ರತಿಶತ ಅನುದಾನ ಬಿಡುಗಡೆಯಾದರೂ ಕಾಮಗಾರಿ ಆರಂಭಿಸುತ್ತಿಲ್ಲ ಎಂದು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.

ಮುಖ್ಯಮಂತ್ರಿಗಳು ಮಾತನಾಡಿ, ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಸುರಪುರ ಮತ್ತು ಯಾದಗಿರಿ ನಗರಗಳ ಸದರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಯುಡಬ್ಲ್ಯೂಎಸ್ ಮುಖ್ಯ ಎಂಜಿನಿಯರ್ದಿನೇಶ್ ಅವರಿಗೆ ತಾಕೀತು ಮಾಡಿದರು.

ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ,ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್,ಸೇರಿದಂತೆ ಜನಪ್ರತಿನಿಧಿಗಳು ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಪ್ರಭಾರಿ ಅಧಿಕಾರಿಗಳ ಮೇಲೆ ಇಲಾಖೆ ಕಾರ್ಯಕ್ರಮಗಳು ನಡೆಯುತ್ತಿವೆ. ಇದರಿಂದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ. ಜಿಲ್ಲೆಯ ಪ್ರಮುಖ ಬೇಡಿಕೆಯಾದ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು. 300 ಬೆಡ್‍ಗೆ ಮೇಲ್ದರ್ಜೆಗೇರಿಸಲಾದ ಜಿಲ್ಲಾಸ್ಪತ್ರ್ರೆಗೆ ಮೂಲಸೌಕರ್ಯ ಮತ್ತು ವೈದ್ಯರನ್ನು ನೇಮಕ ಮಾಡುವ ಅಗತ್ಯ ಇದೆ. ರೈತರು ಬೆಳೆಗಳಿಗೆ ನೀರು ಹರಿಸಲು ಅನುಕೂಲವಾಗುವಂತೆ ದಿನಕ್ಕೆ 10 ಗಂಟೆ ವಿದ್ಯುತ್ ಪೂರೈಸಬೇಕು ಎಂಬುದಾಗಿ ಮನವಿ ಮಾಡಿದರು. ಈ ಎಲ್ಲಾ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

ಅಹವಾಲು ಸ್ವೀಕಾರ:

ಸಭೆಗೂ ಮುನ್ನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ಅಹವಾಲು ಸ್ವೀಕರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ್, ಸಂಸದ ಡಾ.ಉಮೇಶ ಜಿ.ಜಾಧವ, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ, ಶಿವರಾಜ ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಪ್ರಾದೇಶಿಕ ಆಯುಕ್ತ ಸುಬೋಧ್ ಯಾದವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT