ಶುಕ್ರವಾರ, ಏಪ್ರಿಲ್ 23, 2021
22 °C
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಹಾಪುರ ಎಸ್‍ಎಂಸಿ ಶಾಲೆ ಪ್ರಥಮ ಸ್ಥಾನ

ಜೈನ್ ಶಾಲೆಗೆ ₹10 ಸಾವಿರ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಶಾಲಾ ಮಕ್ಕಳಿಗಾಗಿ ಸ್ವಚ್ಛತೆ ಮತ್ತು ಶುಚಿತ್ವದ ಕುರಿತು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ‘ಸ್ವಚ್ಛತಾ ರಸಪ್ರಶ್ನೆ-2019’ ಸ್ಪರ್ಧೆಯಲ್ಲಿ ಶಹಾಪುರದ ಎಸ್‍ಎಂಸಿ ಜೈನ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು.

ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ‘ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆ’ ಕಾಯ್ದುಕೊಳ್ಳಲು ಗ್ರಾಮೀಣ ಜನರಲ್ಲಿ ನೈರ್ಮಲ್ಯ, ಶೌಚಾಲಯಗಳ ಬಳಕೆ ಮತ್ತು ನಿರ್ವಹಣೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಥಮ ಸ್ಥಾನ ಪಡೆದ ಶಹಾಪುರದ ಎಸ್‍ಎಂಸಿ ಜೈನ್ ಶಾಲೆಯ ರವೀಂದ್ರ ಮತ್ತು ಮೃತ್ಯುಂಜಯ ವಿದ್ಯಾರ್ಥಿಗಳ ತಂಡಕ್ಕೆ ₹10 ಸಾವಿರ ಬಹುಮಾನ ನೀಡಲಾಯಿತು. ದ್ವಿತೀಯ ಸ್ಥಾನ ಪಡೆದ ಯಾದಗಿರಿಯ ಡಾನ್ ಬೊಸ್ಕೋ ಶಾಲೆಯ ಶ್ರೀಹರಿ, ಥಾಮಸ್ ವಿದ್ಯಾರ್ಥಿಗಳ ತಂಡವು ₹7 ಸಾವಿರ ಬಹುಮಾನ ಹಾಗೂ ತೃತೀಯ ಸ್ಥಾನ ಪಡೆದ ಯಾದಗಿರಿಯ ಆರ್.ವಿ ಶಾಲೆಯ ಅರವಿಂದ ಮತ್ತು ಪ್ರಕುಲ್ ತಂಡವು ₹5 ಸಾವಿರ ಬಹುಮಾನ ಪಡೆದವು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ ವಿಜೇತ ಮಕ್ಕಳಿಗೆ ಶುಭ ಹಾರೈಸಿದರು.

ಬೆಂಗಳೂರಿನ ವಾಲ್‍ನಟ್ ನಾಲೇಡ್ಜ್ ಸಲ್ಯೂಶನ್ಸ್ ಸಂಸ್ಥೆಯ ಅನಘಾ ಮತ್ತು ಸೌರಭ ಸ್ವಚ್ಛತಾ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಸ್ವಚ್ಛಮೇವ ಜಯತೇ ಆಂದೋಲನದ ಅಂಗವಾಗಿ ಹಮ್ಮಿಕೊಂಡಿದ್ದ ಈ ರಸಪ್ರಶ್ನೆ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸುನೀಲ್ ಬಿಸ್ವಾಸ್ ಚಾಲನೆ ನೀಡಿದರು.

ಸ್ವಚ್ಛ ಭಾರತ್ ಮಿಷನ್‍ನ ವ್ಯವಸ್ಥಾಪಕ ಪ್ರಶಾಂತ ಎಚ್.ಎಲ್., ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಚ್ಛ ಭಾರತ್ ಮಿಷನ್ 2014ರ ಅಕ್ಟೋಬರ್ 2ರಂದು ಜಾರಿಗೆ ಬಂದಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ, ಸಾರ್ವಜನಿಕರು ಬಳಕೆ ಮಾಡುತ್ತಿಲ್ಲ. ಶೌಚಾಲಯ ಬಳಕೆಗೆ ಜನರ ಮನೋಭಾವನೆ ಬದಲಾಗಬೇಕಾಗಿದೆ. ಈ ದಿಸೆಯಲ್ಲಿ ಕಳೆದ ಜೂನ್ 11ರಿಂದ ಸ್ವಚ್ಛ ಭಾರತ್ ಅಭಿಯಾನದಡಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತಾ ರಥದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸ್ವಚ್ಛತೆ ಹಾಗೂ ಜಲ ಸಂರಕ್ಷಣೆಯ ಕುರಿತು ಶಾಲಾ-ಕಾಲೇಜುಗಳ ಮಕ್ಕಳಲ್ಲಿಯೂ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ್ ಮಿಷನ್‍ನ ಜಿಲ್ಲಾ ನೋಡಲ್ ಅಧಿಕಾರಿ ಗುರುನಾಥ ಗೌಡಪ್ಪನೋರ್, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಬನ್ನಪ್ಪ ಗುಡಿಮನಿ, ಅಕ್ಷರ ದಾಸೋಹ ಅಧಿಕಾರಿ ದೊಡ್ಡಪ್ಪ ಹೊಸಮನಿ, ಸುರಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೇವಪ್ಪ, ಸರ್ವ ಶಿಕ್ಷಣ ಅಭಿಯಾನದ ನಾಗಪ್ಪ ಪೋತಲ್ ಉಪಸ್ಥಿತರಿದ್ದರು.

ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಸಂಯುಕ್ತ ಕಾಲೇಜು, ಖಾಸಗಿ ಶಾಲೆಗಳ 8ರಿಂದ 12ನೇ ತರಗತಿ ವಿದ್ಯಾರ್ಥಿಗಳು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪನ್ಯಾಸಕಿ ಡಾ.ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಶರಣಬಸವ ವಠಾರ ಹಾಗೂ ಕಲಾ ತಂಡದವರು ನಾಡಗೀತೆ ಹಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.