ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಕರೆಗೆ ₹ 17 ಲಕ್ಷ ಪರಿಹಾರ ನಿಗದಿ’

ವಾಡಿ-ಗದಗ ರೈಲ್ವೆ ಯೋಜನೆಗೆ ಭೂಸ್ವಾಧೀನ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ
Last Updated 28 ನವೆಂಬರ್ 2019, 15:19 IST
ಅಕ್ಷರ ಗಾತ್ರ

ಯಾದಗಿರಿ: ‘ವಾಡಿ-ಗದಗ ರೈಲ್ವೆ ಯೋಜನೆಗಾಗಿ ಸುರಪುರ ತಾಲ್ಲೂಕಿನ ಖಾನಾಪುರ ಎಸ್.ಎಚ್. ಗ್ರಾಮದಲ್ಲಿ ರೈತರಿಂದ 41 ಎಕರೆ 22 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡಿದ್ದು, ಪ್ರತಿ ಎಕರೆಗೆ ₹ 17 ಲಕ್ಷ ಪರಿಹಾರ ವಿತರಿಸಲಾಗುವುದು’ ಎಂದು ಭೂ ಬೆಲೆ ನಿರ್ಧರಣಾ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ವಾಡಿ-ಗದಗ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಗೆ ಸ್ವಾಧೀನಪಡಿಸಿಕೊಂಡ ಜಮೀನುಗಳ ಮಾಲೀಕರೊಂದಿಗೆ ನಡೆದ ಭೂ-ಬೆಲೆ ನಿರ್ಧರಣಾ ಸಲಹಾ ಸಮಿತಿ 2ನೇ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಬಂದಷ್ಟು ಜಿಲ್ಲೆ ಅಭಿವೃದ್ಧಿ ಸಾಧಿಸುತ್ತದೆ. ಜಿಲ್ಲೆಯ ಜನರ ಆರ್ಥಿಕ ಪ್ರಗತಿಗೆ ರೈಲ್ವೆ ಯೋಜನೆ ವರದಾನವಾಗಿದೆ. ಸರ್ಕಾರದ ಭೂಸ್ವಾಧೀನ ಮಾನದಂಡಗಳ ಪ್ರಕಾರ ರೈಲ್ವೆ ಯೋಜನೆಗೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ನಿಗದಿತ ಬೆಲೆಯಂತೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತದೆ’ ಎಂದು ಹೇಳಿದರು.

ಭೂ-ಬೆಲೆ ನಿರ್ಧರಣಾ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಡಾ.ಬಿ.ಶರಣಪ್ಪ ಮಾತನಾಡಿ, ‘ರೈಲ್ವೆ ಯೋಜನೆಗಾಗಿ ವಶಪಡಿಸಿಕೊಂಡ ಜಮೀನು ಸುತ್ತಲಿನಲ್ಲಿ 50 ಫೀಟ್ ವರೆಗೆ ಶಾಲೆ, ವಾಣಿಜ್ಯ ಕಟ್ಟಡ, ಮನೆ ಅಥವಾ ಇತರೆ ಯಾವುದೇ ರೀತಿಯ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ಕೃಷಿ ಚಟುವಟಿಕೆ ನಡೆಸಬಹುದು’ ಎಂದರು.

ಖಾನಾಪುರ ಎಸ್.ಎಚ್. ಗ್ರಾಮದ ರೈತರು ಸಭೆಯಲ್ಲಿ ಮಾತನಾಡಿ, ರೈಲ್ವೆ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನಿನಲ್ಲಿ ಗುಂಟೆಗಳಷ್ಟು ಉಳಿಯುತ್ತಿದೆ. ಇದರಲ್ಲಿ ಕೃಷಿ ಕಾರ್ಯಕ್ಕೆ ಸಾಧ್ಯವಾಗುವುದಿಲ್ಲ. ಅಲ್ಲದೇ, ಕಟ್ಟಡ ನಿರ್ಮಾಣಕ್ಕೂ ಅವಕಾಶ ಇರುವುದಿಲ್ಲ. ಉಳಿದ ಅಲ್ಪ ಜಮೀನು ಕೂಡ ಖರೀದಿ ಮಾಡಬೇಕು’ ಎಂದು ಮನವಿ ಮಾಡಿದರು.

ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಕೆಐಎಡಿಬಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT