ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ವರ್ಷ: 18 ಜಾತಿನಿಂದನೆ ಪ್ರಕರಣ ದಾಖಲು

ಜಿಲ್ಲೆಯಲ್ಲಿದ್ದಾರೆ 58 ನೊಂದ ಸಂತ್ರಸ್ತರು, ಸುರಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಎಫ್‌ಐಆರ್‌
Last Updated 25 ಫೆಬ್ರುವರಿ 2020, 9:48 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ ಜಾತಿ ನಿಂದನೆಯ 18 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅತಿ ಹೆಚ್ಚು ಅಂದರೆ 9 ಪ್ರಕರಣಗಳು ಸುರಪುರ ತಾಲ್ಲೂಕಿನಲ್ಲಿ ದಾಖಲಾಗಿವೆ.

‘ವಿವಿಧ ರೀತಿಯ ದೌರ್ಜನ್ಯಗಳಲ್ಲಿ ನೊಂದವರಿಗೆ ಪರಿಶಿಷ್ಟ ಜಾತಿ/ ಪಂಗಡದವರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ 1989, ನಾಗರಿಕ ಹಕ್ಕುಗಳ ಸಂರಕ್ಷಣೆ ಕಾಯ್ದೆ 1955 ಮತ್ತು ತಿದ್ದುಪಡಿ ನಿಯಮಗಳು 2016ರ ಅಡಿ ದಾಖಲಾದ ದೂರಿನಲ್ಲಿನ ಕಲಂಗಳಂತೆ ನಿಗದಿತ ಪರಿಹಾರದ ಮೊತ್ತವನ್ನು ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ಖಾತೆಗೆ ಜಮಾ ಮಾಡಲಾಗುತ್ತದೆ. ಮೂರು ಹಂತಗಳಲ್ಲಿ ಪರಿಹಾರ ಧನ ವಿತರಿಸಲಾಗುತ್ತದೆ’ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್‌.ಎಸ್‌.ಚನ್ನಬಸಪ್ಪ.

‌ ‘ಜಾತಿ ನಿಂದನೆ ದೌರ್ಜನ್ಯಕ್ಕೆ ಒಳಗಾದವರು ಪೊಲೀಸ್‌ ಇಲಾಖೆಯ ಪ‍್ರಥಮ ವರ್ತಮಾನ ವರದಿ (ಎಫ್‌ಐಆರ್), ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿ, ಜಾತಿ ಪ್ರಮಾಣ ಪತ್ರ, ವೈದ್ಯಕೀಯ ಪತ್ರ ಸಲ್ಲಿಸಬೇಕಾಗುತ್ತದೆ. ಸಂತ್ರಸ್ತರಿಗೆ ಈ ಎಲ್ಲ ದಾಖಲೆಗಳು ಇದ್ದರೆ ಪರಿಹಾರಧನ ಮಂಜೂರು ಮಾಡಲಾಗುತ್ತದೆ. ದುಡಿಯುವ ವ್ಯಕ್ತಿ ದೌರ್ಜನ್ಯದಲ್ಲಿ ಮೃತಪಟ್ಟರೆ ಅವಲಂಬಿತರಿಗೆ ಪರಿಹಾರಧನ ಮತ್ತು ವಿದ್ಯಾವಂತರಾಗಿದ್ದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗುವುದು’ ಎನ್ನುತ್ತಾರೆ ಅವರು.

‘ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ, ನಿಂದನೆಯಂಥ ಪ್ರಕರಣಗಳು ಹಲವಾರು ಆಗುತ್ತವೆ. ಕೆಲವೊಂದು ಮಾತ್ರ ದಾಖಲಾಗುತ್ತವೆ. ಇನ್ನೂ ಕೆಲವು ಪೊಲೀಸ್‌ ಠಾಣೆ ಹಂತದಲ್ಲಿ ನಿಂತುಹೋಗುತ್ತವೆ. ಇದರಿಂದ ದೌರ್ಜನ್ಯಕ್ಕೆ ಒಳಗಾದವರು ಮತ್ತಷ್ಟು ಕುಗ್ಗಿ ಹೋಗುತ್ತಾರೆ. ಹೀಗಾಗಿ ದೌರ್ಜನ್ಯ ‍ಪ್ರಕರಣಗಳಲ್ಲಿ ಮೊದಲು ಪೊಲೀಸರು ಎಫ್‌ಐಆರ್ ದಾಖಲಿಸಬೇಕು. ನಂತರ ವಿಚಾರಣೆ ಆರಂಭಿಸಬೇಕು’ ಎನ್ನುತ್ತಾರೆ ದಲಿತ ಮುಖಂಡ ಗೋಪಾಲದಾಸನಕೇರಿ.

‘ಗ್ರಾಮಗಳಲ್ಲಿ ಸಾಮಾಜಿಕ ಬಹಿಷ್ಕಾರ, ಜಾತಿ ನಿಂದನೆ ಪ್ರಕರಣಗಳಲ್ಲಿ ಪೊಲೀಸರು ನಿಷ್ಕಾಳಜಿ ವಹಿಸುತ್ತಾರೆ. ಇದರಲ್ಲಿ ದೌರ್ಜನ್ಯಕ್ಕೆ ಒಳಗಾದವರು ಬಲಿಪಶು ಆಗುತ್ತಾರೆ. ನಾಯಕರು ಶಿಫಾರಸು ಮಾಡಿದರೆ ಎಫ್‌ಐಆರ್‌ ದಾಖಲಿಸುವ ವ್ಯವಸ್ಥೆ ಇದೆ. ಇದನ್ನು ಬದಲಾಯಿಸಬೇಕು. ನೋವು ಅನುಭವಿಸಿದವರಿಗೆ ಮಾತ್ರ ಸಮಸ್ಯೆ ಗೊತ್ತಿದೆ’ ಎನ್ನುತ್ತಾರೆ ಅವರು.

ಯಾವ್ಯಾವ ಊರುಗಳಲ್ಲಿ ಪ್ರಕರಣ ದಾಖಲು:ಯಾದಗಿರಿಯ ಗಾಂಧಿನಗರ, ಶಹಾಪುರ ತಾಲ್ಲೂಕಿನ ಹಳಿಸಗರ, ಸೈದಾಪುರ, ಸುರಪುರ ತಾಲ್ಲೂಕಿನ ಚಿಗರಿಹಾಳ, ಪೇಠ ಅಮ್ಮಾಪುರ, ಗೋಡ್ರಿಹಾಳ, ಆಲ್ದಾಳ, ಬೋನ್ಹಾಳ, ದೇವರಗೋನಾಲ, ನಗನೂರ, ದೇವಾಪುರ, ಜುಮಾಲಪುರ ದೊಡ್ಡ ತಾಂಡಾ, ವಡಗೇರಾ ತಾಲ್ಲೂಕಿನ ಕಾಡಂಗೇರಾ (ಬಿ) ಎರಡು ಪ್ರಕರಣ, ಹುಣಸಗಿ ತಾಲ್ಲೂಕಿನ ಮಂಜಲಾಪುರ, ಯಡಳ್ಳಿ, ಅರಕೇರಾ (ಜೆ), ಯಡಹಳ್ಳಿ ಈ ಗ್ರಾಮಗಳಲ್ಲಿ ಜಾತಿ ನಿಂದನೆ ‍ಪ್ರಕರಣ ದಾಖಲಾಗಿವೆ. 2018ರಲ್ಲಿ 6 ಹಾಗೂ 1019ರಲ್ಲಿ 12 ಪ್ರಕರಣದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT