ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ । ಸೇವಾ ಭದ್ರತೆಯಿಲ್ಲದ ‘ಬಿಸಿಯೂಟ ನೌಕರರು’

20 ವರ್ಷಗಳಿಂದ ಸೂಕ್ತ ಗೌರವಧನವಿಲ್ಲದೇ ನಿವೃತ್ತಿಯಾದ 223 ಕಾರ್ಯಕರ್ತೆಯರು
Last Updated 29 ಜನವರಿ 2023, 22:00 IST
ಅಕ್ಷರ ಗಾತ್ರ

ಯಾದಗಿರಿ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ 2001–2002ರಲ್ಲಿ ಪ್ರಾರಂಭವಾದರೂ ಬಿಸಿಯೂಟ ಕಾರ್ಯಕರ್ತರು ಸೂಕ್ತ ಗೌರವ ಧನವಿಲ್ಲದೇ ದುಡಿಯುತ್ತಿದ್ದಾರೆ.

ಕಳೆದ ವರ್ಷದಿಂದ 60 ವರ್ಷದಾಟಿದ ಬಿಸಿಯೂಟ ಕಾರ್ಯಕರ್ತೆಯರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ. ಇದರಿಂದ ಸೇವೆಯಲ್ಲಿದ್ದಾಗಲೂ ಕೈತುಂಬ ವೇತನ ಇಲ್ಲ, ನಿವೃತ್ತಿಯಾದ ಬಳಿಕವೂ ಬರಿಗೈಲಿ ಮರಳುವ ಪರಿಸ್ಥಿತಿಯಲ್ಲಿ ಕಾರ್ಯಕರ್ತೆಯರಿದ್ದಾರೆ.

ರಾಜ್ಯದಲ್ಲಿ ಸುಮಾರು 1.20 ಲಕ್ಷ ಜನ ಮಹಿಳೆಯರು ಬಿಸಿಯೂಟ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ.

ಅಕ್ಷರ ದಾಸೋಹ ಬಿಸಿಯೂಟ ನೌಕರರು ಬಡಕುಟುಂಬದಿಂದ ಬಂದವರಾಗಿದ್ದಾರೆ. ಮಕ್ಕಳ ಪೌಷ್ಟಿಕಾಂಶ ಹೆಚ್ಚಳ, ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಗುರುತರವಾದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ಬಿಸಿಯೂಟ ನೌಕರರ ಮುಖ್ಯ ಅಡುಗೆಯವರಿಗೆ ಕೇವಲ ₹3,700, ಸಹಾಯಕಿಯರಿಗೆ ₹3,600 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇಷ್ಟು ಕಡಿಮೆ ವೇತನ ತೆಗೆದುಕೊಳ್ಳುತ್ತಿರುವ ಬಿಸಿಯೂಟ ನೌಕರರು ಯೋಜನೆಯ ಯಶಸ್ಸಿಗೆ ದುಡಿಯುತ್ತಿದ್ದರೂ ಕ್ಷೇತ್ರಗಳಲ್ಲಿ ದೌರ್ಜನ್ಯ ದಬ್ಬಾಳಿಕೆಗಳು ಹೆಚ್ಚಾಗುತ್ತಿವೆ.

208 ಜನರನ್ನು ನೇಮಕ: ಜಿಲ್ಲೆಯಲ್ಲಿ 2,853 ಬಿಸಿಯೂಟ ಕಾರ್ಯಕರ್ತೆಯರಿದ್ದಾರೆ. 60 ವರ್ಷ ಮೀರಿದ 223 ಕಾರ್ಯಕರ್ತೆಯರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಈಗ 208 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. 60 ವರ್ಷ ದಾಟಿದ ನಂತರ ಯಾವುದೇ ಇಡುಗಂಟು ಇಲ್ಲದೇ ಮನೆಗೆ ಮರಳಬೇಕಿದೆ.

‘ಬಿಸಿಯೂಟ ನೌಕರರನ್ನು ಕಾಯಂ ಮಾಡಬೇಕು. ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿ ಬೇಡ, ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು. ರಾಜ್ಯದಲ್ಲಿ ಶಿಕ್ಷಣ ಇಲಾಖೆ ಶಿಫಾರಸ್ಸಿನಂತೆ ₹6,000 ಮತ್ತು ₹5,000 ವೇತನ ಹೆಚ್ಚಳ ಮಾಡಬೇಕು. ಬೇಸಿಗೆ ಮತ್ತು ದಸರಾ ವೇಳೆ ವೇತನ ಕೊಡಬೇಕು. ಎಲ್ಲರಿಗೂ ಅನ್ವಯವಾಗದಿರುವ ಮನ್‌ ಧನ್‌ ಯೋಜನೆ ಮಾಡಿಸಲು ಇಲಾಖೆಯಿಂದ ಒತ್ತಾಯಿಸಬಾರದು. ಶಾಲಾ ಅವಧಿಯ ನಂತರ ನರೇಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸ ಇವರಿಗೆ ನೀಡಿ ಯೋಜನೆಯಿಂದ ವೇತನ ನೀಡಬೇಕು. ಬಿಸಿಯೂಟ ನೌಕರರನ್ನು ಕಾಯಂಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು’ ಎನ್ನುವುದು ಕಾರ್ಯಕರ್ತೆಯರ ಆಗ್ರಹ.

ಮುಖ್ಯ ಅಡುಗೆಯವರು ಹಾಗೂ ಎಸ್‌ಡಿಎಂಸಿ ಪದನಿಮಿತ್ತ ಕಾರ್ಯದರ್ಶಿಗಳಾದ ಶಾಲಾ ಮುಖ್ಯೋಪಾಧ್ಯಾಯರ ಬ್ಯಾಂಕ್ ಜಂಟಿ ಖಾತೆಯಲ್ಲಿ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ನಿರ್ವಹಿಸಲಾಗುತ್ತಿದೆ. ಆದರೆ, ರಾಜ್ಯ ಬಿಜೆಪಿ ಸರ್ಕಾರ ಜನವರಿ 4ರಂದು ಹೊಸ ಆದೇಶ ಹೊರಡಿಸಿದ್ದು, ಮುಖ್ಯ ಅಡುಗೆಯವರ ಬದಲಾಗಿ ಶಾಲಾಭಿವೃದ್ಧಿ ವ್ಯವಸ್ಥಾಪಕ ಸಮಿತಿ (ಎಸ್‌ಡಿಎಂಸಿ)ಯ ಅಧ್ಯಕ್ಷರು ಹಾಗೂ ಶಾಲಾ ಮುಖ್ಯೋಪಾಧ್ಯಾಯರ ಬ್ಯಾಂಕ್ ಜಂಟಿ ಖಾತೆಯಲ್ಲಿ ಉಪಾಹಾರ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ನಿರ್ವಹಿಸಬೇಕು ಎಂದು 2023-2024 ಸಾಲಿನಿಂದ ಅನ್ವಯವಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

‘ಬಿಸಿಯೂಟ ನೌಕರರಿಗೆ ಈಗಿರುವ ಕ್ಷೀರಭಾಗ್ಯ ಮತ್ತು ಬಿಸಿಯೂಟ ನಿರ್ವಹಣೆಯನ್ನು ಮುಖ್ಯ ಅಡುಗೆಯವರಿಂದ ಕಸಿದುಕೊಂಡು ‌ಇಡೀ ಯೋಜನೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಸಾಧ್ಯತೆಯಿದೆ‘ ಎನ್ನುತ್ತಾರೆ ಅಕ್ಷರ ದಾಸೋಹ ಬಿಸಿಯೂಟ ನೌಕರರ ಯೂನಿಯನ್ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷೆ ಕಲ್ಪನಾ ಗುರುಸಣಗಿ.

***

ಸುರಪುರ: 1,167 ಕಾರ್ಯಕರ್ತೆಯರು

ಸುರಪುರ: ಸುರಪುರ ಮತ್ತು ಹುಣಸಗಿ ತಾಲ್ಲೂಕು ಸೇರಿ ಒಟ್ಟು 1,167 ಬಿಸಿಯೂಟ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ 347 ಮುಖ್ಯ ಅಡುಗೆಯವರು, 720 ಸಹಾಯಕಿಯರು ಇದ್ದಾರೆ. ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳು ಒಟ್ಟು 412 ಇದ್ದು, 386 ಅಡುಗೆ ಕೇಂದ್ರಗಳಿವೆ.

ಎಲ್ಲರೂ ಬಡತನ ರೇಖೆಗಿಂತ ಕೆಳಗೆ ಇದ್ದವರು. ವಿಧವೆಯರೂ ಇದ್ದಾರೆ. ಮುಖ್ಯ ಅಡುಗೆಯವರಿಗೆ ಮಾಸಿಕ ಸಂಭಾವನೆ ₹3,700, ಸಹಾಯಕಿಯರಿಗೆ ₹3,600 ನೀಡುತ್ತಿದ್ದು, ಯಾವುದಕ್ಕೂ ಸಾಲುತ್ತಿಲ್ಲ ಎನ್ನುತ್ತಾರೆ ಅವರು.

ಮೊದಲು ಮುಖ್ಯ ಅಡುಗೆಯವರು ಮತ್ತು ಮುಖ್ಯ ಶಿಕ್ಷಕರ ಜಂಟಿ ಖಾತೆಯಲ್ಲಿ ಬಿಸಿಯೂಟ ನಿರ್ವಹಣೆ ನಡೆಯುತ್ತಿತ್ತು. ಆಗ ಅಡುಗೆಯವರೆ ದಿನಸಿ, ತರಕಾರಿ ತರುತ್ತಿದ್ದರಿಂದ ಆಹಾರದ ಗುಣಮಟ್ಟ ಇರುತ್ತಿತ್ತು. ಆದರೆ, ಈಗ ಖಾತೆ ಎಸ್‌ಡಿಎಂಸಿ ಮತ್ತು ಮುಖ್ಯ ಶಿಕ್ಷಕರ ಜಂಟಿಯಲ್ಲಿ ಇರುವುದರಿಂದ ಅಡುಗೆಯವರಿಗೆ ಕೇವಲ ಅಡುಗೆ ಮಾಡುವುದಕ್ಕಷ್ಟೆ ಸೀಮಿತಗೊಳಿಸಲಾಗಿದೆ. ಇದರಿಂದ ಗುಣಮಟ್ಟ ಕಾಪಾಡಲು ಸಾಧ್ಯವಾಗುತ್ತಿಲ್ಲ. ಕಡಿಮೆ ಪ್ರಮಾಣದ ದಿನಸಿ, ಕಳಪೆ ತರಕಾರಿ ಪೂರೈಕೆ ಮಾಡುತ್ತಿದ್ದು, ಅದರಲ್ಲೆ ಉತ್ತಮ ಅಡುಗೆ ತಯಾರಿಸುವಂತೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕಾರ್ಯಕರ್ತೆಯರದ್ದು.

ಉದ್ಯೋಗ ಭದ್ರತೆ ಇಲ್ಲ. ವೇತನ ಪರಿಷ್ಕರಣೆ ಇಲ್ಲ. ಮಾನಸಿಕ ತೊಂದರೆ ನೀಡಲಾಗುತ್ತಿದೆ. ಕೆಲವೆಡೆ ಲೈಂಗಿಕ ಶೋಷಣೆಯೂ ನಡೆಯುತ್ತದೆ ಎಂದು ಗಂಭೀರವಾಗಿ ಆರೋಪಿಸುತ್ತಾರೆ ಕಾರ್ಯಕರ್ತೆಯರು.

ಐಟಿಯುಸಿ ಸಂಘಟನೆ ಅಡಿಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯುನಿಯನ್ ರಚಿಸಿಕೊಂಡಿದ್ದು, ಈ ಮೂಲಕ ಹಲವಾರು ಬಾರಿ ಮಾಡಿದ ಹೋರಾಟಗಳು ನಿಷ್ಟ್ರಯೋಜಕವಾಗಿವೆ ಎನ್ನುತ್ತಾರೆ ಕಾರ್ಯಕರ್ತರು.

***

ಬಿಸಿತುಪ್ಪವಾದ ಬಿಸಿಯೂಟದ ಕಾಯಕ

ಶಹಾಪುರ: ಮಧ್ಯಾಹ್ನ ಬಿಸಿಯೂಟ ಸಿದ್ದಪಡಿಸುತ್ತಿರುವ ಕಾರ್ಯಕರ್ತೆಯರಿಗೆ ಕೆಲಸವೂ ಬಿಸಿತುಪ್ಪವಾಗಿ ಪರಿಣಮಿಸಿದೆ. ಸರ್ಕಾರದ ಗೌರವ ಧನ ಸಾಕಾಗುತ್ತಿಲ್ಲ. ದಿನಕೊಂದು ಸುತ್ತೋಲೆ ನಮಗೆ ಬೇಸರ ಉಂಟು ಮಾಡಿದೆ. ಯಾವುದೇ ಸೇವಾ ಭದ್ರತೆಯಿಲ್ಲ. ವಯೋನಿವೃತ್ತಿ ಹೊಂದಿದ ಕಾರ್ಯಕರ್ತರನ್ನು ಕೆಲಸದಿಂದ ಬಿಡುಗಡೆ ಮಾಡಿದರು. ಆದರೆ, ಸರ್ಕಾರ ಪುಡಿಗಾಸು ನೀಡಿಲ್ಲ ಎನ್ನುತ್ತಾರೆ ಬಿಸಿಯೂಟದ ಕಾರ್ಯಕರ್ತೆಯರು.

ಆಯಾ ಗ್ರಾಮದ ಕೆಲ ಶಾಲೆಗಳಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ಪ್ರತ್ಯೇಕವಾದ ಅಡುಗೆ ಕೋಣೆ ಇಲ್ಲ. ಸಮರ್ಪಕವಾಗಿ ಕುಡಿಯುವ ನೀರಿನ ಬರ, ಅಡುಗೆ ಸಿಲಿಂಡರ್ ಸಮರ್ಪಕವಾಗಿ ಸರಬರಾಜು ಆಗುವುದಿಲ್ಲ. ಕಳಪೆ ಆಹಾರ ಧಾನ್ಯ ಪೂರೈಕೆ, ತರಕಾರಿ ಬೆಲೆ ಹೆಚ್ಚಳ ಹೀಗೆ ಸಮಸ್ಯೆಗಳ ಸರಮಾಲೆ ಬಿಸಿಯೂಟದ ಸಿಬ್ಬಂದಿ ಮೇಲೆ ಎರಗಿಕೊಂಡಿದೆ ಎನ್ನುತ್ತಾರೆ ಅಡುಗೆ ಸಹಾಯಕಿ ಒಬ್ಬರು.

‘ಮಧ್ಯಾಹ್ನ ಬಿಸಿಯೂಟವನ್ನು ಶಾಲೆಯಲ್ಲಿ ಸರಿಯಾಗಿ ನಿರ್ವಹಿಸುತ್ತಿಲ್ಲ. ಕೇವಲ ಅನ್ನ ಸಾಂಬರ್‌ ಹಾಕುತ್ತಾರೆ. ಇದನ್ನು ಪ್ರಶ್ನಿಸಿದರೆ ಸರ್ಕಾರದಿಂದ ಅನುದಾನ ಬಂದಿಲ್ಲ. ನಾವು ನಮ್ಮ ವೇತನದಿಂದ ಕಾಯಿಪಲ್ಲೆ ತಂದು ಮಾಡಬೇಕಾ ಎಂದು ಪ್ರಶ್ನಿಸುತ್ತಾರೆ’ ಶಾಲೆ ಮುಖ್ಯಶಿಕ್ಷಕರೊಬ್ಬರು.

‘ಇವೆಲ್ಲದರ ನಡುವೆ ಕೆಲ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯಂತೆ ಬಿಸಿಯೂಟದ ಆಹಾರ ಧಾನ್ಯ ಹಾಗೂ ತರಕಾರಿ ಪಡೆದುಕೊಳ್ಳುವ ಬಗ್ಗೆ ಲೆಕ್ಕ ನಮೂದಿಸುತ್ತಾರೆ. ಆದರೆ, ವಾಸ್ತವಾಗಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ತುಂಬಾ ಕಡಿಮೆ ಇರುತ್ತದೆ. ಇಲ್ಲಿ ಸರ್ಕಾರದ ಹಣ ಪೋಲಾಗುತ್ತಲಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ.

***

ಬಿಸಿಯೂಟ ನೌಕರರಿಗೆ ಯಾವುದೇ ಸೇವಾ ಭದ್ರತೆಯಿಲ್ಲದೆ ಅತ್ಯಂತ ಕನಿಷ್ಠ ವೇತನ ನೀಡಿ ಶೋಷಣೆ ಮಾಡುವ, ಇಲ್ಲವೇ ಕೆಲಸದಿಂದಲೇ ತೆಗೆದು ಹಾಕುವ ಹುನ್ನಾರ ನಡೆಯುತ್ತಿದೆ

-ಕಲ್ಪನಾ ಗುರುಸಣಗಿ, ಜಿಲ್ಲಾಧ್ಯಕ್ಷೆ, ಅಕ್ಷರ ದಾಸೋಹ ಬಿಸಿಯೂಟ ನೌಕರರ ಯೂನಿಯನ್, ಜಿಲ್ಲಾ ಸಮಿತಿ, ಯಾದಗಿರಿ

***

ಜಿಲ್ಲೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸೇವೆ ಕಾಯಂ ಸೇರಿದಂತೆ ವಿವಿಧ ಬೇಡಿಕೆ ಸರ್ಕಾರದಿಂದ ಇತ್ಯರ್ಥ್ಯವಾಗಬೇಕಿದೆ

-ಈಶ್ವರಪ್ಪ ನೀರಟಗಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ

***

ಬಿಸಿಯೂಟ ಕಾರ್ಯಕರ್ತೆಯರು ಸಮಪರ್ಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ ಇಲಾಖೆ ಅವರಿಗೆ ಅಡುಗೆ ಸುರಕ್ಷತೆಯ ಬಗ್ಗೆ ತರಬೇತಿ ನೀಡುತ್ತದೆ

-ಮೌನೇಶ ಕಂಬಾರ, ಸಹಾಯಕ ನಿರ್ದೇಶಕ ಅಕ್ಷರ ದಾಸೋಹ ಸುರಪುರ

***

ಕಾರ್ಯಕರ್ತೆಯರಿಗೆ ಕಳ್ಳತನದ ಆರೋಪ ಹೊರಿಸುವುದು, ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು, ಸಹಕರಿಸದವರನ್ನು ಕೆಲಸದಿಂದ ವಜಾಗೊಳಿಸುವ ಹುನ್ನಾರವೂ ನಡೆಯುತ್ತಿದೆ

-ದೇವಿಂದ್ರಪ್ಪ ಪತ್ತಾರ, ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ

***

ಬಿಸಿಯೂಟ ಕಾರ್ಯಕರ್ತೆಯರ ಹೆಸರಲ್ಲಿದ್ದ ಜಂಟಿ ಖಾತೆಯನ್ನು ರದ್ದು ಮಾಡಿರುವುದು ಸರಿಯಲ್ಲ. ಇದನ್ನು ಎಂದಿನಂತೆ ಮುಂದುವರಿಸಬೇಕು. ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು

-ಶ್ರೀದೇವಿ ಕೂಡ್ಲಿಗಿ, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯುನಿಯನ್ ತಾಲ್ಲೂಕು ಘಟಕದ ಅಧ್ಯಕ್ಷೆ

***

ಬಿಸಿಯೂಟದ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಯಾವುದೇ ಸೇವಾ ಭದ್ರತೆ ಇಲ್ಲ. ಗೌರವ ಧನದಲ್ಲಿಯೇ ಜೀವನ ಸಾಗಿಸಬೇಕು. ಈಗ ನೀಡುತ್ತಿರುವ ಗೌರವ ಧನ ಯಾತಕ್ಕೂ ಸಾಕಾಗುತ್ತಿಲ್ಲ.

-ಸುನಂದ ಹಿರೇಮಠ, ತಾಲ್ಲೂಕು ಅಧ್ಯಕ್ಷೆ

***

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT