ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ 237 ಹುದ್ದೆಗಳು ಖಾಲಿ

ಶಿಕ್ಷಕರ ಕೊರತೆ ಮಧ್ಯೆಯೂ ಶಾಲಾರಂಭಕ್ಕೆ ಸಿದ್ಧತೆ
Last Updated 21 ಆಗಸ್ಟ್ 2021, 16:26 IST
ಅಕ್ಷರ ಗಾತ್ರ

ಯಾದಗಿರಿ: ಆಗಸ್ಟ್ 23ರಿಂದ 9 ಮತ್ತು 10ನೇ ಭೌತಿಕ ತರಗತಿಗಳು ಪ್ರಾರಂಭವಾಗುತ್ತಿದ್ದು, ಶಿಕ್ಷಕರ ಖಾಲಿ ಹುದ್ದೆಗಳಿಂದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿದೆ.

ಜಿಲ್ಲೆಯಲ್ಲಿ 122ಸರ್ಕಾರಿ ಪ್ರೌಢ ಶಾಲೆ ಹಾಗೂ ಅನುದಾನ, ಅನುದಾನ ರಹಿತ ಸೇರಿ ಒಟ್ಟು 242 ಪ್ರೌಢ ಶಾಲೆಗಳಿವೆ. 39,800 ವಿದ್ಯಾರ್ಥಿಗಳಿದ್ದಾರೆ.

ಕೋವಿಡ್‌ ಕಾರಣದಿಂದ ಶಾಲಾ ಅವಧಿ ಮಧ್ಯಾಹ್ನಕ್ಕೆ ಮೊಟಕುಗೊಳಿಸಿದ್ದು, ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ 40 ನಿಮಿಷಗಳ 5 ಅವಧಿಗಳನ್ನು ನಡೆಸಬೇಕಾಗಿದೆ.

ಇದಕ್ಕೂ ಮುನ್ನ ಒಂದು ತರಗತಿಗೆ ಒಬ್ಬ ಶಿಕ್ಷಕರು ಇದ್ದರೆ ಸಾಕಾಗುತ್ತಿತ್ತು. ಆದರೆ, ಈ ಬಾರಿ ತಲಾ 15ರಿಂದ 20 ವಿದ್ಯಾರ್ಥಿಗಳಿಗೆ ಒಂದು ಗುಂಪು ರಚಿಸುವುದರಿಂದ ಹೆಚ್ಚುವರಿ ಶಿಕ್ಷಕರು ಬೇಕಾಗುತ್ತದೆ. ಆದರೆ, ಜಿಲ್ಲೆಯ ಪ್ರೌಢಶಾಲೆಗಳಲ್ಲಿ 237 ಶಿಕ್ಷಕರ ಹುದ್ದೆ ಖಾಲಿ ಇದೆ.

ಅತಿಥಿ ಶಿಕ್ಷಕರೇ ಗತಿ:ಜಿಲ್ಲೆಯಲ್ಲಿ ಕೆಲವೊಂದು ಶಾಲೆಗಳು ಅತಿಥಿ ಶಿಕ್ಷಕರ ನೆರವಿನಿಂದಲೇ ನಡೆಯುತ್ತದೆ. ಭಾಷೆ ಶಿಕ್ಷಕರನ್ನು ಬಿಟ್ಟು ಪ್ರಮುಖ ವಿಷಯಗಳಿಗೆ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಮುಂಚೆ ಆಗಸ್ಟ್‌ ತಿಂಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಈ ಬಾರಿ ಯಾವಾಗ ನೇಮಕವಾಗುತ್ತದೆ ಎನ್ನುವುದು ಇನ್ನೂ ನಿಗದಿಯಾಗಿಲ್ಲ.

ಗಣಿತ, ಇಂಗ್ಲಿಷ್‌, ಕನ್ನಡ ವಿಷಯಗಳ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಒಟ್ಟಾರೆ ಮೂರು ತಾಲ್ಲೂಕುಗಳಲ್ಲಿ ಕನ್ನಡ 22, ಇಂಗ್ಲಿಷ್‌ 45, ಹಿಂದಿ 22, ಗಣಿತ 27, ಚಿತ್ರಕಲಾ 31, ವಿಶೇಷ ಶಿಕ್ಷಕರು 34 ಹುದ್ದೆಗಳು ಖಾಲಿ ಇವೆ. ಇವು ವಿದ್ಯಾರ್ಥಿ ಕಲಿಕೆ ಮೇಲೆ ಪ್ರಭಾವ ಬೀರುತ್ತವೆ.

ಕಳೆದ ಒಂದು ವರ್ಷದಿಂದ ಶಾಲೆಗಳು ಮುಚ್ಚಿದ್ದರಿಂದ ಮೊದಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯ ಬೇಕಾಗುತ್ತದೆ.

ಪ್ರೌಢ ಶಾಲೆಗಳ ವಿವರ:ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅನುದಾನಿತ, ಅನುದಾನ ರಹಿತ, ಕೇಂದ್ರ ಸರ್ಕಾರದ ಶಾಲೆಗಳಿವೆ.

ಶಹಾಪುರ ತಾಲ್ಲೂಕಿನಲ್ಲಿ 38 ಶಿಕ್ಷಣ ಇಲಾಖೆ, 10 ಸಾಮಾಜ ಕಲ್ಯಾಣ ಇಲಾಖೆ, 3 ಅನುದಾನಿತ, 27 ಅನುದಾನ ರಹಿತ, ಕೇಂದ್ರ ಸರ್ಕಾರದ 1 ಶಾಲೆ ಸೇರಿದಂತೆ 79 ಪ್ರೌಢಶಾಲೆಗಳಿವೆ.

ಸುರಪುರ ತಾಲ್ಲೂಕಿನಲ್ಲಿ 45 ಶಿಕ್ಷಣ ಇಲಾಖೆ, 8 ಸಮಾಜ ಕಲ್ಯಾಣ, 7 ಅನುದಾನಿತ, 29 ಅನುದಾನ ರಹಿತ ಸೇರಿದಂತೆ 89 ಶಾಲೆಗಳಿವೆ.

ಯಾದಗಿರಿ ತಾಲ್ಲೂಕಿನಲ್ಲಿ 39 ಶಿಕ್ಷಣ ಇಲಾಖೆ ಶಾಲೆಗಳಿವೆ. 11 ಸಮಾಜ ಕಲ್ಯಾಣ ಇಲಾಖೆ ಶಾಲೆಗಳು, ಅನುದಾನಿತ 7, ಅನುದಾನ ರಹಿತ 31 ಸೇರಿದಂತೆ ಒಟ್ಟಾರೆ 88 ಪ್ರೌಢಶಾಲೆಗಳಿವೆ.

ಶಿಕ್ಷಣ ಇಲಾಖೆಯ 122, ಸಮಾಜ ಕಲ್ಯಾಣ ಇಲಾಖೆಯ 29, ಅನುದಾನಿತ 17, ಅನುದಾನ ರಹಿತ 87, ಕೇಂದ್ರ ಸರ್ಕಾರದ 1, ಒಟ್ಟು 256 ಪ್ರೌಢಶಾಲೆಗಳಿವೆ.

ಪ್ರಾಥಮಿಕ, ಪ್ರೌಢ ಶಿಕ್ಷಕರ ಖಾಲಿ ಹುದ್ದೆ:ಶಹಾಪುರ ತಾಲ್ಲೂಕಿನಲ್ಲಿ ಮುಖ್ಯಶಿಕ್ಷಕ 2, ಕನ್ನಡ 9, ಇಂಗ್ಲಿಷ್ 19, ಹಿಂದಿ 4, ಗಣಿತ 6, ಸಮಾಜ ವಿಜ್ಞಾನ 3, ಚಿತ್ರಕಲಾ 7, ದೈಹಿಕ ಶಿಕ್ಷಣ ಶಿಕ್ಷಕ 3, ವಿಶೇಷ ಶಿಕ್ಷಕರು 12 ಸೇರಿದಂತೆ 65 ಶಿಕ್ಷಕರ ಹುದ್ದೆ ಖಾಲಿ ಇದೆ.

384 ಮಂಜೂರಾಗಿದ್ದು, 319 ಭರ್ತಿಯಾಗಿವೆ. 65 ಖಾಲಿ ಶಿಕ್ಷಕರ ಹುದ್ದೆಗಳಿವೆ.

ಸುರಪುರ ತಾಲ್ಲೂಕಿನಲ್ಲಿ ಮುಖ್ಯಶಿಕ್ಷಕ 3, ಕನ್ನಡ 6, ಇಂಗ್ಲಿಷ್ 17, ಹಿಂದಿ 12, ಗಣಿತ 15, ಉರ್ದು 1, ವಿಜ್ಞಾನ 9, ಸಮಾಜ ವಿಜ್ಞಾನ 6, ಚಿತ್ರಕಲಾ 13, ದೈಹಿಕ ಶಿಕ್ಷಣ ಶಿಕ್ಷಕ 5, ವಿಶೇಷ ಶಿಕ್ಷಕರು 9 ಸೇರಿದಂತೆ 96 ಶಿಕ್ಷಕರ ಹುದ್ದೆ ಖಾಲಿ ಇದೆ. 460 ಮಂಜೂರಾಗಿದ್ದರೆ 364 ಭರ್ತಿ ಇದ್ದು, 96 ಹುದ್ದೆಗಳಿಗೆ ಶಿಕ್ಷಕರು ನೇಮಕವಾಗಿಲ್ಲ.

ಯಾದಗಿರಿ ತಾಲ್ಲೂಕಿನಲ್ಲಿ ಮುಖ್ಯಶಿಕ್ಷಕ 4, ಕನ್ನಡ 7, ಇಂಗ್ಲಿಷ್ 9, ಹಿಂದಿ 6, ಗಣಿತ 6, ಉರ್ದು 4, ವಿಜ್ಞಾನ 3, ಸಮಾಜ ವಿಜ್ಞಾನ 5, ಚಿತ್ರಕಲಾ 11, ದೈಹಿಕ ಶಿಕ್ಷಣ ಶಿಕ್ಷಕ 8, ವಿಶೇಷ ಶಿಕ್ಷಕರು 13 ಸೇರಿದಂತೆ 76 ಶಿಕ್ಷಕರ ಹುದ್ದೆ ಖಾಲಿ ಇವೆ. 398 ಮಂಜೂರಾಗಿದ್ದರೆ 322 ಭರ್ತಿ ಇದ್ದು, 76 ಹುದ್ದೆಗಳಿಗೆ ಶಿಕ್ಷಕರು ನೇಮಕವಾಗಿಲ್ಲ.

‘ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ಕೆಲ ದಿನಗಳಲ್ಲಿ ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡಲು ಸೂಚನೆ ನೀಡಲಾಗಿದೆ. ಶಾಲಾ ಕೊಠಡಿ, ಮೈದಾನ, ಶೌಚಾಲಯ, ಪ್ರಾಂಶುಪಾಲರ ಕೋಣೆ ಸೇರಿದಂತೆ ವಿವಿಧೆಡೆ ದ್ರಾವಣ ಸಿಂ‍ಪರಣೆ ಮಾಡಲಾಗುತ್ತಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಾಂತಗೌಡ ಪಾಟೀಲ ವಿವರಿಸುತ್ತಾರೆ.

***

ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರ ವಿವರ

ತಾಲ್ಲೂಕು;ಮಂಜೂರಾತಿ;ಕಾರ್ಯನಿರತ;ಖಾಲಿ ಹುದ್ದೆ

ಶಹಾಪುರ;384;319;65

ಸುರಪುರ;460;364;94

ಯಾದಗಿರಿ;398;322;76

ಒಟ್ಟು;1,242;1,005;237

ಆಧಾರ: ಸಾರ್ವಜನಿಕ ಶಿಕ್ಷಣ ಇಲಾಖೆ

***

ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಲವು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಮುಖ್ಯ ವಿಷಯಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ

-ಶಾಂತಗೌಡ ಪಾಟೀಲ, ಡಿಡಿಪಿಐ

***

ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಶೀಘ್ರವೇ ಹುದ್ದೆಗಳನ್ನು ಭರ್ತಿ ಮಾಡಿ ವಿದ್ಯಾರ್ಥಿಗಳ ನೆರವಿಗೆ ಧಾವಿಸಬೇಕು

-ಮಹಿಪಾಲರೆಡ್ಡಿ ಮಾಲಿಪಾಟೀಲ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT